ವಿನಾಕಾರಣ ಖುಷಿ : ಓಶೋ ವ್ಯಾಖ್ಯಾನ

ಜ್ಞಾನೋದಯವಾದ ಮನುಷ್ಯನಿಗೆ ಎಲ್ಲವೂ ಆಹ್ಲಾದಕರ ಎಲ್ಲವೂ ರಹಸ್ಯಮಯ. ನೀವು ಅನ್ನಬಹುದು ಇಂಥ ಸಣ್ಣ ಸಂಗತಿಯಲ್ಲಿ ಅದೇನು ರಹಸ್ಯ ಇದೆ ಎಂದು… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಬಣ್ಣ ಕಾರಣ ಕಣ್ಣ ಕುರುಡಿಗೆ
ಕಿವಿಯ ಕಿವುಡಿಗೆ ಶಬ್ದವು.

ಸ್ವಾದ, ಪರಿಮಳ, ರುಚಿಗೆ ಕಂಟಕ
ಹೊಳಹು ಬುದ್ಧಿಗೆ ವೈರಿಯು.

ಜೂಜು, ಬೇಟೆ, ಮನದ ಸೊಕ್ಕು
ಬಯಕೆ, ಭಯಕೆ ಬೀಜವು.

ಕಣ್ಣು ಕಂಡ ಬೆರಗ ಸೋಸಿ
ಚೆಲುವ ಬಸಿಯಿತು ಮಮತೆಯು

ಬೆಳಕ ಕಳಚಿ ಇರುಳ ರಮಿಸಿ
ಸಂತ ಜಗಕೆ ತಾಯಿಯು.

~ ಲಾವೋತ್ಸೇ


ಬಾಶೋ ಬರೆಯುತ್ತಾನೆ,

ಕೈಯಲ್ಲಿ ಚಪ್ಪಲಿ ಹಿಡಿದು
ಬೇಸಿಗೆ ನದಿಯ ದಾಟುವುದು
ಎಂಥ ಅಹ್ಲಾದಕರ !

ಜ್ಞಾನೋದಯವಾದ ಮನುಷ್ಯನಿಗೆ ಎಲ್ಲವೂ ಆಹ್ಲಾದಕರ ಎಲ್ಲವೂ ರಹಸ್ಯಮಯ. ನೀವು ಅನ್ನಬಹುದು ಇಂಥ ಸಣ್ಣ ಸಂಗತಿಯಲ್ಲಿ ಅದೇನು ರಹಸ್ಯ ಇದೆ ಎಂದು.

ಕೈಯಲ್ಲಿ ಚಪ್ಪಲಿ ಹಿಡಿದು
ಬೇಸಿಗೆ ನದಿಯ ದಾಟುವುದು
ಎಂಥ ಅಹ್ಲಾದಕರ !

ನೀವು ಅನ್ನಬಹುದು “ ಬೇಸಿಗೆಯಲ್ಲಿ ನದಿಯಲ್ಲಿ ಕಮ್ಮಿ ನೀರು ಇರಬಹುದು, ಅದಕ್ಕೇ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ನದಿ ದಾಟುತ್ತಿದ್ದಾನೆ. ಇದರಲ್ಲಿ ಆಹ್ಲಾದ ನೀಡುವಂಥದು ಏನಿದೆ?”

ಆದರೆ ಝೆನ್ ನ ಇಡೀ ಪಾಯಿಂಟ್ ಇದೇ ಅಲ್ಲವೆ? ಖುಶಿಯಾಗಿರಲು ನಿಮಗೆ ಯಾವ ಕಾರಣವೂ ಬೇಕಿಲ್ಲ,
ಚಪ್ಪಲಿ ಕೈಲಿಹಿಡಿದುಕೊಂಡು ಬೇಸಿಗೆ ನದಿ ದಾಟುವಂಥ ವಿನಾಕಾರಣ ಕೂಡ ನಿಮಗೆ ಸಂತೋಷ ನೀಡಬಲ್ಲದು.

ಯಾವುದೇ ಕ್ರಿಯೆ ಇರಬಹುದು, ಕ್ರಿಯೆ ಅಲ್ಲದಿರಬಹುದು, ಏನನ್ನಾದರೂ ಮಾಡುವುದು ಅಥವಾ ಮಾಡದಿರುವುದು, ಎಲ್ಲವೂ ನಿಮ್ಮಲ್ಲಿ ಸಂತೋಷವನ್ನು ಮೂಡಿಸುವಂಥದೇ. ಸಂತೋಷಕ್ಕೆ ನಿಮಗೆ ಯಾವುದೇ ಕಾರಣ ಬೇಕಿಲ್ಲ. ಯಾವುದೇ ಕಾರಣದ ಕಾರಣವಾಗಿ ನಿಮಗೆ ಸಂತೋಷವಾಗುತ್ತಿದ್ದರೆ, ನೀವು ಆ ಕಾರಣಕ್ಕೆ ಅಂಟಿಕೊಂಡುಬಿಡುತ್ತೀರಿ. ಆ ಕಾರಣ ಮಾಯವಾದರೆ ನಿಮ್ಮ ಖುಶಿಯೂ ಮಾಯವಾಗುತ್ತದೆ ಎಂದು ಭಯ ಬೀಳುತ್ತೀರಿ. ನಿಮಗೆ ಒಬ್ಬಳು ಹೆಣ್ಣಿನ ಕಾರಣವಾಗಿ ಅಥವಾ ಒಬ್ಬ ಗಂಡಿನ ಕಾರಣವಾಗಿ ಖುಶಿಯಾಗುತ್ತಿದೆ ಎಂದರೆ, ಬಹುಬೇಗ ನೀವು ಆ ಹೆಣ್ಣಿಗೆ ಅಥವಾ ಆ ಗಂಡಿಗೆ ಅಂಟಿಕೊಂಡುಬಿಡುತ್ತೀರಿ. ಅಂಟಿಕೊಳ್ಳುವುದಷ್ಟೇ ಅಲ್ಲ ನಿಮ್ಮಿಬ್ಬರ ಸುತ್ತ ಸೆರೆಮನೆಯನ್ನ ಕಟ್ಟಿಕೊಳ್ಳುತ್ತೀರಿ, ಏಕೆಂದರೆ ಈ ಹೆಣ್ಣಿನ ಅಥವಾ ಈ ಗಂಡಿನ ಸಂಗಾತವಿಲ್ಲದೇ ನಮಗೆ ಖುಶಿ ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಖುಶಿ ನಿಮ್ಮಿಬ್ಬರಿಗೂ ವಿಪತ್ತು ಆಗಿ ಬದಲಾವಣೆ ಹೊಂದುತ್ತದೆ.

ಧ್ಯಾನ ಇಂಥ ವಿನಾಕಾರಣದ ಖುಶಿಯನ್ನ ಸಾಧ್ಯಮಾಡುತ್ತದೆ. ಇಂಥ ಧ್ಯಾನ ನಿಮಗೆ ಸಾಧ್ಯವಾದಾಗ, ಇಂಥ ವಿನಾಕಾರಣದ ಖುಶಿ ನಮಗೆ ದಕ್ಕಿದಾಗ, ನಿಮಗೆ ಇರುವುದೆಂದರೆ ಖುಶಿಯಾಗಿರುವುದು. ಆಗ ನೀವು ಯಾರ ಸುತ್ತಲೂ ಸೆರೆಮನೆ ಕಟ್ಟುವುದಿಲ್ಲ. ಆಗ ನೀವು ಯಾರ ಸ್ವಾಧೀನತೆಯನ್ನೂ ಬಯಸುವುದಿಲ್ಲ, ಯಾರ ಮಾನವ ಘನತೆಯನ್ನೂ ನಾಶಮಾಡುವುದಿಲ್ಲ. ನೀವು ಯಾರಿಗೂ ಗುಲಾಮರಾಗುವುದಿಲ್ಲ, ಯಾರ ಗುಲಾಮಗಿರಿಯನ್ನೂ ಬಯಸುವುದಿಲ್ಲ. ನೀವು ಸುಮ್ಮನೇ ಪ್ರೀತಿಸುತ್ತೀರಿ, ಸುಮ್ಮನೇ ಹಂಚಿಕೊಳ್ಳುತ್ತೀರಿ. ಈ ಪ್ರೀತಿಗೆ, ಈ ಹಂಚಿಕೊಳ್ಳುವಿಕೆಗೆ ಬದಲಾಗಿ ನೀವು ಏನನ್ನೂ ನಿರೀಕ್ಷೆ ಮಾಡುವುದಿಲ್ಲ. ನಿಮ್ಮ ಬಳಿ ಇರುವ ಸಮೃದ್ಧತೆಯ ಕಾರಣವಾಗಿ ನೀವು ಪ್ರೀತಿಸಿದ್ದು, ಹಂಚಿದ್ದು ಸಮೃದ್ಧಗೊಳ್ಳುತ್ತಲೇ ಹೋಗುತ್ತದೆ. ನೀವು ಪ್ರತಿಯಾಗಿ ಏನಾದರೂ ಬಯಸಲು ಶುರುಮಾಡಿದ ಕ್ಷಣದಲ್ಲಿಯೇ ನಿಮ್ಮ ಖುಶಿಯ ಮೂಲವನ್ನೇ ಕಳೆದುಕೊಳ್ಳುತ್ತೀರಿ. ಧ್ಯಾನದಿಂದ ಖುಶಿ ಸಾಧ್ಯವಾಗಬಹುದು ಆದರೆ ನಿಮ್ಮ ಖುಶಿಗೆ ಧ್ಯಾನವೂ ಕಾರಣವಾಗಬಾರದು. ಅಂಥ ಖುಶಿ ನಿಮ್ಮದಾದಾಗ ನೀವು ಮಾಡುತ್ತಿರುವುದೆಲ್ಲ ಧ್ಯಾನ, ಮಾಡದಿರುವುದು ಕೂಡ.

ಒಮ್ಮೆ ಶಿಷ್ಯನೊಬ್ಬ ಝೆನ್ ಮಾಸ್ಟರ್ ಹತ್ತಿರ, ಒಂದು ದೂರು ತೆಗೆದುಕೊಂಡು ಬಂದ.

“ಮಾಸ್ಟರ್, ನನಗೆ ಧ್ಯಾನದಲ್ಲಿ ತುಂಬ ತೊಂದರೆಗಳಾಗುತ್ತಿವೆ. ಧ್ಯಾನಕ್ಕೆ ಕೂತಾಗಲೆಲ್ಲ ವಿಪರೀತ ಕಾಲು ನೋಯುತ್ತದೆ, ನಿದ್ದೆ ಬಂದ ಹಾಗಾಗುತ್ತದೆ. ಬಹಳ ಚಿಂತೆಯಾಗುತ್ತಿದೆ. ಏನು ಮಾಡಲಿ? “

“ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ” ಮಾಸ್ಟರ್ ಉತ್ತರಿಸಿದ.

ಎರಡು ಮೂರು ತಿಂಗಳುಗಳ ನಂತರ ಶಿಷ್ಯ ವಾಪಸ್ ಬಂದ,

“ ಮಾಸ್ಟರ್, ಈಗ ಧ್ಯಾನದಲ್ಲಿ ಅದ್ಭುತ ಅನುಭವಗಳಾಗುತ್ತಿವೆ, ತುಂಬ ಎಚ್ಚರದ ಸ್ಥಿತಿ ಅನಿಸುತ್ತಿದೆ. ಎಷ್ಟು ಶಾಂತ, ಎಷ್ಟು ಜೀವಂತಿಕೆಯ ಸ್ಥಿತಿ ಇದು “

ಮಾಸ್ಟರ್ ಸಾವಧಾನವಾಗಿ ಉತ್ತರಿಸಿದ “ಗಾಬರಿ ಬೇಡ, ಎಲ್ಲ ಸರಿ ಹೋಗುತ್ತದೆ”

Leave a Reply