ಬೌದ್ಧೀಯತೆ : ಹಾಕಲಾಗದ ಬೀಗಕ್ಕೆ ಇಲ್ಲದ ಕೀಲಿ ಕೈ!

ಜನ ಸಿಕ್ಕಿಹಾಕಿಕೊಳ್ಳುತ್ತಿರುವುದು ಅವರು ಹುಡುಕುತ್ತಿರುವ ಪರಿಹಾರಗಳಲ್ಲಿ. ಹಿಂದುಗಳು ತಮ್ಮ ಪರಿಹಾರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಕ್ರಿಶ್ಚಿಯನ್ನರು, ಮುಸ್ಲೀಂರು ತಮ್ಮ ಪರಿಹಾರಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾರೆ. ಜನ ಫಿಲಾಸೊಫಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಬದುಕಿಗೆ ಯಾವ ಫಿಲಾಸೊಫಿಯ ಅವಶ್ಯಕತೆಯೂ ಇಲ್ಲ. ಬದುಕು ತನ್ನಷ್ಟಕ್ಕೆ ತಾನೇ ಪರಿಪೂರ್ಣ, ಅದಕ್ಕೆ ಯಾವ ವ್ಯಾಖ್ಯಾನದ, ವಿವರಣೆಯ, ವಿಶ್ಲೇಷಣೆಯ ಅಗತ್ಯವಿಲ್ಲ… ~ ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಒಬ್ಬ ರಾಜನಿಗೆ ತನ್ನ ರಾಜ್ಯದ ಅತ್ಯಂತ ಜಾಣ ವ್ಯಕ್ತಿಯನ್ನು ಹುಡುಕಿ ಅವನನ್ನು ತನ್ನ ಪ್ರಧಾನ ಮಂತ್ರಿಯಾಗಿಸಿಕೊಳ್ಳಬೇಕೆಂಬ ಆಸೆ ಆಯಿತು. ರಾಜ ಹಲವಾರು ಪರೀಕ್ಷೆಗಳನ್ನು ನಡೆಸಿ ಕೊನೆಯ ಸುತ್ತಿಗೆ ರಾಜ್ಯದ ಮೂವರು ಅತ್ಯಂತ ಜಾಣರನ್ನು ಆರಿಸಿದ. ಕೊನೆಗೆ ಆ ಮೂವರಿಗಾಗಿ ರಾಜ ಅತ್ಯಂತ ಕಠಿಣ ಸ್ಪರ್ಧೆಯೊಂದನ್ನ ಏರ್ಪಡು ಮಾಡಿದ. ಆ ಮೂವರನ್ನೂ ಒಂದು ಕೋಣೆಯಲ್ಲಿ ಕೂಡಿ ಹಾಕಿ ಹೊರಗಿನಿಂದ ಆ ಕೋಣೆಗೆ ಬೀಗ ಹಾಕಲಾಯಿತು. ಆ ಕೋಣೆಯಲ್ಲಿದ್ದ ಇನ್ನೊಂದು ಬಾಗಿಲಿಗೆ ಒಳಗಿನಿಂದ ದೊಡ್ಡ ಬೀಗ ಜಡಿಯಲಾಗಿತ್ತು. ಈ ಬೀಗವನ್ನು ಓಪನ್ ಮಾಡಿ ಮೊದಲು ಹೊರಗೆ ಬಂದವರನ್ನು ರಾಜ್ಯದ ಪ್ರಧಾನಮಂತ್ರಿಯಾಗಿ ಘೋಷಿಸಲಾಗುವುದೆಂದು ಆ ಮೂವರಿಗೂ ತಿಳಿಸಲಾಯಿತು.

ಕೂಡಲೇ ಇಬ್ಬರು ಜಾಣರು ಕಾರ್ಯತತ್ಪರರಾದರು. ಆ ಬೀಗದ ನಿಗೂಢ ಕೋಡ್ ಕಾಂಬಿನೇಶನ್ ತಿಳಿದುಕೊಳ್ಳಲು ಅತ್ಯಂತ ಕಠಿಣ ಗಣಿತದ ಸಮೀಕರಣಗಳನ್ನು ಬಳಸುತ್ತ ಪ್ರಯತ್ನ ಶುರು ಮಾಡಿದರು. ಆದರೆ ಮೂರನೇ ಜಾಣ ಮಾತ್ರ ಸುಮ್ಮನೇ ನಿರಾಳವಾಗಿ ಧ್ಯಾನಮಗ್ನನಾಗಿದ್ದ. ಇಬ್ಬರು ಜಾಣರು ಗಣಿತದ ಫಾರ್ಮುಲಾಗಳನ್ನು ಬಳಸಿ ಬೀಗದ ಕೋಡ್ ಕಾಂಬಿನೇಶನ್ ಪತ್ತೆ ಹಚ್ಚುವ ಪ್ರಯತ್ನದಲ್ಲಿದ್ದಾಗಲೇ, ಮೂರನೇ ಜಾಣ, ಧ್ಯಾನದಿಂದ ಎದ್ದು ನೇರವಾಗಿ ಆ ಬಾಗಿಲ ಬಳಿ ಬಂದು ಸುಮ್ಮನೇ ಬೀಗವನ್ನು ಒಮ್ಮೆ ಜಗ್ಗಿದ, ಬೀಗ ಓಪನ್ ಆಯಿತು. ಆ ಬೀಗವನ್ನು ಲಾಕ್ ಮಾಡಿರಲೇ ಇಲ್ಲ. ಅದು ಓಪನ್ ಆಗಿಯೇ ಇತ್ತು. ಮೂರನೇ ಜಾಣ ಬಾಗಿಲು ತೆರೆದು ಹೊರಗೆ ಬಂದ ಮತ್ತು ರಾಜ ಅವನನ್ನು ತನ್ನ ರಾಜ್ಯದ ಪ್ರಧಾನಮಂತ್ರಿಯಾಗಿ ನೇಮಕ ಮಾಡಿದ.

ಜಗತ್ತಿನ ಪರಿಸ್ಥಿತಿಯೂ ಹೀಗೆಯೇ ಇದೆ. ಯಾವ ಬೀಗವನ್ನೂ ಲಾಕ್ ಮಾಡಲಾಗಿಲ್ಲ. ಎಲ್ಲ ಬೀಗಗಳೂ ಓಪನ್ ಆಗಿಯೇ ಇವೆ. ಆದರೆ ಜನ ಮಾತ್ರ ಬೀಗ ಓಪನ್ ಮಾಡಲು ಕಠಿಣ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಸಾವಿರಾರು ಮೆಥಡ್ ಗಳನ್ನ ಉಪಯೋಗ ಮಾಡುತ್ತ ಬಾಗಿಲು ತೆರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ತಮ್ಮ ಪ್ರಯತ್ನ ನಿಲ್ಲಿಸಿ ಸಮಾಧಾನದಿಂದ ಸುತ್ತ ನೋಡುವುದು ಸಾಧ್ಯವಾದಾಗ, ಬೀಗ ಓಪನ್ ಆಗಿರುವುದು ಅವರಿಗೆ ಗೊತ್ತಾಗುತ್ತದೆ. ಮನುಷ್ಯ ಬಂಧನದಲ್ಲಿಲ್ಲ ಆದರೆ ಹಾಗೆಂದು ಅವನು ತಿಳಿದುಕೊಂಡಿದ್ದಾನೆ. ಮತ್ತು ಅವನು ಹಾಗೆಂದು ನಂಬಿರುವುದರಿಂದ ಅವನು ಬಂಧನದಲ್ಲಿದ್ದಾನೆ. ಸಾಮಾನ್ಯ ಮನುಷ್ಯನಿಗೂ ಬುದ್ಧನಿಗೂ ಯಾವ ವ್ಯತ್ಯಾಸವೂ ಇಲ್ಲ. ಆದರೆ ಸಾಮಾನ್ಯ ಮನುಷ್ಯ ವ್ಯತ್ಯಾಸಗಳಿವೆ ಎಂದು ತಿಳಿದುಕೊಂಡಿದ್ದಾನೆ. ಮತ್ತು ಅವನು ಹಾಗೆ ತಿಳಿದಿಕೊಂಡಿರುವುದರಿಂದ ವ್ಯತ್ಯಾಸಗಳು ಸೃಷ್ಟಿಯಾಗಿವೆ. ನೀವು ನಿಮ್ಮ ಸೆರೆಮನೆಗಳನ್ನ ನಿಮ್ಮ ಲಾಕ್ ಗಳನ್ನ ನೀವೇ ಸೃಷ್ಟಿ ಮಾಡಿಕೊಂಡಿದ್ದೀರಿ. ನಂತರ ನೀವು ಇವುಗಳಿಂದ ಹೊರಬರುವ ದಾರಿಗಳನ್ನು ಹುಡುಕುತ್ತಿದ್ದೀರಿ.

ಬುದ್ಧಿಸಂ ಈ ಗಂಟನ್ನು ಒಂದೇ ಏಟಿಗೆ ಕತ್ತರಿಸುತ್ತದೆ. ಬುದ್ಧಿಸಂ ಪ್ರಕಾರ ಯಾವ ಬೀಗವೂ ಇಲ್ಲ ಯಾವ ಗಂಟೂ ಇಲ್ಲ. ಒಂದೇ ಕತ್ತಿಯೇಟಿಗೆ ಬುದ್ಧಿಸಂ ಗಂಟನ್ನು ಕತ್ತರಿಸುತ್ತದೆ ಎಂದು ನಾನು ಹೇಳಿದ್ದು ಆ ಕಾರಣದಿಂದಲೇ. ಎಲ್ಲೂ ಹೋಗಬೇಕಿಲ್ಲ, ಯಾವ ಗುರಿಯನ್ನೂ ಮುಟ್ಟಬೇಕಿಲ್ಲ, ಏನನ್ನೂ ಮಾಡಬೇಕಿಲ್ಲ. ನೀವು ಈಗಾಗಲೇ ಅಲ್ಲಿರುವಿರಿ, ಈಗಾಗಲೇ ನೀವು ಬಯಸುತ್ತಿರುವುದನ್ನ ಆಗಿರಿರುವಿರಿ, ನೀವು ಈಗ ಕಣ್ಣು ತೆರೆಯಬೇಕಷ್ಟೇ.

ರಾಜ ಹುಡುಕಿದ ಆ ಇಬ್ಬರು ಜಾಣ ವ್ಯಕ್ತಿಗಳ ಬಗ್ಗೆ ಒಮ್ಮೆ ಯೋಚಿಸಿರಿ. ಬಹುಶಃ ಅವರು ಗಣಿತಶಾಸ್ತ್ರಜ್ಞರಾಗಿರಬಹುದು ಅಥವಾ ಇಂಜಿನೀಯರ್ಗಳಾಗಿರಬಹುದು. ಆದ್ದರಿಂದಲೇ ಅವರು ಬೀಗ ಲಾಕ್ ಆಗಿದೆಯೆಂದೂ ಮತ್ತು ಆ ಬೀಗ ಓಪನ್ ಮಾಡಲು ಕಾಂಬಿನೇಶನ್ ಕೋಡ್ ಹುಡುಕಬೇಕೆಂದು ಪ್ರಯತ್ನ ಮಾಡುತ್ತಲೇ ಹೋದರು. ಆದರೆ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾಗುವುದು ಸಾಧ್ಯವಿತ್ತೆ? ಸಮಸ್ಯೆಗೆ ಪರಿಹಾರ ಸಾಧ್ಯವೇ ಇರಲಿಲ್ಲ ಏಕೆಂದರೆ ಅಲ್ಲಿ ಸಮಸ್ಯೆಯೇ ಇರಲಿಲ್ಲ. ಈಗ ಅವರು ಸಿಕ್ಕಿಹಾಕಿಕೊಳ್ಳುತ್ತಿರುವುದು ಅವರು ಹುಡುಕುತ್ತಿರುವ ಉತ್ತರಗಳಲ್ಲಿಯೇ ಹೊರತು ಸಮಸ್ಯೆಯಲ್ಲಲ್ಲ, ಏಕೆಂದರೆ ಅಲ್ಲಿ ಸಮಸ್ಯೆಯೇ ಇಲ್ಲ.

ಹೌದು ಜನ ಸಿಕ್ಕಿಹಾಕಿಕೊಳ್ಳುತ್ತಿರುವುದು ಅವರು ಹುಡುಕುತ್ತಿರುವ ಪರಿಹಾರಗಳಲ್ಲಿ. ಹಿಂದುಗಳು ತಮ್ಮ ಪರಿಹಾರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆ, ಕ್ರಿಶ್ಚಿಯನ್ನರು, ಮುಸ್ಲೀಂರು ತಮ್ಮ ಪರಿಹಾರಗಳಲ್ಲಿ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದಾರೆ. ಜನ ಫಿಲಾಸೊಫಿಗಳಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಬದುಕಿಗೆ ಯಾವ ಫಿಲಾಸೊಫಿಯ ಅವಶ್ಯಕತೆಯೂ ಇಲ್ಲ. ಬದುಕು ತನ್ನಷ್ಟಕ್ಕೆ ತಾನೇ ಪರಿಪೂರ್ಣ, ಅದಕ್ಕೆ ಯಾವ ವ್ಯಾಖ್ಯಾನದ, ವಿವರಣೆಯ, ವಿಶ್ಲೇಷಣೆಯ ಅಗತ್ಯವಿಲ್ಲ.

ಆದರೆ ನೀವು ಈ ವಿವರಣೆ, ವಿಶ್ಲೇಷಣೆಯ ಆಟದಲ್ಲಿ ಒಮ್ಮೆ ಸಿಕ್ಕಿಹಾಕಿಕೊಂಡುಬಿಟ್ಟರೆ, ಈ ಆಟಕ್ಕೆ ಕೊನೆಯೇ ಇಲ್ಲ. ಒಂದು ಸಂಗತಿ ಇನ್ನೊಂದು ಸಂಗತಿಯತ್ತ ಎಳೆದುಕೊಂಡು ಹೋಗುತ್ತದೆ ಮತ್ತು ನೀವು ಎಂದೂ ಮುಗಿಯದ ಸರಪಳಿಯ ಬಂಧಿಯಾಗುತ್ತ ಹೋಗುತ್ತೀರಿ. ಸಮಸ್ಯೆಯ ಪರಿಹಾರ ಸಾಧ್ಯವೇ ಇಲ್ಲ ಎಂದಮೇಲೆ, ಸಮಸ್ಯೆಯೇ ಇಲ್ಲ ಎಂದಮೇಲೆ ನೀವು ಉತ್ತರಗಳ ಮೇಲೆ ಉತ್ತರಗಳನ್ನ, ಪರಿಹಾರಗಳ ಮೇಲೆ ಪರಿಹಾರಗಳನ್ನ ಹುಡುಕುತ್ತಲೇ ಹೋಗುತ್ತೀರಿ.

ಬುದ್ಧಿಸಂ ನಿಮ್ಮನ್ನು ನೆಲಕ್ಕೆ ಕರೆದುಕೊಂಡು ಬರುತ್ತದೆ. ಮೊದಲು ಬಾಗಿಲಿಗೆ ಬೀಗ ಹಾಕಲಾಗಿದೆಯೇ? ಆ ಬೀಗವನ್ನ ಲಾಕ್ ಮಾಡಲಾಗಿದೆಯೇ ಎನ್ನುವುದನ್ನ ಮೊದಲು ತಿಳಿದುಕೊಳ್ಳುವಂತೆ, ಮೊದಲು ಚೆಕ್ ಮಾಡುವಂತೆ ಒತ್ತಾಯಿಸುತ್ತದೆ. ನಿಜದಲ್ಲಿ ಬಾಗಿಲಿಗೆ ಯಾವ ಬೀಗವನ್ನೂ ಹಾಕಿಲ್ಲ ಎಂದ ಮೇಲೆ ಆ ಬೀಗವನ್ನು ಲಾಕ್ ಮಾಡಿರುವ ಪ್ರಶ್ನೆ ಎಲ್ಲಿಂದ ಬಂತು? ಅಸ್ಚಿತ್ವದ ಬಾಗಿಲನ್ನು ಲಾಕ್ ಮಾಡುವವರಾದರೂ ಯಾರು? ಮತ್ತು ಯಾಕೆ? ಸಮಸ್ಯೆಯನ್ನ ಸೃಷ್ಟಿ ಮಾಡುವವರು ಯಾರು? ಮತ್ತು ಯಾಕೆ? ನಾವೇ ಅಸ್ತಿತ್ವ, ಅದು ನಮ್ಮೊಳಗೆ ಇದೆ, ನಾವು ಅದರೊಳಗೆ ಇದ್ದೇವೆ. ಇದನ್ನ ಸ್ಪಷ್ಟವಾಗಿ ಗಮನಿಸಿದಾಗ ಒಂದು ರಿಲ್ಯಾಕ್ಸೇಷನ್ ನಮ್ಮನ್ನು ಆವರಿಸಿಕೊಳ್ಳುತ್ತದೆ. ಮತ್ತು ನೀರಾಳತೆಯಲ್ಲಿಯೇ ಅರಿವು ಸಾಧ್ಯವಾಗುತ್ತದೆ.

ಆ ಮೂರನೇ ಜಾಣನಿಗಾದದ್ದು ಇದೇ. ಅವನು ಆಲೋಚಿಸುತ್ತಿರಲಿಲ್ಲ, ವಿಚಾರಮಾಡುತ್ತಿರಲಿಲ್ಲ, ವಿಶ್ಲೇಷಣೆ ಮಾಡುತ್ತಿರಲಿಲ್ಲ, ಹುಡುಕಾಡುತ್ತಿರಲಿಲ್ಲ, ಸೃಷ್ಟಿ ಮಾಡುತ್ತಿರಲಿಲ್ಲ, ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಅವನು ಖುರ್ಚಿಯಲ್ಲಿ ಏನನ್ನೂ ಮಾಡದೇ ಸುಮ್ಮನೇ ಕುಳಿತಿದ್ದ. ಏನನ್ನೂ ಮಾಡದೇ ಸುಮ್ಮನೇ ಇರುವುದೇ ಧ್ಯಾನ. ಇಂಗ್ಲೀಷ್ ಪದ ಮೆಡಿಟೇಶನ್ ಸರಿಯಾದ ಅರ್ಥ ಹೊಮ್ಮಿಸುವುದಿಲ್ಲ. ಏಕೆಂದರೆ ಇಂಗ್ಲೀಷ್ ನಲ್ಲಿ ಮೆಡಿಟೇಟ ಅಪಾನ್ ಎಂದರೆ ವಿಚಾರ ಮಾಡುವುದು. ಇಂಗ್ಲೀಷ್ ನಲ್ಲಿ ಧ್ಯಾನಕ್ಕೆ ಪರಿಪೂರ್ಣ ಅನುವಾದ ಸಾಧ್ಯವಿಲ್ಲ. ಧ್ಯಾನ ಎಂದರೆನೇ not to meditate upon. ಧ್ಯಾನ ಎಂದರೆ ಏನನ್ನೂ ಮಾಡದಿರುವುದು, ಸುಮ್ಮನೇ ರಿಲ್ಯಾಕ್ಸ್ ಮಾಡುವುದು, just to be. ನೀವು ಮೌನದಲ್ಲಿರುವಾಗ, ಏನನ್ನೂ ಮಾಡದೇ ಸುಮ್ಮನಿರುವಾಗ ನಿಮ್ಮ ದೃಷ್ಟಿಕೋನಕ್ಕೆ ಅನಂತ ಸಾಧ್ಯತೆಗಳು. ಆಗ ನಿಮ್ಮ ನೋಟಕ್ಕೆ ಸ್ಪಷ್ಟತೆ ಸಾಧ್ಯ, ಆಗ ನಿಮಗೆ ಎಲ್ಲವನ್ನೂ through & through ನೋಡುವುದು ಸಾಧ್ಯ. ಆ ಮೂರನೇ ಜಾಣನಿಗೆ ಬೀಗ ಲಾಕ್ ಆಗಿರದ ವಿಷಯ ಗೊತ್ತಾಗಿದ್ದು ಈ ಕಾರಣಕ್ಕಾಗಿಯೇ. ಆದ್ದರಿಂದಲೇ ಅವನು ಸೀದಾ ಕುರ್ಚಿಯಿಂದೆದ್ದು ಹೋಗಿ ಬೀಗ ಬಿಚ್ಚಿ ಬಾಗಿಲು ತೆರೆದದ್ದು.

ಇದು ನನ್ನ ಅನುಭವ ಕೂಡ. ಈ ದೃಷ್ಟಾಂತ ಕೇವಲ ದೃಷ್ಟಾಂತವಲ್ಲ, ಹುಟ್ಟು ಹಾಕಿದ್ದಲ್ಲ. ಇದು ಜಗತ್ತಿನ ಎಲ್ಲ ಬುದ್ಧರ ದೃಷ್ಟಾಂತ, ಪರಿಸ್ಥಿತಿ ಇರುವುದು ಹೀಗೆಯೇ. ಇದು ಕೇವಲ ಕತೆಯಲ್ಲ, ಸಮಸ್ತ ಬುದ್ಧರ ಅನುಭವಗಳ ಸಾಂದ್ರ ಪಾಕ : ಬಾಗಿಲಿಗೆ ಬೀಗ ಇಲ್ಲದಿರುವುದು. ನೀವು ಈಗಾಗಲೇ ಬುದ್ಧನ ಸ್ಥಿತಿಯಲ್ಲಿ ಇರುವವರು. ಇದನ್ನ ಗುರುತಿಸಿ. ನಿಮ್ಮ ಈ ಬುದ್ಧ ಸ್ಥಿತಿಯನ್ನ ಸುಮ್ಮನೇ ಅನುಭವಿಸಿ. ಈ ಸ್ಥಿತಿಯ ಕಾರಣವಾಗಿ ಯಾವ ಸಮಸ್ಯೆಯನ್ನೂ ಸೃಷ್ಟಿ ಮಾಡಿಕೊಳ್ಳಬೇಡಿ. ನೀವು ಸಮಸ್ಯೆಯನ್ನು ಸೃಷ್ಟಿಮಾಡಿಕೊಂಡ ಕ್ಷಣದಲ್ಲಿ ನಿಮ್ಮ ಆನಂದ ಮಾಯವಾಗುತ್ತದೆ, ನೀವು ಸಮಸ್ಯೆಯ ಪರಹಾರಕ್ಕೆ ಮುಂದಾಗುತ್ತೀರಿ. ಒಂದು ಸಮಸ್ಯೆ ಹತ್ತು ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಅಸಲಿಗೆ ಸಮಸ್ಯೆಯೇ ಇಲ್ಲ ಎನ್ನುವ ಬುದ್ಧನ ಮಾತನ್ನ ಪರಿಪೂರ್ಣವಾಗಿ ಗೊತ್ತು ಮಾಡಿಕೊಳ್ಳಿ. ಬದುಕು ಸಮಸ್ಯೆ ಅಲ್ಲ, ತುಂಬ ಸರಳ, ಸಮಸ್ಯೆ ಮಾಡಿಕೊಳ್ಳಬೇಡಿ.

~ Source – Osho Book “Take it Easy, Vol 2”


Leave a Reply