ಮಹಾ ಪರಿನಿರ್ವಾಣ : ಓಶೋ ವ್ಯಾಖ್ಯಾನ

ಭಾಷೆಗೆ ವಿವರಿಸುವುದು ಸಾಧ್ಯವೇ ಇಲ್ಲದಂಥಹ ಸ್ಥಿತಿಯೂ ಒಂದಿದೆ ಇದನ್ನ ಬುದ್ಧ ಮಹಾಪರಿನಿರ್ವಾಣ ಎಂದು ಹೇಳಿದ… ~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ

ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?

ಶಬ್ದ ದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?

ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಮಾತಾಡಬೇಕಲ್ಲ
ಅವನೊಂದಿಗೆ.

~ ಜುವಾಂಗ್-ತ್ಸೆ

************************

ಬುದ್ಧ ಎರಡು ಪದಗಳನ್ನ ಬಳಸುತ್ತಾನೆ. ಜ್ಞಾನೋದಯವನ್ನ ವಿವರಿಸಲು ಬುದ್ಧ “ನಿರ್ವಾಣ” ಎನ್ನುವ ಪದ ಬಳಸುತ್ತಾನೆ. ಆದರೆ ಅವನಿಗೆ ನಿರ್ವಾಣದ ಆಚೆ ಇನ್ನೂ ಒಂದು ಹಂತ ಇರುವುದು ಗೊತ್ತು, ಹಾಗೆಂದೇ ಆ ಹಂತವನ್ನ ಬುದ್ದ “ಮಹಾಪರಿನಿರ್ವಾಣ” ಎಂದು ಗುರುತಿಸಿದ.

ನಿರ್ವಾಣ ಎನ್ನುವ ಪದ ಶುದ್ಧ ಮೌನದ ಸ್ಥಿತಿಯನ್ನ ಸೂಚಿಸುತ್ತದೆ. ಈ ಶುದ್ಧ ಮೌನ ಎಷ್ಟು ಆಳವಾದದ್ದು ಎಂದರೆ, ಇಲ್ಲಿ “ನಾನು” (self) ಎನ್ನುವುದಕ್ಕೆ ಯಾವ ಜಾಗವೂ ಇಲ್ಲ. ಸೆಲ್ಫ್ ಒಂದು ಗೊಂದಲವನ್ನುಂಟು ಮಾಡುವ ಸಂಗತಿ. ನಿರ್ವಾಣದಲ್ಲಿ ಈ ಯಾವುದೂ ಇಲ್ಲ. ಇದು ಒಂದು ಸೆಲ್ಫ್ ಲೆಸ್ ಸ್ಥಿತಿ, ಆದರೂ ಈ ಸ್ಥಿತಿ ನಿಮ್ಮ ಅನುಭವಕ್ಕೆ ಬರುತ್ತಿದೆ, ಈ ಸೆಲ್ಫ್ ಲೆಸ್ ಸ್ಥಿತಿಯನ್ನ ನೀವು ಅನುಭವಿಸುತ್ತಿದ್ದೀರಿ. ಈ ಸ್ಥಿತಿ ನಿಮಗೆ ಕಾಣಿಸುತ್ತಿಲ್ಲ ಆದರೆ ಈ ಸ್ಥಿತಿಯನ್ನ ನಿಮ್ಮ ಸೆಲ್ಪ್, ಸೆಲ್ಫ್ ಲೆಸ್ ಎಂದು ಅನುಭವಿಸುತ್ತಿದೆ.

ಈ ಸ್ಥಿತಿಯನ್ನು ಕೂಡ ಭಾಷೆಯಲ್ಲಿ ವಿವರಿಸುವುದು ಕಷ್ಟ. ಆದರೆ ಇದರಾಚೆಯ ಭಾಷೆಗೆ ವಿವರಿಸುವುದು ಸಾಧ್ಯವೇ ಇಲ್ಲದಂಥಹ ಸ್ಥಿತಿಯೂ ಒಂದಿದೆ ಇದನ್ನ ಬುದ್ಧ ಮಹಾಪರಿನಿರ್ವಾಣ ಎಂದು ಹೇಳಿದ. ಮಹಾಪರಿನಿರ್ವಾಣವನ್ನ ಬುದ್ಧ ವ್ಯಾಖ್ಯಾನ ಮಾಡಲು ಹೋಗುವುದಿಲ್ಲ, ಇದು ಏನು ಎಂತ ಎನ್ನುವುದನ್ನ ವಿವರಿಸಲು ಹೋಗುವುದಿಲ್ಲ, ನೀವು ಇದನ್ನ ಅನುಭವಿಸಿ, ನೀವೇ ಕಂಡುತೊಳ್ಳಿ ಎಂದು ಹೇಳಿ ಸುಮ್ಮನಾಗುತ್ತಾನೆ.

ನಿರ್ವಾಣದವರೆಗೆ ಬುದ್ಧ ಅದನ್ನ ವ್ಯಾಖ್ಯಾನ ಮಾಡಬಲ್ಲವನಾಗಿದ್ದಾನೆ, ಏಕೆಂದರೆ ಈ ಹಂತದಲ್ಲೂ ಮೈಂಡ್ ಸೂಕ್ಷ್ಮ ರೂಪದಲ್ಲಿ ಅಸ್ತಿತ್ವದಲ್ಲಿದ್ದು, ಶುದ್ಧ ಮೌನವನ್ನ, ಸೆಲ್ಫ್ ಲೆಸ್ ನ, ಪರಮ ಆನಂದ (bliss) ನ ಅನುಭವಿಸುತ್ತಿದೆ. ಆದರೆ ಮಹಾಪರಿನಿರ್ವಾಣ ದಲ್ಲಿ ಮೈಂಡ್ ಪೂರ್ಣವಾಗಿ ಗೈರು ಹಾಜರಾಗಿದೆ ಹಾಗಾಗಿ ಇದನ್ನ ಅನುಭವಿಸುವುದು ಕೂಡ ಅಸಾಧ್ಯ. ಪರಿ ಎಂದರೆ ಮೀರುವಿಕೆ (transcendental) ಮಹಾಪರಿನಿರ್ವಾಣ ಎಂದರೆ ನಿರ್ವಾಣವನ್ನೂ ಮೀರಿದ ಸ್ಥಿತಿ. ಇಲ್ಲಿ ಯಾವ ಅನುಭವ ಇಲ್ಲ, ಏಕೆಂದರೆ ಅನುಭವಿಸುವವ ಸಂಪೂರ್ಣವಾಗಿ ನಾಪತ್ತೆ.

ಅನುಭವವನ್ನ ಮೀರಿದ್ದಾದರಿಂದ ಅದು ಮಹಾಪರಿನಿರ್ವಾಣ. ನಾವು ಕಲ್ಪಿಸಿಕೊಳ್ಳಬಹುದಾದದ್ದನೆಲ್ಲ ಮೀರಿದ್ದು ಮಹಾಪರಿನಿರ್ವಾಣ, ಏಕೆಂದರೆ ಕಲ್ಪಿಸಿಕೊಳ್ಳಲು ಮೈಂಡ್ ಬೇಕೆ ಬೇಕು. ಒಂದು ಹಂತದವರೆಗೆ ಮೈಂಡ್ ಬೇಕಾಗುತ್ತದೆ ಆದರೆ ಆತ್ಯಂತಿಕ ಮೈಂಡ್ ನ ಹೊರತಾಗಿ ಮಾತ್ರ ಸಂಭವಿಸುವಂಥದು.

ಹಾಗಾಗಿ ನಿರ್ವಾಣ ನಮ್ಮ ರಸ್ತೆ ಮುಗಿಯುವ ಕೊನೆಯ ಮೈಲುಗಲ್ಲು. ಅದರಿಂದಾಚೆ, ನೀವು ಒಬ್ಬರೇ ಕಂಡುಕೊಳ್ಳಬೇಕು. ಸುಮ್ಮನೇ ಇಂಥದೊಂದು ಸ್ಥಿತಿಗೆ ಬುದ್ಧ ಮಹಾಪರಿನಿರ್ವಾಣ ಎಂದಿದ್ದಾನೆ, ಸ್ವ ಎನ್ನುವುದರ ಮಹಾ ಮೀರುವಿಕೆ.

ಒಮ್ಮೆ ಒಬ್ಬ ಝೆನ್ ಮಾಸ್ಟರ್ ಮತ್ತು ಅವನ ಶಿಷ್ಯ ಒಂದು ಪರ್ವತ ಶ್ರೇಣಿಯ ಮೂಲಕ ಹಾಯ್ದು ಮುಂದಿನ ಊರಿಗೆ ಹೋಗುತ್ತಿದ್ದರು.

ದಾರಿಯುದ್ದಕ್ಕೂ ಮಾಸ್ಟರ್ ಮೌನವಾಗಿದ್ದ ಆದರೆ ಅವನ ಶಿಷ್ಯ ಮಾತ್ರ ಝೆನ್ ಬಗ್ಗೆ ಮತ್ತು ಮನಸ್ಸಿನ ಬಗ್ಗೆ ಸತತವಾಗಿ ಮಾತಾನಾಡುತ್ತಲೇ ಇದ್ದ. ಸ್ವಲ್ಪ ದೂರ ಕ್ರಮಿಸಿದ ನಂತರ ಅವರಿಬ್ಬರಿಗೂ ಒಂದು ಭಾರಿ ಬಂಡೆ ಎದುರಾಯಿತು.

ಮಾಸ್ಟರ್ ತನ್ನ ಶಿಷ್ಯನ ತಲೆ ಮೇಲೆ ಕೈಯ್ಯಾಡಿಸುತ್ತ ಕೇಳಿದ, “ ನೋಡು ಆ ಭಾರಿ ಬಂಡೆ ಇದೆಯಲ್ಲಾ, ಅದು ನಿನ್ನ ಮನಸ್ಸಿನ ಒಳಗಿದೆಯೋ ಹೊರಗಿದೆಯೋ?

ಶಿಷ್ಯ ಅತ್ಯಂತ ಆತ್ಮವಿಶ್ವಾಸದಿಂದ ಉತ್ತರಿಸಿದ, “ ಝೆನ್ ನಲ್ಲಿ ಎಲ್ಲವೂ ಮನಸ್ಸಿನ ಆಟ, ಮನಸ್ಸು ನಮ್ಮ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಆದ್ದರಿಂದ ಖಂಡಿತವಾಗಿ ಬಂಡೆ ನನ್ನ ಮನಸ್ಸಿನ ಒಳಗಿದೆ.

“ಹಾಗಾದರೆ ಭಾರಿ ಬಂಡೆಯನ್ನು ಹೊತ್ತ ನಿನ್ನ ತಲೆ ತುಂಬ ಭಾರವಾಗಿರಬೇಕಲ್ಲ ? “ ಮಾಸ್ಟರ್ ನಗುತ್ತ ಉತ್ತರಿಸಿದ.

ಮುಂದಿನ ಹಾದಿಯನ್ನು ಇಬ್ಬರೂ ಮಾತಿಲ್ಲದೇ ಸಮಾಧಾನದಿಂದ ಕ್ರಮಿಸಿದರು.


Osho / I Cannot Leave My Garden Unfinished, 19-May-1986 Pm in Punta Del Este, Uruguay.

Leave a Reply