ನಿರಾಕರಣೆಯ ಸ್ವೀಕಾರ : ಓಶೋ ವ್ಯಾಖ್ಯಾನ

ಮೂಲ: ಓಶೋ ರಜನೀಶ್ । ಕನ್ನಡಕ್ಕೆ: ಚಿದಂಬರ ನರೇಂದ್ರ

ಹಿಂದೆ, ನನಗೊಬ್ಬ ಶಿಷ್ಯನಿದ್ದ.
ರಾತ್ರಿಯಾಯಿತೆಂದರೆ ಸಾಕು
ಭಯ ಮತ್ತು ಆತಂಕದಿಂದ ನಡುಗುತ್ತಿದ್ದ.

ಮರುದಿನ ಬೆಳಿಗ್ಗೆ ನೋಡಿದರೆ
ದೆವ್ವವೊಂದರಿಂದ ಮಾನಭಂಗಗೊಂಡವನಂತೆ
ಬಿಳಚಿಕೊಂಡಿರುತ್ತಿದ್ದ.

ನಂತರ ನನ್ನ ಮಮತೆಗೆ
ಅವನ ಮೇಲೆ ಕರುಣೆ ಬಂತು,
ನನ್ನ ದಿವ್ಯ ಖಡ್ಗದಿಂದ
ಅವನಿಗೊಂದು ಚೂರಿ ತಯಾರಿಸಲಾಯಿತು.

ಅಮೇಲಿಂದ ನನಗೆ
ಅವನ ಮೇಲೆ ಅಭಿಮಾನ ಹೆಚ್ಚಾಗಿದೆ
ಈಗ ಅವನು ನನ್ನ ಪಟ್ಟ ಶಿಷ್ಯ.

ಈಗ ಆತ ತನ್ನ ಭಯವನ್ನೆಲ್ಲ ಕಳೆದುಕೊಂಡುಬಿಟ್ಟಿದ್ದಾನೆ.
ಅಷ್ಟೇ ಅಲ್ಲ, ರಾತ್ರಿಯಾಯಿತೆಂದರೆ ತಾನೇ
ಹೊರಟುಬಿಡುತ್ತಾನೆ ಸಮಸ್ಯೆಗಳನ್ನು ಹುಡುಕಿಕೊಂಡು.

  • ಹಾಫಿಜ್

ಒಬ್ಬ ಝೆನ್ ಮಾಸ್ಟರ್ ತೀರಿಕೊಂಡಿದ್ದ ತನ್ನ ಮಾಸ್ಟರ್ ನ ಹುಟ್ಟು ಹಬ್ಬವನ್ನ ವಿಜೃಂಭಣೆಯಿಂದ ಆಚರಿಸುತ್ತಿದ್ದ. ಯಾರೋ ಒಬ್ಬರು ಮಾಸ್ಟರ್ ನ ಪ್ರಶ್ನೆ ಮಾಡಿದರು,

ನೀನ್ಯಾಕೆ ಆ ಮಾಸ್ಟರ್ ನ ಬರ್ಥಡೇ ಆಚರಿಸುತ್ತಿದ್ದೀಯ? ನನಗೆ ಗೊತ್ತಿದ್ದ ಹಾಗೆ ಆ ಮಾಸ್ಟರ್ ಯಾವತ್ತೂ ನಿನ್ನ ಶಿಷ್ಯ ಎಂದು ಸ್ವೀಕರಿಸಲಿಲ್ಲ. ಅವನ ಶಿಷ್ಯನಾಗಲು ನೀನು ಬಹಳ ಪ್ರಯತ್ನಪಟ್ಟೆ, ಆದರೆ ಪ್ರತಿ ಬಾರಿಯೂ ಅವನು ನಿನ್ನನ್ನು ನಿರಾಕರಿಸಿದ. ನೀನು ಹರಸಾಹಸ ಮಾಡಿದರೂ ನಿನಗೆ ಸನ್ಯಾಸದ ದಿಕ್ಷೆ ಕೊಡಲು ಅವನು ಒಪ್ಪಲಿಲ್ಲ. ಆ ಮಾಸ್ಟರ್ ನ ಹುಟ್ಟು ಹಬ್ಬ ನೀನ್ಯಾಕೆ ಆಚರಿಸುತ್ತೀಯ? ಸಂಪ್ರದಾಯದ ಪ್ರಕಾರ, ಮಾಸ್ಟರ್ ನಿಂದ ದೀಕ್ಷೆ ಪಡೆದ ಶಿಷ್ಯರು ಮಾತ್ರ ಅವನ ಹುಟ್ಟು ಹಬ್ಬ ಆಚರಿಸಬೇಕು.

ಮಾಸ್ಟರ್ ನಗುತ್ತ ಉತ್ತರಿಸಿದ, “ನನ್ನ ಮಾಸ್ಟರ್ ನನ್ನ ನಿರಾಕರಿಸಿದ ಎನ್ನುವ ನಿರ್ದಿಷ್ಟ ಕಾರಣಕ್ಕಾಗಿಯೇ ನಾನು ಅವನ ಹುಟ್ಟುಹಬ್ಬ ಆಚರಿಸುತ್ತಿದ್ದೇನೆ. ಮೊದಲು ಅವನು ನಿರಾಕರಿಸಿದಾಗ ನನಗೆ ವಿಪರೀತ ಸಿಟ್ಟು ಬಂದಿತ್ತು ಆದರೆ, ನನಗೆ ಈಗ ಅವನ ಅಂತಃಕರಣ ಅರ್ಥವಾಗುತ್ತಿದೆ. ಅಕಸ್ಮಾತ್ ಅವನೆನಾದರೂ ನನ್ನ ಶಿಷ್ಯನಾಗಿ ಸ್ವೀಕರಿಸಿಬಿಟ್ಟಿದ್ದರೆ, ನಾನು ಕೇವಲ ಅವನ ನಕಲು ಮಾಡುತ್ತ ಉಳಿದುಬಿಡುತ್ತಿದ್ದೆ. ಅವನು ನನ್ನ ಪ್ರಜ್ಞಾಪೂರ್ವಕವಾಗಿ ತಿರಸ್ಕರಿಸಿದ ಏಕೈಕ ಕಾರಣಕ್ಕಾಗಿ ಇಂದು ನಾನು ನನ್ನ ಕಾಲ ಮೇಲೆ ನಿಂತುಕೊಂಡಿದ್ದೇನೆ. ಅವನ ನಿರಾಕರಣೆ ಇನ್ನೊಬ್ಬರಿಗೆ ಅಂಟಿಕೊಳ್ಳುವ ನನ್ನ ಹತಾಶ ಪ್ರಯತ್ನಗಳಿಗೆ ಕೊನೆ ಹಾಡಿತು. ಅವನ ನಿರಾಕರಣೆ ನನ್ನ ಕೈ ಹಿಡಿಯಿತು. ನಾನು ಅವನ ಶಿಷ್ಯ ಅಲ್ಲವಾದರೂ ಅವನು ನನ್ನ ಮಾಸ್ಟರ್. ಅವನು ನನ್ನನ್ನು ನಿರಾಕರಿಸುವ ಮೂಲಕ ಸ್ವೀಕಾರ ಮಾಡಿದ್ದಾನೆ. ನಾನು ಅವನಿಗೆ ಧನ್ಯವಾದ ಹೇಳಲೇ ಬೇಕು”.

ಒಬ್ಬ ಸಾಧಕ, ಸೂಫಿ ಅನುಭಾವಿ ಶೇಖ್ ಫರೀದ್ ನ ಬಳಿ ಬಂದು ಕೇಳಿಕೊಂಡ,

“ ನನ್ನನ್ನು ಕಟ್ಟಿಹಾಕಿರುವ ಬಂಧನಗಳಿಂದ, ಸಿದ್ಧಾಂತಗಳಿಂದ, ಪೂರ್ವಾಗ್ರಹಗಳಿಂದ ಬಿಡಿಸಿಕೊಳ್ಳುವುದು ಹೇಗೆ? “

ಈ ಪ್ರಶ್ನೆ ಕೇಳುತ್ತಿದ್ದಂತೆಯೇ ಫರೀದ್ ಓಡಿ ಹೋಗಿ ಹತ್ತಿರದ ಕಂಬವೊಂದನ್ನ ಗಟ್ಟಿಯಾಗಿ ಹಿಡಿದುಕೊಂಡು ಕೂಗತೊಡಗಿದ,

“ ಯಾರಾದರೂ ನನ್ನನ್ನ ಈ ಕಂಬದಿಂದ ಬಿಡಿಸಿ “

ಫರೀದ್ ನ ಕೂಗಾಟ ಕೇಳುತ್ತಿದ್ದಂತೆಯೇ ಸುತ್ತ ಮುತ್ತಲಿನ ಜನ ಅಲ್ಲಿ ಬಂದು ಸೇರಿದರು. ಅವರಲ್ಲಿ ಹಿರಿಯ ಮನುಷ್ಯನೊಬ್ಬ ಫರೀದ್ ನ ಗದರಿಸಿದ.

“ ಫರೀದ್, ನಿನಗೆ ಹುಚ್ಚು ಹಿಡಿದಿದೆಯಾ? ಕಂಬ ಹಿಡಿದುಕೊಂಡಿರೋದು ನೀನು, ನಿನ್ನ ಕಂಬ ಹಿಡಿದುಕೊಂಡಿಲ್ಲ, ಸುಮ್ಮನೇ ತರಲೆ ಮಾಡಬೇಡ”

“ ತರಲೆ ಮಾಡುತ್ತಿರೋದು ನಾನಲ್ಲ, ಆ ಮನುಷ್ಯ “ ಫರೀದ್ ಪ್ರಶ್ನೆ ಕೇಳಿದ ಸಾಧಕನತ್ತ ಕೈ ಚಾಚಿ ತೋರಿಸಿದ.

ಫರೀದ್ ನ ಮಾತು ಕೇಳುತ್ತಿದ್ದಂತೆಯೇ ಸಾಧಕನಿಗೆ ನಾಚಿಕೆಯಾಯಿತು. ಆತ ಓಡಿ ಬಂದು ಫರೀದ್ ನ ಪಾದ ಮುಟ್ಟಿ ಕ್ಷಮೆ ಕೇಳಿದ.

Leave a Reply