ಒಳಗಿನ ತೋಳಗಳ ಕದನ: ಓಶೋ ವ್ಯಾಖ್ಯಾನ

ಈ ತೋಳಗಳ ಕದನ ನನ್ನೊಳಗಷ್ಟೇ ಅಲ್ಲ ನಿನ್ನೊಳಗೂ ಹಾಗು ಎಲ್ಲರೊಳಗೂ ಸದಾ ನಡೆಯುತ್ತಿರುತ್ತದೆ…~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಂದು ಸಣ್ಣ ಮನೆಯಲ್ಲಿ
ಸಿಟ್ಟು, ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.

ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ ಹಾಡು, ಕುಣಿತ
ಮತ್ತು ಕುಡಿತ.

ಸಿಟ್ಟು, ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.

“ಈ ಮೋಜು
ಮುಂದುವರೆಸಿದರೆ
ಮನೆ ಬಿಟ್ಟು ಹೋಗುತ್ತೇವೆ ನೋಡು.”

– ಹಾಫಿಜ್

**********************

ಝೆನ್ ಮಾಸ್ಟರ್, ಹೊಸದಾಗಿ ಆಶ್ರಮಕ್ಕೆ ಸೇರಿದ್ದ ವಿದ್ಯಾರ್ಥಿಗೆ ಬದುಕಿನ ಬಗ್ಗೆ ಪಾಠ ಮಾಡುತ್ತಿದ್ದ ;

ನನ್ನೊಳಗೆ ಎರಡು ಹಸಿದ ತೋಳಗಳು ಭೀಕರವಾಗಿ ಕಾದಾಡುತ್ತಿವೆ. ಒಂದು ತೋಳದ ಹೆಸರು ‘ಕೇಡು’. ಅದರೊಳಗೆ ಸಿಟ್ಟು, ಅಸೂಯೆ, ದುಗುಡ, ದುರಾಸೆ, ದುರಹಂಕಾರ, ಸ್ವ ಮರುಕ, ವಂಚನೆ, ಅಸಮಾಧಾನ, ಕೀಳರಿಮೆ, ಸುಳ್ಳು, ದುರಭಿಮಾನ, ಅಹಂ ಮತ್ತು ಅಪನಂಬಿಕೆ ತುಂಬಿ ತುಳುಕುತ್ತಿದ್ದರೆ,

ಇನ್ನೊಂದು ತೋಳದ ಹೆಸರು ‘ಒಳಿತು’.
ಈ ತೋಳ ತನ್ನೊಳಗೆ ಖುಶಿ, ಸಮಾಧಾನ, ಪ್ರೇಮ, ಭರವಸೆ, ಪ್ರಶಾಂತತೆ, ವಿನಯ, ಅಂತಃಕರಣ, ಪರೋಪಕಾರ, ಔದಾರ್ಯ, ಸತ್ಯ, ಕರುಣೆ ಮತ್ತು ನಂಬಿಕೆಗಳನ್ನ ತುಂಬಿಕೊಂಡಿದೆ.

ಈ ತೋಳಗಳ ಕದನ ನನ್ನೊಳಗಷ್ಟೇ ಅಲ್ಲ ನಿನ್ನೊಳಗೂ ಹಾಗು ಎಲ್ಲರೊಳಗೂ ಸದಾ ನಡೆಯುತ್ತಿರುತ್ತದೆ.

ಝೆನ್ ಮಾಸ್ಟರ್ ನ ಮಾತುಗಳನ್ನ ಮನಸ್ಸಿಟ್ಟು ಕೇಳಿಸಿಕೊಂಡ ಹೊಸ ವಿದ್ಯಾರ್ಥಿ, ಒಂದು ಕ್ಷಣ ವಿಚಾರ ಮಾಡಿ, ಪ್ರಶ್ನೆ ಮಾಡಿದ.

“ ಕದನದಲ್ಲಿ ಗೆಲುವು ಯಾವ ತೋಳದ್ದು ? “

ಝೆನ್ ಮಾಸ್ಟರ್ ಸಮಾಧಾನದಿಂದ ಉತ್ತರಿಸಿದ.

“ ನಾವು ಯಾವ ತೋಳಕ್ಕೆ ಆಹಾರ ನೀಡಿ ಪೋಷಣೆ ಮಾಡುತ್ತೇವೆಯೋ ಆ ತೋಳದ್ದು ”

ಟಿಬೇಟ್ ನಲ್ಲಿ ಒಂದು ಮಾತಿದೆ, ನಿಮಗೆ ಸಿಟ್ಟು ಬಂದಿದೆ ಮತ್ತು ನೀವು ಅದರಿಂದ ಹೊರತಾಗಬೇಕು ಎಂದರೆ ಸುಮ್ಮನೇ ನಿಮ್ಮ ಮನೆಯ ಸುತ್ತ ಎರಡು ಮೂರು ರೌಂಡ್ ಓಡಿ ವಾಪಸ್ ಮನೆಗೆ ಬಂದು ನೋಡಿ ಸಿಟ್ಟು ಎಲ್ಲಿ ಹೋಗಿದೆ ಎಂದು. ನೀವು ಜೋರಾಗಿ ಓಡುವುದರಿಂದ ನಿಮ್ಮ ಉಸಿರಾಟದ ಪ್ಯಾಟರ್ನ್ ಬದಲಾಗುತ್ತದೆ, ಒಮ್ಮೆ ನಿಮ್ಮ ಉಸಿರಾಟದ ಏರಿಳಿತದ ವಿಧಾನ ಬದಲಾಯಿತೆಂದರೆ ನಿಮ್ಮ ಥಾಟ್ ಪ್ಯಾಟರ್ನ್ ಚೇಂಜ್ ಆಗುತ್ತದೆ, ಆಗ ನಿಮ್ಮ ಸಿಟ್ಟೂ ಮಾಯವಾಗುತ್ತದೆ.

ಹಾಗೆ ನೋಡಿದರೆ ನೀವು ಓಡಬೇಕಿಲ್ಲ ಕೂಡ, ಸುಮ್ಮನೇ ಐದುಬಾರಿ ಆಳವಾಗಿ ಉಸಿರು ಒಳಗೆ ಎಳೆದುಕೊಂಡು ಹೊರಗೆಬಿಡಿ. ಈ ಐದು ಬಾರಿಯ ಆಳ ಉಸಿರಾಟ ಮುಗಿಯುವದರೊಳಗಾಗಿ ನಿಮ್ಮ ಸಿಟ್ಟು ಕೂಡ ಮಾಯವಾಗಿರುತ್ತದೆ. ಸಿಟ್ಟನ್ನ ನೇರವಾಗಿ ನಿಯಂತ್ರಿಸುವುದು ಸಾಧ್ಯವಿಲ್ಲ. ದೇಹದ ವೈಬ್ರೇಷನ್ ಬದಲಿಸಬಹುದು, ಉಸಿರಾಟದ ವೇಗವನ್ನು ಸುಲಭವಾಗಿ ಬದಲಿಸಬಹುದು. ಹೀಗೆ ಪರೋಕ್ಷವಾಗಿ ಸಿಟ್ಟನ್ನ ಹತೋಟಿಗೆ ತೆಗೆದುಕೊಳ್ಳಬಹುದು. ಸಿಟ್ಟನ್ನ ಪೋಷಿಸುವುದನ್ನ ತಪ್ಪಿಸಿದಾಗ ಸಿಟ್ಟು ತಾನೇ ಇಲ್ಲವಾಗುವುದು.

*******************************

Leave a Reply