ಚಿದಂಬರ ನರೇಂದ್ರ ನಿರೂಪಿಸಿದ ಸೂಫಿ ಕತೆ ಇಲ್ಲಿದೆ…
ಒಬ್ಬ ಕುಂಬಾರ ಹೆಣ್ಣುಮಗಳು ತನ್ನ ಶಿಷ್ಯರನ್ನು ಎರಡು ಭಾಗವಾಗಿ ವಿಭಾಗಿಸಿದಳು.
ಒಂದು ಗುಂಪಿಗೆ ಅವಳು ಹೇಳಿದಳು, “ ಮೊದಲ ಆರು ತಿಂಗಳು ನಿಮ್ಮ ಸಮಯವನ್ನ ಕುಂಬಾರಿಕೆಯನ್ನ ಸೂಕ್ಷ್ಮವಾಗಿ ಅಧ್ಯಯನ ಮಾಡುವುದರಲ್ಲಿ, ಮಡಿಕೆ ಡಿಸೈನ್ ಮಾಡುವುದರಲ್ಲಿ, ಪ್ಲಾನ್ ಮಾಡುವುದರಲ್ಲಿ, ಒಂದು ಪರಿಪೂರ್ಣ ಮಡಿಕೆ ತಯಾರಿಸುವುದರಲ್ಲಿ ಕಳೆಯಿರಿ. ಆರು ತಿಂಗಳ ಕೊನೆಗೆ ಒಂದು ಸ್ಪರ್ಧೆ ಏರ್ಪಡಿಸುತ್ತೇನೆ. ನೋಡೋಣ ಯಾರ ಮಡಿಕೆ ಗೆಲ್ಲುತ್ತದೆ ಎಂದು.”
ಇನ್ನೊಂದು ಗುಂಪಿಗೆ ಅವಳು ಹೀಗೆ ಹೇಳಿದಳು, “ ಮೊದಲ ಆರು ತಿಂಗಳು ನೀವು ಎಷ್ಟು ಸಾಧ್ಯವೋ ಅಷ್ಟು ಮಡಿಕೆ ತಯಾರಿಸಿರಿ. ಎಷ್ಟು ಹೆಚ್ಚು ಮಡಿಕೆ ತಯಾರಿಸುತ್ತೀರೋ ಅಷ್ಟು ಹೆಚ್ಚು ಮಾರ್ಕ್ಸ್ ನಿಮಗೆ. ಆರು ತಿಂಗಳ ಕೊನೆಗೆ ನೀವು ತಯಾರಿಸಿದ ಒಂದು ಒಳ್ಳೆಯ ಮಡಿಕೆಗೂ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಉಂಟು”.
ಮೊದಲ ಗುಂಪಿನ ವಿದ್ಯಾರ್ಥಿಗಳು ಕುಂಬಾರಿಕೆಯ ಸಂಶೋಧನೆಯಲ್ಲಿ, ಡಿಸೈನ್ ಕೆಲಸದಲ್ಲಿ , ಪ್ಲಾನಿಂಗ್ ನಲ್ಲಿ ತಮ್ಮನ್ನು ತಾವು ಆಳವಾಗಿ ತೊಡಗಿಸಿಕೊಂಡು, ಆರು ತಿಂಗಳ ಕೊನೆಗೆ ಒಂದು ಪರಿಪೂರ್ಣ ಮಡಿಕೆ ತಯಾರಿಸಿದರು.
ಎರಡನೇ ಗುಂಪಿನ ವಿದ್ಯಾರ್ಥಿಗಳು ಲಗುಬಗೆಯಿಂದ ತಮ್ಮ ಮುಷ್ಟಿಯಲ್ಲಿ ಮಣ್ಣು ತೆಗೆದುಕೊಂಡು ನೇರವಾಗಿ ಮಡಿಕೆ ತಯಾರಿಸುವ ಕೆಲಸಕ್ಕೆ ಇಳಿದರು. ಅವರು ಒಂದಾದಮೇಲೊಎದರಂತೆ ಮಡಿಕೆ ತಯಾರಿಸುತ್ತ ಹೋದರು. ಸಣ್ಣ ಮಡಿಕೆ, ದೊಡ್ಡ ಮಡಿಕೆ, ಸಿಂಪಲ್ ಆದ ಮಡಿಕೆ, ಕಾಂಪ್ಲೆಕ್ಸ ಆದ ಮಡಿಕೆ ಹೀಗೆ ಹಲವಾರು ಮಡಿಕೆ ತಯಾರಿಸುತ್ತ ಹೋದರು. ಇಷ್ಟೊಂದು ಮಡಿಕೆ ತಯಾರಿಸುವಲ್ಲಿ ಅವರ ತೋಳುಗಳ ಸ್ನಾಯುಗಳು ನೋವಿಗೊಳಗಾದವು.
ಆರುತಿಂಗಳ ಕೊನೆಗೂ ಎರಡೂ ಗುಂಪುಗಳಿಗೂ ತಾವು ತಯಾರಿಸಿದ ಪರಿಪೂರ್ಣ ಮಡಿಕೆಯನ್ನು ಸ್ಪರ್ಧೆಗೆ ಸಲ್ಲಿಸಲು ಹೇಳಲಾಯಿತು. ಸ್ಪರ್ಧೆಯಲ್ಲಿ ಎರಡನೇಯ ಗುಂಪು ತಯಾರಿಸಿದ ಮಡಿಕೆಗೆ ಹೆಚ್ಚು ಮಾರ್ಕ್ಸ್ ಬಂದಿತ್ತು. ಹಲವಾರು ಮಡಿಕೆಗಳನ್ನು ತಯಾರಿಸುವ ಪ್ರಕ್ರಿಯೆಯಲ್ಲಿ ಅವರು ಮೊದಲ ಗುಂಪಿಗಿಂತ ಯಾರು ಒಂದು ಪರಿಪೂರ್ಣ ಮಡಿಕೆ ತಯಾರಿಸುವ ಸಲುವಾಗಿ ಸಂಶೋಧನೆ, ಡಿಸೈನ್, ಪ್ಲಾನಿಂಗ್ ಕೆಲಸದಲ್ಲಿ ತಮ್ಮನ್ನು ತಾವು ಆಳವಾಗಿ ತೊಡಗಿಸಿಕೊಂಡಿದ್ದರೋ ಅವರಿಗಿಂತ ಒಳ್ಳೆಯ ಮಡಿಕೆ ತಯಾರಿಸಿದ್ದರು. ಪ್ರಾಕ್ಟೀಸ್ ಅವರನ್ನು ಹೆಚ್ಚು ಪರಿಪೂರ್ಣ ಕುಂಬಾರರನ್ನಾಗಿ ರೂಪಿಸಿತ್ತು.
ಬದುಕಿನಲ್ಲಿಯೂ ಹಾಗೆಯೇ ಪರಿಪೂರ್ಣರಾಗಲು ಹೆಚ್ಚು ಹೆಚ್ಚು ಪ್ರಾಕ್ಟೀಸ್ ಆಳವಾದ ಅಧ್ಯಯನಕ್ಕಿಂತ ಹೆಚ್ಚು ಸಹಾಯ ಮಾಡುತ್ತದೆ.