ಮಾತಿನ ಸಹಾಯವಿಲ್ಲದೆ ಸತ್ಯದೊಂದಿಗೆ ಸಂಪರ್ಕ ಸಾಧಿಸುವ ಒಂದು ಹಾದಿಯಿದೆ. ಇರುವುದು ಅದೊಂದೇ ಹಾದಿ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ತಾವೋ ಮಾತಿಗೆ ನಿಲುಕುವುದಿಲ್ಲ
ಮಾತಿಗೆ ನಿಲುಕುವುದು ತಾವೋ ಅಲ್ಲ.
ಆದ್ದರಿಂದ ಸಂತನಿಗೆ,
ಮಾತಿನ ಹುಕಿಯಿಲ್ಲ,, ಮುಟ್ಟುವ ಬಯಕೆಯಿಲ್ಲ,
ಅಲೆಯುವ ಮನಸ್ಸಿಲ್ಲ, ಇರಿಯುವ ಛಲವಿಲ್ಲ.
ಅವನಿಗೆ
ಸಿಕ್ಕು ಬಿಡಿಸುವುದು ಇಷ್ಟ,
ಮೈ ಮನಸ್ಸು ಹದಗೊಳಿಸುವುದರಲ್ಲಿ ಆಸಕ್ತಿ,
ಧೂಳು ನೆಲೆಗೊಳಿಸುವಲ್ಲಿ ತನ್ಮಯತೆ
ಇದು ಸಹಜ ಸ್ಥಿತಿ.
ಆಗ
ಪ್ರೇಮ, ತಿರಸ್ಕಾರ ಕಾಡುವುದಿಲ್ಲ
ಲಾಭ, ನಷ್ಟ ಬಾಧಿಸುವುದಿಲ್ಲ
ಮಾನ, ಅಪಮಾನ ಆಟ ಆಡಿಸುವುದಿಲ್ಲ.
ಸತತವಾಗಿ ತನ್ನನ್ನು ತಾನು ಹಂಚಿಕೊಳ್ಳುವುದರಿಂದ
ತಾವೋ, ಸದಾ ಹೊಚ್ಚ ಹೊಸತು.
~ ಲಾವೋತ್ಸೆ.
*********^*^^
ಪ್ರತಿದಿನ ಲಾವೋತ್ಸೇಯೊಂದಿಗೆ ಮಾರ್ನಿಂಗ್ ವಾಕ್ ಗೆ ಹೋಗುತ್ತಿದ್ದ ನೆರೆಮನೆಯ ಮನುಷ್ಯನಿಗೆ ಲಾವೋತ್ಸೇಯ ಸ್ವಭಾವದ ಬಗ್ಗೆ ಪರಿಚಯವಿತ್ತು. ಲಾವೋತ್ಸೆ ಏಕಾಂತವನ್ನು ಪ್ರೀತಿಸುವ ಯಾರ ಜೊತೆಗೂ ಅಷ್ಟಾಗಿ ಹರಟೆಗೆ ಇಳಿಯದ ವ್ಯಕ್ತಿಯಾಗಿದ್ದ. ಬೆಳಿಗ್ಗೆ ವಾಕ್ ಮಾಡುವಾಗ ಲಾವೋತ್ಸೇ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ.
ಒಂದು ಮುಂಜಾನೆ ವಾಕ್ ಮಾಡುವಾಗ ನೆರೆಮನೆಯವ ಲಾವೋತ್ಸಗೆ ಹೇಳಿದ, “ಎಷ್ಟು ಸುಂದರವಾಗಿದೆಯಲ್ಲ ಇವತ್ತು ಮುಂಜಾವು”. ಅವನು ಹೀಗೆ ಹೇಳುವುದೇ ತಡ, ಲಾವೋತ್ಸೇ ಅವನನ್ನು ವಿಶೇಷ ಬೆರಗಿನಲ್ಲಿ ವಿಚಿತ್ರವಾಗಿ ನೋಡಿದ. ನೆರೆಮನೆಯವನಿಗೆ ಲಾವೋತ್ಸೇ ತನ್ನನ್ನು ಈ ರೀತಿ ನೋಡಿದ್ದು ಆಶ್ಚರ್ಯ ಅನಿಸಿತು, ಅವನು ಲಾವೋತ್ಸೇಯನ್ನ ಪ್ರಶ್ನೆ ಮಾಡಿದ. “ನಾನೇನಾದರೂ ತಪ್ಪು ಮಾತಾಡಿದೆನಾ ಲಾವೋತ್ಸೇ? ಹೀಗ್ಯಾಕೆ ನನ್ನ ವಿಚಿತ್ರವಾಗಿ ನೋಡಿದೆ? “
ಲಾವೋತ್ಸೇ ನೆರೆಮನೆಯವನಿಗೆ ಉತ್ತರಿಸಿದ, “ನಾನೂ ಈ ಮುಂಜಾನೆಯನ್ನು ನೋಡುತ್ತಿದ್ದೇನೆ, ನನಗೆ ಮುಂಜಾನೆ ಸುಂದರವಾಗಿದೆ ಎಂದು ಹೇಳುವ ಉದ್ದೇಶ ಏನು? ನಾನು ಜೀವಂತವಾಗಿಲ್ಲ ಎನ್ನುವುದು ನಿನ್ನ ಅಭಿಪ್ರಾಯವೆ? ಅಥವಾ ನಾನು ಮೂರ್ಖ ನನಗೆ ಮುಂಜಾನೆ ಸುಂದರವಾಗಿರುವುದು ಗೊತ್ತಾಗುವುದಿಲ್ಲ ಎಂದು ತಿಳಿದುಕೊಂಡಿದ್ದೀಯಾ? ಅಥವಾ ನಾನಿನ್ನೂ ನಿದ್ದೆಯಲ್ಲಿದ್ದೇನೆಂದು ಭಾವಿಸಿದ್ದೀಯಾ? ನೀನು ಎಷ್ಟು ಮುಂಜಾನೆಯನ್ನು ನೋಡುತ್ತಿದ್ದೀಯೋ ನಾನೂ ಅಷ್ಟೇ ಮುಂಜಾನೆಯನ್ನು ನೋಡುತ್ತಿದ್ದೇನೆ. ಹೀಗಿರುವಾಗ, ಮುಂಜಾನೆ ಸುಂದರವಾಗಿದೆಯೆಂದು ಹೇಳುವ ಮಾತಿನಲ್ಲಿ ಏನಾದರೂ ಅರ್ಥ ಇದೆಯಾ?”
ಅವತ್ತಿನಿಂದ ನೆರೆಮನೆಯವ ವಾಕ್ ಮಾಡುವಾಗ ಲಾವೋತ್ಸೇಯೊಂದಿಗೆ ಯಾವ ಮಾತೂ ಆಡುತ್ತಿರಲಿಲ್ಲ. ಅವ ಸುಮ್ಮನೇ ಲಾವೋತ್ಸೇಯನ್ನು ಹಿಂಬಾಲಿಸುತ್ತಿದ್ದ. ಹಲವಾರು ವರ್ಷ ಹೀಗೆ ಲಾವೋತ್ಸೇಯೊಂದಿಗೆ ಸುಮ್ಮನೇ ನಡೆದಾಡಿದ ಪರಿಣಾಮವಾಗಿ ಅವನಿಗೂ ಧ್ಯಾನ ಎಂದರೇನು ಎನ್ನುವುದು ಗೊತ್ತಾಗತೊಡಗಿತ್ತು.
ಒಂದು ದಿನ ನೆರೆಮನೆಯವನ ಮನೆಗೆ ಬಂದಿದ್ದ ಅತಿಥಿಯೂ ಇವರೊಂದಿಗೆ ಮಾರ್ನಿಂಗ್ ವಾಕ್ ಗೆಂದು ಬಂದ. ಅವನು ಸೂರ್ಯೋದಯ ನೋಡುತ್ತಿದ್ದಂತೆಯೇ ಉದ್ಗರಿಸಿದ, “ಎಂಥ ಅದ್ಭುತ ಸೂರ್ಯೋದಯ ಇದು”. ಅವನು ಹೀಗೆ ಹೇಳುತ್ತಿದ್ದಂತೆಯೇ ನೆರೆಮನೆಯ ಮನುಷ್ಯ ಅವನನ್ನು ವಿಚಿತ್ರವಾಗಿ ನೋಡಿದ, ಥೇಟ್ ಹಿಂದೊಮ್ಮೆ ಲಾವೋತ್ಸೇ ಅವನನ್ನು ನೋಡಿದಂತೆ. “ ನಾವೂ ಇಲ್ಲೇ ನಿನ್ನ ಜೊತೆಯೇ ಇದ್ದೇವೆ, ಹಾಗಿರುವಾಗ ಸೂರ್ಯೋದಯ ಅದ್ಭುತವಾಗಿದೆ ಎಂದು ಹೇಳುವ ಮಾತಿನಲ್ಲಿ ಏನಾದರೂ ಅರ್ಥ ಇದೆಯೇ?” ನೆರೆಮನೆಯವ ಅತಿಥಿಯ ಮಾತಿನಿಂದಾಗಿ ಸಿಡಿಮಿಡಿಗೊಂಡ.
“ಈಗ ನಿನಗೆ ಗೊತ್ತಾಯ್ತಾ ನಾನು ನಿನಗೆ ಅವತ್ತು ಹೇಳಿದ ಮಾತಿನ ಅರ್ಥ” ಲಾವೋತ್ಸೇ ನೆರೆಮನೆಯವನಿಗೆ ನಗುತ್ತ ಪ್ರಶ್ನೆ ಮಾಡಿದ.
ಯಾವ ಮಾತಿನ ಸಹಾಯವಿಲ್ಲದೆ ಸತ್ಯದೊಂದಿಗೆ ಸಂಪರ್ಕ ಸಾಧಿಸುವ ಒಂದು ಹಾದಿಯಿದೆ. ಇರುವುದು ಅದೊಂದೇ ಹಾದಿ. ಅದರ ಹೊರತಾಗಿ ಸತ್ಯವನ್ನು ಮುಟ್ಟುವ ಬೇರೆ ಯಾವ ಹಾದಿಯೂ ಇಲ್ಲ. ಈ ಹಾದಿಯಲ್ಲಿ ಮಾತಿನ ಅವಶ್ಯಕತೆ ಇಲ್ಲ, ಮಾತು ಸತ್ಯವನ್ನು ತಾಕಬಯಸುವ ನಿಮ್ಮ ಪ್ರಯತ್ನಕ್ಕೆ ಅಡ್ಡಿಯುಂಟು ಮಾಡುತ್ತದೆ.
ಆದ್ದರಿಂದ ಸುಮ್ಮನೇ ಗುಲಾಬಿಯನ್ನು ನೋಡುತ್ತ ಕುಳಿತುಕೊಳ್ಳಿ. ರಾತ್ರಿ ಆಕಾಶದಲ್ಲಿ ನಕ್ಷತ್ರಗಳನ್ನು ನೋಡುತ್ತ ಕುಳಿತುಕೊಳ್ಳಿ, ಅದು ಯಾವ ನಕ್ಷತ್ರ, ಅದರ ಹೆಸರು ಏನು? ಯಾವ ಯೋಚನೆಯನ್ನೂ ಮಾಡಬೇಡಿ. ನಕ್ಷತ್ರಗಳಿಗೆ ಯಾವ ಹೆಸರೂ ಇಲ್ಲ, ಗುಲಾಬಿಗೆ ತನ್ನನ್ನು ಗುಲಾಬಿ ಎಂದು ಕರೆಯುತ್ತಾರೆ ಎನ್ನುವುದು ಗೊತ್ತಿಲ್ಲ. ಎಲ್ಲ ಮರೆತು ಸುಮ್ಮನೇ ಗಮನಿಸಿ. ಸುಮ್ಮನೇ ಆ ಕ್ಷಣದಲ್ಲಿ ಒಂದಾಗಿ. ಧ್ಯಾನ ಎಂದರೆ ಇಷ್ಟೇ.
*****************************