ನಿರಾಕರಣೆಯ ಗೈರಿನಲ್ಲಿ ಮಾತ್ರ ಸತ್ಯಕ್ಕೆ ಅವಕಾಶ : ಓಶೋ ವ್ಯಾಖ್ಯಾನ

ವಿಷಯ ಏನೇ ಇರಬಹುದು… ಯಾವಾಗ ನಿಮ್ಮ ಹೃದಯ ತುಂಬು ಮನಸ್ಸಿನಿಂದ ಒಪ್ಪಿಕೊಳ್ಳುತ್ತದೆಯೋ, ಯಸ್ ಎಂದು ಹೇಳುವುದನ್ನ ರೂಢಿ ಮಾಡಿಕೊಳ್ಳುತ್ತದೆಯೋ ಆಗ ನೀವು ಏನನ್ನಾದರೂ ಕೇಳಲು, ತಿಳಿದುಕೊಳ್ಳಲು ಸಿದ್ಧರಾಗಿದ್ದಿರಿ ಎಂದು ಅರ್ಥ. ಆಗ ಮಾತ್ರ ನಿಮ್ಮೆದುರು ಸತ್ಯವನ್ನು ಅನಾವರಣ ಮಾಡಬಹುದು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸತ್ಯದ ಹಾದಿಯ ಮೇಲೆ
ನಮ್ಮನ್ನು ಕೈ ಹಿಡಿದು ಮುನ್ನಡೆಸುವುದು
ಹೃದಯವೇ ಹೊರತು
ಬುದ್ಧಿಯಲ್ಲ.

ಈ ಪ್ರಯಾಣದಲ್ಲಿ ಹೃದಯ
ನಿಮ್ಮ ಪ್ರಧಾನ ಮಾರ್ಗದರ್ಶಿಯಾಗಿರಲಿ.

‘ಅಹಂ’ ತಕರಾರು ಮಾಡಿದರೆ
ಮುಟ್ಟಿ ಮಾತನಾಡಿಸಿ, ಒಪ್ಪಿಸಿ
ಸಾಧ್ಯವಾಗದಿದ್ದರೆ ಸವಾಲು ಹಾಕಿ
ಭೀಕರ ಯುದ್ಧವಾದರೂ ಚಿಂತೆಯಲ್ಲ
ಹೃದಯ, ನಿಮ್ಮ ಸುಳ್ಳು ಅಹಂ ಮೇಲೆ
ವಿಜಯ ಸಾಧಿಸಲಿ.

ನಿಮ್ಮೊಳಗಿನ
‘ಅಹಂ’ ನ ಎಳೆಗಳನ್ನು ಸ್ಪಷ್ಟವಾಗಿ
ಗುರುತಿಸಬಲ್ಲಿರಾದರೆ,
ಸತ್ಯದ ಹಾದಿಯಲ್ಲಿನ ದೊಡ್ಡ ಆತಂಕವೊಂದನ್ನು
ಯಶಸ್ವಿಯಾಗಿ ನಿಭಾಯಿಸಿದಂತೆ.

~ ಶಮ್ಸ್ ತಬ್ರೀಝಿ


ಸೂಫಿ ಜುನೈದ್ ನ ಮಾಸ್ಟರ್ ತುಂಬ ವಿಚಿತ್ರ ವ್ಯಕ್ತಿಯಾಗಿದ್ದ. ಮಾತು ಮಾತಿಗೆ ವಾದ ಮಾಡುತ್ತಿದ್ದ. ನೀವು ಏನು ಹೇಳಿದರೂ ಮಾಸ್ಟರ್ ಅದರ ವಿರುದ್ಧ ಮಾತನಾಡುತ್ತಿದ್ದ, ನೀವು ಹೇಳಿದ್ದನ್ನ ನಿರಾಕರಿಸುತ್ತಿದ್ದ. ಇದು ಹಗಲು ಎಂದು ನೀವು ಹೇಳಿದರೆ, ಇಲ್ಲ ಇದು ರಾತ್ರಿ ಎಂದು ಮಾಸ್ಟರ್ ವಾದ ಮಾಡುತ್ತಿದ್ದ, ಅದು ನಿಜವಾಗಿ ಹಗಲಾಗಿದ್ದರೂ. ಸೂಫಿ ಜುನೈದ್ ಏನು ಹೇಳಿದರೂ ಮಾಸ್ಟರ್ ಅದನ್ನು ನಿರಾಕರಿಸುತ್ತಿದ್ದ.

ಆದರೆ ಜುನೈದ್ ಯಾವಾಗಲೂ ಮಾಸ್ಟರ್ ಜೊತೆ ವಾದ ಮಾಡುತ್ತಿರಲಿಲ್ಲ, ಅವನು ಮಾಸ್ಟರ್ ಎದುರು ತಲೆಬಗ್ಗಿಸಿ ಹೃದಯಪೂರ್ವಕವಾಗಿ ಒಪ್ಪಿಕೊಳ್ಳುತ್ತಿದ್ದ, “ಹೌದು ಮಾಸ್ಟರ್ ಇದು ರಾತ್ರಿ”. ಜುನೈದ್ ಏನೋ ಹೇಳುವುದು, ಮಾಸ್ಟರ್ ಅದನ್ನು ನಿರಾಕರಿಸುವುದು ಮತ್ತು ಜುನೈದ್ ಮಾಸ್ಟರ್ ನ ನಿರಾಕರಣೆಯನ್ನು ಒಪ್ಪಿಕೊಳ್ಳುವುದು ಇದು ವರ್ಷಗಟ್ಟಲೇ ಮುಂದುವರೆಯಿತು.

ಕೊನೆಗೊಮ್ಮೆ ಮಾಸ್ಟರ್ ಹೇಳಿದ, “ ಜುನೈದ್ ನಾನು ಸೋತೆ ನೀನು ಗೆದ್ದೆ, ನಿನ್ನೊಳಗೆ ವಾದ ಮಾಡುವ, ನಿರಾಕರಿಸುವ ಸ್ವಭಾವವನ್ನು ಬೆಳೆಸಬೇಕೆಂದು ನಾನು ಬಹಳ ಪ್ರಯತ್ನಪಟ್ಟೆ ಆದರೆ ವಿಫಲನಾದೆ. ಇನ್ನು ಮುಂದೆ ನಾನು ನಿನ್ನ ಮಾತುಗಳನ್ನ ನಿರಾಕರಿಸುವುದಿಲ್ಲ. ಈಗ ನಾನು ಸತ್ಯವನ್ನು ಕುರಿತು ಮಾತನಾಡುತ್ತೇನೆ ಏಕೆಂದರೆ ಸತ್ಯದ ವಿಷಯ ತಿಳಿದುಕೊಳ್ಳಲು ನೀನು ಸಿದ್ಧನಾಗಿರುವೆ.”

ವಿಷಯ ಏನೇ ಇರಬಹುದು… ಯಾವಾಗ ನಿಮ್ಮ ಹೃದಯ ತುಂಬು ಮನಸ್ಸಿನಿಂದ ಒಪ್ಪಿಕೊಳ್ಳುತ್ತದೆಯೋ, ಯಸ್ ಎಂದು ಹೇಳುವುದನ್ನ ರೂಢಿ ಮಾಡಿಕೊಳ್ಳುತ್ತದೆಯೋ ಆಗ ನೀವು ಏನನ್ನಾದರೂ ಕೇಳಲು, ತಿಳಿದುಕೊಳ್ಳಲು ಸಿದ್ಧರಾಗಿದ್ದಿರಿ ಎಂದು ಅರ್ಥ. ಆಗ ಮಾತ್ರ ನಿಮ್ಮೆದುರು ಸತ್ಯವನ್ನು ಅನಾವರಣ ಮಾಡಬಹುದು. ನಿಮ್ಮೊಳಗೆ ಕೊಂಚವಾದರೂ ನಿರಾಕರಣೆಯ ಸ್ವಭಾವ ಉಳಿದುಬಿಟ್ಟಿದ್ದರೆ (ವಿಷಯ ಏನೇ ಇರಬಹುದು), ನಿಮ್ಮೆದುರು ಸತ್ಯದ ವಿಷಯ ಮಾತನಾಡುವುದು ಸಾಧ್ಯವಾಗುವುದಿಲ್ಲ. ಏಕೆಂದರೆ, ನಿಮ್ಮೊಳಗೆ ಇನ್ನೂ ಉಳಿದುಕೊಂಡಿರುವ ಆ ಚೂರು ನಕಾರಕಾತ್ಮಕತೆ ಎಲ್ಲವನ್ನೂ ನಾಶ ಮಾಡಿಬಿಡುತ್ತದೆ.

ಈ No ಎನ್ನುವುದು ಚಿಕ್ಕದಾಗಿದ್ದರೂ ಎಷ್ಟು ಶಕ್ತಿಶಾಲಿ ಎಂದರೆ, ಸತ್ಯವನ್ನು ನಿಮ್ಮೆದುರು ಹೇಳಬಹುದೇನೋ ನಿಜ ಆದರೆ ಸತ್ಯ ನಿಮ್ಮೆದುರು ಬಿಚ್ಚಿಕೊಳ್ಳಲು ನಿರಾಕರಿಸುತ್ತದೆ. ನಿಮ್ಮೊಳಗಿನ ಆ ಚೂರು ನಕಾರಕಾತ್ಮಕತೆ ಸತ್ಯವನ್ನು ಮತ್ತೆ ಮರೆಮಾಚಿಬಿಡುತ್ತದೆ.

ಒಮ್ಮೆ ಇಬ್ಬರು ಝೆನ್ ಸನ್ಯಾಸಿಗಳು, ತಮ್ಮ ಮಾಸ್ಟರ್ ಹೇಳಿದ ಒಂದು ಮಾತಿನ ಬಗ್ಗೆ ವಾದ ಮಾಡುತ್ತಿದ್ದರು. ಒಬ್ಬ , ಮಾಸ್ಟರ್ ಮಾತು ಸರಿ ಎಂದೂ, ಇನ್ನೊಬ್ಬ ತಪ್ಪು ಎಂದುೂ ವಾದ ಮಾಡುತ್ತಿದ್ದರು. ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ, ಇಬ್ಬರೂ ಮಾಸ್ಟರ್ ಹತ್ತಿರ ಬಂದು ತಮ್ಮ ವಾದಗಳಿಗೆ ಸಮರ್ಥನೆ ಕೊಟ್ಟರು. ಮೊದಲ ಸನ್ಯಾಸಿ, ಮಾಸ್ಟರ್ ಮಾತು ಯಾಕೆ ಸರಿ ಅಂತ ವಾದ ಮಂಡಿಸಿದ. ಸ್ವಲ್ಪ ಹೊತ್ತು ಯೋಚಿಸಿದ ಮಾಸ್ಟರ್ “ ನೀನು ಹೇಳಿದ್ದು ಸರಿ “ ಎಂದು ಗೋಣು ಹಾಕಿದ.

ಆಮೇಲೆ ಎರಡನೇ ಸನ್ಯಾಸಿ, ವಾದ ಮಾಡಿದ. ಮಾಸ್ಟರ್ ಮಾತು ಯಾಕೆ ತಪ್ಪು ಎಂಬುದನ್ನ ವಿವರವಾಗಿ ಉದಾಹರಣೆಗಳ ಸಹಿತ ಚರ್ಚಿಸಿದ. ಮಾಸ್ಟರ್ ಮತ್ತೆ ಯೋಚನೆ ಮಾಡಿ ಹೇಳಿದ, “ ನೀನು ಹೇಳೋದೂ ಸರಿ”.

ಈ ವಾದ ವಿವಾದವನ್ನು ನೋಡುತ್ತಿದ್ದ ಕಿರಿಯ ಸನ್ಯಾಸಿ ಕುತೂಹಲದಿಂದ ಕೇಳಿದ, “ ಇದು ಹೇಗೆ ಮಾಸ್ಟರ್, ಇಬ್ಬರಿಗೂ ನೀವು ಸರಿ ಎಂದು ಹೇಳಿದಿರಿ? ಯಾರೋ ಒಬ್ಬರದು ತಪ್ಪು ಇರಲೇಬೇಕಲ್ವಾ?”

ಮಾಸ್ಟರ್ ಮತ್ತೆ ಧ್ಯಾನ ಮಗ್ನನಾಗಿ ಯೋಚಿಸಿ ಕಿರಿಯ ಸನ್ಯಾಸಿಗೆ ಉತ್ತರಿಸಿದ. “ ಹೌದು, ನೀನು ಹೇಳೋದೂ ಸರಿನೇ “

Leave a Reply