ಸಂಗ್ರಹ ಮತ್ತು ನಿರೂಪಣೆ : ಚಿದಂಬರ ನರೇಂದ್ರ
ಒಂದು ಮಹಾಪ್ರವಾಹದ ಸಂದರ್ಭದಲ್ಲಿ ಒಬ್ಬ ಮನುಷ್ಯ ತನ್ನ ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ. ಮನೆಯ ಸುತ್ತೆಲ್ಲ ನೀರು ತುಂಬಿಕೊಂಡಿತ್ತು. ಸಮಯ ಕಳೆದಂತೆಲ್ಲ ನೀರಿನ ಮಟ್ಟ ಹೆಚ್ಚಾಗುತ್ತಿತ್ತು.
ಮಹಾ ಭಕ್ತನಾಗಿದ್ದ ಆ ಮನುಷ್ಯನಿಗೆ ದೇವರು ತನ್ನನ್ನು ಕಾಪಾಡುತ್ತಾನೆ ಸ್ವರ್ಗದಿಂದ ಕೆಳಗಿಳಿದು ಬಂದು ಈ ಸಂಕಟದಿಂದ ತನ್ನನ್ನು ಪಾರು ಮಾಡುತ್ತಾನೆ ಎನ್ನುವ ಅಪಾರ ನಂಬಿಕೆಯಿತ್ತು. ಭಕ್ತ ಮನುಷ್ಯ ದೇವರನ್ನು ಆರ್ತನಾಗಿ ಪ್ರಾರ್ಥಿಸತೊಡಗಿದ.
ಹೊರಗೆ ನೀರಿನ ಮಟ್ಟ ಏರುತ್ತಲೇ ಇತ್ತು. ಪಕ್ಕದ ಮನೆಯ ಮನುಷ್ಯ ಕೊಡಲೇ ಮನೆ ಬಿಟ್ಟು ಹೊರಡುವಂತೆ ಭಕ್ತನನ್ನು ಒತ್ತಾಯಿಸಿದ, ಒಂದು ಸುರಕ್ಷಿತ ಜಾಗಕ್ಕೆ ತಾನು ಕರೆದೊಯ್ಯುವುದಾಗಿ ಹೇಳಿದ. ಆದರೆ ಭಕ್ತ ನೆರೆಮನೆಯವನ ಮಾತು ಕೇಳಲಿಲ್ಲ, ದೇವರು ತನ್ನನ್ನು ಕಾಪಾಡುತ್ತಾನೆ ಎಂದು ನಂಬಿ ಪ್ರಾರ್ಥನೆ ಮುಂದುವರೆಸಿದ.
ಪಕ್ಕದ ಮನೆಯ ಮನುಷ್ಯ ಭಕ್ತನನ್ನು ಅಲ್ಲೇ ಬಿಟ್ಟು ತನ್ನನ್ನು ಕರೆದುಕೊಂಡು ಹೋಗಲು ಬಂದಿದ್ದ ಟ್ರಕ್ ಹತ್ತಿ ಹೊರಟುಬಿಟ್ಟ. ನೀರು ಮನೆಯೊಳಗೆ ನುಗ್ಗತೊಡಗಿತು. ಭಕ್ತ ಮನೆಯ ಮಾಳಿಗೆ ಏರಿ ತನ್ನ ಪ್ರಾರ್ಥನೆ ಮುಂದುವರೆಸಿದ. ಅಷ್ಟರಲ್ಲೇ ಮಿಲಿಟರಿಯವರು ದೋಣಿ ತೆಗೆದುಕೊಂಡು ಮನೆಯ ಹತ್ತಿರ ಬಂದರು. ಮನೆ ಬಿಟ್ಟು ಹೊರಬಂದು ದೋಣಿ ಏರುವಂತೆ ಭಕ್ತನಿಗೆ ಕೂಗಿ ಹೇಳಿದರು. ಆದರೆ ಭಕ್ತ ಇನ್ನೂ ನಂಬಿಕೆಗೆ ಅಂಟಿಕೊಂಡೇ ಇದ್ದ. “ದೇವರು ನನ್ನನ್ನು ಕಾಪಾಡುತ್ತಾನೆ, ನೀವು ಹೋಗಿ” ಎಂದು ಹೇಳಿ ಭಕ್ತ ಮಿಲಿಟರಿಯವರನ್ನು ವಾಪಸ್ ಕಳಿಸಿಬಿಟ್ಟ.
ನೀರಿನ ಮಟ್ಟ ಹೆಚ್ಚಾಗುತ್ತಲೇ ಇತ್ತು, ಭಕ್ತ ಇನ್ನೂ ಜೋರಾಗಿ ದೇವರನ್ನು ಪ್ರಾರ್ಥಿಸತೊಡಗಿದ. ಅಷ್ಟರಲ್ಲೇ ಅವನ ಮನೆ ಮೇಲೆ ಏರ್ ಫೋರ್ಸ್ ನವರ ಹೆಲಿಕಾಪ್ಟರ್ ಕಾಣಿಸಿಕೊಂಡಿತು. ಲೌಡ್ ಸ್ಪೀಕರ್ ನಿಂದ ಅನೌನ್ಸ್ ಮಾಡಲಾಯಿತು, ಮನೆಯ ಎತ್ತರದ ತುದಿಗೆ ಬರುವಂತೆ ಭಕ್ತನಿಗೆ ಹೇಳಲಾಯಿತು. ಹೆಲಿಕಾಫ್ಟರ್ ನಿಂದ ಒಂದು ಹಗ್ಗದ ಏಣಿಯನ್ನ ಭಕ್ತನ ಮನೆ ಮೇಲೆ ಚೆಲ್ಲಲಾಯಿತು.
ಆದರೆ ಭಕ್ತ ಇದ್ಯಾವುದನ್ನೂ ಗಮನಿಸದೇ ದೇವರ ಪ್ರಾರ್ಥನೆಯಲ್ಲಿ ಮಗ್ನನಾಗಿದ್ದ. ಕೊನೆಗೊಮ್ಮೆ ನೀರಿನ ಪ್ರವಾಹ ತೀರ ಹೆಚ್ಚಾಗಿ ಭಕ್ತನ ಮನೆ ನೀರಿನಲ್ಲಿ ಮುಳುಗಿ ಹೋಯಿತು. ಭಕ್ತ ನೀರಿನ ಪ್ರವಾಹದಲ್ಲಿ ನೀರಿನಲ್ಲಿ ಮುಳುಗಿ ಸತ್ತು ಹೋದ.
ಸತ್ತ ಮೇಲೆ ಸ್ವರ್ಗಕ್ಕೆ ಬಂದ ಭಕ್ತ, ದೇವರನ್ನು ಸಿಟ್ಟಿನಿಂದ ಪ್ರಶ್ನೆ ಮಾಡಿದ, “ ಇಡೀ ಜನ್ಮ ನಾನು ನಿನ್ನ ಪೂಜೆ ಮಾಡಿದೆ, ಪ್ರಾರ್ಥನೆ ಮಾಡಿದೆ, ನಾನು ನಿನ್ನಲ್ಲಿ ಅಪಾರ ನಂಬಿಕೆ ಇಟ್ಟಿದ್ದೆ. ಆದರೆ ನೀನು ನನ್ನನ್ನು ನಡು ನೀರಿನಲ್ಲಿ ಕೈಬಿಟ್ಟೆ. ನೀನು ಯಾ ತರದ ದೇವರು” ಭಕ್ತನ ಸಿಟ್ಟು ಮುಗಿಲು ಮುಟ್ಟಿತ್ತು.
“ನಿನ್ನನ್ನು ಅಪಾಯದಿಂದ ಪಾರು ಮಾಡಲು ಮೊದಲು ನಾನು ಟ್ರಕ್ ಕಳಿಸಿದೆ, ಆಮೇಲೆ ದೋಣಿ ಕಳಿಸಿದೆ, ಕೊನೆಗೆ ಹೆಲಿಕಾಫ್ಟರ್ ಕೂಡ ಕಳಿಸಿದೆ. ಆದರೆ ನೀನು ನನ್ನ ಯಾವ ಸಹಾಯಕ್ಕೂ ಸ್ಪಂದಿಸಲಿಲ್ಲ. ನಿನ್ನ ಭಕ್ತಿಯಲ್ಲೇ ಮೈಮರೆತಿದ್ದೆ. ನಾನು ಬೇರೆ ಏನು ಮಾಡಬಹುದಿತ್ತು ನೀನೇ ಹೇಳು” ದೇವರು ಭಕ್ತನ ಮೇಲೆ ಸಿಟ್ಟಾದ.