ಬೆಟ್ಟದ ಮೇಲಿದ್ದ ಮನುಷ್ಯ ಮತ್ತು ಅಸಿಸ್ಟೆಂಟ್ ಕಮಿಷನರ್ – ಇಬ್ಬರೂ ಒಂದೇ ಥರದವರೇ! ನೆವ ಹೇಳುವವರು… । ಆಕರ: Burmese Monk tales- collected, translated and introduced by Maung Htin Aung; ಕನ್ನಡಕ್ಕೆ: ಪ್ರಣವ್ ಚೈತನ್ಯ
ತಿಂಗಜಾರ್ ಮಹಾಗುರು ಅಲೆಮಾರಿ ಸನ್ಯಾಸಿಯಾಗಿದ್ದರೂ ಅನುಯಾಯಿಗಳ ಸಂಖ್ಯೆಗೇನೂ ಕಡಿಮೆ ಇರಲಿಲ್ಲ. ಅವರು ಹೋದಲ್ಲೆಲ್ಲ ಒಂದಷ್ಟು ಜನ ಅವರ ಶಿಷ್ಯತ್ವ ಸ್ವೀಕರಿಸಿ ಅವರನ್ನು ಅನುಸರಿಸುತ್ತಿದ್ದರು.
ಒಮ್ಮೆ ಮಹಾಗುರು ರಂಗೂನಿನ ಬೌದ್ಧ ವಿಹಾರದಲ್ಲಿ ಉಳಿದುಕೊಂಡಿದ್ದರು. ಅದನ್ನು ಕಟ್ಟಿಸಿದ್ದು ಒಬ್ಬ ಸರ್ಕಾರಿ ಅಧಿಕಾರಿ. ಆ ವ್ಯಕ್ತಿ ಉತ್ತರ ಬರ್ಮಾದವರಾದ್ದು, ಧರ್ಮಗ್ರಂಥಗಳ ಬಗ್ಗೆ ಹೆಚ್ಚು ತಿಳಿದವರಾಗಿರಲಿಲ್ಲ. ಕಲ್ಕತ್ತದಲ್ಲಿ ಆಂಗ್ಲ ಭಾಷೆಯನ್ನು ಅಧ್ಯಯನ ಮಾಡಿದ್ದ ಅವರು ಬುದ್ಧನ ಮಹಾ ಭಕ್ತರಾಗಿದ್ದರು. ಅವರು ರಂಗೂನಿನಲ್ಲಿ ಬೌದ್ಧ ವಿಹಾರವೊಂದನ್ನು ಕಟ್ಟಿಸಿದ್ದರು ಮತ್ತು ಆಗಾಗ ಬೌದ್ಧ ಸನ್ಯಾಸಿಗಳನ್ನು ಆಹ್ವಾನಿಸಿ ಸತ್ಕರಿಸುತ್ತಿದ್ದರು.
ಅಧಿಕಾರಿಯ ಆಹ್ವಾನದ ಮೇಲೆ ಆಗಾಗ ವಿಹಾರಕ್ಕೆ ಭೇಟಿ ಕೊಟ್ಟು ತಂಗುತ್ತಿದ್ದ ಮಹಾಗುರು, ತಾವು ಬಂದಾಗಲೆಲ್ಲ ಅವರಿಗೆ ಧರ್ಮಗ್ರಂಥಗಳ ಅಧ್ಯಯನಕ್ಕೆ ಹೆಚ್ಚು ಗಮನ ಕೊಡುವಂತೆ ಸಲಹೆ ನೀಡುತ್ತಿದ್ದರು. ಆದರೆ ಆ ಅಧಿಕಾರಿ ಬ್ರಿಟಿಷ್ ಸರ್ಕಾರದ ಕೆಳಗೆ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದವರು. ಮಹಾಗುರು ಹೇಳಿದಂತೆ ಧರ್ಮಗ್ರಂಥಗಳನ್ನು ಓದಲಾಗಲೀ, ನಿರ್ದಿಷ್ಟ ದಿನದಂದು ‘ಉಪೋಸತ’ (ಉಪವಾಸ ವ್ರತ) ಆಚರಿಸಲಾಗಲೀ ಅವರಿಗೆ ಸಾಧ್ಯವಾಗ್ತಿರಲಿಲ್ಲ.
ಪ್ರತಿ ಸಲವೂ ರಂಗೂನಿನ ಈ ಶಿಷ್ಯ ‘ರಜೆಗಳ ಕೊರತೆ’ ಕಾರಣ ಮುಂದಿಟ್ಟು ನಿಯಮಾಚರಣೆ ತಪ್ಪಿಸಿಕೊಳ್ಳುತ್ತಿದ್ದುದು ಕಂಡು ಮಹಾಗುರು, “ಹಾಗಾದರೆ ಒಂದು ಕೆಲಸ ಮಾಡು. ಪ್ರತಿ ಭಾನುವಾರವಾದರೂ ಉಪೋಸತ ಮಾಡು. ಅವತ್ತು ರಜೆ ತಾನೆ?” ಅಂದರು. ಆದರೆ ಆ ಅಧಿಕಾರಿ ತಾನು ಉನ್ನತ ಹುದ್ದೆಯಲ್ಲಿ ಇರುವುದರಿಂದ ಭಾನುವಾರವೂ ರಜೆ ಇರುವುದಿಲ್ಲ ಅನ್ನುತ್ತಾ ಕಾಲ ನೂಕುತ್ತಿದ್ದರು.
ಹೀಗೇ ವರ್ಷಗಳು ಕಳೆದವು. ರಂಗೂನಿನ ಅಧಿಕಾರಿ ಈಗ ನಿವೃತ್ತಿ ಪಡೆದಿದ್ದರು. ಸರ್ಕಾರದಿಂದ ಬರುತ್ತಿದ್ದ ಪಿಂಚಣಿ ಹಣದಲ್ಲಿ ಜೀವನ ಸುಗಮವಾಗಿ ಸಾಗುತ್ತಿತ್ತು.
ಅಲೆಮಾರಿ ಮಹಾಗುರು ಸುತ್ತಾಡುತ್ತಾ ರಂಗೂನಿಗೆ ಬಂದು ಅಧಿಕಾರಿಯ ವಿಹಾರದಲ್ಲಿ ತಂಗಿದರು. ಅವರನ್ನು ಕಾಣಲು ಅಧಿಕಾರಿ ಓಡೋಡಿ ಬಂದ. ಮಾತುಕತೆಯಾಡುತ್ತಾ ತನ್ನ ನಿವೃತ್ತಿಯ ಬಗ್ಗೆ ತಿಳಿಸಿದ. ಆಗ ಮಹಾಗುರು ಮುಗುಳ್ನಗುತ್ತಾ, “ಇನ್ನುಮುಂದಾದ್ರೂ ನೀನು ಯಾವ ಅಡೆತಡೆ ಇಲ್ಲದೆ ಧರ್ಮಕಾರ್ಯಗಳಿಗೆ ನಿನ್ನ ಜೀವನವನ್ನು ಅರ್ಪಿಸಬಹುದು” ಅಂದರು. ಒಂದು ಕ್ಷಣ ಅವಾಕ್ಕಾದ ಆ ನಿವೃತ್ತ ಅಧಿಕಾರಿ, “ಕ್ಷಮಿಸಿ ಗುರುಗಳೆ. ನನಗೆ ಯಾವಾಗಲೂ ನನ್ನ ಕುಟುಂಬದ್ದೇ ಚಿಂತೆಯಾಗಿಬಿಟ್ಟಿದೆ. ಅದರಿಂದ ನನ್ನ ಮನಸ್ಸಿಗೆ ಧರ್ಮದ ಪಾಲನೆಗೆ ಬೇಕಾದ ಏಕಾಗ್ರತೆ ದಕ್ಕುತ್ತಿಲ್ಲ” ಎಂದು ಮೆಲ್ಲಗೆ ಉಸುರಿದರು. ಮಹಾಗುರುವಿಗೆ ನಗು ಕಟ್ಟೆಯೊಡೆಯಿತು. “ನೀನೂ ಆ ನೆವ ಹೇಳುವ ಬೆಟ್ಟದ ಮನುಷ್ಯನ ಹಾಗೇ!” ಅಂದುಬಿಟ್ಟರು.
ನೆವ ಹೇಳಿದ ಬೆಟ್ಟದ ಮನುಷ್ಯನ ಕತೆ
ಬೆಟ್ಟದ ತಪ್ಪಲಿನಲ್ಲಿ ಒಂದೂರು. ಅಲ್ಲೊಬ್ಬ ಗ್ರಾಮಸ್ಥ ಇಡೀ ಊರಿಗೆ ಔತಣ ಕೂಟ ಏರ್ಪಡಿಸಿದ್ದ. ಆ ಊರಿನ ಪದ್ಧತಿಯಂತೆ ಹಳ್ಳಿಯ ಎಲ್ಲ ಜನರೂ ಅದಕ್ಕೆ ಬೇಕಾದ ವಿವಿದ ಏರ್ಪಾಟುಗಳಲ್ಲಿ ತೊಡಗಿಕೊಂಡಿದ್ದರು. ಯಾರೆಲ್ಲ ಕೆಲಸಕ್ಕೆ ಕೈಜೋಡಿಸ್ತಾರೋ ಅವರಿಗೆ ಊಟ – ಇದು ಅಲ್ಲಿಯ ನಿಯಮವಾಗಿತ್ತು.
ಅಲ್ಲಿ ಬೌದ್ಧ ಬಿಕ್ಖುಗಳಿಗೆ ಭಿಕ್ಷೆ ನೀಡಲೆಂದೇ ಪ್ರತ್ಯೇಕ ಬಿದಿರಿನ ತಟ್ಟಿಗಳಿಂದ ಒಂದು ಕೋಣೆ ಕಟ್ಟಲಾಗಿತ್ತು. ಪರಿವ್ರಾಜಕ ಬಿಕ್ಖುಗಳು ಅಲ್ಲಿ ಬಟ್ಟಲು ಹಿಡಿದು ಭಿಕ್ಷೆ ಸ್ವೀಕರಿಸಿ ನಡೆಯುತ್ತಿದ್ದರು.
ಆ ಊಟದ ಚಪ್ಪರದ ಬಳಿ ಒಬ್ಬ ಬೆಟ್ಟದ ಮನುಷ್ಯ ವಿಷಾದದ ಮುಖ ಹೊತ್ತು ಮೂಲೆಯಲ್ಲಿ ನಿಂತಿದ್ದ. ಅವನನ್ನು ಕಂಡ ಗ್ರಾಮಸ್ಥ ಹತ್ತಿರ ಹೋಗಿ ವಿಚಾರಿಸಿದ. “ಏನಾಯ್ತು, ಯಾಕೆ ಹೀಗೆ ನಿಂತಿದ್ದೀಯ? ಹುಷಾರಿಲ್ವಾ ನಿಂಗೆ?” ಎಂದೆಲ್ಲ ಕೇಳಿದ.
ಆಗ ಬೆಟ್ಟದ ಮನುಷ್ಯ, “ನನಗೂ ಇವರ ಹಾಗೆ ಕೆಲಸ ಮಾಡಿ ಊಟ ಮಾಡುವ ಅರ್ಹತೆ ಪಡೆಯಬೇಕೆಂದು ಆಸೆ. ಆದರದು ಸಾಧ್ಯವಾಗ್ತಿಲ್ಲ” ಅಂದ. ಯಾಕೆಂದು ಕೇಳಲಾಗಿ, “ಹಸಿದ ಹೊಟ್ಟೆಯಲ್ಲಿ ಯಾರಿಗೆ ತಾನೇ ಕೆಲಸ ಮಾಡಲು ಸಾಧ್ಯ?” ಎಂದು ಮರುಪ್ರಶ್ನೆ ಹಾಕಿದ.
ಬೆಟ್ಟದ ಮನುಷ್ಯನ ಮಾತು ಕೇಳಿದ ಕೂಡಲೆ ಗ್ರಾಮಸ್ಥ ಅಡುಗೆಮನೆಯ ಕಡೆಗೋಡಿದ. ತಟ್ಟೆಯ ತುಂಬ ಅನ್ನ, ತರಕಾರಿಯ ಸಾರು, ಕೋಳಿ ಮಾಂಸವನ್ನು ಎಲ್ಲವನ್ನೂ ಬಡಿಸಿಕೊಂಡು ಬಂದು, ಬೆಟ್ಟದ ಮನುಷ್ಯನ ಮುಂದಿಟ್ಟ.
ಬೆಟ್ಟದ ಮನುಷ್ಯನಿಗೆ ಸ್ವರ್ಗ ಮೂರೇ ಗೇಣು! ತಟ್ಟೆಗೆ ಹಾಕಿದ್ದನ್ನು ಸ್ವಲ್ಪವೂ ಬಿಡದೇ ಊಟ ಮಾಡಿ ಮುಗಿಸಿದ. ಆಮೇಲೆ ಮೊದಲಿನ ಹಾಗೇ ಚಪ್ಪರದ ಒಂದು ಮೂಲೆಯಲ್ಲಿ ಕಂಬಕ್ಕೊರಗಿ ನಿಂತ.
ಅದನ್ನು ಗಮನಿಸಿದ ಗ್ರಾಮಸ್ಥ ಮತ್ತೆ ಬೆಟ್ಟದ ಮನುಷ್ಯನ ಬಳಿ ಬಂದ. ಈಗೇನಾಯ್ತೆಂದು ಕೇಳಿದ. ಆ ಮನುಷ್ಯ ಹಿಂದಿನಂತೆಯೇ ಮೆಲ್ಲಗೆ, “ನನಗೂ ಅವರೆಲ್ಲರ ಹಾಗೆ ಕೆಲಸ ಮಾಡಿಯೇ ಊಟ ಮಾಡುವ ಅರ್ಹತೆ ಪಡೆಯಲು ಆಸೆ. ಆದರೆ…”
“ಆದರೆ…?”
“ತುಂಬಿದ ಹೊಟ್ಟೆಯಲ್ಲಿ ಯಾರಿಗೆ ತಾನೇ ಕೆಲಸ ಮಾಡಲು ಸಾಧ್ಯ!?”
ಬೆಟ್ಟದ ಮನುಷ್ಯ ಕೊಟ್ಟ ನೆವ ಕೇಳಿ ಗ್ರಾಮಸ್ಥ ಮೂರ್ಛೆ ಹೋಗುವುದೊಂದು ಬಾಕಿ!!
ಈ ಕತೆಯ ನೀತಿ ಇಷ್ಟೇ. ಆಸಕ್ತಿ ಇಲ್ಲದವರು ಏನಾದರೂ ಅಷ್ಟೇ. ಒಂದಲ್ಲ ಒಂದು ನೆವ ಹೇಳಿ ತಪ್ಪಿಸಿಕೊಳ್ತಾರೆ. ಬೆಟ್ಟದ ಮನುಷ್ಯನ ಹಾಗೆ, ಅಸಿಸ್ಟೆಂಟ್ ಕಮಿಷನರ್ ಹಾಗೆ!