ಕಾರುಣ್ಯ ಎಂದರೆನೇ ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಿದ್ದು. ನಿಮ್ಮ ನೆರೆಮನೆಯವನ ಅಥವಾ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಿಮ್ಮ ಅಂತಃಕರಣದಲ್ಲಿ ಕೊರತೆಯಿದೆ ಎಂದರೆ ನೀವು ಧ್ಯಾನ ಮಾಡದಿರುವುದೇ ಲೇಸು… । ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ
ನೆರೆಮನೆಯವರ ಬಗೆಗಿನ ನಿನ್ನ ಪ್ರೀತಿ,
ಯಾವಾಗ ನಿನಗೆ ಖುಶಿ ನೀಡತೊಡಗತ್ತೋ
ಆಗ ನಿನ್ನ ಪ್ರೀತಿಗೆ
ಮೌಲ್ಯದ ಪಟ್ಟ ದೊರೆಯುತ್ತದೆ ~ ಖಲೀಲ್ ಜಿಬ್ರಾನ್
ಒಮ್ಮೆ ಚೀನಾದಲ್ಲಿ ಒಬ್ಬ ವ್ಯಕ್ತಿ ಬೋಧಿಧರ್ಮನನ್ನು ಭೇಟಿಯಾಗಿ ಪ್ರಶ್ನೆ ಮಾಡಿದ, “ ಗುರುವೆ, ನಾನು ನಿನ್ನ ಎಲ್ಲ ಕಲಿಕೆಯನ್ನ ನಿಷ್ಠೆಯಿಂದ ಪಾಲಿಸುತ್ತೇನೆ, ನೀನು ಹೇಳಿರುವ ಪ್ರಕಾರ ಧ್ಯಾನ ಮಾಡುತ್ತೇನೆ. ಧ್ಯಾನ ಮಾಡಿದಾಗ ನನ್ನೊಳಗೆ ಇಡೀ ಬ್ರಹ್ಮಾಂಡದ ಕುರಿತಾಗಿ ಕಾರುಣ್ಯ ಅಂತಃಕರಣ ತುಂಬಿಕೊಳುತ್ತದೆ. ಈ ಕಾರುಣ್ಯ ಕೇವಲ ಮನುಷ್ಯರನ್ನು ಕುರಿತಾದದ್ದು ಅಲ್ಲ, ಇದರಲ್ಲಿ ಸಮಸ್ತ ಪ್ರಾಣಿ ಪಕ್ಷಿಗಳು, ಬೆಟ್ಟ ಗುಡ್ಡ ಬಂಡೆಗಳು , ನದಿ ಸಾಗರಗಳು ಎಲ್ಲವೂ ಸೇರಿಕೊಳ್ಳುತ್ತವೆ. ಆದರೆ ಒಂದು ಸಮಸ್ಯೆ, ನನ್ನ ನೆರೆಮನೆಯವನ ಕುರಿತಾಗಿ ನನಗೆ ಒಂದು ಚೂರೂ ಕಾರುಣ್ಯ ಇಲ್ಲ.
ಇಲ್ಲ, ಸಾಧ್ಯವೇ ಇಲ್ಲ, ನಾನೂ ಬಹಳ ಪ್ರಯತ್ನ ಮಾಡಿದೆ. ದಯವಿಟ್ಟು ಹೇಳು ನಾನು ನನ್ನ ನೆರೆಮನೆಯವನನ್ನು ನನ್ನ ಅಂತಃಕರಣದ ಪರಿಧಿಯಿಂದ ಹೊರಗೆ ಇಡಬಹುದೆ? ನಾನು ನನ್ನ ಕಾರುಣ್ಯದ ವಲಯದಲ್ಲಿ ಗುರುತಿರುವ, ಗುರುತಿರದ ಎಲ್ಲವನ್ನೂ ಸೇರಿಸಿಕೊಳ್ಳಬಲ್ಲೆ ಆದರೆ ನೆರಮನೆಯವ ಖಂಡಿತ ಸಾಧ್ಯವಿಲ್ಲ, ನಾನು ಅವನನ್ನು ನನ್ನ ಪ್ರೇಮದಿಂದ ಹೊರಗೆ ಇಡಬಹುದೇ? ಅವನ ಕುರಿತಾಗಿ ಕಾರುಣ್ಯ ನನಗೆ ಸಾಧ್ಯವೇ ಆಗುತ್ತಿಲ್ಲ”.
ಬೋಧಿಧರ್ಮ ಉತ್ತರಿಸಿದ, “ ಹಾಗಾದರೆ ಧ್ಯಾನವನ್ನ ಮರೆತುಬಿಡು. ಕಾರುಣ್ಯ ಯಾರನ್ನಾದರೂ ಯಾವುದನ್ನಾದರೂ ಹೊರತಾಗಿಸುತ್ತದೆ ಎಂದರೆ ಅದು ವಿಫಲ ಧ್ಯಾನ”.
ಕಾರುಣ್ಯ ಎಂದರೆನೇ ಎಲ್ಲವನ್ನೂ ಎಲ್ಲರನ್ನೂ ಒಳಗೊಂಡಿದ್ದು. ನಿಮ್ಮ ನೆರೆಮನೆಯವನ ಅಥವಾ ಯಾರೋ ಒಬ್ಬ ವ್ಯಕ್ತಿಯ ಬಗ್ಗೆ ನಿಮ್ಮ ಅಂತಃಕರಣದಲ್ಲಿ ಕೊರತೆಯಿದೆ ಎಂದರೆ ನೀವು ಧ್ಯಾನ ಮಾಡದಿರುವುದೇ ಲೇಸು. ಅಂಥ ಧ್ಯಾನದಿಂದ ಯಾವ ಪ್ರಯೋಜನವೂ ಇಲ್ಲ. ಧ್ಯಾನ ಸಮಷ್ಟಿಯ ಕುರಿತಾದದ್ದು ವ್ಯಕ್ತಿ ನಿಷ್ಠ ಅಲ್ಲವೇ ಅಲ್ಲ.
ಧ್ಯಾನ ನಿಮ್ಮ ಅಂತರಂಗಕ್ಕೆ ಸಂಬಂಧಿಸಿದ್ದು. ನಿಮ್ಮ ಅಂತಃಕರಣಕ್ಕೆ ಯಾವ ಕರಾರುಗಳೂ ಇರುವ ಹಾಗಿಲ್ಲ, ಅದು ಯಾರೊಬ್ಬರ ಕುರಿತಾದದ್ದೂ ಅಲ್ಲ, ಅದಕ್ಕೆ ಯಾವ ನಿರ್ದಿಷ್ಟ ದಿಕ್ಕು ದೆಸೆಗಳೂ ಇಲ್ಲ. ನಿಮ್ಮ ಅಂತಃಕರಣ ಈ ಎಲ್ಲದರಿಂದ ಹೊರತಾದಾಗ ಮಾತ್ರ ಅದಕ್ಕೆ ಚಿಕಿತ್ಸೆಯ ಗುಣ ಲಭ್ಯವಾಗುತ್ತದೆ.
ಒಮ್ಮೆ ತನ್ನ ಶಿಷ್ಯರಿಗೆ ಝೆನ್ ಮಾಸ್ಟರ್ ಪ್ರಶ್ನೆ ಮಾಡಿದ. “ ರಾತ್ರಿ ಮುಗಿಯುವ ಮತ್ತು , ಹಗಲು ಶುರುವಾಗುವ ಕ್ಷಣವನ್ನು ನಿಖರವಾಗಿ ಗುರುತಿಸುವುದು ಹೇಗೆ? “
ಒಬ್ಬ ಶಿಷ್ಯ : ದೂರದಿಂದ ನಾವು , ಯಾವುದು ನರಿ ಯಾವುದು ನಾಯಿ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.
ಮಾಸ್ಟರ್ ಗೆ ಈ ಉತ್ತರ ಹಿಡಿಸಲಿಲ್ಲ.
ಇನ್ನೊಬ್ಬ ಶಿಷ್ಯ : ದೂರದಿಂದ ನಾವು , ಯಾವುದು ಆಲದ ಮರ, ಯಾವುದು ಅರಳಿ ಮರ ಎಂದು ಸರಿಯಾಗಿ ಗುರುತಿಸುತ್ತೇವೋ ಆವಾಗ.
ಮಾಸ್ಟರ್ ಗೆ ಈ ಉತ್ತರವೂ ಇಷ್ಟವಾಗಲಿಲ್ಲ.
ನೀವೇ ಹೇಳಿ ಮಾಸ್ಟರ್, ಶಿಷ್ಯರೆಲ್ಲ ಒತ್ತಾಯಿಸಿದರು.
ಮಾಸ್ಟರ್ : ಯಾವಾಗ ಅಪರಿಚಿತನೊಬ್ಬ ಎದುರಾದಾಗ, ನಮಗೆ ನಮ್ಮ ಮನೆಯವನ ಹಾಗೆ ಕಾಣುತ್ತಾನೋ ಆವಾಗ.
(Source: A sudden Clash of thunder – Osho)