ಬದಲಾವಣೆ ಬರೀ ಒಂದು ಊಹೆಯಷ್ಟೇನಾ!? : ಅಧ್ಯಾತ್ಮ ಡೈರಿ

ಬದಲಾವಣೆ ಅಂದರೆ ಪೂರ್ತಿ ಹೊಸತಿಗೆ ತೆರೆದುಕೊಳ್ಳೋದು. ನಾವೇ ಕಂಡಿರುವಂತೆ ಯಾವ ಬದಲಾವಣೆ ಪೂರ್ತಿ ಹೊಸತಾಗಿದೆ? ಇರುವುದೆಲ್ಲ ಹೊರಳುಗಳು ಅಷ್ಟೇ. ಒಂದೋ ಈ ಮಗ್ಗಲು, ಇಲ್ಲಾ ಆ ಮಗ್ಗಲು, ಅಥವಾ ಎರಡು ಮಗ್ಗಲುಗಳ ನಡುವಿನ ಹೊರಳಿಕೆಯ ನಟ್ಟನಡು.
ಋತುವಾದರೂ ಅಷ್ಟೇ, ಬದುಕಾದರೂ ಅಷ್ಟೇ. ಇರುವುದೆಲ್ಲ ಮುಂದುವರಿಕೆಯೇ ಹೊರತು ಬದಲಾವಣೆ ಅಲ್ಲ… | ಚೇತನಾ ತೀರ್ಥಹಳ್ಳಿ

ಬದಲಾವಣೆ ಅಸಾಧ್ಯ!

ಬಾಕಿ ದೊಡ್ಡವರೆಲ್ಲ ‘ಬದಲಾವಣೆಯೊಂದೇ ನಿರಂತರ’, ‘ಬದಲಾವಣೆಯೇ ಸತ್ಯ’ ಅನ್ನುವಾಗ; ಅವರೆಲ್ಲರಿಗಿಂತ ಮೊದಲು ಪರ್ಮೆನಿಡಸ್ ‘ಬದಲಾವಣೆ ಬರೀ ಒಂದು ಊಹೆಯಷ್ಟೇ’ ಅಂದುಬಿಟ್ಟಿದ್ದ.

ಬದಲಾವಣೆ ಅಂದರೆ ಪೂರ್ತಿ ಹೊಸತಿಗೆ ತೆರೆದುಕೊಳ್ಳೋದು. ನಾವೇ ಕಂಡಿರುವಂತೆ ಯಾವ ಬದಲಾವಣೆ ಪೂರ್ತಿ ಹೊಸತಾಗಿದೆ? ಇರುವುದೆಲ್ಲ ಹೊರಳುಗಳು ಅಷ್ಟೇ. ಒಂದೋ ಈ ಮಗ್ಗಲು, ಇಲ್ಲಾ ಆ ಮಗ್ಗಲು, ಅಥವಾ ಎರಡು ಮಗ್ಗಲುಗಳ ನಡುವಿನ ಹೊರಳಿಕೆಯ ನಟ್ಟನಡು.
ಋತುವಾದರೂ ಅಷ್ಟೇ, ಬದುಕಾದರೂ ಅಷ್ಟೇ. ಇರುವುದೆಲ್ಲ ಮುಂದುವರಿಕೆಯೇ ಹೊರತು ಬದಲಾವಣೆ ಅಲ್ಲ.

ಉದಾಹರಣೆಗೆ ನದಿ. ನದಿ ಹರೀತಿದೆ ಅಂದುಕೊಳ್ತೀವಿ. ಆದರೆ ನನಗನ್ನಿಸೋ ಹಾಗೆ ನದಿ ತನ್ನ ಮೂಲ ಮತ್ತು ಸಮುದ್ರದ ಮಧ್ಯೆ ನಿಂತಿದೆ. ಅದು ದ್ರವ ಆಗಿರೋದ್ರಿಂದ, ಸಹಜವಾಗಿ ಅದರ ಕಣಗಳು ಅಳ್ಳಕವಾಗಿ ಜೋಡಿಸಿಕೊಂಡಿರೋದ್ರಿಂದ, ತನ್ನ ಗುಣಲಕ್ಷಣದಂತೆ ಚದುರುತ್ತಾ ಇದೆಯಷ್ಟೇ. ಮೂಲದಿಂದ ಚಿಮ್ಮಿದ ನೀರು ಸಮುದ್ರದವರೆಗೂ ಹರಡಿ ನಿಂತಿದೆ. ಇಡಿಯ ನದಿ ಏಕಕಾಲಕ್ಕೆ ಅಸ್ತಿತ್ವದಲ್ಲಿದೆ. ನದಿಯ ಹುಟ್ಟು, ಹರಿವು (ಹರಿವಿನಂತೆ ಕಾಣುವುದು), ಮತ್ತು ಅಂತ್ಯ ಮೂರೂ ಬೇರೆ ಬೇರೆ ಸಂಗತಿಗಳಲ್ಲ. ನದಿ ಹುಟ್ಟಿ, ಹರಿದು, ಸಮುದ್ರ ಸೇರುವುದಲ್ಲ. ಅದು ಹುಟ್ಟಿದಾಗಲೇ ಸಮುದ್ರ ಸೇರಿದೆ. ಅದು ತನ್ನ ಪಾತ್ರದಲ್ಲಿ, ಪಾತ್ರೆಯಲ್ಲಿ ತುಂಬಿಟ್ಟ ನೀರಿನಂತೆ ನಿಂತಿದೆ.

ಬದುಕೂ ಅಷ್ಟೇ ತಾನೆ? ಹುಟ್ಟಿದಾಗಲೇ ನಮ್ಮ ಸಾವು ನಿಕ್ಕಿ. ನಿಗದಿಯಾದ ಪಾತ್ರಕ್ಕೆ ಆಯಸ್ಸಿನ ಲೆಕ್ಕ ತುಂಬಿಸುವುದೇ ಬದುಕು. ಬಾಲ್ಯ, ಯೌವನ, ಮುದಿತನ, ಸಾವು – ಇವೆಲ್ಲ ಬದಲಾವಣೆಗಳಲ್ಲ, ಇದು ನಿಕ್ಕಿಯಾದ ಪಾತ್ರ ಪೂರ್ಣಗೊಳಿಸುವ ಪ್ರಕ್ರಿಯೆ.
ಸತ್ತ ಮೇಲೆ ಮತ್ತೆ ನಮ್ಮ ದೇಹವಾದರೂ ಒಂದಲ್ಲ ಒಂದಾಗಿ ಮರುಹುಟ್ಟು ಪಡೆದು ಮತ್ತೆ ಹುಡಿಯಾಗುವತನಕ ಮತ್ತದೇ ‘ಹುಟ್ಟಿ ಸಾಯುವ’ ನಿಗದಿತ ಪ್ರಕ್ರಿಯೆ ಪೂರೈಸುವುದು.

ಎರಡು ರಾಸಾಯನಿಕಗಳನ್ನು ಸೇರಿಸಿ ಮೂರನೆಯದನ್ನು ಪಡೀತೇವೆ. ಮತ್ತೆ ಮತ್ತೊಂದು ಪ್ರಕ್ರಿಯೆಯಿಂದ ಎರಡನ್ನೂ ಬೇರೆ ಮಾಡಲೂ ಬರುತ್ತದೆ.
ಹೀಗೆ ಪ್ರತಿಯೊಂದೂ ಮೂಲಕ್ಕೆ ಮರಳುವ ಚಕ್ರ. ಶುರುವಾಗಿ ಮುಗಿಯುವ, ಮತ್ತೆ ಶುರುವಾಗುವ ನಿರಂತರ ಚಕ್ರ. ಇದು ‘ಚಲನೆ’ಯಷ್ಟೇ, ಬದಲಾವಣೆ ಅಲ್ಲ. ಚಲನೆ ಬದಲಾವಣೆಯಾಗಲು ಸಾಧ್ಯವಿಲ್ಲ.

ಹೊರಟಲ್ಲೇ ಮತ್ತೆ ಬಂದು ನಿಲ್ಲುವ ಯಾವುದಾದರೂ ಹೊಸತನ್ನು ಸೂಚಿಸುವ ‘ಬದಲಾವಣೆ’ಯಾಗಲು ಹೇಗೆ ಸಾಧ್ಯ? ಪರ್ಮೆನಿಡಸ್, “ಬದಲಾವಣೆ ಅನ್ನೋದು ಬರೀ ಊಹೆಯಷ್ಟೇ” ಅಂದಿದ್ದು ಈ ನಿಟ್ಟಿನಲ್ಲೂ ಸರಿ.

ನಮ್ಮ ರಾಜಕಾರಣವನ್ನೆ ನೋಡಿ. ಯಾವುದೇ ಕ್ರಾಂತಿ ಅಧಿಕಾರ ಸ್ಥಾನದಲ್ಲಿ ಮತ್ತೊಬ್ಬ ಶೋಷಕನನ್ನು ತಂದು ಕೂರಿಸುವುದು. ಭಗತ್ ಆತಂಕ ಪಟ್ಟಿದ್ದಂತೆ ‘ಕರಿ ಚರ್ಮದ ಬ್ರಿಟಿಷರು’ ಬಂದು ಕೂರಲಿಲ್ಲವೇ? ಹಾಗೇ! ಫ್ಯಾಸಿಸ್ಟರು ಹೋದರೆ ಕಮ್ಯುನಿಸ್ಟರು ಶೋಷಕರಾಗುವರು. ಕಮ್ಯುನಿಸ್ಟರು ಹೋದರೆ ಫ್ಯಾಸಿಸ್ಟರು. ಶೋಷಣೆಯ ಬಗೆ ಬೇರೆಯಾಗಿರಬಹುದು. ಚಿಂತನೆ ಯಾವುದಾದರೂ ಚಿಂತಿಸುವುದು ಮಹತ್ವಾಕಾಂಕ್ಷೆಯ ಮನುಷ್ಯರೇ!

ನಾವು ಬದಲಾವಣೆ ಅಂದುಕೊಳ್ಳುವ ಪ್ರತಿಯೊಂದೂ ಚಲನೆಯ ಚಕ್ರದಲ್ಲಿ ಸುತ್ತಿ ಮತ್ತೆ ಅದು ಬದಲಾದ ಮಗ್ಗಲಿನ ಮೂಲಕ್ಕೇ ಮರಳುತ್ತದೆ – ಅನ್ನಲಿಕ್ಕಾಗಿ ಇವೆರಡು ಉದಾಹರಣೆ ಕೊಟ್ಟೆನಷ್ಟೇ.
ನಾವು ಈವರೆಗೆ ಕಂಡ ಯಾವ ಕ್ರಾಂತಿಯೂ ಬದಲಾವಣೆ ತರಲಿಲ್ಲ. ಮಗ್ಗಲು ಬದಲಾಯಿಸಿತಷ್ಟೇ – ಅನ್ನೋದು ನನ್ನ ಅನಿಸಿಕೆ. ಈ ಪ್ರತಿಯೊಂದೂ ಸಾಂದರ್ಭಿಕವಾಗಿ ಒಂದಷ್ಟು ಕಾಲದವರೆಗೆ ಸ್ಥಿತಿಗತಿಯನ್ನು ಆಚೀಚೆ ಮಾಡಿರಬಹುದು. ಆದರೆ ವ್ಯಕ್ತಿಯಂತೇ ವಿಚಾರಗಳೂ ‘ಹುಟ್ಟು’ವುದರಿಂದ, ಅವಕ್ಕೂ ‘ಸಾವು’ ನಿಕ್ಕಿ. ತನ್ನ ಸುತ್ತು ಪೂರೈಸಿದ ಮೇಲೆ ಅದು ಮುಗಿಯಲೇಬೇಕು. ಈ ಸುತ್ತುವ ಪ್ರಕ್ರಿಯೆಯಲ್ಲಿ ಎಷ್ಟಾಯಿತೋ ಅಷ್ಟೇ ಸೃಷ್ಟಿಯ ಲಾಭ!!

ಹುಟ್ಟಿ ಸಾಯುವ ನಿಯಮ ಇರುವಲ್ಲಿ ಪ್ರತಿಯೊಂದು ಶುರುವಾತಿಗೂ ಕೊನೆ ಇದ್ದೇ ಇದೆ. ಮನುಷ್ಯರ ಬದುಕಾದರೂ, ರಾಜಕಾರಣವಾದರೂ, ಧರ್ಮವಾದರೂ – ಯಾವುದೇ ಆದರೂ ಅಷ್ಟೇ. ನಮ್ಮ ನಡುವೆ ಯಾವುದೂ ಬದಲಾಗದು. ಶುರುವಾಗುವ – ಮುಗಿಯುವ ನಡುವಿನೆ ಹೊರಳಾಟದಲ್ಲಿ ನಿರತವಾಗಿರುವುದು – ಅಷ್ಟೇ.

ಪರ್ಮೆನಿಡಸನ ಈ ಮಾತು ಹೌದೆನಿಸಿವುದು ಇನ್ನೂ ಒಂದು ಕಾರಣಕ್ಕೆ.
ಯಾವುದು ಆತ್ಯಂತಿಕವೋ ಅದು ಸತ್ಯ, ಯಾವುದು ಸತ್ಯವೋ ಅದು ಆತ್ಯಂತಿಕ. ಸತ್ಯ, ನಿತ್ಯ ಮತ್ತು ಶಾಶ್ವತ. ಸತ್ಯ ಬದಲಾವಣೆಯಿಲ್ಲದ್ದು.
ಸಮಸ್ತ ಸೃಷ್ಟಿ ಆತ್ಯಂತಿಕ ಪರಮಸತ್ಯ ಅಥವಾ ಋತದ ತುಣುಕುಗಳಾದ ಮೇಲೆ ಅವು ತನ್ನ ಮೂಲದ ಗುಣಲಕ್ಷಣಕ್ಕಿಂತ ಭಿನ್ನವಾಗಿ ಮಿಥ್ಯೆ ಆಗೋದು ಹೇಗೆ?
ಸತ್ಯದ ತುಣುಕುಗಳೂ ಸತ್ಯವೇ. ಹೇಗೆ ಸತ್ಯ ಬದಲಾವಣೆ ಇಲ್ಲದ್ದೋ ಹಾಗೇ ಸೃಷ್ಟಿಯೂ ಬದಲಾವಣೆಯಿಲ್ಲದ್ದು. ಅದು ನದೀಮೂಲದಿಂದ ಚಿಮ್ಮಿದ ನದಿಯಂತೆ ಅದಾಗಲೇ ತನ್ನ ಅಂಚನ್ನು ಕೂಡಿಕೊಂಡು ಶುರುವಾತು – ಮುಕ್ತಾಯಗಳ ನಡುವೆ ನಿಂತಿದೆ.
ಈ ನಿಂತಿರುವ, ‘ಇರುವ’ ಸ್ಥಿತಿಯೇ ಸತ್ಯ ಮತ್ತು ನಿತ್ಯ. ನಾವು ಚಲನೆಯನ್ನು ಬದಲಾವಣೆ ಅಂದುಕೊಳ್ಳುವ ಕಾರಣಕ್ಕೆ ನಮಗೆ ಜಗತ್ತು ಮಿಥ್ಯೆಯಾಗಿ ಕಾಣುತ್ತಿದೆಯಷ್ಟೇ.

ಇನ್ನು ಈ ಪರ್ಮೆನಿಡಸ್ ““Ex nihilo nihil fit” ಅಂತಾನೆ. ಶೂನ್ಯದಿಂದ ಶೂನ್ಯವೇ ಹೊಮ್ಮುವುದು ಹೊರತು ಮತ್ತೇನೂ ಹೊಮ್ಮಲು ಸಾಧ್ಯವಿಲ್ಲ ಅನ್ನೋದು ಅವನ ಹೇಳಿಕೆ. ಶೂನ್ಯದಿಂದ ಏನೂ ಹುಟ್ಟಲು ಸಾಧ್ಯವಿಲ್ಲ ಅನ್ನುತ್ತಾನೆ ಪರ್ಮೆನಿಡಸ್.
ನಾನು ಶೂನ್ಯ ಅನಂತ ಸಾಧ್ಯತೆಗಳ ದಿಬ್ಬ ಅಂತ ನಂಬಿಕೊಂಡವಳು. ಹಾಗೇ, ಅನಂತ ಸಾಧ್ಯತೆಗಳ ದಿಬ್ಬವಾದ ಕಾರಣ ಶೂನ್ಯವೆಂಬುದಿಲ್ಲ, ಶೂನ್ಯ ಒಂದು ಊಹೆಯಷ್ಟೇ ಅನ್ನೋದು ನನ್ನ ವಾದ. ಶೂನ್ಯದಿಂದ ಶೂನ್ಯವೇ ಹೊಮ್ಮುವುದು ಅಂತಾದ ಮೇಲೆ, ಶೂನ್ಯದಿಂದ ಏನಾದರೂ ಹೊಮ್ಮಿದರೆ ಅದು ಶೂನ್ಯವಾಗಿರಲು ಸಾಧ್ಯವಿಲ್ಲ ಅಂತಾಗುತ್ತದೆ!!

Leave a Reply