ಅಧ್ಯಾತ್ಮದ ಬೆಳಕು

ಅಧ್ಯಾತ್ಮದ ಬೆಳಕು… ಹಾಗೆಂದರೇನು? : ಚಿದಂಬರ ನರೇಂದ್ರ

ಕರಗೇನಿ ಸಾಗರದಾಗ
ಉಪ್ಪಿನ್ಹಾಂಗ,
ಇಲ್ಲ ಸಂಶಯಾ, ಇಲ್ಲ ನಿಂದನಾ
ನಕ್ಷತ್ರ ಹುಟ್ಟೇದ ಎದಿಯೊಳಗ
ಅಹಾ ಸ್ಪೋಟಾ ! ಎಂಥಾ ಸೂತ್ರಾ !
ಒಂದಾಗೇದ ಬೆಳಕು
ಏಳು ಅಕಾಶದಾಳ ದಾಳ ದೊಳಗ.

– ರೂಮಿ.


ಝೆನ್ ಪಂಥಕ್ಕೆ ಸೇರಿರದ ಒಬ್ಬ ಸನ್ಯಾಸಿ ಝೆನ್ ಮಾಸ್ಟರ್ ಹತ್ತಿರ ಬಂದು ತನಗೂ ಝೆನ್ ದೀಕ್ಷೆ ಕೊಟ್ಟು ಶಿಷ್ಯನಾಗಿ ಸ್ವೀಕರಿಸುವಂತೆ ಬೇಡಿಕೊಂಡ.

“ ನೀನು ಯಾವ ಪಂಥದವನು? ಯಾವ ಆಶ್ರಮದಿಂದ ಬರುತ್ತಿದ್ದೀಯ? “ ಝೆನ್ ಮಾಸ್ಟರ್ ಸನ್ಯಾಸಿಯನ್ನು ಪ್ರಶ್ನೆ ಮಾಡಿದ.

“ ನಮ್ಮ ಆಶ್ರಮ ಇಲ್ಲೇ ಹತ್ತಿರದಲ್ಲಿದೆ, ಅದರ ಹೆಸರು ಅಧ್ಯಾತ್ಮದ ಬೆಳಕು” ಸನ್ಯಾಸಿ ಉತ್ತರಿಸಿದ.

“ ಅಧ್ಯಾತ್ಮದ ಬೆಳಕು? ಅದೇನು ಹಾಗೆಂದರೆ? ವಿಚಿತ್ರ, ನನಗೆ ತೊಂಭತ್ತಾಯ್ತು, ಈ ಹೆಸರಿನ ಪಂಥವನ್ನೇ ಕೇಳಿಲ್ಲವಲ್ಲ. ಹಗಲಿನಲ್ಲಿ ಸೂರ್ಯನ ಬೆಳಕು ಗೊತ್ತು, ರಾತ್ರಿ ದೀಪದ ಬೆಳಕು ಗೊತ್ತು. ಇದ್ಯಾವುದು ಅಧ್ಯಾತ್ಮದ ಬೆಳಕು? ಎಲ್ಲಿಂದ ಬರುತ್ತದೆ ಈ ಬೆಳಕು?”
ಝೆನ್ ಮಾಸ್ಟರ್ ತಮಾಷೆ ಮಾಡಿದ.

ಮಾಸ್ಟರ್ ಮಾತು ಕೇಳಿ, ಸನ್ಯಾಸಿ ಪೆಚ್ಚಾಗಿ ಹೋದ. ಅವನ ಬಾಯಿಯಿಂದ ಯಾವ ಮಾತೂ ಹೊರಡಲಿಲ್ಲ.

ಕೊನೆಗೆ ಮಾಸ್ಟರ್ ತಾನೇ ಮಾತನಾಡಿದ…….

“ಗಾಬರಿಯಾಗಬೇಡ. ಹಗಲಿನಲ್ಲಿಯ ಸೂರ್ಯನ ಬೆಳಕು; ರಾತ್ರಿಯಲ್ಲಿಯ ದೀಪದ ಬೆಳಕು, ಇದೇ ಅಧ್ಯಾತ್ಮದ ಬೆಳಕು, ಇದನ್ನು ಹೊರತುಪಡಿಸಿ ಬೇರೆ ಯಾವ ಬೆಳಕೂ ಇಲ್ಲ”.

ಹಳೆಯ ಜಪಾನಿನಲ್ಲಿ, ಬಿದಿರು ಮತ್ತು ಕಾಗದಗಳಿಂದ ಕಂದೀಲುಗಳನ್ನು ತಯಾರಿಸಿ, ಅದರಲ್ಲಿ ಮೇಣದ ಬತ್ತಿ ಇಟ್ಟು ಉಪಯೋಗಿಸುತ್ತಿದ್ದರು.

ಕುರುಡನೊಬ್ಬ ತನ್ನ ಗೆಳೆಯನ ಮನೆಗೆ ಬಂದಿದ್ದ. ರಾತ್ರಿ ಅವ ವಾಪಸ್ ಹೋಗುವಾಗ, ಗೆಳೆಯ ಅವನಿಗೆ ದಾರಿಯಲ್ಲಿ ಬಳಸಲು ಒಂದು ಕಂದೀಲು ಕೊಟ್ಟ.

ಕುರುಡ : ನನಗೇಕೆ ಕಂದೀಲು? ಮೊದಲೇ ನನಗೆ ಕಣ್ಣು ಕಾಣಿಸುವುದಿಲ್ಲ. ಕತ್ತಲು, ಬೆಳಕು ಎಲ್ಲ ಒಂದೇ ನನಗೆ.

ಗೆಳೆಯ : ಗೊತ್ತು ನನಗೆ, ದಾರಿ ತೋರಿಸಲು ನಿನಗೆ ಕಂದೀಲು ಬೇಕಿಲ್ಲ. ಆದರೆ ಕಂದೀಲು ನಿನ್ನ ಹತ್ತಿರ ಇರದೇ ಹೋದರೆ, ದಾರಿಹೋಕರು ನಿನಗೆ ಡಿಕ್ಕಿ ಹೊಡೆಯಬಹುದು. ನಿನ್ನ ಜೊತೆ ಈ ಕಂದೀಲು ಇರಲಿ.

ಕುರುಡ ಕಂದೀಲು ಹಿಡಿದುಕೊಂಡು ರಸ್ತೆಯಲ್ಲಿ ನಡೆಯತೊಡಗಿದ. ಕತ್ತಲೆಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆಯೇ, ಒಬ್ಬ ದಾರಿಹೋಕ ಕುರುಡನಿಗೆ ಡಿಕ್ಕಿ ಹೊಡೆದ.

ಯಾಕೆ ದಾರಿ ಕಾಣುವುದಿಲ್ಲವೆ? ನನ್ನ ಕೈಯಲ್ಲಿರುವ ಕಂದೀಲಿನ ಬೆಳಕು ಕಾಣುವುದಿಲ್ಲವೆ? ಕುರುಡ ಚೀರಿದ.

ನಿನ್ನ ಕೈಯಲ್ಲಿರುವ ಕಂದೀಲು ಆರಿ ಹೋಗಿದೆ ಗೆಳೆಯ, ದಾರಿಹೋಕ ಉತ್ತರಿಸಿದ.

Leave a Reply