ಕೊಡುವ, ಹಂಚಿಕೊಳ್ಳುವ ಮತ್ತು ತ್ಯಾಗ ಮಾಡುವ ಇಚ್ಛಾಶಕ್ತಿ #೨ :

ಮೂಲ: ಎರಿಕ್ ಫ್ರಾಮ್; ಕನ್ನಡಕ್ಕೆ: ಚಿದಂಬರ ನರೇಂದ್ರ.
ಹಿಂದಿನ ಭಾಗ ಇಲ್ಲಿ ಓದಿ: https://aralimara.com/2023/08/06/fromm-43/

(ಮುಂದುವರೆದ ಭಾಗ…)

ಇನ್ನೊಬ್ಬರೊಡನೆ ಒಂದಾಗ ಬಯಸುವ ಮಾನವ ಬಯಕೆಯ ಮೂಲ ಇರುವುದು, ಮನುಷ್ಯರನ್ನು ವಿಶೇಷ ಜಾತಿ ಎಂದು ವರ್ಗೀಕರಿಸುವ ಅಸ್ತಿತ್ವದ ನಿರ್ದಿಷ್ಟ ಕಂಡಿಷನ್ ಗಳಲ್ಲಿ ಮತ್ತು ಇದು ಮಾನವ ನಡುವಳಿಕೆಯ ಅತ್ಯಂತ ಶಕ್ತಿಶಾಲಿ ಪ್ರೇರಣೆ ಕೂಡ. ಹೆಚ್ಚಿನ ತರ್ಕ ಸಾಮರ್ಥ್ಯ ಮತ್ತು ಗಣನೀಯವಾಗಿ ಕಡಿಮೆ ಪ್ರಮಾಣದ ಮೂಲ ಪ್ರವೃತ್ತಿಯ ಬಳಕೆಯಿಂದಾಗಿ ನಾವು ಮನುಷ್ಯರು, ಪ್ರಕೃತಿಯೊಂದಿಗಿನ ನಮ್ಮ ಮೂಲ ಏಕತ್ವವನ್ನ (oneness) ಕಳೆದುಕೊಂಡಿದ್ದೇವೆ. ಹುಚ್ಚುತನದಂಥ ಅತ್ಯಂತ ತೀವ್ರವಾದ ಪ್ರತ್ಯೇಕತಾ ಭಾವವನ್ನು (isolation) ಅನುಭವಿಸದಿರಲು ನಾವು ಹೊಸದೊಂದು ಏಕತ್ವವನ್ನು (unity) ಹುಡುಕಿಕೊಳ್ಳಬೇಕಾಗಿದೆ; ನಮ್ಮ ಸಹಜೀವಿಗಳ ಜೊತೆ, ಪ್ರಕೃತಿಯ ಜೊತೆಗೆ. ಇನ್ನೊಬ್ಬರೊಂದಿಗಿನ ಏಕತ್ವಕ್ಕಾಗಿನ ಈ ಮನುಷ್ಯ ಅವಶ್ಯಕತೆಯನ್ನ ಹಲವಾರು ರೀತಿಗಳಲ್ಲಿ ತುಂಬಿಕೊಳ್ಳಲಾಗುತ್ತದೆ : ತಾಯಿಯೊಂದಿಗಿನ ಸಹಜೀವನದಲ್ಲಿ, ವಿಗ್ರಹಗಳ ಮೂಲಕ, ತಮ್ಮ ಟ್ರೈಬ್, ದೇಶ, ವರ್ಗ, ಧರ್ಮ, ವೃತ್ತಿ ಬಾಂಧವರೊಂದಿಗೆ, ತಮ್ಮ ವೃತ್ತಿಪರ ಸಂಘಟನೆಗಳ ಮೂಲಕ. ಹೌದು ಹಲವಾರು ಬಾರಿ ಈ ಬಂಧಗಳು ಓವರ್ ಲ್ಯಾಪ್ ಆಗುತ್ತವೆ ಮತ್ತು ಬಹಳಷ್ಟು ಬಾರಿ ಭಾವೋನ್ಮಾದದ ರೂಪವನ್ನ ಧರಿಸುತ್ತವೆ ಕೆಲವು ಧಾರ್ಮಿಕ ಗುಂಪುಗಳಲ್ಲಿನ
ಜನರಲ್ಲಿ ಅಥವಾ ಹಿಂಸಾಚಾರಕ್ಕಿಳಿಯುವ ಜನಸಮೂಹಗಳಲ್ಲಿ (lynch mob) ಆಗುವಂತೆ, ಅಥವಾ ಯುದ್ಧಕಾಲದಲ್ಲಿ ದೇಶಗಳಲ್ಲಿ ಭುಗಿಲೇಳುವ ಸಮೂಹ ಭಾವೋನ್ಮಾದದಲ್ಲಿ (mass hysteria) ಆಗುವಂತೆ. ಉದಾಹರಣೆಗೆ ಮೊದಲ ಮಹಾಯುದ್ಧ ಶುರುವಾದಾಗ ಇಂಥ ಒಂದು ತೀವ್ರ ಏಕತ್ವದ ಭಾವೋನ್ಮಾದ ಕಂಡುಬಂದಿತು. ಎರಡನೇಯ ದಿನಕ್ಕೆನೇ ಜನ ತಾವು ಜೀವನದುದ್ದಕೂ ನಂಬಿಕೊಂಡು ಬಂದಿದ್ದ, ಶಾಂತಿ, ಸಹಬಾಳ್ವೆ, ಆ್ಯಂಟಿಮಿಲಿಟರಿಸಂ, ಸಮಾಜವಾದ ಮುಂತಾದವನ್ನು ಮೂಲೆಗೆಸೆದರು, ವಿಜ್ಞಾನಿಗಳು ವಸ್ತುನಿಷ್ಠತೆ, ಕ್ರಿಟಿಕಲ್ ಥಿಂಕಿಂಗ್, ನಿಷ್ಪಕ್ಷಪಾತ ಕುರಿತಾದ, ತಮ್ಮ ಹಲವಾರು ವರ್ಷಗಳ ತರಬೇತಿಯನ್ನ ಕಡೆಗಣಿಸಿ ಭಾವೋನ್ಮಾದಿ ಗುಂಪುಗಳ ಜೊತೆ ತಮ್ಮನ್ನು ತಾವು ಗುರುತಿಸಿಕೊಂಡರು.

ಇತರರೊಡನೆ ಒಂದಾಗುವ ಭಾವವನ್ನು ಅನುಭವಿಸುವ ಮನುಷ್ಯರ ಬಯಕೆ ಎರಡು ರೀತಿಗಳಲ್ಲಿ ಅಭಿವ್ಯಕ್ತಗೊಳ್ಳುತ್ತದೆ. ಮೊದಲನೇಯದು ಅವನ ಅತ್ಯಂತ ಕೆಳಮಟ್ಟದ ನಡುವಳಿಕೆಗಳಾದ ಸೇಡಿಸಂ ಮತ್ತು ವಿನಾಶದ ಕ್ರಿಯೆಗಳಲ್ಲಿ ಕಂಡುಬಂದರೆ, ಎರಡನೇಯದು ಅವನ ಅತ್ಯಂತ ಉಚ್ಚ ರೀತಿಯ ವರ್ತನೆಯಾದ ಆದರ್ಶ ಮತ್ತು ಸಂಕಲ್ಪಧಾರಿತ ಒಗ್ಗಟ್ಟಿನ ಪರಿಕಲ್ಪನೆಯಲ್ಲಿ. ಎಲ್ಲರೊಡನೆ ಹೊಂದಿಕೊಂಡು ಬಾಳುವ ಮನುಷ್ಯರ ಅವಶ್ಯಕತೆಯ ಮೂಲ ಕಾರಣವೂ ಇದೇ, ಮತ್ತು ಮನುಷ್ಯರು ಸಾಯುವುದಕ್ಕಿಂತ ಹೆಚ್ಚಾಗಿ ಬಹಿಷ್ಕಾರಕ್ಕೆ ಹೆದರುತ್ತಾರೆ. ಪ್ರತಿಯೊಂದು ಸಮಾಜಕ್ಕೆ ಯಾವುದು ತುಂಬ ಮುಖ್ಯ ಎಂದರೆ ಅದು ಸಧ್ಯದ ಸಮಾಜೋ ಆರ್ಥಿಕ ಸಂರಚನೆಯ ಪರಿಸ್ಥಿತಿಯಲ್ಲಿ ಯಾವ ರೀತಿಯ ಏಕತ್ವ ಮತ್ತು ಒಗ್ಗಟ್ಟನ್ನು ಬೆಳೆಸುತ್ತದೆ ಮತ್ತು ಉತ್ತೇಜಿಸುತ್ತದೆ ಎನ್ನುವುದು.

ಈ ಪರಿಗಣನೆಗಳು, ಎರಡೂ ರೀತಿಯ ಪ್ರವೃತ್ತಿಗಳು ಮನುಷ್ಯರಲ್ಲಿರುವುದನ್ನ ಸೂಚಿಸುತ್ತವೆ. : ಮೊದಲನೇಯದು to have ಭಾವ – ಸ್ವಾಧೀನಮಾಡಿಕೊಳ್ಳುವಿಕೆ – ಇದು ತನ್ನ ಸಾಮರ್ಥ್ಯವನ್ನ ಮನುಷ್ಯರ ಜೈವಿಕ ಅಂಶವಾದ ಬದುಕುವ ಬಯಕೆಯಲ್ಲಿ (desire for survival) ಪಡೆದುಕೊಂಡಿದೆ. ಮತ್ತು ಇನ್ನೊಂದು to be ಭಾವ – ಕೊಡುವುದು – ಹಂಚಿಕೊಳ್ಳುವುದು – ತ್ಯಾಗ ಮಾಡುವುದು – ಇದು ತನ್ನ ಸಾಮರ್ಥ್ಯವನ್ನ ಮಾನವ ಅಸ್ತಿತ್ವದ ನಿರ್ದಿಷ್ಟ ಸ್ಥಿತಿಗಳಲ್ಲಿ ಮತ್ತು ಇತರರೊಡನೆ ಒಂದಾಗುತ್ತ ಪ್ರತ್ಯೇಕತೆಯ ಭಾವವನ್ನು ಮೀರುವ ಮನುಷ್ಯರ ಅಂತರ್ಗತ ಅವಶ್ಯಕತೆಯಲ್ಲಿ ಕಂಡುಕೊಳ್ಳುತ್ತದೆ. ಮನುಷ್ಯರಲ್ಲಿಯ ಈ ಎರಡೂ ವೈರುಧ್ಯಗಳ ಹೆಣಗಾಟ ಗಮನಿಸಿದಾಗ ನಮಗೆ ಗೊತ್ತಾಗುವುದೇನೆಂದರೆ, ಸಮಾಜದ ರಚನೆ, ಅದರ ಮೌಲ್ಯಗಳು ಮತ್ತು ನಿಯಮಗಳು, ಯಾವ ಭಾವ ಮನುಷ್ಯರಲ್ಲಿ ಹೆಚ್ಚು ಪ್ರಬಲ ಎನ್ನುವುದನ್ನ ನಿರ್ಧರಿಸುತ್ತವೆ. ಮನುಷ್ಯರಲ್ಲಿಯ ಸ್ವಾಧೀನತೆಗಾಗಿ ಹಪಹಪಿಸುವ ಭಾವವನ್ನು ಉದ್ದೀಪಿಸುವ ಸಂಸ್ಕೃತಿಗಳು ಮತ್ತು ಆ ಮೂಲಕ ಅಸ್ತಿತ್ವದ having ವಿಧಾನವನ್ನು ಪೋಷಿಸುವುದರ ಮೂಲಕ ಒಂದು ಸಂಭಾವ್ಯತೆ (potential) ಕಂಡುಬಂದರೆ; being ಮತ್ತು sharing ವಿಧಾನವನ್ನು ಪೋಷಿಸುವ ಸಂಸ್ಕೃತಿಗಳ ಮೂಲ ಇರುವುದು ಮನುಷ್ಯರ ಇನ್ನೊಂದು ಸಂಭಾವ್ಯತೆಯಲ್ಲಿ. ಈ ಎರಡು ಸಂಭಾವ್ಯತೆಗಳಲ್ಲಿ ಯಾವುದನ್ನ ಬೆಳೆಸಿಕೊಳ್ಳಬೇಕು ಎನ್ನುವುದನ್ನ ನಾವು ನಿರ್ಧರಿಸಬೇಕು , ನಮ್ಮ ಈ ತೀರ್ಪನ್ನು ಕೂಡ ಬಹುತೇಕ ನಿರ್ಧರಿಸುವುದು ಮತ್ತು ಯಾವುದೋ ಒಂದು ಪರಿಹಾರದತ್ತ ನಮ್ಮನ್ನು ಎಳೆದುಕೊಂಡು ಹೋಗುವುದು ನಮ್ಮ ಸಮಾಜದ ಸಮಾಜೋ ಆರ್ಥಿಕ ಸಂರಚನೆ ಎನ್ನುವುದು ನಮಗೆ ಗೊತ್ತಿದ್ದರೂ.

ಗುಂಪುಗಳ ನಡುವಳಿಕೆಯನ್ನ ನಾನು ಗಮನಿಸಿದ ಹಾಗೆ, ನನ್ನ ಅತ್ಯುತ್ತಮ ಊಹೆ ಏನೆಂದರೆ, ತೀವ್ರ ಮತ್ತು ಬದಲಾಯಿಸಲು ಆಗಲಾರಂಥ having ಮತ್ತು being ನ ಅಭಿವ್ಯಕ್ತಿಸುತ್ತಿರುವ ಎರಡು ಅಪಾರ ವೈರುಧ್ಯದ ಗುಂಪುಗಳು ಸಂಖ್ಯೆ ಬಹಳ ಕಡಿಮೆ ; ಬಹಳಷ್ಟು ಗುಂಪುಗಳಲ್ಲಿ ಈ ಎರಡೂ ವಿಧಾನಗಳು ಇರುವ ಸಾಧ್ಯತೆ ಅಧಿಕ ಮತ್ತು ಯಾವ ವಿಧಾನ ಇನ್ನೊಂದಕ್ಕಿಂತ ಪ್ರಬಲವಾಗಿರುತ್ತದೆ ಎನ್ನುವುದು ಪರಿಸರದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.

ನನ್ನ ಈ ಅನಿಸಿಕೆ ಬಹಳಷ್ಟು ಪ್ರಚಲಿತದಲ್ಲಿರುವ ಮನೋವಿಶ್ಲೇಷಣೆಯ ಸಿದ್ಧಾಂತಗಳಿಗೆ (dogma) ವ್ಯತಿರಿಕ್ತವಾಗಿದೆ, ಈ ಸಿದ್ಧಾಂತಗಳ ಪ್ರಕಾರ, ಶಿಶುತನ ಮತ್ತು ಬಾಲ್ಯದಲ್ಲಿ ಮಾತ್ರ ಪರಿಸರ ಮನುಷ್ಯರ ವ್ಯಕ್ತಿತ್ವದ ಬೆಳವಣಿಗೆಯ ಮೇಲೆ ಅವಶ್ಯಕ ಪರಿಣಾಮ ಬೀರುತ್ತದೆಯೇ ಹೊರತು ಈ ಅವಧಿಯ ನಂತರ ಮನುಷ್ಯ ಸ್ವಭಾವಗಳು ಬಹುತೇಕ ಫಿಕ್ಸ್ಡ್ ಆಗಿರುತ್ತವೆ ಮತ್ತು ಹೊರಗಿನ ವಿದ್ಯಮಾನಗಳು ಮನುಷ್ಯ ಸ್ವಭಾವದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಈ ಸಿದ್ಧಾಂತ ಹೆಚ್ಚು ಸ್ವೀಕೃತಿಯನ್ನು ಗಳಿಸಲು ಮುಖ್ಯ ಕಾರಣ ಏನೆಂದರೆ, ಬಹುತೇಕ ಸಾಮಾಜಿಕ ಸ್ಥಿತಿಗಳಲ್ಲಿ ಅಂಥದೇನೂ ಬದಲಾವಣೆ ಆಗಿರುವುದಿಲ್ಲವಾದ್ದರಿಂದ ಜನರ ಬಾಲ್ಯದ ಗುಣ ಸ್ವಭಾವಗಳೇ ಅವರ ಮುಂದಿನ ವಯಸ್ಸಿಗೂ ಕಂಟಿನ್ಯೂ ಆಗಿರುವುದು. ಆದರೆ ತೀವ್ರ ಪರಿಸರ ಬದಲಾವಣೆಯ ಕಾರಣವಾಗಿ ಮನುಷ್ಯರ ಗುಣ ಸ್ವಭಾವದಲ್ಲಿ ಮೂಲಭೂತ ಬದಲಾವಣೆ ಆಗಿರುವ ಹಲವಾರು ಉದಾಹರಣೆಗಳನ್ನು ನಾವು ಕಾಣಬಹುದು. ಯಾವಾಗ ಋಣಾತ್ಮಕ ಒತ್ತಡಗಳು ಇಲ್ಲದಾಗುತ್ತವೆಯೋ ಆಗ ಧನಾತ್ಮಕ ಒತ್ತಡಗಳಿಗೆ ಪೋಷಣೆ ಮತ್ತು ಉತ್ತೇಜನ ಸಿಗುತ್ತದೆ.

ಈ ಎಲ್ಲವನ್ನೂ ಒಟ್ಟು ಮಾಡಿ ಹೇಳುವುದಾದರೆ, ಮನುಷ್ಯರ ಕೊಡುವ, ಹಂಚಿಕೊಳ್ಳುವ, ತ್ಯಾಗಮಾಡುವ ಬಯಕೆಯ ಫ್ರಿಕ್ವೆನ್ಸಿ ಮತ್ತು ತೀವ್ರತೆ ಅಷ್ಟು ಆಶ್ಚರ್ಯಕರವೇನೂ ಅಲ್ಲ ಒಂದುವೇಳೆ ನಾವು ಮನುಷ್ಯ ಜಾತಿಯ ಅಸ್ತಿತ್ವದ ಕಂಡಿಷನ್ ಗಳನ್ನು ಪರಿಗಣಿಸಿದ್ದಾದರೆ. ಯಾವುದು ಆಶ್ಚರ್ಯಕರ ಎಂದರೆ ಮನುಷ್ಯರ ಈ ಅವಶ್ಯಕತೆಯನ್ನ ಎಷ್ಟು ಹತ್ತಿಕ್ಕಲಾಗಿದೆ ಎನ್ನುವುದು, ಸ್ವಾರ್ಥಮಯ ಕ್ರಿಯೆಗಳು ಕೈಗಾರಿಕಾ ( ಮತ್ತು ಇನ್ನೂ ಬೇರೆ) ಸಮಾಜವನ್ನು ಆಳುತ್ತಿವೆ ಮತ್ತು ಸಮಾಜದಲ್ಲಿ ಏಕತ್ವ, ಒಗ್ಗಟ್ಟು ಎನ್ನುವುದು ಅಪರೂಪವಾಗಿಬಿಟ್ಟಿವೆ. ಆದರೆ ದ್ವಂದ್ವ ಏನೆಂದರೆ, ಈ ವಿದ್ಯಮಾನಕ್ಕೆ ಕಾರಣವೇ ಮನುಷ್ಯರ ಏಕತ್ವದ ಅವಶ್ಯಕತೆ. ಸಮಾಜ, ಯಾವುದರ ತತ್ವಗಳು ಸ್ವಾಧೀನಪಡಿಸಿಕೊಳ್ಳುವಿಕೆ , ಲಾಭ ಮಾಡಿಕೊಳ್ಳುವಿಕೆಯಾಗಿದೆಯೋ ಮತ್ತು ಆಸ್ತಿ having ರೀತಿಯ ಸಾಮಾಜಿಕ ಸ್ವಭಾವವನ್ನು ಸೃಷ್ಟಿಸುತ್ತಿದೆಯೋ ಅಂಥ ಸಮಾಜಗಳಲ್ಲಿ ಒಮ್ಮೆ ಪ್ರಬಲ ಮಾದರಿ ಸಿದ್ಧವಾಗಿಬಿಟ್ಟಿತೆಂದರೆ, ಯಾರೂ ಈ ಮಾದರಿಗೆ ಹೊರಗಿನವರಾಗಿರಲು ಬಯಸುವುದಿಲ್ಲ ಅಥವಾ ಇಂಥ ಮಾದರಿಯಿಂದ ಬಹಿಷ್ಕೃತರಾಗಿರಲು ಬಯಸುವುದಿಲ್ಲ ; ಇಂಥ ರಿಸ್ಕ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರತಿಯೊಬ್ಬರೂ ಬಹುಸಂಖ್ಯಾತರೊಂದಿಗೆ ಹೊಂದಿಕೊಳ್ಳುತ್ತಾರೆ, ಅವರ ನಡುವೆ ಕಾಮನ್ ಆಗಿರುವುದು ಪರಸ್ಪರ ನಡುವಿನ ವಿರೋಧಾಭಾಸ (antagonism) ಮಾತ್ರ.

ಸ್ವಾರ್ಥವು ಅತ್ಯಂತ ಪ್ರಬಲ ಪ್ರವೃತ್ತಿಯಾಗಿದ್ದಾಗ ನಮ್ಮ ಸಮಾಜಗಳ ನಾಯಕರು, ಭೌತಿಕ ವಸ್ತುಗಳ ಆಮಿಷವನ್ನು ಜನರ ಮುಂದಿಟ್ಟರೆ ಮಾತ್ರ ಅವರನ್ನು ಮೋಟಿವೇಟ್ ಮಾಡಬಹುದು (ಉದಾಹರಣೆಗೆ ಉಡುಗೊರೆಗಳು), ಮತ್ತು ಜನ ಒಗ್ಗಟ್ಟು ಮತ್ತು ತ್ಯಾಗದಂಥ ಸಂಗತಿಗಳಿಗೆ ಮಣೆ ಹಾಕುವುದಿಲ್ಲ ಎಂದು ತಿಳಿದುಕೊಂಡಿರುತ್ತಾರೆ. ಹಾಗಾಗಿ ಯುದ್ಧದಂಥ ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ಒಗಟ್ಟು ಮತ್ತು ತ್ಯಾಗದಂಥ ಸಂಗತಿಗಳಿಗೆ ಬೇರೆ ಸಂದರ್ಭಗಳಲ್ಲಿ ಮನವಿಯನ್ನು ಮಾಡಲಾಗುವುದಿಲ್ಲ ಮತ್ತು ಈ ಕಾರಣವಾಗಿಯೇ ಇಂಥದೊಂದು ಮನವಿ ಉಂಟು ಮಾಡಬಹುದಾಗಿದ್ದ ಪರಿಣಾಮಗಳನ್ನು ಅರಿತುಕೊಳ್ಳುವ ಅವಕಾಶವನ್ನು ಕಳೆದುಕೊಳ್ಳಲಾಗಿದೆ.

ಕೇವಲ ಕ್ರಾಂತಿಕಾರಿಯಾಗಿ ವಿಭಿನ್ನವಾದ ಸಮಾಜೋ ಆರ್ಥಿಕ ಸಂರಚನೆ ಮತ್ತು ಕ್ರಾಂತಿಕಾರಿಯಾಗಿ ವಿಭಿನ್ನವಾದ ಮಾನವ ಸ್ವಭಾವದ ಚಿತ್ರ ಮಾತ್ರ, ಜನರಿಗೆ ಆಮಿಷ ಒಡ್ಡುವುದೊಂದೇ ಜನರನ್ನು ಪ್ರಭಾವಿಸುವ ದಾರಿ ಅಲ್ಲ ಎನ್ನುವುದನ್ನ ತೋರಿಸಿಕೊಡಬಲ್ಲದು.

******************************

1 Comment

Leave a Reply