ಹಸಿವಾದಾಗ ಊಟ ಮಾಡುವುದು, ನಿದ್ದೆ ಬಂದಾಗ ಮಲಗಿಕೊಳ್ಳುವುದು, ನಿಮಗೆ ಸಾಧ್ಯವಾಗಬಹುದಾದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ ಯಾವುದೂ ಇಲ್ಲ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಮೀನಿನ ಬಲೆಯ ಕೆಲಸ
ಮೀನು ಹಿಡಿಯುವುದು ಮಾತ್ರ
ಮೀನು ಸಿಕ್ಕ ಮೇಲೆ
ಬಲೆಗೆ ಏನು ಕೆಲಸ?
ಶಬ್ದದ ಉದ್ದೇಶವೇ
ವಿಷಯ ತಿಳಿಸುವುದು
ವಿಷಯ ತಿಳಿದ ಮೇಲೆ
ಶಬ್ದಗಳಿಗೇನು ಕೆಲಸ?
ಶಬ್ದಗಳನ್ನು ಮರೆತ ಮನುಷ್ಯ
ಎಲ್ಲಿ ಸಿಗುತ್ತಾನೆ?
ಕೊಂಚ ಮಾತಾಡಬೇಕಲ್ಲ
ಅವನೊಂದಿಗೆ.
~ ಜುವಾಂಗ್-ತ್ಸೆ
*****************
ಒಮ್ಮೆ ಝೆನ್ ಮಾಸ್ಟರ್ ರಿಂಝೈ ನ ಪ್ರಶ್ನೆ ಮಾಡಲಾಯಿತು.
“ನಿನ್ನ ಸಾಧನೆಯ ರೀತಿ ಯಾವುದು? ನಿನ್ನ ಅಧ್ಯಾತ್ಮಿಕ ಆಚರಣೆ ಯಾವುದು?”
ಮಾಸ್ಟರ್ ರಿಂಝೈ ಉತ್ತರಿಸಿದ.
“ಅಂಥ ವಿಶೇಷ ಏನಿಲ್ಲ, ಕೊಚ್ಚಿಕೊಳ್ಳುವಂಥದು ಏನೂ ಇಲ್ಲ. ನನ್ನ ಅಧ್ಯಾತ್ಮಿಕ ಆಚರಣೆ ಬಹಳ ಸರಳವಾದದ್ದು. ನಾನು ಹಸಿವಾದಾಗ ಊಟ ಮಾಡುತ್ತೇನೆ, ನಿದ್ದೆ ಬಂದಾಗ ಮಲಗಿಕೊಳ್ಳುತ್ತೇನೆ”.
“ನಾವೆಲ್ಲ ಮಾಡೋದು ಇದನ್ನೇ ಅಲ್ಲವೆ? “ ಮಾಸ್ಟರ್ ನ ಇನ್ನೊಮ್ಮೆ ಪ್ರಶ್ನೆ ಮಾಡಲಾಯಿತು.
ಮಾಸ್ಟರ್ ರಿಂಝೈ ಮತ್ತೆ ಉತ್ತರಿಸಿದ…..
“ಇಲ್ಲೇ ನೀವೆಲ್ಲ ತಪ್ಪು ಮಾಡೋದು. ನಿನ್ನ ಮಾತನ್ನ ವಾಪಸ್ ತೆಗೆದುಕೋ. ಒಮ್ಮೆ ನಾನು ನಿಮ್ಮ ಹಾಗೆ ಬದುಕುತ್ತಿದ್ದೆನಾದ್ದರಿಂದ ನನಗೆ ಈ ಎರಡೂ ಬದುಕುಗಳ ನಡುವಿನ ವ್ಯತ್ಯಾಸ ಗೊತ್ತು. ಹಸಿವಾದಾಗ ಊಟ ಮಾಡುವುದು, ನಿದ್ದೆ ಬಂದಾಗ ಮಲಗಿಕೊಳ್ಳುವುದು, ಅಷ್ಟು ಸುಲಭದ ಸಾಧನೆ ಅಲ್ಲ. ನೀವು ಹಸಿವೆ ಇರದೇ ಇದ್ದರೂ ತಿನ್ನುತ್ತೀರಿ. ಇದು ಊಟ ಮಾಡುವ ಸಮಯ ಎಂದು ಊಟ ಮಾಡುತ್ತೀರಿ. ಆಹಾರ ರುಚಿಯಾಗಿದೆ ಎಂದು ತಿನ್ನುತ್ತೀರಿ, ಯಾರೋ ನಿಮ್ಮನ್ನು ಊಟಕ್ಕೆ ಕರೆದಿರುವರೆಂದು ತಿನ್ನುತ್ತೀರಿ, ನಿಮಗೆ ಯಾವುದು ಅವಶ್ಯಕ ಎನ್ನುವುದರ ಬಗ್ಗೆ ನೀವು ಯೋಚನೆಯನ್ನೇ ಮಾಡುವುದಿಲ್ಲ. ನೀವು ಸರಿಯಾದ ಸಮಯಕ್ಕೆ ಮಲಗಿಬಿಡುತ್ತೀರಿ ಏಕೆಂದರೆ ಮಲಗುವುದು ನಿಮಗೆ ಹವ್ಯಾಸವಾಗಿಬಿಟ್ಟಿದೆ. ಯಾವುದು ಬೇಕು ಯಾವುದು ಬೇಡ ಎನ್ನುವುದು ನಿಮಗೆ ಮುಖ್ಯ ಆಗುವುದೇ ಇಲ್ಲ. ತಿನ್ನುವಾಗ ನೀವು ಸುಮ್ಮನೇ ತಿನ್ನುವುದಿಲ್ಲ, ಜೊತೆಗೆ ನೂರಾರು ವಿಷಯಗಳ ಬಗ್ಗೆ ವಿಚಾರ ಮಾಡುತ್ತೀರಿ. ಹಾಗೆಯೇ ನಿದ್ದೆ ಮಾಡುವಾಗ ಕೂಡ, ನೀವು ಕೇವಲ ನಿದ್ದೆ ಮಾಡುವುದಿಲ್ಲ, ಕನಸು ಕಾಣಲು ಶುರು ಮಾಡುತ್ತಿರಿ. ಇಡೀ ರಾತ್ರಿ ನಿಮ್ಮ ಮನಸ್ಸು ಕನಸುಗಳ ಮೇಲೆ ಕನಸುಗಳನ್ನ ಕಟ್ಟಿಕೊಳ್ಳುತ್ತ ಹೋಗುತ್ತದೆ”.
ಹಸಿವಾದಾಗ ಊಟ ಮಾಡುವುದು, ನಿದ್ದೆ ಬಂದಾಗ ಮಲಗಿಕೊಳ್ಳುವುದು, ನಿಮಗೆ ಸಾಧ್ಯವಾಗಬಹುದಾದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೆ ಯಾವುದೂ ಇಲ್ಲ.
ಒಮ್ಮೆ ಮಾಸ್ಟರ್ ಸೆಯೂಂಗ್ ಸಾನ್ ತನ್ನ ಶಿಷ್ಯರಿಗೆ ಪಾಠ ಮಾಡುತ್ತಿದ್ದ.
ಊಟ ಮಾಡುವಾಗ ಬರೀ ಊಟ ಮಾಡಬೇಕು.
ಪತ್ರಿಕೆ ಓದುವಾಗ ಬರೀ ಪತ್ರಿಕೆ ಓದಬೇಕು.
ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೇನನ್ನೂ ಮಾಡಬಾರದು.
ಒಂದು ದಿನ ಶಿಷ್ಯನೊಬ್ಬ, ಮಾಸ್ಟರ್ ಪತ್ರಿಕೆ ಓದುತ್ತಾ ಊಟ ಮಾಡುತ್ತಿರುವುದನ್ನು ನೋಡಿದ.
ಮಾಸ್ಟರ್, ನೀವು ಈಗ ಮಾಡುತ್ತಿರುವುದು, ನೀವು ಹೇಳಿಕೊಟ್ಟ ಪಾಠಕ್ಕೆ ವಿರುದ್ಧವಾಗಿದೆಯಲ್ಲವೆ? ಆಶ್ಚರ್ಯಚಕಿತನಾಗಿ ಕೇಳಿದ.
ಸೆಯೂಂಗ್ ಸಾನ್ ಉತ್ತರಿಸಿದ,
ಪತ್ರಿಕೆ ಓದುತ್ತಾ ಊಟಮಾಡುವಾಗ, ಕೇವಲ ಪತ್ರಿಕೆ ಓದುತ್ತಾ ಊಟಮಾಡಬೇಕು.

