ಪ್ರಜ್ಞೆಯ ಬೀಜ ಇಡೀ ಅಸ್ತಿತ್ವದ ಬೀಜ : ಓಶೋ ವ್ಯಾಖ್ಯಾನ

ನೀವು ಸಂಕಟವನ್ನ ಅನುಭವಿಸುತ್ತಿರುವುರಾದರೆ ಅದನ್ನ ನೀವೇ ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವುದು… | ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ದುಃಖಿ ಜನರಲ್ಲಿ
ಒಂದು ಸಾಮಾನ್ಯ ಸಂಗತಿ
ಗಮನಿಸಿದ್ದೀಯಾ ಹಾಫಿಜ್ ?

ಅವರೆಲ್ಲ ಕಟ್ಟಿಕೊಂಡಿರುತ್ತಾರೆ
ತಮ್ಮ ತಮ್ಮ ಭೂತಕ್ಕೊಂದು
ಗುಡಿ.

ಆಗಿಂದಾಗ್ಗೇ
ಆರ್ತರಾಗುತ್ತಾರೆ ಆ ಗುಡಿಯನ್ನು
ಪ್ರವೇಶ ಮಾಡಿ,
ಆರಾಧನೆ ಮಾಡುತ್ತಾರೆ ದೀನರಾಗಿ.

ಖುಶಿ
ಅವರ ಬದುಕಿನಲ್ಲಿ
ಮತ್ತೆ ಮನೆಮಾಡಬೇಕಾದರೆ
ಏನು ಮಾಡಬೇಕು ?

ಅಷ್ಟೊಂದು ಧಾರ್ಮಿಕರಾಗುವುದನ್ನ
ನಿಲ್ಲಿಸಿಬಿಡಬೇಕು ಕೂಡಲೇ.

– ಹಾಫಿಜ್


ಸ್ವರ್ಗ ಮತ್ತು ನರಕಗಳು ಅಪ್ರಸ್ತುತ. ಏಕೆಂದರೆ ನೀವು ಪೂರ್ಣ ಅರಿವು ಹೊಂದಿದಾಗ ನರಕ ಮಾಯವಾಗುತ್ತದೆ – ನರಕ ಯಾವುದೆಂದರೆ ನೀವು ಅರಿವು ಹೊಂದಿರದಿರುವುದೇ ನರಕ. ನೀವು ಪೂರ್ಣ ಅರಿವನ್ನು ಸಾಧಿಸಿದಾಗ ಸ್ವರ್ಗ ಎದುರಾಗುತ್ತದೆ.

ಸ್ವರ್ಗ ಮತ್ತು ನರಕ ಎನ್ನುವ ಜಿಯಾಗ್ರಾಫಿಕಲ್ ಜಾಗಗಳು ಇಲ್ಲ. ಒಂದು ದಿನ ನೀವು ಸಾಯುತ್ತೀರಿ ಆಗ ದೇವರು ನೀವು ಮಾಡಿದ ಕರ್ಮಗಳ ಆಧಾರದ ಮೇಲೆ, ನೀವು ಭೂಮಿಯ ಮೇಲೆ ಮಾಡಿದ ಒಳ್ಳೆಯ ಅಥವಾ ಕೆಟ್ಟ ಕೆಲಸಗಳನ್ನು ಲೆಕ್ಕ ಮಾಡಿ ನಿಮ್ಮನ್ನ ಸ್ವರ್ಗಕ್ಕೆ ಅಥವಾ ನರಕಕ್ಕೆ ಕಳಿಸುತ್ತಾನೆ ಎಂದೆಲ್ಲ ದಡ್ಡರಂತೆ ಯೋಚಿಸಬೇಡಿ. ಇಲ್ಲ, ಸ್ವರ್ಗ ನರಕ ಬೇರೆಲ್ಲೂ ಇಲ್ಲ ಈ ಎರಡನ್ನೂ ನೀವು ನಿಮ್ಮೊಳಗೇ ಇಟ್ಟುಕೊಂಡಿದ್ದೀರಿ.

ನೀವು ಚಲಿಸಿದಾಗಲೆಲ್ಲ ನಿಮ್ಮ ಜೊತೆ ನೀವು ಸ್ವರ್ಗ ಅಥವಾ ನರಕವನ್ನ ಕ್ಯಾರಿ ಮಾಡುತ್ತಿರುತ್ತೀರಿ.

ಅಕಸ್ಮಾತ್ ದೇವರು ನಿಮಗೆ ಎದುರಾದರೆ ನೀವು ಅವನನ್ನು ಗುರುತಿಸುವುದಿಲ್ಲ. ನಿಮ್ಮೊಳಗೆ ನೀವು ನರಕವನ್ನು ಹೊತ್ತುಕೊಂಡಿದರೆ ನೀವು ದೇವರ ಮೇಲೂ ನಿಮ್ಮ ನರಕವನ್ನು ಪ್ರೊಜೆಕ್ಟ್ ಮಾಡುತ್ತೀರಿ. ನೀವು ನರಕವನ್ನು ಹೊತ್ತುಕೊಂಡಿರುವಾಗ ನಿಮ್ಮ ಪ್ರತಿಯೊಂದು ಭೇಟಿಯೂ ನಿಮಗೆ ಸಾವಿನ ಅನುಭವ ನೀಡುತ್ತದೆ.
ನಿಮ್ಮನ್ನು ಭೇಟಿಯಾದ ಪ್ರಯೊಂದೂ ನಿಮಗೆ ಸಹಿಸಲಸಾಧ್ಯವಾದ ಸಂಕಟವನ್ನು ಉಂಟು ಮಾಡುತ್ತದೆ. ನೀವು ಪ್ರಜ್ಞಾರಹಿತರಾಗಿದ್ದೀರಿ.

ಪ್ರಜ್ಞೆಯ ಬೀಜ ಇಡೀ ಅಸ್ತಿತ್ವದ ಬೀಜ.

ನೆನಪಿರಲಿ, ನೀವು ಸಂಕಟವನ್ನ ಅನುಭವಿಸುತ್ತಿರುವುರಾದರೆ ಅದನ್ನ ನೀವೇ ಪ್ರಜ್ಞಾಪೂರ್ವಕವಾಗಿ ಅಥವಾ ಅಪ್ರಜ್ಞಾಪೂರ್ವಕವಾಗಿ, ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಯ್ಕೆ ಮಾಡಿಕೊಂಡಿರುವುದು. ಇದು ನಿಮ್ಮ ಆಯ್ಕೆ ಆದ್ದರಿಂದ ಇದಕ್ಕೆ ನೀವೇ ಬಾಧ್ಯಸ್ಥರು. ಬೇರೆ ಯಾರೂ ನಿಮ್ಮ ಸಂಕಟಕ್ಕೆ ಕಾರಣರಲ್ಲ ಹಾಗೆಯೇ ಖುಶಿಗೆ ಕೂಡ.

ತೀವ್ರ ಕಿವುಡುತನದಿಂದ ಬಳಲುತ್ತಿದ್ದ ನಸ್ರುದ್ದೀನ್ ಗೆ ಪ್ರಸಿದ್ಧ ಕಂಪನಿಯೊಂದು ತಾನು ಹೊಸದಾಗಿ ಕಂಡುಹಿಡಿದಿದ್ದ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾದ hearing aid ನ್ನು ಟೆಸ್ಟ್ ಮಾಡಲು ಕೊಟ್ಟಿತ್ತು. ಒಂದು ವಾರದ ನಂತರ ನಸ್ರುದ್ದೀನ್ ನನ್ನು ಭೇಟಿಯಾದ ಕಂಪನಿಯ ಇಂಜಿನಿಯರ್ ಪ್ರಶ್ನೆ ಮಾಡಿದ,

“ ಹೊಸ Hearing aid ನ ಅನುಭವ ಹೇಗಿದೆ ನಸ್ರುದ್ದೀನ್ ? ಖುಶಿಯಾಯಿತಾ ?, ಮನೆಯವರಿಗೆ ನೀನು ಇದನ್ನ ಬಳಸುತ್ತಿರುವುದು ಗೊತ್ತಾಯಿತಾ ?”

“ ತುಂಬ ಕಷ್ಟ ಇದು, ಒಂದು ವಾರದಲ್ಲಿ ನಾನು ಮೂರು ಸಲ ನನ್ನ ವಿಲ್ ಬದಲಾಯಿಸಿದೆ”

ನಸ್ರುದ್ದೀನ್, Hearing aid ಕುರಿತಂತೆ ತನ್ನ ಫೀಡ್ ಬ್ಯಾಕ್ ಕೊಟ್ಟ.


Source: OSHO/ Vigyan Bhairav Tantra Volume 2

Leave a Reply