ಲಾವೋತ್ಸೇ ತನ್ನ ಅಹಂ ನ ಶರಣಾಗಿಸಿದ, ತನ್ನ ಅಂಟುಕೊಳ್ಳುವಿಕೆಯನ್ನ ಶರಣಾಗಿಸಿದ. ಯಾವುದು ಬೇಕು ಯಾವುದು ಬೇಡ ಎನ್ನುವ ತಾರತಮ್ಯದ ಬುದ್ಧಿಯನ್ನ ಶರಣಾಗಿಸಿದ. ತನ್ನನ್ನು ಕಟ್ಟಿಹಾಕಿದ್ದ ಎಲ್ಲ ಬಂಧನಗಳನ್ನು ಬಿಚ್ಚಿಹಾಕಿ ಎಲೆಯಂತೆ ಬದುಕಿನ ಹರಿವಿನೊಂದಿಗೆ ಒಂದಾದ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ
ಖಾಲಿ ಕಣಿವೆಯ ಚೈತನ್ಯ, ಅನನ್ಯ.
ಅಂತೆಯೇ ತಾವೋ ಮಹಾಮಾಯಿ
ಸಕಲ ಜಗತ್ತುಗಳ ಹಡೆದವ್ವ.
ಗಾಳಿಯ ಹಾಗೆ ಕಾಣಿಸದಿದ್ದರೂ
ಉಸಿರಿನ ಹಾಗೆ ಸರಾಗ.
~ ಲಾವೋತ್ಸೇ
ಒಂದು ಮರದಿಂದ ಒಣಗಿದ ಎಲೆ ಉದುರಿ ಬೀಳುವುದನ್ನ ನೋಡಿ ಲಾವೋತ್ಸೇ ಗೆ ಜ್ಞಾನೋದಯವಾಯಿತು. ಎಲೆ ಮರದಿಂದ ಕಳಚಿಕೊಂಡು ಹಾರುತ್ತ ನೆಲವನ್ನು ಮುಟ್ಟುವುದನ್ನ ನೋಡಿಯೇ ಲಾವೋತ್ಸೇ ಗೆ ಜ್ಞಾನೋದಯವಾಯಿತು.
ಯಾಕೆ ಹೀಗೆ? ಅಲ್ಲಿ ಆದದ್ದಾದರೂ ಏನು? ಒಣಗಿದ ಮರದಿಂದ ಬಿಡಿಸಿಕೊಂಡು ಗಾಳಿಯ ರೆಕ್ಕೆಯನ್ನೇರಿ, ತನ್ನನ್ನು ತಾನು ಗಾಳಿಗೆ ಶರಣಾಗಿಸಿಕೊಂಡು, ತನ್ನದೇ ಆದ ಯಾವುದೂ ಆಲೋಚನೆಗಳಿಲ್ಲದೇ, ಯಾವ ಬಯಕೆಗಳಿಲ್ಲದೇ ನಿರಾತಂಕವಾಗಿ ಹಾರುವುದನ್ನ ನೋಡಿದಾಗ ಲಾವೋತ್ಸೆಗೆ ಬದುಕಿನ ಸತ್ಯದ ದರ್ಶನವಾಯಿತು. ಎಲ್ಲರಿಗೂ ಸುಮ್ಮನೇ ಹೀಗೆ ಎಲೆ ನೆಲಕ್ಕೆ ಬೀಳುವ ದೃಶ್ಯ ಕಂಡು ಜ್ಞಾನೋದಯವಾಗುವುದಿಲ್ಲ. ಬಹುಶಃ ಲಾವೋತ್ಸೇ ಜ್ಞಾನೋದಯಕ್ಕೆ ಪಕ್ವವಾಗಿ ಸಿದ್ಧನಾಗಿದ್ದ. ಮತ್ತು ಆ ದೃಶ್ಯವನ್ನು ನೋಡಿದ ಕ್ಷಣದಲ್ಲಿ ತಾನೂ ಗಾಳಿಯ ಅಲೆಯೇರಿದ ಒಣಗಿದ ಎಲೆಯಂತಾದ.
ಲಾವೋತ್ಸೇ ತನ್ನ ಅಹಂ ನ ಶರಣಾಗಿಸಿದ, ತನ್ನ ಅಂಟುಕೊಳ್ಳುವಿಕೆಯನ್ನ ಶರಣಾಗಿಸಿದ. ಯಾವುದು ಬೇಕು ಯಾವುದು ಬೇಡ ಎನ್ನುವ ತಾರತಮ್ಯದ ಬುದ್ಧಿಯನ್ನ ಶರಣಾಗಿಸಿದ. ತನ್ನನ್ನು ಕಟ್ಟಿಹಾಕಿದ್ದ ಎಲ್ಲ ಬಂಧನಗಳನ್ನು ಬಿಚ್ಚಿಹಾಕಿ ಎಲೆಯಂತೆ ಬದುಕಿನ ಹರಿವಿನೊಂದಿಗೆ ಒಂದಾದ. ಹೀಗೆ ನೆಲಕ್ಕೆ ಬೀಳುತ್ತಿದ್ದ ಒಣಗಿದ ಎಲೆ ಲಾವೋತ್ಸೆಯ ಸಾಕ್ಷಾತ್ಕಾರಕ್ಕೆ ಕಾರಣವಾಯಿತು.
ಒಂದು ದಿನ ಝೆನ್ ಮಾಸ್ಟರ್, ತನ್ನ ಐವರು ಶಿಷ್ಯರು ದಾರಿಯಲ್ಲಿ ಸೈಕಲ್ ಮೇಲೆ ಬರುತ್ತಿರುವುದನ್ನ ಗಮನಿಸಿದ. ಅವರು ಸೈಕಲ್ ನಿಂದ ಇಳಿದೊಡನೆ ನೇರವಾಗಿ ಅವರ ಹತ್ತಿರ ಹೋಗಿ ಪ್ರಶ್ನೆ ಮಾಡಿದ. “ ನೀವು ಯಾಕೆ ಸೈಕಲ್ ಮೇಲೆ ಪ್ರಯಾಣ ಮಾಡುತ್ತಿದ್ದೀರಿ? “
ಮೊದಲ ಶಿಷ್ಯ ಉತ್ತರಿಸಿದ. “ ಆಲೂಗಡ್ಡೆ ಮೂಟೆ ಬೆನ್ನ ಮೇಲೆ ಹೊತ್ತು ತರುವುದು ಕಷ್ಟ ಮಾಸ್ಟರ್ ಅದಕ್ಕೇ ಸೈಕಲ್ ಉಪಯೋಗ ಮಾಡುತ್ತಿದ್ದೀನಿ”
“ ಜಾಣ ನೀನು” ಮಾಸ್ಟರ್ ಉತ್ತರಿಸಿದರು. “ವಯಸ್ಸಾದ ಮೇಲೆ ನೀನು, ನನ್ನ ಹಾಗೆ ಬೆನ್ನು ಬಾಗಿಸಿಕೊಂಡು ಓಡಾಡಬೇಕಿಲ್ಲ”
ಎರಡನೇಯ ಶಿಷ್ಯ ಉತ್ತರಿಸಿದ “ ದಾರಿ ಬದಿಯ ಗಿಡ ಮರಗಳು, ಹೊಲ ಗದ್ದೆಗಳನ್ನು ನೋಡುವುದೆಂದರೆ ನನಗೆ ಖುಶಿ ಮಾಸ್ಟರ್, ಅದಕ್ಕೇ ಸೈಕಲ್ ಹತ್ತಿ ವಿಹಾರಕ್ಕೆ ಹೋಗಿದ್ದೆ”
“ ಒಳ್ಳೆಯ ವಿಷಯ, ನಿನಗೆ ಒಳ್ಳೆಯ ಕಣ್ಣಗಳಿವೆ, ತೆರೆದ ಕಣ್ಣುಗಳಿಂದ ಜಗತ್ತನ್ನ ಗಮನಿಸುತ್ತಿದ್ದೀಯಾ” ಮಾಸ್ಟರ್ ಉತ್ತರಿಸಿದರು.
ಮೂರನೇಯ ಶಿಷ್ಯ ಉತ್ತರಿಸಿದ “ ಸೈಕಲ್ ನ ಪೆಡಲ್ ತುಳಿಯುವಾಗಲೆಲ್ಲ ನಾನು ಮಂತ್ರ ಪಠಣ ಮಾಡುತ್ತೇನೆ ಮಾಸ್ಟರ್, ಸೈಕಲ್ ತುಳಿಯುವುದು ನನಗೆ ಮನಸ್ಸನ್ನು ಕೇಂದ್ರಿಕರಿಸುವ ಒಂದು ಸಾಧನ “
“ ಹೌದು, ನಿನ್ನ ಮನಸ್ಸು ಸೈಕಲ್ ನ ಗಾಲಿಯಂತೆ ಸರಾಗವಾಗಿ ಉರುಳುತ್ತದೆ” ಮಾಸ್ಟರ್ ಉತ್ತರಿಸಿದರು.
ನಾಲ್ಕನೇಯ ಶಿಷ್ಯ ಉತ್ತರಿಸಿದ “ ಸೈಕಲ್ ತುಳಿಯುವಾಗ ನಾನು ಸುತ್ತ ಮುತ್ತಲಿನ ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಒಂದಾಗಿರುತ್ತೇನೆ ಮಾಸ್ಟರ್” ಈ ಉತ್ತರ ಕೇಳಿ ಮಾಸ್ಚರ್ ಗೆ ಖುಶಿಯಾಯಿತು “ ನೀನು ಯಾರೀಗೂ ಕೇಡಾಗದ ಸುವರ್ಣ ಮಾರ್ಗದಲ್ಲಿದ್ದೀಯ” ಮಾಸ್ಟರ್ ಉತ್ತರಿಸಿದರು.
“ ನಾನು ಸೈಕಲ್ ಸವಾರಿ ಮಾಡೋದು ಸೈಕಲ್ ಸವಾರಿ ಮಾಡಲಿಕ್ಕೆ ಮಾಸ್ಟರ್ “ ಐದನೇಯ ಶಿಷ್ಯ ಉತ್ತರಿಸಿದ.
ತಕ್ಷಣ ಮಾಸ್ಟರ್ ಐದನೇಯ ಶಿಷ್ಯನ ಕಾಲ ಬಳಿ ಕುಳಿತುಕೊಂಡು ಕೇಳಿಕೊಂಡರು “ ದಯಮಾಡಿ ನನ್ನನ್ನು ಶಿಷ್ಯನಾಗಿ ಸ್ವೀಕರಿಸು.