ಭಕ್ತನ ಪ್ರಶ್ನೆಗೆ ಭಗವಂತನ ಉತ್ತರ

ಓಶೋ ಹೇಳಿದ ಕತೆ… | ಕನ್ನಡಕ್ಕೆ : ಚಿದಂಬರ ನರೇಂದ್ರ

ನಾನು ನಿನ್ನೊಡನಿರುವಾಗ
ಇಡೀ ರಾತ್ರಿಯನ್ನು ನಾವು ಎಚ್ಚರವಾಗಿಡುತ್ತೇವೆ.

ನೀನು ನನ್ನೊಡನೆ ಇಲ್ಲದಿರುವಾಗ
ಇಡೀ ರಾತ್ರಿ ನನ್ನನ್ನು ಎಚ್ಚರವಾಗಿಡುತ್ತದೆ.

ಭಗವಂತನಿಗೆ ವಂದನೆಗಳು,

ಈ ಎರಡೂ ನಿದ್ರಾ ಹೀನತೆಗಳಿಗಾಗಿ
ಮತ್ತು ಅವುಗಳ ನಡುವಿನ
ವ್ಯತ್ಯಾಸಕ್ಕಾಗಿ.

~ ರೂಮಿ


ತನ್ನ ಬದುಕಿನ ಆಯಸ್ಸನ್ನು ಪೂರ್ತಿ ಬದುಕಿದ ವ್ಯಕ್ತಿ ತೀರಿಕೊಂಡ ಮೇಲೆ ಸ್ವರ್ಗಕ್ಕೆ ಹೋದ. ಆ ವ್ಯಕ್ತಿಯನ್ನ ಸ್ವಾಗತಿಸಿದ ದೇವರು, ಬದುಕಿನಲ್ಲಿ ಅವನು ಮಾಡಿದ ಕರ್ಮಗಳ ಬಗ್ಗೆ ವಿವರಿಸಿ ಹೇಳಿದ. ಅವನ ಬದುಕಿನ ಹಲವಾರು ಮಹತ್ವದ ಘಟನೆಗಳನ್ನ ಅವನಿಗೆ ರಿಪ್ಲೇ ಮಾಡಿ ತೋರಿಸಿದ.

“ನಿನಗೇನಾದರೂ ಕೇಳಬೇಕಿದೆಯಾ?” ದೇವರು ಆ ವ್ಯಕ್ತಿಯನ್ನ ಪ್ರಶ್ನೆ ಮಾಡಿದ.

ಆ ವ್ಯಕ್ತಿ ದೇವರನ್ನು ಕೇಳಿದ,

“ಭಗವಂತ ನನ್ನ ಬದುಕಿನ ಘಟನೆಗಳನ್ನ ಮತ್ತೆ ನನಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು. ಆದರೆ ಈ ಘಟನೆಗಳನ್ನು ನೋಡುವಾಗ ನಾನು ಒಂದು ವಿಚಿತ್ರ ಸಂಗತಿಯನ್ನ ಗಮನಿಸಿದೆ. ಎಲ್ಲ ಸಂಭ್ರಮದ ಘಟನೆಗಳಲ್ಲಿ ನಾನು ಎರಡು ಜೊತೆ ಹೆಜ್ಜೆಗಳನ್ನ ನೋಡಿದೆ, ಆದರೆ ಕಷ್ಟದ, ಸಂಕಟದ ಗಳಿಗೆಗಳಲ್ಲಿ ಒಂದೇ ಜೊತೆ ಹೆಜ್ಜೆಗಳು ನನಗೆ ಕಾಣಿಸಿದವು. ಯಾಕೆ ಭಗವಂತ ಕಷ್ಟ ಕಾಲದಲ್ಲಿ ನೀನು ನನ್ನ ಜೊತೆ ಇರಲಿಲ್ಲ?”

ದೇವರು ಉತ್ತರಿಸಿದ…..

“ ನೀನು ಗಮನಿಸಿದ್ದು ನಿಜ, ನಿನ್ನ ಬದುಕಿನ ಸಂತೋಷದ ಸಮಯದಲ್ಲಿ ನಾನು ನಿನ್ನ ಜೊತೆ, ನಿನ್ನ ಹಿಂದೆ ಹಿಂದೆ ಹೆಜ್ಜೆ ಹಾಕಿದ್ದೆ. ನಿನ್ನ ಕಷ್ಟದ ಸಮಯದಲ್ಲೂ ನಾನು ನಿನ್ನ ಜೊತೆಯೇ ಇದ್ದೆ, ನಾನು ನಿನ್ನ ಹೊತ್ತುಕೊಂಡಿದ್ದೆ. ಅದಕ್ಕೇ ನಿನಗೆ ಕಷ್ಟದ ಸಮಯದ ದೃಶ್ಯಗಳಲ್ಲಿ ಒಂದು ಜೊತೆ ಹೆಜ್ಜೆಗಳು ಮಾತ್ರ ಕಾಣಿಸಿದವು, ಆದರೆ ಆ ಹೆಜ್ಜೆ ಗುರುತುಗಳು ನಿನ್ನ ಹೊತ್ತುಕೊಂಡು ನಡೆಯುತ್ತಿದ್ದ ನನ್ನ ಹೆಜ್ಜೆ ಗುರುತುಗಳು.”

Leave a Reply