ಓಶೋ ಹೇಳಿದ ಮೂವರು ಬಿಕ್ಖುಗಳ ಕತೆ… | ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಮೂರು ಮಾಂಕ್ ಗಳ ಬಗ್ಗೆ ನಾನು ಬಹಳ ಕೇಳಿದ್ದೇನೆ ಆದರೆ ಅವರ ಹೆಸರನ್ನ ಎಲ್ಲೂ ಹೇಳಲಾಗಿಲ್ಲ. ಏಕೆಂದರೆ ಅವರು ಯಾರಿಗೂ ತಮ್ಮ ಹೆಸರು ಹೇಳುತ್ತಿರಲಿಲ್ಲ, ಎಂದೂ ಯಾರಿಗೂ ಉಪದೇಶ ಮಾಡುತ್ತಿರಲಿಲ್ಲ. ಚೈನಾದಲ್ಲಿ ಎಲ್ಲರೂ ಅವರನ್ನ ಥ್ರೀ ಲಾಫಿಂಗ್ ಮಾಂಕ್ಸ್ ಎಂದೇ ಗುರುತಿಸುತ್ತಿದ್ದರು.
ಈ ಮೂರು ಜನ ಮಾಂಕ್ ಗಳು ಮಾಡುತ್ತಿದ್ದದ್ದು ಇಷ್ಟೇ, ಅವರು ಊರನ್ನು ಪ್ರವೇಶಿಸಿ, ಮಾರುಕಟ್ಟೆಯ ತರದ ಜನದಟ್ಟಣೆಯ ಜಾಗದಲ್ಲಿ ನಿಂತು ಜೋರಾಗಿ ನಗಲು ಶುರು ಮಾಡುತ್ತಿದ್ದರು. ಅವರು ನಗುವುದು ಎಷ್ಟು ಸಾಂಕ್ರಾಮಿಕವಾಗಿರುತ್ತೆಂದರೆ ಆ ಊರಿನ ಸಮಸ್ತರೂ ಅಲ್ಲಿ ಸೇರಿಕೊಂಡು ತಾವೂ ಮಾಂಕ್ ಗಳ ಜೊತೆ ನಗಲು ಶುರು ಮಾಡುತ್ತಿದ್ದರು. ನಂತರ ಮಾಂಕ್ ಗಳು ಮುಂದಿನ ಊರಿಗೆ ತೆರಳುತ್ತಿದ್ದರು.
ಚೈನಾದಲ್ಲಿ ಅವರನ್ನು ಬಹಳ ಪ್ರೀತಿಸಲಾಗುತ್ತಿತ್ತು, ಗೌರವಿಸಲಾಗುತ್ತಿತ್ತು. ಮಾಂಕ್ ಗಳಾಗಿ ಅವರು ಯಾವ ಉಪದೇಶವನ್ನೂ ಮಾಡುತ್ತಿರಲಿಲ್ಲ. ಕೇವಲ ನಗು ಮಾತ್ರ ಅವರ ಸಂದೇಶವಾಗಿತ್ತು. ಅವರು ಏನನ್ನೂ ಕಲಿಸುತ್ತಿರಲಿಲ್ಲ ಕೇವಲ ನಗುವಿನ ವಾತಾವರಣವನ್ನು ಸೃಷ್ಟಿ ಮಾಡಿಬಿಡುತ್ತಿದ್ದರು. ಬದುಕು ಕೇವಲ ಸಂಭ್ರಮ, ನಗು ಎಂದು ಇಷ್ಟು ಚೆನ್ನಾಗಿ ಯಾರೂ ಚೈನಾದ ಜನರಿಗೆ ಹೇಳಿಕೊಟ್ಟಿರಲಿಲ್ಲ.
ಮಾಂಕ್ ಗಳು ಯಾರನ್ನೂ ತಮಾಷೆ ಮಾಡಿ ನಗುತ್ತಿರಲಿಲ್ಲ. ಅವರು ಸುಮ್ಮನೇ ನಗುತ್ತಿದ್ದರು, ಕಾಸ್ಮಿಕ್ ಜೋಕ್ ನ ಅರ್ಥ ಮಾಡಿಕೊಂಡವರಂತೆ. ಒಂದು ಮಾತನ್ನು ಕೂಡ ಆಡದೇ ಅವರು ಇಡೀ ಚೈನಾದ ತುಂಬ ನಗುವಿನ ವಾತಾವರಣವನ್ನು ಹುಟ್ಟುಹಾಕಿದ್ದರು. ಬಹಳಷ್ಟು ಜನ ಅವರ ಹೆಸರು ಕೇಳಿದಾಗಲೆಲ್ಲ ಅವರು, ನಕ್ಕು ಬಿಡುತ್ತಿದ್ದರು ಆದ್ದರಿಂದಲೇ ಜನ ವಿಧಿಯಿಲ್ಲದೇ ಅವರನ್ನು ಲಾಫಿಂಗ್ ಮಾಂಕ್ಸ್ ಎಂದು ಗುರುತಿಸುವಂತಾಯ್ತು.
ನಗು ನಗುತ್ತಲೇ ಬದುಕಿದ ಅವರಿಗೆ ಕೊನೆಗೂ ವಯಸ್ಸಾಯಿತು. ಒಂದು ದಿನ ಅವರಲ್ಲೊಬ್ಬ ಮಾಂಕ್ ತೀರಿಕೊಂಡ. ಈಗಲಾದರೂ ಅವರು ಅಳಬಹುದು ಎಂದು ಇಡೀ ಊರಿನ ಜನ ಅಲ್ಲಿ ಸೇರಿಕೊಂಡರು. ಅವರು ಅಳುವುದನ್ನ ಕಲ್ಪನೆ ಮಾಡಿಕೊಳ್ಳಲೂ ಆಗದ ಜನ ಅವರು ಅಳುವನ್ನು ನಿರೀಕ್ಷಿಸಿ ಕಾದು ಕುಳಿತಿದ್ದರು.
ಅಲ್ಲಿ ಇಡೀ ಊರಿನ ಜನ ಸೇರಿದ್ದರು. ತೀರಿಕೊಂಡ ಮಾಂಕ್ ನ ಹತ್ತಿರ ನಿಂತಿದ್ದ ಇನ್ನಿಬ್ಬರು ಮಾಂಕ್ ಗಳು ಜೋರಾಗಿ ನಗಲು ಶುರು ಮಾಡಿದರು. ಅವರು ಬಿದ್ದು ಬಿದ್ದು ನಗುತ್ತಿದ್ದರು. ಹೆಣದ ಸುತ್ತ ನಿಂತು ಹೀಗೆ ನಗುವುದು ಆ ಊರಿನ ಜನಕ್ಕೆ ವಿಲಕ್ಷಣ ಅನ್ನಿಸಿತ್ತು. ಅವರ ಈ ವರ್ತನೆಯ ಬಗ್ಗೆ ವಿವರಿಸುವಂತೆ ಊರಿನ ಜನ ಇಬ್ಬರು ಮಾಂಕ್ ಗಳನ್ನು ಕೇಳಿಕೊಂಡರು.
ಕೊನೆಗೂ ಇಬ್ಬರು ಮಾಂಕ್ ಗಳು ಮಾತನಾಡಿದರು. “ ನಮಲ್ಲಿ ಯಾರು ಮೊದಲು ಸಾಯಬಹುದು ಎಂದು ಪಂದ್ಯ ಇತ್ತು . ಈ ಮಾಂಕ್ ಮೊದಲು ಸತ್ತು ನಮ್ಮನ್ನು ಸೋಲಿಸಿಬಿಟ್ಟ. ನಾವು ನಮ್ಮ ಸೋಲಿಗಾಗಿ, ಅವನ ಗೆಲುವಿಗಾಗಿ ನಗುತ್ತಿದ್ದೇವೆ. ನಾವು ಮೂವರು ಕೂಡಿ ಬದುಕಿದೆವು, ನಮಗೆ ನಮ್ಮ ಸಹಚರ್ಯ ಇಷ್ಟವಾಗುತ್ತಿತ್ತು. ನಾವು ನಮ್ಮ ಹಾಜರಾತಿಯನ್ನ ಕೂಡಿಯೇ ಸಂಭ್ರಮಿಸಿದೆವು. ವಿಷಯ ಹೀಗಿರುವಾಗ ನಾವು ಈ ಮಾಂಕ್ ನ ಅಳುತ್ತ ಬಿಳ್ಕೊಡುವುದು ಹೇಗೆ ಸಾಧ್ಯ? ಅವನ ವಿದಾಯ ಕೂಡ ನಗುವಿನಿಂದ ತುಂಬಿಕೊಂಡಿರಬೇಕು. ಹಾಗಾಗಿಯೇ ಈ ನಗು.”
ಊರಿನ ಜನ ಸತ್ತ್ ಮಾಂಕ್ ನ ದೇಹಕ್ಕೆ ಸ್ನಾನ ಮಾಡಿಸಿ, ಬೇರೆ ಬಟ್ಟೆ ತೊಡಿಸಿ ಅಂತ್ಯಕ್ರಿಯೆಗೆ ದೇಹವನ್ನು ಸಿದ್ಧಪಡಿಸಲು ಮುಂದಾದರು. ಆದರೆ ಇಬ್ಬರು ಮಾಂಕ್ ಗಳು ಇದಕ್ಕೆ ಅವಕಾಶ ಕೊಡಲಿಲ್ಲ. ಸತ್ತ ಮಾಂಕ್ ನ ಕೊನೆಯ ಇಚ್ಛೆಯನ್ನು ಅವರು ಊರಿನ ಜನರಿಗೆ ತಿಳಿಸಿ ಹೇಳಿದರು.
“ ನಾನು ಬದುಕಿನುದ್ದಕ್ಕೂ ನಗು ನಗುತ್ತಲೇ ಬದುಕಿದೆ. ಈ ನಗು ನನ್ನನ್ನು ಶುದ್ಧವಾಗಿ ಇಟ್ಟಿದೆ. ಹಾಗಾಗಿ ನಾನು ಸತ್ತಾಗ ನನಗೆ ಸ್ನಾನ ಮಾಡಿಸಬೇಡಿ, ನನ್ನ ಬಟ್ಟೆ ಬದಲಿಸಬೇಡಿ. ನಾನು ಹೀಗೆಯೇ ಚಿತೆ ಏರಬೇಕು.” ಇದು ತೀರಿಕೊಂಡ ಮಾಂಕ್ ನ ಕೊನೆಯ ಇಚ್ಛೆಯಾಗಿತ್ತು.
ವಿಧಿಯಿಲ್ಲದೇ ಊರಿನ ಜನ ಸತ್ತ ಮಾಂಕ್ ನ ದೇಹವನ್ನು ಚಿತೆಯ ಮೇಲೆ ಇರಿಸಿ ಬೆಂಕಿಯಿಟ್ಟರು. ಆಗಲೇ ಒಂದು ಮಹದಾಶ್ಚರ್ಯಕ್ಕೆ ಅಲ್ಲಿ ಸೇರಿದ್ದ ಎಲ್ಲರೂ ಸಾಕ್ಷಿಯಾದರು. ದೇಹಕ್ಕೆ ಬೆಂಕಿ ಹತ್ತಿ ಕೊಳ್ಳುತ್ತಿದ್ದಂತೆಯೇ, ಬಣ್ಣ ಪಟಾಕಿಗಳ ಸಿಡಿಯಲು ಆರಂಭಿಸಿದವು, ಸುತ್ತಲೂ ಬೆಳಕಿನ ಮನೋಹರ ಲೋಕ ಸೃಷ್ಟಿಯಾಯಿತು. ಸತ್ತ ಮಾಂಕ್ ತನ್ನ ದೇಹದ ಸುತ್ತ ಪಟಾಕಿಗಳನ್ನ ಬಚ್ಚಿಟ್ಟುಕೊಂಡಿದ್ದ.
“ ಕೊನೆಯ ನಗು ನಿನ್ನದೇ ಆಯ್ತು, ನೀನೇ ಗೆದ್ದೆ” ಎನ್ನುತ್ತ ಇಬ್ಬರು ಮಾಂಕ್ ಗಳು ಮತ್ತೆ ನಗಲು ಶುರು ಮಾಡಿದರು, ಸುತ್ತ ನೆರೆದಿದ್ದ ಊರಿನ ಜನ, ನಗು ನಗುತ್ತಲೇ ಮಾಂಕ್ ನ ವಿದಾಯದಲ್ಲಿ ಭಾಗಿಯಾದರು.