ಪ್ರಾರ್ಥನೆ ಮಾಡುವುದೆಂದರೆ…

ರೂಮಿಯ ಪ್ರಕಾರ ಪ್ರಾರ್ಥನೆ, ನಮ್ಮನ್ನು ಭಗವಂತನೊಂದಿಗೆ ಒಂದುಗೂಡಿಸುವ ಏಕೈಕ ದಾರಿ… | ಚಿದಂಬರ ನರೇಂದ್ರ

ನಾನೊಬ್ಬ
ಧಾರ್ಮಿಕ ಮನುಷ್ಯನಾಗಿದ್ದೆ,
ನೀನು ನನಗೆ
ಹಾಡಿನ ಚಟ ಅಂಟಿಸಿದೆ,
ಭಜನೆ ಮಾಡುತ್ತಿದ್ದವನ ಒದ್ದು
ಶೆರೆಯಂಗಡಿಗೆ ಅಟ್ಟಿದೆ.
ಗಂಭೀರವಾಗಿ
ಪ್ರಾರ್ಥನೆಯ ಚಾಪೆ ಹಾಸಿಕೊಂಡು
ಹಿರಿಯಜ್ಜನಂತೆ
ತಲೆ ತಗ್ಗಿಸಿ ಕುಳಿತವನ
ರಸ್ತೆಯ ಮಕ್ಕಳು
ನೋಡಿ ನಗುವಂತ ತಮಾಷೆಯಾಗಿಸಿದೆ.
ಆ ಮಕ್ಕಳ ಕಣ್ಣಿನ ನಗೆಯಲ್ಲಿ
ಆನಂದವಾಗಿ ಹರಿದು
ನನ್ನ ಪೂರ್ತಿ
ಒದ್ದೆಯಾಗಿಸಿದೆ.

– ರೂಮಿ


ಒಮ್ಮೆ ಯಾರೋ ಒಬ್ಬರು ರೂಮಿಯನ್ನು ಪ್ರಶ್ನೆ ಮಾಡಿದರು.

ಪ್ರಾರ್ಥನೆ ಮಾಡುವುದರಿಂದ ನೀನು ಏನು ಗಳಿಸುತ್ತೀಯಾ?

ರೂಮಿ ಉತ್ತರಿಸಿದ……

“ಪ್ರಾರ್ಥನೆ ಮಾಡುವುದರಿಂದ ಬಹುತೇಕ ನಾನು ಏನೂ ಗಳಿಸುವುದಿಲ್ಲ, ಬದಲಾಗಿ ಪ್ರಾರ್ಥನೆಯಲ್ಲಿ ನಾನು ಕಳೆದುಕೊಂಡಿದ್ದೇ ಹೆಚ್ಚು”.

ಹೀಗೆ ಹೇಳುತ್ತ ಭಗವಂತನ ಪ್ರಾರ್ಥನೆಯಲ್ಲಿ ತಾನು ಕಳೆದುಕೊಂಡ ಸಂಗತಿಗಳ ಪಟ್ಟಿ ಕೊಟ್ಟ.

ನಾನು ನನ್ನ ಅಭಿಮಾನವನ್ನು ಕಳೆದುಕೊಂಡೆ.
ನಾನು ನನ್ನ ದುರಹಂಕಾರವನ್ನು ಕಳೆದುಕೊಂಡೆ.
ನಾನು ನನ್ನ ದುರಾಸೆಯನ್ನು ಕಳೆದುಕೊಂಡೆ.
ನಾನು ನನ್ನ ತುಡಿತವನ್ನ ಕಳೆದುಕೊಂಡೆ.
ನಾನು “ನನ್ನ” ಕ್ರೋಧವನ್ನು ಕಳೆದುಕೊಂಡೆ.
ನಾನು ನನ್ನ ಕಾಮವನ್ನು ಕಳೆದುಕೊಂಡೆ.
ನಾನು ಸುಳ್ಳು ಹೇಳುವ ಸುಖವನ್ನು ಕಳೆದುಕೊಂಡೆ.
ನಾನು ಪಾಪದ ರುಚಿಯನ್ನು ಕಳೆದುಕೊಂಡೆ.
ನಾನು ಅಸಹನೆಯನ್ನ ಕಳೆದುಕೊಂಡೆ.
ನಾನು ಹತಾಶೆ ಮತ್ತು ನಿರುತ್ಸಾಹವನ್ನು ಕಳೆದುಕೊಂಡೆ.

ಕೆಲವೊಮ್ಮೆ ನಾವು ಗಳಿಸಲಿಕ್ಕಾಗಿ ಅಲ್ಲ ನಮ್ಮ ಅಧ್ಯಾತ್ಮಿಕ ಹಾದಿಯಲ್ಲಿ ಅಡಚಣೆ ಉಂಟುಮಾಡುತ್ತಿರುವ ಸಂಗತಿಗಳನ್ನು ಕಳೆದುಕೊಳ್ಳಲು ಪ್ರಾರ್ಥನೆ ಮಾಡುತ್ತೇವೆ.

ಪ್ರಾರ್ಥನೆ ಕಲಿಸುತ್ತದೆ, ಗಟ್ಟಿಗೊಳಿಸುತ್ತದೆ ಮತ್ತು ಸಂತೈಸುತ್ತದೆ.

ಪ್ರಾರ್ಥನೆ, ನಮ್ಮನ್ನು ಭಗವಂತನೊಂದಿಗೆ ಒಂದುಗೂಡಿಸುವ ಏಕೈಕ ದಾರಿ.

ಒಮ್ಮೆ ಮಸಿದಿಗೆ ಹೋಗುವಾಗ ಒಬ್ಬ ಅಪರಿಚಿತ ತನ್ನನ್ನು ಹಿಂಬಾಲಿಸುತ್ತಿರುವುದನ್ನ ಮುಲ್ಲಾ ನಸ್ರುದ್ದೀನ ಗಮನಿಸಿದ. ಆತ ತನ್ನ ಚಪ್ಪಲಿ ಕದಿಯಲು ಬಂದಿದ್ದಾನೆಂದು ಮುಲ್ಲಾನಿಗೆ ಮನವರಿಕೆಯಾಯಿತು.

ಮಸಿದಿಯ ಒಳಗೆ ಹೊಕ್ಕ ಮುಲ್ಲಾ, ಚಪ್ಪಲಿ ಹಾಕಿಕೊಂಡೇ ಪ್ರಾರ್ಥನೆ ಮಾಡಲು ಶುರು ಮಾಡಿದ. ಇದನ್ನು ಗಮನಿಸಿದ ಆ ಅಪರಿಚಿತ ಮುಲ್ಲಾನನ್ನು ಪ್ರಶ್ನಿಸಿದ,

“ಇದು ಧರ್ಮ ವಿರೋಧಿ ಕೆಲಸ ಅಲ್ಲವೆ? ಹೀಗೆ ಪ್ರಾರ್ಥನೆ ಮಾಡಿದರೆ ನೀನು ಯಾವ ಪಾಪವನ್ನೂ ಕಳೆದುಕೊಳ್ಳುವುದಿಲ್ಲ”

“ ನೀನು ಹೇಳೋದು ಸರಿ ಇರಬಹುದು ಆದರೆ ಈಗ ನನಗೆ ನನ್ನ ಚಪ್ಪಲಿ ಕಳೆದುಕೊಳ್ಳಗಿರುವುದು ಆದ್ಯತೆಯ ವಿಷಯವಾಗಿದೆ”

ಮುಲ್ಲಾ ಉತ್ತರಿಸಿದ.

Leave a Reply