ಕನ್ನಡಿಯೇ ಅಸ್ತಿತ್ವ ನೀಡುವುದು! : ಓಶೋ ವ್ಯಾಖ್ಯಾನ

ತಲೆ ಇರುವಾಗ ಏನು ಹೇಳಿಕೂಡುವುದೂ ಸಾಧ್ಯವಾಗುವುದಿಲ್ಲ. ತಲೆ ಯಾವಾಗಲೂ ನಡುವೆ ತಲೆ ತೂರಿಸುತ್ತದೆ… ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ

ಶೂನ್ಯ ಇರುವಲ್ಲೇ
ಮಜಾ ಶುರುವಾಗೋದು.

ಬೇರೆ ಕಡೆ ಎಲ್ಲಾ
ಬರೀ ಎಣಿಸೋದೆ ಅಗ್ಹೋಯ್ತು !

– ಹಾಫಿಜ್


ಝೆನ್ ಮಾಂಕ್ ರಿಂಝೈ ಗೆ ಜ್ಞಾನೋದಯವಾದಾಗ ಅವನು ಕೇಳಿದ ಮೊದಲ ಪ್ರಶ್ನೆ,

“ನನ್ನ ಮುಖ ಎಲ್ಲಿ? ನನ್ನ ಮುಖ ಎಲ್ಲಿ ಹೋಯಿತು?”

ತಕ್ಷಣ ಅವನು ತನ್ನ ಮುಖವನ್ನು ಹುಡುಕತೊಡಗಿದ. “ಹೋಗಿ ನನ್ನ ಮುಖವನ್ನು ಹುಡುಕಿ, ನಾನು ಮುಖವನ್ನು ಕಳೆದುಕೊಂಡಿದ್ದೇನೆ” ಎಂದು ತನ್ನ ಶಿಷ್ಯರಿಗೆ ಆಜ್ಞೆ ಮಾಡಿದ.

ಜ್ಞಾನೋದಯವಾದಾಗ ಮಾಸ್ಟರ್ ರಿಂಝೈ ರೂಹುರಹಿತ ಸ್ಥಿತಿಯನ್ನ ಪ್ರವೇಶಿಸಿದ್ದ. ಹಾಗೆ ನೋಡಿದರೆ ನಿಮ್ಮದು ಕೂಡ ರೂಹುರಹಿತ ಅಸ್ತಿತ್ವ. ನಿಮಗೆ ನಿಮ್ಮ ಬಗ್ಗೆ ನೇರವಾಗಿ ಗೊತ್ತಿಲ್ಲ, ಇನ್ನೊಬರ ಕಣ್ಣುಗಳ ಮುಖಾಂತರ ನೀವು ನಿಮ್ಮನ್ನ ಗೊತ್ತುಮಾಡಿಕೊಳ್ಳುತ್ತಿದ್ದೀರಿ. ನಿಮಗೆ ನಿಮ್ಮ ಪರಿಚಯ ಕನ್ನಡಿಯ ಮೂಲಕ ಆಗಿದೆ.

ಯಾವಾಗಲಾದರ ಕನ್ನಡಿಯನ್ನು ನೋಡುತ್ತಿದ್ದಾಗ, ಕಣ್ಣುಮುಚ್ಚಿ ಧ್ಯಾನಿಸಿ : ಒಂದೊಮ್ಮೆ ಈ ಕನ್ನಡಿ ಇರದೇ ಹೋಗಿದ್ದರೆ, ನಿಮ್ಮ ಚೆಹರೆಯ ಬಗ್ಗೆ ನಿಮಗೆ ಹೇಗೆ ಗೊತ್ತಾಗುತ್ತಿತ್ತು? ಅಕಸ್ಮಾತ್ ಕನ್ನಡಿ ಇರದಿದ್ದರೆ ನಿಮಗೆ ಚೆಹರೆ ಇರುತ್ತಿರಲಿಲ್ಲ. ಮುಟ್ಟಬಹುದುತ್ತು, ಅನುಭವಿಸಬಹುದಿತ್ತು ಆದರೆ ನೋಡಲಾಗುತ್ತಿರಲಿಲ್ಲ. ನಿಮಗೆ ಮುಖ ಇಲ್ಲ, ನಿಮಗೆ ಮುಖ ಕೊಟ್ಟಿದ್ದು ಕನ್ನಡಿ.

ಕನ್ನಡಿಗಳಿಲ್ಲದ ಜಗತ್ತನ್ನ ಕಲ್ಪನೆ ಮಾಡಿಕೊಳ್ಳಿ. ನೀವು ಒಬ್ಬರೇ ಇರುವಿರಿ, ಕನ್ನಡಿಗಳಿಲ್ಲ, ಕನ್ನಡಿಗಳಂತೆ ಕೆಲಸ ಮಾಡುವ ಇನ್ನೊಬ್ಬರ ಕಣ್ಣುಗಳೂ ಇಲ್ಲ. ನೀವು ಒಂಟಿ ದ್ವೀಪದಲ್ಲಿದ್ದೀರಿ, ನಿಮ್ಮನ್ನ ಪ್ರತಿಫಲಿಸುವವರು ಯಾರೂ ಇಲ್ಲ. ಆಗ ನಿಮಗೆ ಚೆಹರೆ ಇರುವುದೆ? ಸಾಧ್ಯವೇ ಇಲ್ಲ. ನಮಗೆ ನಮ್ಮ ಬಗ್ಗೆ ಗೊತ್ತಿರುವುದು ಇನ್ನೊಬ್ಬರ ಮೂಲಕ ಮತ್ತು ಇನ್ನೊಬ್ಬರಿಗೆ ನಮ್ಮ ಬಹಿರಂಗ ಮಾತ್ರ ಕಾಣಿಸುತ್ತದೆ. ಆದ್ದರಿಂದಲೇ ನಮಗೆ ನಮ್ಮ ಬಗ್ಗೆ ಗೊತ್ತಿರುವುದೆಲ್ಲ ಹೊರಗಿನ ವಿಷಯ.

ಇನ್ನೊಬ್ಬ ಝೆನ್ ಅನುಭಾವಿ ಮಾಸ್ಟರ್ ಹುಯಿ-ಹಾಯಿ ತನ್ನ ಶಿಷ್ಯರಿಗೆ ಹೇಳುತ್ತಿದ್ದನಂತೆ, “ಧ್ಯಾನದ ಸಮಯದಲ್ಲಿ ನೀವು ನಿಮ್ಮ ತಲೆಯನ್ನು ಕಳೆದುಕೊಂಡಾಗ, ತಕ್ಷಣ ನನ್ನ ಬಳಿ ಬನ್ನಿ. ನಿಮಗೆ ನಿಮ್ಮ ತಲೆಯನ್ನು ಕಳೆದುಕೊಂಡ ಅನುಭವವಾಗತೊಡಗಿದಾಗ ಹೆದರಬೇಡಿ ತಕ್ಷಣ ನನ್ನ ಬಳಿ ಬನ್ನಿ. ಇದು ಸರಿಯಾದ ಸಮಯ, ಈಗ ನಿಮಗೆ ಏನಾದರೂ ಹೇಳಿಕೊಡಬಹುದು”.

ತಲೆ ಇರುವಾಗ ಏನು ಹೇಳಿಕೂಡುವುದೂ ಸಾಧ್ಯವಾಗುವುದಿಲ್ಲ. ತಲೆ ಯಾವಾಗಲೂ ನಡುವೆ ತಲೆ ತೂರಿಸುತ್ತದೆ.

ಒಮ್ಮೆ ಒಬ್ಬ ಶಿಷ್ಯ, ಝೆನ್ ಮಾಸ್ಟರ್ ನ ಪ್ರಶ್ನೆ ಮಾಡಿದ.

“ ಶೂನ್ಯದ ಸದ್ದು ಹೇಗೆ ಕೇಳಿಸುತ್ತದೆ? “

ಮಾಸ್ಟರ್, ಶಿಷ್ಯನ ದನಿಯನ್ನು ಥೇಟ್ಅನುಕರಣೆ ಮಾಡುತ್ತ ಉತ್ತರಿಸಿದ,

“ ಶೂನ್ಯದ ಸದ್ದು ಹೇಗೆ ಕೇಳಿಸುತ್ತದೆ? “

ಶಿಷ್ಯ ತಿರುಗಿ ಮಾತನಾಡಿದ,

“ ನೀನು ಮಾಸ್ಟರ್, ನನಗೆ ಉತ್ತರ ಗೊತ್ತಿಲ್ಲ. ಅದಕ್ಕೇ ಕೇಳಿದೆ “

ಮಾಸ್ಟರ್ ತನ್ನ ಮೊಣಕೈಯಿಂದ ಶಿಷ್ಯನ ತಲೆ ಮೊಟಕಿದ.

ಶಿಷ್ಯನಿಗೆ ಜ್ಞಾನೋದಯವಾಯಿತು.

Leave a Reply