ವಿವೇಕಶಾಲಿ ಆಗುವುದೆಂದರೆ… : ಓಶೋ ವ್ಯಾಖ್ಯಾನ

ವಿವೇಕಶಾಲಿಗಳಾಗಿ… ಹಾಗೆಂದರೆ ಹೆಚ್ಚು ಪ್ರಜ್ಞಾವಂತರಾಗಿ. ಮುಗ್ಧರಾಗಿ, ಹಾಗೆಂದರೆ ಹೆಚ್ಚು ಹೆಚ್ಚು ಮಕ್ಕಳಂತಾಗಿ, ಬೆರಗು, ಅಚ್ಚರಿಯನ್ನ ರೂಢಿಸಿಕೊಳ್ಳಿ… ~ ಓಶೋ; ಕನ್ನಡಕ್ಕೆ: ಚಿದಂಬರ ನರೇಂದ್ರ

ಒಮ್ಮೆ ಒಬ್ಬ ಮನುಷ್ಯ ಹಣ್ಣುಗಳ ಕ್ಯಾನ್ ಕೊಂಡುಕೊಂಡ. ಅದು ಹೊಸ ಡಿಸೈನ್ ನ ಕ್ಯಾನ್ ಆಗಿದ್ದರಿಂದ ಅದನ್ನು ಹೇಗೆ ಓಪನ್ ಮಾಡುವುದು ಎನ್ನುವುದು ಆ ವ್ಯಕ್ತಿಗೆ ಗೊತ್ತಾಗಲಿಲ್ಲ.

“ಇರು, ಇದನ್ನ ಹೇಗೆ ಓಪನ್ ಮಾಡಬೇಕಂತ ಇದರ ಜೊತೆ ಕೊಟ್ಟಿರುವ ಮ್ಯಾನುಅಲ್ ನಲ್ಲಿ ಬರೆದಿದ್ದಾರೆ, ನಾನು ಅದನ್ನ ಓದಿಕೊಂಡು ಬಂದು ಈ ಕ್ಯಾನ್ ಓಪನ್ ಮಾಡಿಕೊಡುತ್ತೇನೆ” ಆ ವ್ಯಕ್ತಿ ತನ್ನ ಮನೆಯ ಕೆಲಸದ ಹೆಂಗಸಿಗೆ ಹೇಳಿದ.

ಮ್ಯಾನುಅಲ್ ಹುಡುಕಿಕೊಂಡು ಹೋದ ವ್ಯಕ್ತಿ ಅರ್ಧ ಗಂಟೆಯ ನಂತರ ಕ್ಯಾನ್ ಹೇಗೆ ಓಪನ್ ಮಾಡಬೇಕು ಎನ್ನುವುದನ್ನ ಅಧ್ಯಯನ ಮಾಡಿ, ಕ್ಯಾನ್ ಓಪನ್ ಮಾಡಲು ಒಳಗೆ ಬಂದಾಗ ಮನೆ ಕೆಲಸದ ಹೆಂಗಸು ಆ ಕ್ಯಾನ್ ನ ಆಗಲೇ ಓಪನ್ ಮಾಡಿ ಇಟ್ಟಿದ್ದಳು.

“ಹೇಗೆ ಓಪನ್ ಮಾಡಿದೆ? ಮ್ಯಾನುಅಲ್ ಓದಿ ಕೂಡ ನನಗೆ ಕ್ಯಾನ್ ಓಪನ್ ಮಾಡುವುದು ನನಗೆ ಕಷ್ಟ ಅನಿಸುತ್ತಿತ್ತು. ನಿನಗೆ ಮೊದಲೇ ಗೊತ್ತಿತ್ತಾ?” ಆ ವ್ಯಕ್ತಿ, ಮನೆ ಕೆಲಸದ ಹೆಂಗಸನ್ನು ಪ್ರಶ್ನೆ ಮಾಡಿದ.

“ನನಗೆ ಓದಲು ಬರುವುದಿಲ್ಲ ಆದ್ದರಿಂದ ನಾನು ನನ್ನ ಬುದ್ಧಿಯನ್ನ ಉಪಯೋಗಿಸುತ್ತೇನೆ, ನಿಮಗೆ ಓದಲು ಬರುತ್ತದೆ, ಮಾಹಿತಿ ಎಲ್ಲಿ ಇದೆ ಎನ್ನುವುದು ನಿಮಗೆ ಗೊತ್ತು ಹಾಗಾಗಿ ನೀವು ಬುದ್ಧಿ ಉಪಯೋಗಿಸುವುದಿಲ್ಲ”.
ಆ ಹೆಂಗಸು ಉತ್ತರಿಸಿದಳು.

ವಿವೇಕಶಾಲಿಗಳಾಗಿ… ಹಾಗೆಂದರೆ ಹೆಚ್ಚು ಪ್ರಜ್ಞಾವಂತರಾಗಿ. ಮುಗ್ಧರಾಗಿ, ಹಾಗೆಂದರೆ ಹೆಚ್ಚು ಹೆಚ್ಚು ಮಕ್ಕಳಂತಾಗಿ, ಬೆರಗು, ಅಚ್ಚರಿಯನ್ನ ರೂಢಿಸಿಕೊಳ್ಳಿ. ಈ ಎರಡು ಸಂಗತಿಗಳು ಬೆರಗು, ಅಚ್ಚರಿ ಮತ್ತು ವಿವೇಕ, ಜಾಣತನ ನಿಮ್ಮೊಳಗಿದ್ದರೆ ನೀವು ದೇವರಿಂದ ತಪ್ಪಿಸಿಕೊಳ್ಳುವುದಿಲ್ಲ, ದೇವರನ್ನು ಮಿಸ್ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ.

ಆಗ ನೀವು ದೇವರು ಎಲ್ಲಿ ಎಂದು ಪ್ರಶ್ನೆ ಮಾಡುವುದಿಲ್ಲ, ದೇವರು ಎಲ್ಲಿ ಇಲ್ಲ ಎಂದು ಕೇಳುತ್ತೀರಿ. ದೇವರು ಎಲ್ಲೆಲ್ಲಿಯೂ ಇದ್ದಾನೆ ಇರುವುದರೊಳಗೂ, ಇಲ್ಲದರೊಳಗೂ.

Leave a Reply