ಅಹಂಕಾರವೆಂಬ ಬೋರಲು ಪಾತ್ರೆ : ಓಶೋ ವ್ಯಾಖ್ಯಾನ

ಮಕರಂದ ಧಾರಾಕಾರವಾಗಿ ನಿರಂತರವಾಗಿ ಸುರಿಯುತ್ತಲೇ ಇರುತ್ತದೆ ಆದರೆ ನಾವೇ ಯಾಕೋ ನಮ್ಮ ನಮ್ಮ ಪಾತ್ರೆಗಳನ್ನ ಬೋರಲಾಗಿ ಇಟ್ಟುಕೊಂಡುಬಿಟ್ಟಿದ್ದೇವೆ… ~ ಓಶೋ ರಜನೀಶ್ | ಕನ್ನಡಕ್ಕೆ: ಚಿದಂಬರ ನರೇಂದ್ರ

ಮೂವತ್ತು ತಂತಿ ಕಡ್ಡಿಗಳು
ಗಾಲಿಯ ಮಧ್ಯದಲ್ಲಿ ಒಂದಾದವು.
ಎಲ್ಲಿ ಗಾಲಿ ಉರುಳುವದಿಲ್ಲವೋ
ಅದೇ ಉರುಳಿಸುತ್ತಿತ್ತು ಗಾಲಿಯನ್ನು.

ಮಣ್ಣಿನ ಮುದ್ದೆಯ ಟೊಳ್ಳು ಮಾಡಿ
ಗಡಿಗೆ ಎಂದರು.
ಎಲ್ಲಿ ಗಡಿಗೆಯಿಲ್ಲವೊ
ಅಲ್ಲಿಯೇ ನೀರು ತುಂಬುವರು.

ಕಿಟಕಿ, ಬಾಗಿಲುಗಳ ಕೊರೆದು
ಕೋಣೆ ಎಂದರು.
ಎಲ್ಲಿ ಕೋಣೆ ಇಲ್ಲವೊ
ಅಲ್ಲಿಯೇ ಮಂದಿ ಮಲಗಿದರು.

ನೋಡಿ
ಇರುವುದು ಇರದ ಜಾಗದಲ್ಲೇ
ಅಡಗಿ ಕೂತಿದೆ ನಮ್ಮ ಲಾಭ.

~ ಲಾವೋತ್ಸೇ


ಬುದ್ಧ ಸದಾ ಈ ಮಾತನ್ನ ಹೇಳುತ್ತಿದ್ದ……

“ಮಕರಂದದ ಮಳೆ ಸತತವಾಗಿ ಸುರಿಯುತ್ತಿರುತ್ತದೆ ಆದರೆ ಯಾಕೋ ಕೆಲವು ಜನ ತಮ್ಮ ತಮ್ಮ ಪಾತ್ರೆಗಳನ್ನ ಬೋರಲಾಗಿ ಇಟ್ಟುಕೊಂಡುಬಿಟ್ಟಿದ್ದಾರೆ”.

ನಿಮ್ಮ ಪಾತ್ರೆಯನ್ನ ನೇರವಾಗಿ ಇಟ್ಟುಕೊಂಡಾಗ ಮಾತ್ರ ಮಕರಂದದ ಮಳೆ ಸುರಿದು ಆ ಪಾತ್ರೆ ಮಕರಂದದಿಂದ ತುಂಬಿಕೊಳ್ಳುತ್ತದೆ ಎಂದೇನೂ ಇಲ್ಲ, ನಿಮ್ಮ ಪಾತ್ರೆ ಬೋರಲಾಗಿದ್ದಾಗ ಕೂಡ ಮಕರಂದದ ಮಳೆ ಸುರಿಯುತ್ತಿತ್ತು, ಅಲ್ಲಿ ಪಾತ್ರೆ ಇಲ್ಲದಾಗ ಕೂಡ. ನಿಮ್ಮ ಪಾತ್ರೆ ನೇರವಾಗಿದ್ದಾಗ ಮಾತ್ರ ಮಕರಂದ ಸುರಿದು ತುಂಬಿಕೊಳ್ಳುತ್ತದೆ ಎನ್ನುವುದು ವಿಶೇಷ ಔದಾರ್ಯವೇನಲ್ಲ, ಸದಾ ಸುರುಯುತ್ತಲೇ ಇರುವುದು ಮಕರಂದದ ವಿಶೇಷತೆ ಅದು ಅದರ ಸಹಜ ಸ್ವಭಾವ , ಪ್ರಕೃತಿ ಧರ್ಮ.

ಮಕರಂದ ಧಾರಾಕಾರವಾಗಿ ನಿರಂತರವಾಗಿ ಸುರಿಯುತ್ತಲೇ ಇರುತ್ತದೆ ಆದರೆ ನಾವೇ ಯಾಕೋ ನಮ್ಮ ನಮ್ಮ ಪಾತ್ರೆಗಳನ್ನ ಬೋರಲಾಗಿ ಇಟ್ಟುಕೊಂಡುಬಿಟ್ಟಿದ್ದೇವೆ. ಅಹಂ ಯಾವಾಗಲೂ ತನ್ನ ಪಾತ್ರೆಯನ್ನ ಬೋರಲಾಗಿಟ್ಟುಕೊಂಡಿರುತ್ತದೆ ಮತ್ತು ತನ್ನ ಪಾತ್ರೆಯಲ್ಲಿ ಮಕರಂದವನ್ನು ತುಂಬಿಸಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿರುತ್ತದೆ.

ಪಾತ್ರೆಯನ್ನ ನೇರವಾಗಿ ಇಟ್ಟುಕೊಳ್ಳುವುದೆಂದರೆ “I am nothing “ ಎನ್ನುವುದನ್ನ ಒಪ್ಪಿಕೊಳ್ಳುವುದು. ಪಾತ್ರೆಯನ್ನ ನೇರವಾಗಿ ಇಟ್ಟುಕೊಂಡಾಗ ಪಾತ್ರೆಯ ಖಾಲೀತನ ತನ್ನ ತನ್ನತನವನ್ನ ತೋರಿಸಲು ಶುರು ಮಾಡುತ್ತದೆ. ತುಂಬಿಕೊಳ್ಳುವುದನ್ನ ಬಿಟ್ಟರೆ ಖಾಲೀತನಕ್ಕೆ ಬೇರೆನು ಕೆಲಸ? ಪಾತ್ರೆಯನ್ನ ಬೋರಲಾಗಿಟ್ಟಾಗ ಅದರ ಖಾಲೀತನವನ್ನ ಮರೆ ಮಾಡಲಾಗಿದೆ.

ಬೋರಲಾಗಿಟ್ಟ ಪಾತ್ರೆ ಅದು ತುಂಬಿಕೊಂಡಿರುವ ಭ್ರಮೆಯನ್ನು ಸೃಷ್ಟಿಸುತ್ತದೆ ಏಕೆಂದರೆ ಅದರ ಖಾಲೀತನವನ್ನ ಹತ್ತಿಕ್ಕಲಾಗಿದೆ. ಆದ್ದರಿಂದಲೇ ನಾವು ಪಾತ್ರೆಯನ್ನ ಬೋರಲಾಗಿಟ್ಟುಕೊಂಡಿದ್ದೇವೆ. ಪಾತ್ರೆಯನ್ನ ನೇರವಾಗಿಟ್ಟಾಗ ಆ ಪಾತ್ರೆಗೆ ತಾನು ಏನೂ ಅಲ್ಲವೆಂಬುದು ಮತ್ತು ತನ್ನ ಖಾಲೀತನದ ವಿಶೇಷತೆಯ ಬಗ್ಗೆ ಗೊತ್ತಾಗುತ್ತದೆ. ತನ್ನನ್ನು ತುಂಬಿಕೊಳ್ಳುವ ಅವಕಾಶ ಇದೆ ಎನ್ನುವುದು ಗೊತ್ತಾಗುತ್ತದೆ.

ಮನುಷ್ಯನಿಗೆ “I am nothing” ಎನ್ನುವ ಅರಿವು ಆದಾಗ ಮಾತ್ರ ಬೋರಲಾಗಿದ್ದ ಅವನ ಪಾತ್ರೆ ನೇರವಾಗುತ್ತದೆ. ಮತ್ತು ಪಾತ್ರೆ ನೇರವಾದಾಗ ಮಾತ್ರ ಅವನು ಪ್ರಾರ್ಥನೆಯನ್ನು ಪ್ರವೇಶಿಸುತ್ತಾನೆ. ಆಗ ಸತತವಾಗಿ ಸುರಿಯುತ್ತಿರುವ ಭಗವಂತನ ಅನುಗ್ರಹ ಅವನನ್ನು ತುಂಬಿಕೊಳ್ಳುತ್ತದೆ. ಭಗವಂತನ ಕಾರುಣ್ಯ ತನ್ನನ್ನು ಪೂರ್ತಿಯಾಗಿ ತುಂಬಿಕೊಂಡಾಗ ಮನುಷ್ಯ ಹೇಳುತ್ತಾನೆ “It is his grace”

ನೀವು ನಿಮ್ಮ ಪಾತ್ರೆಯನ್ನ ನೇರವಾಗಿಟ್ಟುಕೊಳ್ಳದೇ ಹೋದರೆ ಭಗವಂತನಿಗೆ ನಿಮ್ಮ ಮೇಲೆ ತನ್ನ ಅನುಗ್ರಹವನ್ನು ಸುರಿಯುವುದು ಸಾಧ್ಯವಾಗುವುದಿಲ್ಲ. ಪಾತ್ರೆಯನ್ನ ನೇರವಾಗಿಟ್ಟುಕೊಳ್ಳುವುದು ನೀವು ನಿಮಗೆ ತೋರಿಸಬಹುದಾಗ ಅನುಗ್ರಹ, ಕಾರುಣ್ಯ. ನಮ್ಮನ್ನು ನಾವು ಕಾರುಣ್ಯದಿಂದ ಕಾಣುವುದೇ ಪ್ರಾರ್ಥನೆ. ನಮ್ಮನ್ನು ನಾವು ಅಂತಃಕರಣದಿಂದ ಕಾಣುವುದೇ ಪ್ರಾರ್ಥನೆ. ನಮ್ಮನ್ನು ನಾವು ಕ್ರೂರವಾಗಿ ನಡೆಸಿಕೊಳ್ಳುವುದು ಅಹಂ. ನಮ್ಮ ಮೇಲೆ ನಾವು ದೌರ್ಜನ್ಯ ಮಾಡಿಕೊಳ್ಳುವುದು ಅಹಂ. ನಮ್ಮನ್ನು ನಾವು ಹಿಂಸೆ ಮಾಡಿಕೊಳ್ಳುವುದು ಅಹಂ.

ದಯಮಾಡಿ ನಿಮ್ಮ ನಿಮ್ಮ ಪಾತ್ರೆಯನ್ನ ನೇರವಾಗಿಟ್ಟುಕೊಳ್ಳಿ.

ಒಂದು ದಿನ ಮುಲ್ಲಾ ನಸ್ರುದ್ದೀನ್ ನ ಗೆಳೆಯ ಕೇಳಿಕೊಂಡ.

“ನಸ್ರುದ್ದೀನ್, ನಾನು ಈ ಊರು ಬಿಟ್ಟು ನಾನು ಬೇರೆ ಊರಿಗೆ ಹೋಗುತ್ತಿದ್ದೇನೆ. ನಿನ್ನ ಗುರುತಿಗಾಗಿ ನೀನು ಯಾಕೆ ನಿನ್ನ ಉಂಗುರ ನನಗೆ ಕೊಡಬಾರದು? ಆ ಉಂಗುರ ನೋಡಿದಾಗಲೆಲ್ಲ ನಾನು ನಿನ್ನ ನೆನಪಿಸಿಕೊಳ್ಳುತ್ತೇನೆ “

“ಉಂಗುರ ನೀನು ಕಳೆದುಕೊಂಡು ಬಿಡಬಹುದು ಆಗ ನೀನು ನನ್ನ ಮರತೇಬಿಡುತ್ತೀಯ, ಹೀಗೆ ಮಾಡಿದರೆ ಹೇಗೆ? ನಾನು ನಿನಗೆ ಉಂಗುರ ಕೊಡುವುದಿಲ್ಲ, ನೀನು ಉಂಗುರವಿಲ್ಲದ ಖಾಲಿ ಬೆರಳು ನೋಡಿಕೊಂಡಾಗಲೆಲ್ಲ ನಿನಗೆ ನನ್ನ ನೆನಪಾಗುತ್ತದೆ. ನನ್ನ ಮರೆಯುವ ಸಾಧ್ಯತೆಯೇ ಇರುವುದಿಲ್ಲ.“

ಮುಲ್ಲಾ ನಗುತ್ತ ಉತ್ತರಿಸಿದ.

Leave a Reply