ಮೂಲ: Dalai Lama XIV| ಕನ್ನಡಕ್ಕೆ: ಚಿದಂಬರ ನರೇಂದ್ರ
ಈ ಮೂರು R ಗಳನ್ನ ಗೌರವಿಸಿ…
1. Respect for Self : ನಮ್ಮನ್ನ ನಾವು ಗೌರವಿಸಿಕೊಳ್ಳುವುದು.
2. Respect for others : ಇತರರನ್ನು ಗೌರವಿಸುವುದು.
3. Responsibility for all your actions : ನಮ್ಮ ಎಲ್ಲ ಕ್ರಿಯೆಗಳ ಜವಾಬ್ದಾರಿಯನ್ನ ನಾವೇ ವಹಿಸಿಕೊಳ್ಳುವುದು.
ಅದು ಹೇಗೆ…
1. ನಮ್ಮನ್ನ ನಾವು ಗೌರವಿಸಿಕೊಳ್ಳುವುದು :
ನಿಮಗೆ ಬದುಕುವ, ಆನಂದದಿಂದ ಇರುವ , ಸ್ವಾತಂತ್ರ್ಯವನ್ನು ಆಚರಿಸುವ, ಆಸೋಚನೆಗಳನ್ನು, ನಂಬಿಕೆಗಳನ್ನು ಹೊಂದುವ ಹಕ್ಕು ಇದೆ. ನೀವು ನಿಮ್ಮ ಸ್ವಂತದ ವ್ಯಕ್ತಿತ್ವವನ್ನ , ನಿಮ್ಮ ವೈಶಿಷ್ಟ್ಯವನ್ನ (individuality) ಗೌರವಿಸಿಕೊಳ್ಳದ ತನಕ ಬೇರೆ ಯಾರಿಂದಲೂ ಗೌರವವನ್ನು ನಿರೀಕ್ಷಿಸಬೇಡಿ. ಮುಖ್ಯ ಸಮಸ್ಯೆ ಏನೆಂದರೆ ನಮಗೆ ನಮ್ಮ ಮೇಲೆಯೇ ಸಂಶಯ. ನಾವು ಎಷ್ಟೊಂದು ಸಂಗತಿಗಳನ್ನ ನಮ್ಮ ಮೇಲೆ ಹಾಕಿಕೊಳ್ಳುತ್ತಿದ್ದೇವೆಯೆಂದರೆ, ನಮ್ಮ ಸ್ವಂತ ವ್ಯಕ್ತಿತ್ವ ಮಾಯವಾಗಿಬಿಟ್ಟಿದೆ. ನಾವು ನಮ್ಮನ್ನೇ ಮರೆತುಬಿಟ್ಟಿದ್ದೇವೆ, ವಿಷಯ ಹೀಗಿರುವಾಗ ಬೇರೆಯವರು ಹೇಗೆ ತಾನೇ ನಮ್ಮನ್ನು ಗುರುತಿಸುತ್ತಾರೆ, ಮೊದಲು ನಮ್ಮ ಸ್ವತಂತ್ರ ವ್ಯಕ್ತಿತ್ವನ್ನು ಮುನ್ನೆಲೆಗೆ ತಂದು ನಮ್ಮನ್ನು ನಾವು ಗೌರವಿಸುವುದನ್ನ ಕಲಿಯೋಣ, ಸ್ವತಃ ಒಂದು ಪವಾಡವಾಗಿರುವ ನಮ್ಮನ್ನು ನಾವು ಬೆರಗಿನಿಂದ, ಪ್ರೀತಿಯಿಂದ, ಗೌರವದಿಂದ ಎದುರುಗೊಳ್ಳೋಣ.
2. ಇತರರನ್ನು ಗೌರವಿಸುವುದು :
ನಾವು ನಮ್ಮನ್ನ ಪ್ರೀತಿಸಲು, ಗೌರವಿಸಲು ಶುರುಮಾಡುತ್ತಿದ್ದಂತೆಯೇ, ನಾವು ಇತರರನ್ನೂ ಇದೇ ಭಾವದಿಂದ ಕಾಣುವುದನ್ನ ರೂಢಿಸಿಕೊಳ್ಳಬೇಕು. ಜನ ನಿಮ್ಮನ್ನ ಹೇಗೆ ಕಾಣಬೇಕೆಂದು ನೀವು ಬಯಸುತ್ತೀರೋ, ನೀವು ಕೂಡ ಜನರನ್ನ ಹಾಗೆ ಕಾಣಲು ಆರಂಭಿಸಬೇಕು. ಜನ ನಮ್ಮನ್ನ ಪ್ರೀತಿಸುವಾಗ, ಗೌರವಿಸುವಾಗ ನಮಗೆ ಖುಶಿಯಾಗುತ್ತದೆ, ಬೇರೆಯವರ ಭಾವನೆಗಳು ಕೂಡ ಹೀಗೆ ಇರುತ್ತವೆ ಎನ್ನುವುದನ್ನ ನಾವು ನೆನಪಿಟ್ಟುಕೊಳ್ಳಬೇಕು. ಎಲ್ಲರ ಹಕ್ಕುಗಳನ್ನೂ ಗೌರವಿಸೋಣ, ಅವರು ಸರಿಯಿದ್ದಾಗ ಅಥವಾ ಅವರು ತಪ್ಪು ಮಾಡಿದಾಗ ಕೂಡ. ಅವರಿಗೆ ಇರುವ ಅವರ ಬದುಕನ್ನ ಬದುಕುವ ಹಕ್ಕನ್ನ ಗುರುತಿಸಿ ಗೌರವಿಸೋಣ. ಇಲ್ಲಿ ಇತರರನ್ನು ಎನ್ನುವಾಗ ಕೇವಲ ಮನುಷ್ಯರನ್ನಷ್ಟೇ ಅಲ್ಲ, ನಮ್ಮ ಸುತ್ತ ಇರುವ ಎಲ್ಲ ಪ್ರಾಣಿ ಪಕ್ಷಿಗಳು, ಬೆಟ್ಟ ಗುಡ್ಡ, ನದಿ ಸಾಗರ ಸಮಸ್ತ ಪ್ರಕೃತಿಯೂ ಇದರ ಭಾಗ. ಈ ಎಲ್ಲವೂ ನಮ್ಮ ಗೌರವಕ್ಕೆ, ನಮ್ಮ ಪ್ರೀತಿಗೆ , ಮತ್ತು ನಮ್ಮ ಜವಾಬ್ದಾರಿಗೆ ಒಳಪಟ್ಟಿರುವಂಥವು.
3. ನಮ್ಮ ಎಲ್ಲ ಕ್ರಿಯೆಗಳ ಜವಾಬ್ದಾರಿಯನ್ನ ನಾವೇ ವಹಿಸಿಕೊಳ್ಳುವುದು :
ಇದು ಬಹಳ ಮುಖ್ಯವಾದದ್ದು. ನಮ್ಮ ಸರಿ ತಪ್ಪುಗಳಿಗೆ, ಗ್ರಹಗತಿಯನ್ನ, ನಕ್ಷತ್ರಗಳನ್ನ, ಸಂದರ್ಭಗಳನ್ನ, ಇತರರ ಕ್ರಿಯೆಯನ್ನ, ಕೆಟ್ಟ ದಿನಗಳನ್ನ, ಬ್ಯಾಡ್ ಮೂಡ್ ಗಳನ್ನ, ಅದೃಷ್ಟವನ್ನ, ದುರಾದೃಷ್ಟವನ್ನ ಕಾರಣವನ್ನಾಗಿಸುವುದನ್ನ ನಾವು ಮೊದಲು ನಿಲ್ಲಿಸಬೇಕು. ಬದುಕಿನ ಸನ್ನಿವೇಶಗಳಿಗೆ ನಾವು ತೋರುವ ಪ್ರತಿಕ್ರಿಯೆಗಳ ಪೂರ್ಣ ಜವಾಬ್ದಾರಿಯನ್ನ ನಾವೇ ಹೊರಬೇಕು. ಬದುಕಿನ ಸಂದರ್ಭಗಳಿಗೆ ನಾವು ನೀಡುವ ಪ್ರತಿಕ್ರಿಯೆಯನ್ನ, ಬದುಕಿನ ಕುರಿತಾದ ನಮ್ಮ ಧೋರಣೆಯನ್ನ ನಾವು ಜವಾಬ್ದಾರಿಯಿಂದ ನಿಭಾಯಿಸಿದಾಗ ನಮ್ಮ ಬದುಕು ಮೊದಲಿಗಿಂತಲೂ ಹೆಚ್ಚು ಅರ್ಥಪೂರ್ಣ, ಹೆಚ್ಚು ಚೇತೋಹಾರಿ ಆಗುತ್ತದೆ.