ಅಸ್ತಿತ್ವವೇ ಘನತೆ, ಗೌರವ : ಓಶೋ ವ್ಯಾಖ್ಯಾನ

ಈ ಜಗತ್ತಿನಲ್ಲಿ ಹುಟ್ಟಿಸಿ ನಿಮ್ಮನ್ನು ಈಗಾಗಲೇ ಗೌರವಿಸಿಬಿಟ್ಟಿದೆ ಅಸ್ತಿತ್ವ, ನಿಮಗೆ ಇನ್ಯಾರ ಗೌರವ ಬೇಕು? ಅಸ್ತಿತ್ವ ನಿಮಗೆ ಸಾಕಷ್ಟು ಘನತೆ, ವೈಭವವನ್ನು ಕೊಟ್ಟುಬಿಟ್ಟಿದೆ, ಅದು ನಿಮಗೆ ಬದುಕನ್ನು ಕೊಟ್ಟಿದೆ, ಬದುಕನ್ನ ಸಂಭ್ರಮಿಸುವ ಅವಕಾಶಗಳನ್ನು ಕೊಟ್ಟು ಆಶೀರ್ವಾದ ಮಾಡಿದೆ… ~ ಓಶೋ ರಜನೀಶ್ | ಕನ್ನಡಕ್ಕೆ; ಚಿದಂಬರ ನರೇಂದ್ರ

ನನಗೆ,
ನಿನ್ನ ಬಗ್ಗೆ ಗೊತ್ತಿರುವುದು
ಜಾಣತನವಾದರೆ
ನನ್ನ ಬಗ್ಗೆ ಗೊತ್ತಿರುವುದು
ಜ್ಞಾನ.

ನಾನು,
ನಿನ್ನ ಸೋಲಿಸುವುದು ಅಧಿಕಾರವಾದರೆ
ನನ್ನ ಗೆಲ್ಲುವುದು ಪರಮ ಶಕ್ತಿ.

ಮುನ್ನುಗ್ಗುವುದು ಹಟ
ನಿಂತಲ್ಲೇ ನಿರಾಳವಾಗುವುದು ಧೈರ್ಯ

ಇರುವುದು ಸಾಕಷ್ಟು ಎನ್ನುವವ ಶ್ರೀಮಂತ
ಸತ್ತ ಮೇಲೂ ಬಾಳುವವ ಚಿರಂಜೀವಿ.

~ ಲಾವೋತ್ಸೇ


ಲಾವೋತ್ಸೇ ಹೇಳುತ್ತಾನೆ, “ನನಗೆ ಅಪಮಾನ ಮಾಡುವುದು ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ನನಗೆ ಯಾವ ಗೌರವವೂ ಬೇಕಿಲ್ಲ”. ಇದು ಗೌರವವನ್ನು ನಿಭಾಯಿಸುವ ರೀತಿ.

ಲಾವೋತ್ಸೇ ಮುಂದುವರೆದು ಹೇಳುತ್ತಾನೆ, “ ನನ್ನನ್ನು ಸೋಲಿಸುವುದು ಯಾರಿಂದಲೂ ಸಾಧ್ಯವಿಲ್ಲ ಏಕೆಂದರೆ ಗೆಲ್ಲುವ ವಿಚಾರವನ್ನೇ ನಾನು ತ್ಯಜಿಸಿಬಿಟ್ಟಿದ್ದೇನೆ. ನನ್ನನ್ನು ಸೋಲಿಸುವುದು ಯಾರಿಗೆ ಸಾಧ್ಯ? ಯಾರು ಗೆಲುವನ್ನು ಎದುರು ನೋಡುತ್ತಿದ್ದಾರೋ ಅವರನ್ನು ಮಾತ್ರ ಸೋಲಿಸಬಹುದು.” ಇದು ವಿಚಿತ್ರ ಅನಿಸಿದರೂ ವಾಸ್ತವ.

ಈ ಜಗತ್ತಿನಲ್ಲಿ ಯಾರು ಗೌರವವನ್ನು ಬಯಸುತ್ತಿಲ್ಲವೋ ಗೌರವ ಅವರನ್ನೇ ಹುಡುಕಿಕೊಂಡು ಬರುತ್ತದೆ. ಯಾರು ಯಶಸ್ಸನ್ನು ನಿರೀಕ್ಷಿಸುತ್ತಿಲ್ಲವೋ, ಯಶಸ್ಸು ಅವರ ಪಾಲಾಗುತ್ತದೆ. ಏಕೆಂದರೆ ಯಾರು ಯಶಸ್ಸನ್ನ ಬಯಸುತ್ತಿಲ್ಲವೋ ಅವರು ಈಗಾಗಲೇ ತಮ್ಮನ್ನು ತಾವು ಯಶಸ್ವಿಗಳೆಂದು ಮಾನ್ಯ ಮಾಡಿಕೊಂಡುಬಿಟ್ಟಿದ್ದಾರೆ. ನಿಮ್ಮೊಳಗಿನ ಅಸ್ತಿತ್ವ ನಿಮ್ಮನ್ನು ಈಗಾಗಲೇ ಯಶಸ್ವಿ ಎಂದು ಗೌರವಿಸಿಬಿಟ್ಟಿದೆ, ಬೇರೆ ಹೆಚ್ಚಿನದು ಏನು ಬೇಕು ನಿಮಗೆ?

ಈ ಜಗತ್ತಿನಲ್ಲಿ ಹುಟ್ಟಿಸಿ ನಿಮ್ಮನ್ನು ಈಗಾಗಲೇ ಗೌರವಿಸಿಬಿಟ್ಟಿದೆ ಅಸ್ತಿತ್ವ, ನಿಮಗೆ ಇನ್ಯಾರ ಗೌರವ ಬೇಕು? ಅಸ್ತಿತ್ವ ನಿಮಗೆ ಸಾಕಷ್ಟು ಘನತೆ, ವೈಭವವನ್ನು ಕೊಟ್ಟುಬಿಟ್ಟಿದೆ, ಅದು ನಿಮಗೆ ಬದುಕನ್ನು ಕೊಟ್ಟಿದೆ, ಬದುಕನ್ನ ಸಂಭ್ರಮಿಸುವ ಅವಕಾಶಗಳನ್ನು ಕೊಟ್ಟು ಆಶೀರ್ವಾದ ಮಾಡಿದೆ. ಈ ಅವಕಾಶಗಳನ್ನು ಉಪಯೋಗ ಮಾಡಿ, ನಿಮ್ಮ ಸುತ್ತಲಿನ ಹಸಿರನ್ನ, ಹೂವುಗಳನ್ನ, ಹಕ್ಕಿಗಳನ್ನ ಆನಂದಿಸಿ, ಪ್ರಕೃತಿಯ ಸಂಗೀತಕ್ಕೆ ಕಿವಿಯಾಗಿ. ಅಸ್ತಿತ್ವ ನಿಮಗೆ ಅರಿವನ್ನು ಕೊಟ್ಟಿದೆ, ಬುದ್ಧನಾಗುವ ಅವಕಾಶವನ್ನು ದಯಪಾಲಿಸಿದೆ. ಬೇರೆ ಇನ್ನೇನು ಬೇಕು ನಿಮಗೆ? ನಿಮಗೆ ಸಲ್ಲಬೇಕಾದ ಎಲ್ಲ ಗೌರವಗಳನ್ನೂ ನೀವು ಈಗಾಗಲೇ ಪಡೆದುಬಿಟ್ಟಿರುವಿರಿ. ಅಸ್ತಿತ್ವ ನಿಮ್ಮನ್ನು ಈಗಾಗಲೇ ಮಾನ್ಯ ಮಾಡಿಬಿಟ್ಟಿದೆ, ಭಿಕ್ಷುಕರಂತೆ ಬೇರೆ ಯಾರಿಂದ ಸರ್ಟಿಫಿಕೇಟ್ ನಿರೀಕ್ಷಿಸುತ್ತಿರುವಿರಿ? ಯಾರು ನಿಮ್ಮಿಂದ ಸರ್ಟಿಫಿಕೇಟ್ ಭಿಕ್ಷೆ ಬೇಡುತ್ತಿದ್ದಾರೋ ಅವರಿಂದ?

ಇದು ತುಂಬ ತಮಾಷೆಯ ಸನ್ನಿವೇಶ. ಇಬ್ಬರು ಭಿಕ್ಷುಕರು ಪರಸ್ಪರರಿಂದ ಭಿಕ್ಷೆಯನ್ನು ನಿರೀಕ್ಷಿಸುತ್ತಿದ್ದಾರೆ. ಇಬ್ಬರೂ ಭಿಕ್ಷುಕರು, ಇಲ್ಲಿ ನಿಮಗೆ ಸಿಗುವುದಾದರೂ ಏನು? ನೀವು ಯಾರಿಂದ ಗೌರವವನ್ನು ನಿರೀಕ್ಷಿಸುತ್ತಿದ್ದೀರಿ? ನಿಮ್ಮ ಎದುರು ನಿಂತಿರುವವರಾದರೂ ಯಾರು? ಹೀಗೆ ಮಾಡುವ ಮೂಲಕ ನೀವು ನಿಮ್ಮನೇ ಅಪಮಾನ ಮಾಡಿಕೊಳ್ಳುತ್ತಿದ್ದೀರಿ. ಈ ಅಪಮಾನ ನಿಮ್ಮ ಆಳಕ್ಕೆ ಪ್ರವೇಶಮಾಡಿ ನಿಮ್ಮನ್ನು ಪೊಳ್ಳಾಗಿಸುತ್ತದೆ.

ತೃಪ್ತಿ ಎಂದರೆ, ಸಮಾಧಾನ ಎಂದರೆ, ನಿಮ್ಮ ಬಳಿ ಇರುವುದನ್ನ ಸಂಭ್ರಮಿಸುವುದು.

ಒಬ್ಬ ಯುವಕ ತಾನು ಬಡವನಾಗಿದ್ದಕ್ಕೆ ತುಂಬಾ ಬೇಜಾರು ಮಾಡಿಕೊಂಡಿದ್ದ. ಗೆಳೆಯನೊಬ್ಬನ ಸಲಹೆಯ ಮೇರೆಗೆ ಝೆನ್ ಮಾಸ್ಟರ್ ನ ಭೇಟಿಯಾಗಿ ತನ್ನ ಸಂಕಟವನ್ನು ಹೇಳಿಕೊಂಡ.

ಯಾಕೆ ಗೊತ್ತಿಲ್ಲ ನಾನು ಯಾವಾಗಲೂ ಬಡವ.

ನೀನು ನಿಜವಾಗಿಯೂ ಬಡವನಾ? ನನಗ್ಯಾಕೋ ನೀನು ಸುಳ್ಳು ಹೇಳುತ್ತಿರುವೆ ಎಂದು ಅನಿಸುತ್ತದೆ.

ಇಲ್ಲ ನಿಜವಾಗಿಯೂ ನಾನು ಬಡವನೇ. ನನಗೆ ಮನೆಯಿಲ್ಲ, ಹೊಲ ಇಲ್ಲ, ಆಸ್ತಿ ಇಲ್ಲ.

ಸಾವಿರ ನಾಣ್ಯ ಕೊಡುತ್ತೇನೆ ನಿನ್ನ ಬೆರಳು ಕತ್ತರಿಸಿ ಕೊಡುತ್ತೀಯಾ ಹಾಗಾದರೆ?

ಇಲ್ಲ, ಸಾಧ್ಯವಿಲ್ಲ.

ಹಾಗಾದರೆ ಕೈ ಕತ್ತರಿಸಿ ಕೊಡು, ಲಕ್ಷ ನಾಣ್ಯ ಕೊಡುತ್ತೇನೆ.

ಉಹೂಂ. ಇಲ್ಲ ಇಲ್ಲ. ಅದು ಹೇಗಾದೀತು?

ಕಣ್ಣು ಕೊಡು ಮತ್ತೆ, ಐದು ಲಕ್ಷ ನಾಣ್ಯ ಕೊಡುತ್ತೇನೆ.

ಸತ್ತರೂ ಸಾಧ್ಯವಿಲ್ಲ.

ಹೋಗಲಿ, ಹತ್ತು ಲಕ್ಷ ನಾಣ್ಯ ಕೊಡುತ್ತೇನೆ, ನಿನ್ನ ಯೌವ್ವನ ಕೊಡು, ನೀನು ಹೂಂ ಎಂದರೆ ಒಂದು ಸೆಕೆಂಡಿನಲ್ಲಿ ನಿನ್ನ 80 ವರ್ಷದ ಮುದುಕನನ್ನಾಗಿ ಮಾಡುತ್ತೇನೆ.

ಈ ಮಾತು ಕೇಳುತ್ತಿದ್ದಂತೆಯೇ ಯುವಕ ಸುಮ್ಮನಾಗಿಬಿಟ್ಟ.
ತಾನು ಎಷ್ಟು ಶ್ರೀಮಂತ ಎನ್ನುವುದು ಅವನಿಗೆ ಗೊತ್ತಾಗಿಬಿಟ್ಟಿತ್ತು.

Leave a Reply