~ Pema Chödrön | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಬ್ಬಳು ಹರೆಯದ ಯೋಧೆ ಇದ್ದಳು. ಅವಳ ತರಬೇತಿ ಎಲ್ಲ ಮುಗಿದ ನಂತರ ಅವಳ ಗುರು ಹೇಳಿದರು,
“ ನಿನ್ನ ತರಬೇತಿ ಈಗ ಮುಗಿಯಿತು, ಆಯುಧಗಳನ್ನ ಬಳಸುವ ಎಲ್ಲ ವಿಧಾನಗಳೂ ಈಗ ನಿನಗೆ ಚೆನ್ನಾಗಿ ಗೊತ್ತು. ಆದರೆ ನೀನು ಈಗ ಇನ್ನೊಂದು ಮುಖ್ಯ ಸಂತಿಯೊಂದನ್ನು ಕಲಿಯಬೇಕಿದೆ. ನೀನು ಎಲ್ಲರೊಂದಿಗೂ ಹೋರಾಡಬಲ್ಲೆ, ಅವರನ್ನು ಸೋಲಿಸಬಲ್ಲೆ ಆದರೆ ನೀನು ಭಯದೊಂದಿಗೆ ಹೋರಾಡುವುದನ್ನೂ, ಅದನ್ನು ಸೋಲಿಸುವುದನ್ನೂ ಇನ್ನೂ ಕಲಿಯಬೇಕಿದೆ.”
ಆದರೆ ಅವಳಿಗೆ ಭಯ ಎಂದರೆ ದಿಗಿಲು, ಭಯಾನಕ, ಅದರ ಎದುರು ಹೋರಾಡುವುದು ಎಂದರೆ ಆಕ್ರಮಣಕಾರಿ ಆಗುವುದು, ಅದು ಅವಳ ಸ್ನೇಹ ಮನೋಭಾವಕ್ಕೆ ವಿರುದ್ಧವಾದದ್ದು. ಭಯದೊಂದಿಗಿನ ಹೋರಾಟವನ್ನು ಆಕೆ ಪ್ರತಿಬಾರಿ ಏನೋ ಒಂದು ಕಾರಣ ಹೇಳಿ ಮುಂದೂಡುತ್ತಿದ್ದಳು.
ಆದರೆ ಗುರು ತನ್ನ ಪಟ್ಟು ಬಿಡಲಿಲ್ಲ, ಭಯದೊಂದಿಗಿನ ಯುದ್ಧ ಮುಗಿಯುವವರೆಗೂ ತಾನು ಅವಳನ್ನು ಸ್ನಾತಕ ಎಂದು ಘೋಷಿಸುವುದಿಲ್ಲ ಎಂದು ಹಟ ಹಿಡಿದರು. ಕೊನೆಗೆ ಉಪಾಯವಿಲ್ಲದೆ ಆಕೆ ಭಯದ ಜೊತೆಗಿನ ಕೊನೆಯ ಹೋರಾಟಕ್ಕೆ ಸಿದ್ಧಳಾದಳು.
ಕೊನೆಗೂ ಯುದ್ಧದ ದಿನ ಬಂತು ಒಂದು ಬದಿಯಲ್ಲಿ ಯೋಧೆ ಆತಂಕದಲ್ಲಿ ನಿಂತುಕೊಂಡಿದ್ದರೆ ಇನ್ನೊಂದು ಬದಿಯಲ್ಲಿ ಭಯ ನಗುನಗುತ್ತ ನಿಂತುಕೊಂಡಿತ್ತು. ಭಯಾನಕ ಆಯುಧ ಝಳಪಿಸುತ್ತ ನಿಂತುಕೊಂಡಿದ್ದ ಭಯದ ಎದುರು ಹರೆಯದ ಯೋಧೆ ಬೆದರಿದ ಹರಿಣದಂತೆ ಕಾಣುತ್ತಿದ್ದಳು.
ಕೊನೆಗೊಮ್ಮೆ ದೀರ್ಘ ಉಸಿರೆಳೆದುಕೊಂಡ ಯೋಧೆ ಒಂದು ಹೆಜ್ಜೆ ಮುಂದಿಟ್ಟಳು, ಭಯದ ಎದುರು ತಲೆಬಾಗಿ ಮೂರು ಬಾರಿ ವಂದನೆ ಸಲ್ಲಿಸಿದಳು. “ ನಿನ್ನ ಜೊತೆ ಯುದ್ಧ ಮಾಡಲು ನನಗೆ ನಿನ್ನ ಅನುಮತಿ ಬೇಕು” ಎಂದು ಯುದ್ಧಕ್ಕೆ ಭಯದ ಅನುಮತಿ ಕೇಳಿದಳು.
“ನನಗೆ ನಿನ್ನ ವಿನಯ ಇಷ್ಟವಾಯಿತು. ನನಗೆ ನೀನು ಗೌರವ ಸಲ್ಲಿಸಿದ್ದು ಹಿಡಿಸಿತು. ಯುದ್ಧಕ್ಕಿಂತ ಮೊದಲು ನಿನಗೆ ಏನಾದರೂ ಕೇಳುವುದಿದ್ದರೆ ಕೇಳು” ಭಯ ಆ ಯೋಧೆಗೆ ಅನುಮತಿ ನೀಡಿತು.
“ನನಗೆ ಈ ಯುದ್ಧದಲ್ಲಿ ಗೆಲ್ಲಲೇ ಬೇಕಿದೆ. ಇಲ್ಲದೆ ಹೋದರೆ ನನ್ನ ಗುರು ನನ್ನನ್ನು ಯೋಧೆ ಎಂದು ಮಾನ್ಯ ಮಾಡುವುದಿಲ್ಲ. ಹಾಗಾಗಿ ನಿನ್ನ ಯುದ್ಧದಲ್ಲಿ ಹೇಗೆ ಸೋಲಿಸುವುದು ಎನ್ನುವುದನ್ನ ಹೇಳಿಕೊಂಡು”. ಯೋಧೆ ಬೇಡಿಕೊಂಡಳು.
“ಮಾತು ನನ್ನ ಅತ್ಯಂತ ಮುಖ್ಯ ಆಯುಧ. ನಾನು ನಿನ್ನ ಮುಖದ ಹತ್ತಿರ ಬಂದು ಅತ್ಯಂತ ವೇಗದಿಂದ ಮಾತನಾಡುತ್ತೇನೆ. ನಿನಗೆ ಆಲೋಚನೆ ಮಾಡಲು ಸಮಯ ಕೊಡುವುದಿಲ್ಲ ಆಗ ನಿನಗೆ ಗಲಿಬಿಲಿಯಾಗುತ್ತದೆ, ನೀನು ಹತಾಶಳಾಗುತ್ತೀಯ. ನಾನು ನೀಡಿದ ಆಜ್ಞೆಗಳನ್ನೆಲ್ಲ ಪಾಲಿಸುತ್ತ ನನಗೆ ವಶಳಾಗಿ ಹೋಗುತ್ತೀಯ. ಅಕಸ್ಮಾತ್ ನಾನು ನೀಡಿದ ಆಜ್ಞೆಗಳನ್ನು ನೀನು ಪಾಲಿಸದೇ ಹೋದರೆ, ನನ್ನ ಮಾತುಗಳನ್ನ ನೀನು ಕೇಳದೇ ಹೋದರೆ ನಾನು ನಿರಾಯುಧನಾಗುತ್ತೇನೆ. ಆಗ ನನ್ನನ್ನು ಸೋಲಿಸುವುದು ಬಹಳ ಸುಲಭ. ನೀನು ನನ್ನ ಮಾತು ಕೇಳಬಹುದು, ನನ್ನ ಗೌರವಿಸಬಹುದು, ನನ್ನ ಮಾತುಗಳಿಂದ ಕನ್ವಿನ್ಸ್ ಕೂಡ ಆಗಬಹುದು. ಆದರೆ ನೀನು ನಾನು ಹೇಳಿದಂತೆ ಮಾಡಬಾರದು. ನನ್ನ ಮಾತುಗಳನ್ನು ಉಲ್ಲಂಘಿಸಿದ ಕ್ಷಣದಲ್ಲಿಯೇ ನಿನಗೆ ಅಪಾರ ಸಾಮರ್ಥ್ಯ ಪ್ರಾಪ್ತವಾಗುತ್ತದೆ ಮತ್ತು ನಾನು ನಿರಾಯುಧನಾಗುತ್ತೇನೆ. ಆಗ ನೀನು ನನ್ನ ಸೋಲಿಸಬಹುದು.”
ಭಯ ತನ್ನನ್ನು ಗೌರವಿಸಿದ ಯೋಧೆಗೆ ಗೆಲ್ಲುವ ವಿಧಾನ ಹೇಳಿಕೊಟ್ಟಿತು.
Source ~ Pema Chödrön
(When Things Fall Apart: Heart Advice for Difficult Times )