ಕೇಂದ್ರವನ್ನು ಅರಿಯುವುದು… | ಓಶೋ ವ್ಯಾಖ್ಯಾನ

ನಿಮ್ಮ ಪ್ರಜ್ಞೆ ಆಳವಾದಂತೆಲ್ಲ, ಅದಕ್ಕೆ ನಿಮ್ಮ ಕೇಂದ್ರವನ್ನು ಪ್ರವೇಶಿಸುವುದು ಮತ್ತು ಹೊರಬರುವುದು, ನೀವು ನಿಮ್ಮ ಮನೆಯೊಳಗೆ ಹೋಗಿ ಹೊರಬಂದಷ್ಟೇ ಸುಲಭವಾಗುತ್ತದೆ. ಆಗ ನಿಮಗೆ ಬುದ್ಧತ್ವ ಪ್ರಾಪ್ತವಾಗುತ್ತದೆ, ನೀವು ಬುದ್ಧ ಎಂದು ಕರೆಯಿಸಿಕೊಳ್ಳುತ್ತೀರಿ… ~ ಓಶೋ ರಜನೀಶ್; ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಜದ ಮನುಷ್ಯರು ಬಲ್ಲ
ರಸವಿದ್ಯೆಯ ಬಗ್ಗೆ ಗಮನ ಹರಿಸು.
ನಿನಗೆ ದಯಪಾಲಿಸಲಾಗಿರುವ ಕಷ್ಟಗಳನ್ನು
ಒಮ್ಮೆ ಒಪ್ಪಿಕೊಂಡುಬಿಟ್ಟೆಯಾದರೆ
ಹೊಸ ಬಾಗಿಲೊಂದು
ತೆರೆದುಕೊಳ್ಳುತ್ತದೆ ತಾನೇ ತಾನಾಗಿ .

ಕಠಿಣ ಪರಿಸ್ಥಿತಿಗಳನ್ನು,
ಪರಿಚಿತ ಗೆಳೆಯನೊಬ್ಬನನು ಅಪ್ಪಿಕೊಳ್ಳುವಂತೆ
ಸ್ವಾಗತಿಸು ತೋಳು ಚಾಚಿ,
ಅವನು ತನ್ನ ಜೊತೆಗೆ ತಂದ ಯಾತನೆಗಳ
ಪಕ್ಕೆ ಹಿಂಡಿ ತಮಾಷೆ ಮಾಡು.

ದುಃಖಗಳು,
ಚಿಂದಿ ಬಟ್ಟೆಯ ಕೌದಿಯ ಹಾಗೆ
ಕಳಚಿಟ್ಟು ಬಿಡಬೇಕು ಬೇಕಾದಾಗ ಹೊದ್ದು.

ಈ ಕಳಚುವಿಕೆ ಮತ್ತು
ಅದರ ಕೆಳಗಿನ ಬೆತ್ತಲೆ ದೇಹಗಳೇ
ಸಂಕಟದ ನಂತರ
ಒದಗಿ ಬರುವ ಅಮೃತದ ಹನಿಗಳು

~ ರೂಮಿ


ನೀವು ಹಲವಾರು ಗಂಟೆಗಳ ಕಾಲ ತಿರುಗುತ್ತಿದ್ದರೆ ನಿಮ್ಮ ಕೇಂದ್ರದಲ್ಲಿರುವ ಏನೋ ಒಂದು ತಿರುಗದೇ ನಿಶ್ಚಲವಾಗಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಆ ನಿಶ್ಚಲವಾಗಿರುವುದೇ ನಿಜವಾದ ನೀವು. ನಿಮ್ಮ ದೇಹ ತಿರುಗುತ್ತಿದೆ ಆದರೆ ನಿಮ್ಮ ಪ್ರಜ್ಞೆ ಬೆಳಕಿನ ಕಂಬದಂತೆ ಗಟ್ಟಿಯಾಗಿ ನಿಂತು ಬೆಳಕು ಚೆಲ್ಲುತ್ತಿದೆ.

ರೂಮಿ ತನ್ನ ಮೊದಲ ಜ್ಞಾನೋದಯವನ್ನು ಅನುಭವಿಸಿದ್ದು ಹೀಗೆ ಸತತ ಮೂವತ್ತಾರು ಗಂಟೆಗಳ ಕಾಲ ತಿರುಗುವುದರ ಮೂಲಕ. ಹೀಗೆ ನಿರಂತರವಾಗಿ ತಿರುಗುತ್ತಿದ್ದ ರೂಮಿಯನ್ನ ಜನ ಹುಚ್ಚ ಎಂದು ತಿಳಿದುಕೊಂಡಿದ್ದರು. ಇಂದಿಗೂ ರೂಮಿಯ ಹಿಂಬಾಲಕರು ಎಂದು ಕರೆಯಿಸಿಕೊಳ್ಳುವ ಸಣ್ಣ ಗುಂಪಿನ ಜನ ಹೀಗೆ ತಿರುಗುವ ಆಚರಣೆಯನ್ನ ಮುಂದುವರೆಸಿದ್ದಾರೆ. ಇವರನ್ನ ತಿರುಗುವ ದರ್ವೇಶಿಗಳು (whirling dervishes) ಎಂದು ಕರೆಯಲಾಗುತ್ತದೆ. ಈ ತಿರುಗುವ ಪ್ರಕ್ರಿಯೆಯಲ್ಲಿ ನಿಮ್ಮ ದೇಹ ಚಂಡಮಾರುತವಾಗುತ್ತದೆ ಮತ್ತು ನಿಮ್ಮ ಸ್ವಯಂ ಸಾಕ್ಷಿ (witnessing self) ಕೇಂದ್ರವಾಗುತ್ತದೆ. ನಿಮ್ಮ ಸುತ್ತಲಿನ ಸಮಸ್ತವೂ ತಿರುಗುತ್ತಿದ್ದರೆ ಕೇಂದ್ರ ಮಾತ್ರ ಅಚಲವಾಗಿರುತ್ತದೆ. ಈ ನಿಶ್ಚಲ ಕೇಂದ್ರವನ್ನು ತಿಳಿದುಕೊಳ್ಳುವುದೆಂದರೆ, ಬದುಕಿನ ರಹಸ್ಯಗಳ ಮಾಸ್ಟರ್ ಕೀ ಯನ್ನು ದೊರಕಿಸಿಕೊಂಡಂತೆ.

ನಿಮ್ಮ ಪ್ರಜ್ಞೆ ಆಳವಾದಂತೆಲ್ಲ, ಅದಕ್ಕೆ ನಿಮ್ಮ ಕೇಂದ್ರವನ್ನು ಪ್ರವೇಶಿಸುವುದು ಮತ್ತು ಹೊರಬರುವುದು, ನೀವು ನಿಮ್ಮ ಮನೆಯೊಳಗೆ ಹೋಗಿ ಹೊರಬಂದಷ್ಟೇ ಸುಲಭವಾಗುತ್ತದೆ. ಆಗ ನಿಮಗೆ ಬುದ್ಧತ್ವ ಪ್ರಾಪ್ತವಾಗುತ್ತದೆ, ನೀವು ಬುದ್ಧ ಎಂದು ಕರೆಯಿಸಿಕೊಳ್ಳುತ್ತೀರಿ.

ನಂತರ ನಿಮ್ಮ ಕೇಂದ್ರ ನಿಧಾನವಾಗಿ ತನ್ನ ಪರಿಧಿಯನ್ನ ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. ಆಗ ನಿಮಗೆ ಹಿಂಸಾತ್ಮಕ, ವಿನಾಶಕಾರಿಯಾಗುವುದು ಸಾಧ್ಯವಾಗುವುದಿಲ್ಲ. ಆಗ ಪ್ರೇಮ ನಿಮ್ಮ ಸಮಸ್ತವನ್ನೂ ತುಂಬಿಕೊಳ್ಳುತ್ತದೆ. ಆಗ ಮೌನ ನಿಮ್ಮನ್ನು ಅಪ್ಪಿಕೊಳ್ಳುತ್ತದೆ, ಸತ್ಯ ನಿಮ್ಮನ್ವು ಆವರಿಸಿಕೊಳ್ಳುತ್ತದೆ. ಚಂಡಮಾರುತದಂತೆ ನಿಮ್ಮ ಸುತ್ತಲೂ ತಿರುಗುತ್ತಿದ ಸಮಸ್ತವೂ ಮಾಯವಾಗಿ ಕೇಂದ್ರ ಮಾತ್ರ ಉಳಿದುಕೊಳ್ಳುತ್ತದೆ. ಆ ಕೇಂದ್ರ ಎಲ್ಲವನ್ನೂ ಒಳಗೊಂಡಿರುತ್ತದೆ.

Leave a Reply