ಎರಡಲ್ಲದ ಅಲೆಯೂ ನೀರೂ : ಗುರು ವಚನ

ನಾರಾಯಣಗುರುಗಳ ‘ಆತ್ಮೋಪದೇಶ ಶತಕಂ’ ಎಂಬ ಕಾವ್ಯಾತ್ಮಕ ತಾತ್ವಿಕ ಕೃತಿಯ ವ್ಯಾಖ್ಯಾನದ ಮುನ್ನುಡಿಯಲ್ಲಿ ಗುರು ನಿತ್ಯಚೈತನ್ಯ ಯತಿ (1924-1999) ದಾಖಲಿಸಿರುವ ಘಟನೆಯಿದು. ಇದನ್ನು ತನ್ನ ಗುರುವಾದ ನಟರಾಜ ಗುರು ತನಗೆ ಹೇಳಿದ್ದರೆಂದು ವಿವರಿಸುವ ನಿತ್ಯಚೈತನ್ಯರು ಇದರಲ್ಲಿ ಬರುವ ಶಿಷ್ಯ ಸ್ವತಃ ನಟರಾಜಗುರುವೇ ಆಗಿದ್ದಿರಬಹುದು ಎನ್ನುತ್ತಾರೆ… । ಕನ್ನಡ ಅನುವಾದ: ಎನ್.ಎ.ಎಮ್.ಇಸ್ಮಾಯಿಲ್.

ನಾರಾಯಣಗುರು ಒಮ್ಮೆ ಹೊಸ ಶಿಷ್ಯನನ್ನು ಉದ್ದೇಶಿಸಿ “ನಿನಗೆ ವೇದಾಂತ ಗೊತ್ತಿದೆಯೇ” ಎಂದು ಕೇಳಿದರು.

ಯುವ ಶಿಷ್ಯ ಉತ್ತರಿಸಿದೆ: “ಗೊತ್ತಿಲ್ಲ, ಇಷ್ಟಕ್ಕೂ ಅದರಲ್ಲಿ ಗೊತ್ತಾಗುವಂಥದ್ದೇನಿದೆ?”

“ನಿನಗೆ ನೀರು ಹೇಗಿರುತ್ತದೆ ಎಂದು ಗೊತ್ತೇ?” ಗುರುವಿನ ಮರುಪ್ರಶ್ನೆ.

ಶಿಷ್ಯ ಉತ್ತರಿಸಿದ: “ಗೊತ್ತಿದೆ”

ಗುರು ಮತ್ತೆ ಕೇಳಿದರು: “ಅಲೆ ಹೇಗಿರುತ್ತದೆಂದು ಗೊತ್ತೇ?”

“ಗೊತ್ತಿದೆ” ಎಂಬುದು ಶಿಷ್ಯನ ಉತ್ತರ.

ಗುರುಗಳು ಮತ್ತೆ ಕೇಳಿದರು: “ನೀರು ಮತ್ತು ಅಲೆ ಎರಡಲ್ಲ ಎಂದು ಗೊತ್ತೇ?’

“ಹೌದು ಅದೂ ಗೊತ್ತಿದೆ” ಎಂದ ಶಿಷ್ಯ

‘ತಿಳಿಯಲಿಕ್ಕಿರುವುದು ಅಷ್ಟೇ!’ ಎಂದರು ಗುರು.

ಶಿಷ್ಯನ ಜಿಜ್ಞಾಸೆ ಮುಂದುವರೆಯಿತು “ವೇದಾಂತ ಅಷ್ಟು ಸರಳವಾಗಿದ್ದರ ಅದರ ಅಧ್ಯಯನಕ್ಕೆ ಜನರು ಅಷ್ಟೊಂದು ಸಮಯ ವ್ಯಯಿಸುತ್ತಾರೆ?”

“ಏಕೆಂದರೆ ಜನರು ಅಲೆಯೇ ನೀರು ಎಂಬುದನ್ನು ಮರೆಯುತ್ತಾರೆ” ಗುರುವಿನ ಮಾರ್ನುಡಿ

“ನಾವೇಕೆ ಮರೆಯುತ್ತೇವೆ?” ಶಿಷ್ಯನ ಮರುಪ್ರಶ್ನೆ

“ಅದುವೇ ಮಾಯೆ” ಎಂದರು ಗುರು.

“ಮಾಯೆಯನ್ನು ಕಳಚಿಕೊಳ್ಳುವುದು ಹೇಗೆ?” ಎಂಬುದು ಶಿಷ್ಯನ ಜಿಜ್ಞಾಸೆ

ಶಾಂತ ಮುದ್ರೆಯಲ್ಲೇ ಗುರು ನುಡಿದರು: “ಅಲೆಯೂ ನೀರೂ ಎರಡಲ್ಲ ಎಂದು ಅರಿಯುವದರ ಮೂಲಕ”

ಶಿಷ್ಯನ ಪ್ರಶ್ನೆಗಳು ಮುಗಿಯಲಿಲ್ಲ “ಅವರೆಡೂ ಒಂದೇ ಎಂದು ಅರಿಯುವುದರ ಉಪಯೋಗವೇನು”

“ಅದನ್ನರಿತರೆ ನೀನು ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ” ಎಂಬುದು ಗುರುವಾಕ್ಕು!

Leave a Reply