ಮಹಾತ್ಮ ಮತ್ತು ಮಹಾಗುರು ಸಂವಾದ

1925ರ ಮಾರ್ಚ್ 29ರಂದು ಮಹಾತ್ಮಾ ಗಾಂಧಿ ಶಿವಗಿರಿ ಆಶ್ರಮದಲ್ಲಿ ನಾರಾಯಣ ಗುರುಗಳನ್ನು ಭೇಟಿಯಾದರು. ಗಾಂಧೀಜಿ ಇಂಗ್ಲಿಷ್‌ನಲ್ಲೂ ಗುರುಗಳು ಸಂಸ್ಕೃತದಲ್ಲೂ ಮಾತನಾಡಿದರು. ವಕೀಲರಾಗಿದ್ದ ಎನ್. ಕುಮಾರನ್ ದುಭಾಷಿಯಾಗಿದ್ದರು. ಈ ಸಂವಾದದ ಪುಟ್ಟ ಭಾಗವೊಂದು ಇಲ್ಲಿದೆ. ಕನ್ನಡ ಅನುವಾದ : ಎನ್.ಎ.ಎಂ.ಇಸ್ಮಾಯಿಲ್

ಗಾಂಧೀಜಿ: ಕೆಲವರು ಹೇಳುವಂತೆ ಅಹಿಂಸಾತ್ಮಕ ಸತ್ಯಾಗ್ರಹದಿಂದ ಯಾವ ಪ್ರಯೋಜನವೂ ಇಲ್ಲ. ಹಕ್ಕುಗಳನ್ನು ಪಡೆಯಲು ಬಲಪ್ರಯೋಗ ಅನಿವಾರ್ಯ. ಈ ವಿಚಾರದಲ್ಲಿ ಸ್ವಾಮೀಜಿಯ ಅಭಿಪ್ರಾಯವೇನು?

ನಾರಾಯಣ ಗುರು: ಹಿಂಸೆಯಿಂದ ಒಳಿತಾಗುವುದಿಲ್ಲ.

ಗಾಂಧೀಜಿ: ಹಿಂದೂ ಧರ್ಮಶಾಸ್ತ್ರಗಳು ಹಿಂಸೆಯನ್ನು ಬಳಸುವ ಸಲಹೆ ನೀಡಿವೆಯೇ?

ನಾರಾಯಣ ಗುರು: ಪುರಾಣಗಳಲ್ಲಿ ಇದು ಕಾಣಿಸುತ್ತದೆ, ಅದು ರಾಜರು ಮತ್ತಿತರರಿಗೆ ಅದು ಅಗತ್ಯವಿದ್ದಿರಬಹುದು. ಅವರದನ್ನು ಬಳಸಿಯೂ ಇದ್ದಾರೆ. ಆದರೆ ಜನಸಾಮಾನ್ಯರಿಗೆ ಹಿಂಸೆಯ ಅಗತ್ಯವಿಲ್ಲ.

ಗಾಂಧೀಜಿ: ಮತಾಂತರಗೊಳ್ಳಬೇಕು ಮತ್ತು ಅದೇ ಸ್ವತಂತ್ರರಾಗಲು ಇರುವ ಸರಿಯಾದ ಮಾರ್ಗ ಎಂಬ ಅಭಿಪ್ರಾಯ ಕೆಲವರದ್ದಾಗಿದೆ. ಸ್ವಾಮೀಜಿ ಇದಕ್ಕೆ ಅನುವು ಮಾಡಿಕೊಡುತ್ತಾರೆಯೇ?

ನಾರಾಯಣ ಗುರು: ಮತಾಂತರಗೊಂಡವರಿಗೆ ಹಲವು ಸ್ವಾತಂತ್ರ್ಯಗಳು ದೊರೆಯುವುದು ಕಾಣಿಸುತ್ತಿದೆ. ಅದನ್ನು ಕಂಡ ಜನರು ಮತಾಂತರ ಒಳ್ಳೆಯದೆಂದು ಹೇಳಿದರೆ ಅವರನ್ನು ದೂರಲು ಸಾಧ್ಯವಿಲ್ಲ.

ಗಾಂಧೀಜಿ: ಆಧ್ಯಾತ್ಮಿಕವಾದ ಮೋಕ್ಷಕ್ಕೆ ಹಿಂದೂ ಮತವೇ ಸಾಕು ಎಂದು ತಮಗನ್ನಿಸುವುದಿಲ್ಲವೇ?

ನಾರಾಯಣ ಗುರು: ಅನ್ಯ ಮತಗಳಲ್ಲಿಯೂ ಮೋಕ್ಷದ ಮಾರ್ಗಗಳಿವೆಯಲ್ಲವೇ..?

ಗಾಂಧೀಜಿ: ಅನ್ಯಮತಗಳ ಸಂಗತಿಯನ್ನು ಬದಿಗಿಟ್ಟು ನೋಡೋಣ. ಮೋಕ್ಷ ಪಡೆಯಲು ಹಿಂದೂ ಮತವೇ ಸಾಕು ಎಂಬುದರ ಬಗ್ಗೆ ಸ್ವಾಮೀಜಿಯ ಅಭಿಪ್ರಾಯ?

ನಾರಾಯಣ ಗುರು: ಆಧ್ಯಾತ್ಮಿಕವಾದ ಮೋಕ್ಷ ಪಡೆಯಲು ಹಿಂದೂ ಮತ ಸಾಕು. ಆದರೆ ಜನಗಳು ಇಷ್ಟಪಡುವುದು ಲೌಕಿಕ ಸ್ವಾತಂತ್ರ್ಯವನ್ನಲ್ಲವೇ?

ಗಾಂಧೀಜಿ: ನಮ್ಮ ಪ್ರಯತ್ನವೇ ಲೌಕಿಕ ಸ್ವಾತಂತ್ರ್ಯವನ್ನು ಗಳಿಸುವುದಲ್ಲವೇ… ಅದು ಸಫಲವಾಗದೇ ಇರಬಹುದೇ?

ನಾರಾಯಣ ಗುರು: ಅದು ಸಫಲವಾಗದಿರದು. ಆದರೆ ಅದರ ರೂಢಮೂಲವಾದ ಸಮಸ್ಯೆಗಳನ್ನು ನೆನಪಸಿಕೊಂಡರೆ ಪೂರ್ಣಫಲ ಪ್ರಾಪ್ತಿಗೆ ಮಹಾತ್ಮಾಜಿ ಮತ್ತೊಮ್ಮೆ ಅವತರಿಸಬೇಕಾಗಬಹುದು.

Leave a Reply