ಜನ ಟೀಕೆಯನ್ನ ಇಷ್ಟಪಡುವುದಿಲ್ಲ ಎನ್ನುವುದು ಬಹಳಷ್ಟು ಜನರ ಅನಿಸಿಕೆ ಆದರೆ, ಇದು ತಪ್ಪು ತಿಳುವಳಿಕೆ. ಜನ ಮೆಚ್ಚದಿದ್ದರೆ ಸರಿ ಅವರು ನಿಮ್ಮ ಬಗ್ಗೆ ಟೀಕೆಯನ್ನಾದರೂ ಮಾಡಬೇಕು…! ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಅಹಂ ಗೆ ಸಿಕ್ಕಾಪಟ್ಟೆ ಹಸಿವು. ಈ ಹಸಿವು ಪರಿಹಾರವಾಗಬೇಕಾದರೆ ಯಾರಾದರೂ ಅಹಂ ನ ಪೋಷಿಸಬೇಕು, ಅದಕ್ಕೆ ಗಮನ ನೀಡುತ್ತ ಅದರ ಅಸ್ತಿತ್ವವನ್ನು ಗೌರವಿಸಬೇಕು. ಯಾರಾದರೂ ನಿಮ್ಮನ್ವು ಮೆಚ್ಚುತ್ತಾರೆಂದರೆ ಅದು ಸ್ವರ್ಗ, ಯಾರೂ ನಿಮ್ಮ ಕಡೆಗೆ ಗಮನ ನೀಡುತ್ತಿಲ್ಲ, ಎಲ್ಲ ನಿಮ್ಮನ್ನ ನಿರ್ಲಕ್ಷಿಸುತ್ತಿದ್ದಾರೆಂದರೆ ಅದು ನರಕ. ಕೊನೆಪಕ್ಷ ಜನ ನಿಮ್ಮನ್ನು ಮೆಚ್ಚದಿದ್ದರೂ ಅಡ್ಡಿ ಇಲ್ಲ, ಅವರು ನಿಮ್ಮ ಅಸ್ತಿತ್ವವನ್ನು ಗಮನಿಸಬೇಕು, ಟೀಕೆ ಕೂಡ ಮಾಡಬಹುದು ಆದರೆ ಅವರು ನಿಮ್ಮನ್ನು ಗಮನಿಸಬೇಕು ಖಂಡಿತ.
ಅಹಂ ನ ಪೋಷಣೆ ಕುರಿತಂತೆ ಮೂರು ಧೋರಣೆಗಳ ಸಾಧ್ಯತೆ ಇದೆ. ಮೊದಲನೆಯದು, ನಿಮ್ಮನ್ನ ಗುರುತಿಸಲಾಗುತ್ತಿದೆ, ಮೆಚ್ಚಲಾಗುತ್ತಿದೆ, ನಿಮ್ಮ ಬಗ್ಗೆ ಗಮನ ನೀಡಲಾಗುತ್ತಿದೆ.
ಜನ ಟೀಕೆಯನ್ನ ಇಷ್ಟಪಡುವುದಿಲ್ಲ ಎನ್ನುವುದು ಬಹಳಷ್ಟು ಜನರ ಅನಿಸಿಕೆ ಆದರೆ, ಇದು ತಪ್ಪು ತಿಳುವಳಿಕೆ. ಜನ ಮೆಚ್ಚದಿದ್ದರೆ ಸರಿ ಅವರು ನಿಮ್ಮ ಬಗ್ಗೆ ಟೀಕೆಯನ್ನಾದರೂ ಮಾಡಬೇಕು. ಹಾಗಾಗಿ ಜನ ನಿಮ್ಮ ಮೆಚ್ಚುಗೆ ಸಿಗದಿದ್ದಾಗ ನಿಮ್ಮ ಗಮನ ಸೆಳೆಯಲು ನಿಮಗೆ ಇಷ್ಟವಿರದ ಕೆಲಸ ಮಾಡಿ ನೀವು ಅವರನ್ನು ಟೀಕೆ ಮಾಡುವಂತೆ ಪ್ರೇರೇಪಿಸುತ್ತಾರೆ. ಇದು ಅಹಂ ಪೋಷಣೆಯ ಎರಡನೇ ಧೋರಣೆ.
ಮೂರನೇಯದು ಅನಾಸಕ್ತಿ (indifference). ಇದು ಯಾರಿಗೂ ಇಷ್ಟವಿಲ್ಲ. ಜನ ನಿಮ್ಮನ್ನ ಹೊಗಳಬೇಕು ಅಥವಾ ತೆಗಳಬೇಕು ಆದರೆ ನೀವು ಅವರ ನಿರ್ಲಕ್ಷ್ಯವನ್ನ ಖಂಡಿತ ಸಹಿಸಲಾರಿರಿ. ನೀವು ಈ ಅನಾಸಕ್ತಿಯನ್ನ ಇಷ್ಟಪಡುವುದನ್ನ ರೂಢಿ ಮಾಡಿಕೊಳ್ಳುವತನಕ ನಿಮ್ಮ ಅಹಂ ನಾಶವಾಗಲಾರದು. ಅನಾಸಕ್ತಿಯಲ್ಲಿಯೇ ಅಹಂ ನ ಸಾವು ಇದೆ. ನಿಮ್ಮ ಬದುಕು ಯಾರ ಗಮನವನ್ನೂ ಅಪೇಕ್ಷಿಸದಿದ್ದಾಗ ಅಹಂ ತಾನೇ ತಾನಾಗಿ ಇಲ್ಲವಾಗುತ್ತದೆ. ಅನಾಸಕ್ತಿ ಅಹಂಗೆ ವಿಷ ಇದ್ದಂತೆ.
ಆಯ್ಕೆ ಮಾಡುವುದರಿಂದ ದೂರ ಉಳಿಯುವುದು ಕಷ್ಚ ನಿಜ, ಆದರೆ ಪ್ರಯತ್ನ ಮಾಡಿ ಪ್ರತಿಯೊಂದರಲ್ಲೂ … ನಿಮ್ಮೊಳಗೆ ದ್ವೇಷದ ಭಾವನೆ ಹುಟ್ಟಿದಾಗ ದೂರ ಸರಿದು ಮಧ್ಯಕ್ಕೆ ಬನ್ನಿ, ನಿಮ್ಮಲ್ಲಿ ಪ್ರೀತಿ ಹುಟ್ಟಿದಾಗ ಮತ್ತೆ ದೂರ ಸರಿದು ಮಧ್ಯಕ್ಕೆ ಬನ್ನಿ. ನಮ್ಮೊಳಗೆ ಯಾವ ಭಾವನೆ ಇದ್ದರೂ ಮಧ್ಯ ಬಿಟ್ಟು ಕದಲ ಬೇಡಿ. ಆಗ ನಿಮಗೇ ಆಶ್ಚರ್ಯವಾಗುವಂತೆ ಎರಡು ವಿಪರೀತಗಳ ನಡುವಿನ ಒಂದು ಬಿಂದುವಿನಲ್ಲಿ ಎರಡೂ ಭಾವಗಳು ನಾಶವಾದಂತೆ ಒಂದಾಗುತ್ತವೆ ಆಗ ನೀವು ದ್ವೇಷಿಸುವುದೂ ಇಲ್ಲ ಪ್ರೀತಿಸುವುದೂ ಇಲ್ಲ. ಇದನ್ನೇ ಬುದ್ಧ ‘ಉಪೇಕ್ಷಾ’ ಎಂದು ಗುರುತಿಸುತ್ತಾನೆ. ಇದೇ ಬೌದ್ಧರ ಅನಾಸಕ್ತಿ.
ಉಪೇಕ್ಷಾ ಎಂದರೆ ಮಧ್ಯಮ ಮಾರ್ಗ, ಅಲ್ಲಿ ನೀವು ಎರಡೂ ‘ಅತೀ’ ಗಳಿಂದ ಸಮಾನ ದೂರದಲ್ಲಿರುವವರು. ಆಗ ನೀವು “ ನಾನು ಪ್ರೀತಿಸುತ್ತೇನೆ “ ಅಥವಾ “ ನಾನು ದ್ವೇಷಿಸುತ್ತೇನೆ “ ಎಂದು ಹೇಳುವುದಿಲ್ಲ. ಸುಮ್ಮನೇ ನೀವು ಮಧ್ಯಮ ಬಿಂದುವಿನಲ್ಲಿ ಸ್ಥಿರವಾಗಿರುವಿರಿ. ಯಾವುದರ ಜೊತೆಗೂ ನೀವು ಗುರುತಿಸಿಕೊಳ್ಳುವುದಿಲ್ಲ. ಆಗ ಒಂದು “ ಮೀರುವಿಕೆ “ ನಿಮಗೆ ಸಾಧ್ಯವಾಗುವುದು, ಈ ಮೀರುವಿಕೆ ಒಂದು ಅರಳುವಿಕೆ. ಈ ಪ್ರಬದ್ಧತೆಯನ್ನೇ ನಾವು ಸಾಧಿಸಬೇಕಾಗಿರುವುದು.
ಒಮ್ಮೆ ಒಬ್ಬ ಯುವತಿ ಬಾಬಾ ನಸ್ರುದ್ದೀನ ಬಳಿ ಬಂದು ಪ್ರಶ್ನೆ ಮಾಡಿದಳು.
“ಬಾಬಾ ತಾವು ತಮ್ಮ ಪ್ರವಚನದಲ್ಲಿ ಹೇಳ್ತಾ ಇದ್ರಿ, ಅಹಂ ಎಲ್ಲಕ್ಕಿಂತ ದೊಡ್ಡ ಪಾಪ ಅಂತ. ಆದರೆ ಕನ್ನಡಿ ನೋಡಿಕೊಂಡಾಗಲೆಲ್ಲ, ನಾನು ಎಷ್ಟು ಸುಂದರಿ ಅನ್ನೋ ಅಹಂ ಬಂದು ಬಿಡುತ್ತದೆ. ಈ ಪಾಪ ಪರಿಹಾರ ಹೇಗೆ ಮಾಡಿಕೊಳ್ಳೋದು ?”
“ಮಗಳೇ ಅದು ಅಹಂ ಅಲ್ಲ ತಪ್ಪು ಕಲ್ಪನೆ ಮತ್ತು ತಪ್ಪು ಕಲ್ಪನೆ ಪಾಪ ಅಲ್ಲ. ಕಾಳಜಿ ಮಾಡಬೇಡ”.
ಬಾಬಾ ನಸ್ರುದ್ದೀನ್ ಉತ್ತರಿಸಿದ.