ನಮ್ಮೆಲ್ಲರದ್ದು ಅಂಟಿಕೊಳ್ಳುವ ಸ್ವಭಾವ, ಪ್ರೀತಿ ಬಂದಾಗ ನಮಗೆ ಖುಶಿಯಾಗುತ್ತದೆ, ಅದು ಹೊರಟು ನಿಂತಾಗ ನಾವು ನೋವು ಅನುಭವಿಸುತ್ತೇವೆ. ಹೀಗೆ ಮಾಡುವುದು ಪ್ರಜ್ಞಾಹೀನತೆಯ ಕಾರಣವಾಗಿ, ಕೃತಘ್ನತೆಯ ಕಾರಣವಾಗಿ, ತಪ್ಪು ತಿಳುವಳಿಕೆಯ ದೆಸೆಯಿಂದ… ~ ಚಿದಂಬರ ನರೇಂದ್ರ
ಜಗತ್ತಿನ ಪ್ರತಿಯೊಂದೂ
ತಾವೋ ಹಾಡಿದಂತೆ.
ಹುಟ್ಟುವಾಗ ಭೋಳೆ, ಪರಿಪೂರ್ಣ,
ರೆಕ್ಕೆ ಬಿಚ್ಚಿದ ಹಕ್ಕಿ.
ಆಮೇಲೆ, ಸುತ್ತ ಮುತ್ತಲಿನ ಸನ್ನಿವೇಶಗಳೇ
ತಂದೆ, ತಾಯಿ.
ರಾಜ ದರ್ಬಾರುಗಳಲ್ಲಿ ಹಾಡಿದಂತಲ್ಲ ಇದು ,
ಕೋಗಿಲೆಯ ಹಾಗೆ ಸರಾಗ
ತಾವೋ ರಾಗ.
ಕೇವಲ ಹುಟ್ಟಿಸುವುದಲ್ಲ
ಆರೈಕೆ, ಲಾಲನೆ ಪಾಲನೆ, ರಕ್ಷಣೆ
ಎಲ್ಲ ತಾವೋ ಜವಾಬ್ದಾರಿ,
ಕೊನೆಗೆ ತನ್ನೊಳಗೆ ವಾಪಸ್ ಕರೆಸಿಕೊಳ್ಳುವ ತನಕ.
ಸ್ವಾಧೀನದ ಹುಕಿಯಿಲ್ಲದ ಸೃಷ್ಟಿ,
ನಿರೀಕ್ಷೆಗಳ ಆಸೆಯಿಲ್ಲದ ಕ್ರಿಯೆ,
ತಲೆ ತೂರಿಸುವ ಚಾಲಾಕಿಯಿಲ್ಲದ ಸಲಹೆ
ತಾವೋಗೆ ತುಂಬ ಸಹಜ.
ಅಂತಯೇ, ತಾವೋ ಪ್ರೇಮ
ಹುಟ್ಟು ಗುಣ.
~ ಲಾವೋತ್ಸೇ
ಓಶೋ ಹೇಳುತ್ತಾರೆ;
ಹೇಗೆ ಬರುತ್ತದೆಯೋ ಹಾಗೆಯೇ ಹೋಗಿಬಿಡುತ್ತದೆ. ಅದನ್ನ ಹಿಡಿದಿಟ್ಟುಕೊಳ್ಳಲಾಗುವುದಿಲ್ಲ, ಅದಕ್ಕೆ ಅಂಟಿಕೊಳ್ಳುವುದು ಸಾಧ್ಯವಾಗುವುದಿಲ್ಲ. ತಂಗಾಳಿ ಪಿಸುಮಾತಿನಂತೆ ಬರುತ್ತದೆ, ಯಾವ ದೊಡ್ಡ ಸದ್ದನ್ನೂ ಮಾಡುವುದಿಲ್ಲ, ಯಾವ ಘೋಷಣೆಗಳನ್ನೂ ಕೂಗುವುದಿಲ್ಲ, ಸುಮ್ಮನೇ ಬರುತ್ತದೆ, ಅದನ್ನ ಕೇಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ, ಥಟ್ಟನೇ ಹಾಜರಾಗಿರುತ್ತದೆ.
ಥೇಟ್ ಇದೇ ರೀತಿ ದೇವರು ಪ್ರತ್ಯಕ್ಷನಾಗುತ್ತಾನೆ, ಸತ್ಯದ ದರ್ಶನವಾಗುತ್ತದೆ, ಆನಂದ ಆವರಿಸಿಕೊಳ್ಳುತ್ತದೆ, ಪ್ರೇಮ ಅವತರಿಸುತ್ತದೆ. ಈ ಎಲ್ಲವೂ ಬರುವುದು ಪಿಸುಮಾತಿನಂತೆ, ಭೇರಿ ನಗಾರಿಗಳೊಂದಿಗೆ ಅಲ್ಲ. ಅವು ನಿಮ್ಮ ಅನುಮತಿಯನ್ನು ಕೇಳುವುದಿಲ್ಲ, ನಾನು ಬರಲೇ? ಎಂದು ನಿಮ್ಮ ಒಪ್ಪಿಗೆಗಾಗಿ ಕಾಯುವುದಿಲ್ಲ, ಧಿಡೀರನೇ ಹಾಜರಾಗುತ್ತವೆ. ಥೇಟ್ ತಂಗಾಳಿ ಬರುವ ಹಾಗೆ, ಈ ಕ್ಷಣ ಇಲ್ಲದ್ದು ಇನ್ನೊಂದು ಕ್ಷಣ ಇದೆ ಅಷ್ಟೇ.
ಇನ್ನೊಂದು ಸಂಗತಿಯೆಂದರೆ ಅದು ಹೇಗೆ ಬರುತ್ತದೆಯೇ ಹಾಗೆಯೇ ಹೋಗಿಬಿಡುತ್ತದೆ. ಅದನ್ನ ಹಿಡಿದಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ, ಅದಕ್ಕೆ ಅಂಟುಕೊಳ್ಳುವುದು ಅಸಾಧ್ಯ. ಅದು ಇರುವಾಗ ಅದನ್ನ ಅನುಭವಿಸಿ, ಆನಂದಿಸಿ, ಹೊರಟು ನಿಂತಾಗ ಹೋಗಲು ಬಿಟ್ಟು ಬಿಡಿ. ಅದು ಬಂದದ್ದಕ್ಕೆ ನಿಮ್ಮನ್ನು ಆವರಿಸಿಕೊಂಡದ್ದಕ್ಕೆ ಧನ್ಯವಾದ ಹೇಳಿ, ಅದು ಬಿಟ್ಟು ಹೋಗಿದೆಯೆಂದು ಅದರೆ ಮೇಲೆ ಯಾವ ಮುನಿಸು, ಸೇಡು ಇಟ್ಟುಕೊಳ್ಳಬೇಡಿ. ಈ ಬಂದು ಹೋಗುವುದರ ಬಗ್ಗೆ ಏನೂ ಮಾಡಲಿಕ್ಕಾಗುವುದಿಲ್ಲ.
ಆದರೆ ನಮ್ಮೆಲ್ಲರದ್ದು ಅಂಟಿಕೊಳ್ಳುವ ಸ್ವಭಾವ, ಪ್ರೀತಿ ಬಂದಾಗ ನಮಗೆ ಖುಶಿಯಾಗುತ್ತದೆ, ಅದು ಹೊರಟು ನಿಂತಾಗ ನಾವು ನೋವು ಅನುಭವಿಸುತ್ತೇವೆ. ಹೀಗೆ ಮಾಡುವುದು ಪ್ರಜ್ಞಾಹೀನತೆಯ ಕಾರಣವಾಗಿ, ಕೃತಘ್ನತೆಯ ಕಾರಣವಾಗಿ, ತಪ್ಪು ತಿಳುವಳಿಕೆಯ ದೆಸೆಯಿಂದ.
ನೆನಪಿರಲಿ, ಅದು ನಿಮ್ಮ ಅನುಮತಿ ಇಲ್ಲದೆ ಬಂದಿದೆ, ನಿಮ್ಮ ಆನಂದಕ್ಕೆ ಕಾರಣವಾಗಿದೆ, ಹೋಗುವುಗಾಗ ನಿಮ್ಮ ಅನುಮತಿ ಯಾಕೆ ಕೇಳಬೇಕು? ಅದು ನಮ್ಮ ಗ್ರಹಿಕೆಯ ಆಚೆಯಿಂದ ಬಂದ ಉಡುಗೊರೆ, ಅದು ನಿಗೂಢ, ಅದು ನಮ್ಮಿಂದ ಹೊರಟು ಹೋಗುವುದು ಹೀಗೆ ರಹಸ್ಯಮಯವಾಗಿಯೇ.
ಬದುಕನ್ನ ತಂಗಾಳಿ ಎಂದುಕೊಂಡರೆ, ಆಗ ಅಲ್ಲಿ ಯಾವ ಸ್ವಾಧೀನಪಡಿಸಿಕೊಳ್ಳುವಿಕೆ, ಯಾವ ಅಂಟಿಕೊಳ್ಳುವಿಕೆ, ಯಾವ ಹತೋಟಿಯ ಸಾಧ್ಯತೆಯೂ ಇಲ್ಲ. ನಾವು ಅದಕ್ಕೆ ಶರಣಾಗುವುದಷ್ಟೇ ನಮಗೆ ಸಾಧ್ಯವಾಗುವುದು ನಂತರ ಆಗುವುದೆಲ್ಲ ಒಳ್ಳೆಯದಕ್ಕಾಗಿಯೇ.
ಒಂದು ಹಳ್ಳಿಯಲ್ಲಿ, ಮದುವೆಯಾಗದ ಒಬ್ಬ ಸುಂದರ ಯುವತಿ ಗರ್ಭಿಣಿಯಾದಳು. ಅವಳ ತಂದೆ ತಾಯಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಮಗುವಿನ ತಂದೆ ಯಾರೆಂದು ಕೇಳಿದಾಗ, ಗಲಿಬಿಲಿಗೊಳಗಾದ ಯುವತಿ ಗಾಬರಿಯಲ್ಲಿ, ಅದೇ ಊರಿನಲ್ಲಿ ವಾಸವಾಗಿದ್ದ ಝೆನ್ ಮಾಸ್ಟರ್ ಹಕುಯಿನ್ ನ ಹೆಸರು ಹೇಳಿಬಿಟ್ಟಳು.
ತಂದೆ ತಾಯಿ ಮಾಸ್ಟರ್ ಮನೆ ಬಾಗಲಿಗೆ ಬಂದು ಗಲಾಟೆ ಮಾಡತೊಡಗಿದರು. ವಿಷಯ ತಿಳಿದುಕೊಂಡ ಮಾಸ್ಟರ್ “ಹೌದಾ” ಎಂದು ಉತ್ತರಿಸಿ ಸುಮ್ಮನಾದ.
ಈ ಘಟನೆಯಿಂದ ಊರಲ್ಲಿ ಮಾಸ್ಟರ್ ನ ಪ್ರತಿಷ್ಠೆಗೆ ಭಾರೀ ಧಕ್ಕೆಯಾಯಿತು. ಊರ ಜನರೆಲ್ಲ ಅವನನ್ನು ದೂಷಿಸತೊಡಗಿದರು.
ಕೆಲ ತಿಂಗಳುಗಳ ನಂತರ ಆ ಯುವತಿ ಹೆಣ್ಣು ಮಗುವನ್ನು ಹೆತ್ತಳು. ತಂದೆ ತಾಯಿ ಆ ಮಗುವನ್ನು ಎತ್ತಿಕೊಂಡು ಮಾಸ್ಟರ್ ಮನೆಗೆ ಬಂದರು. ಮಗುವನ್ನು ಅವನೇ ಸಾಕಬೇಕು ಎಂದು ಒತ್ತಾಯ ಮಾಡತೊಡಗಿದರು. ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ತನ್ನ ಸುಪರ್ದಿಗೆ ಪಡೆದುಕೊಂಡ.
ಎಷ್ಟೋ ತಿಂಗಳು ಮಾಸ್ಟರ್ ಮಗುವನ್ನು ಅಕ್ಕರೆಯಿಂದ ಬೆಳೆಸಿದ. ಆ ಯುವತಿ ಸುಳ್ಳು ಹೇಳಿದ ಪಾಪಪ್ರಜ್ಞೆ ಸಹಿಸಲಾಗದೇ, ತನ್ನ ತಂದೆ ತಾಯಿಯರಿಗೆ, ಅದೇ ಊರಿನ ಒಬ್ಬ ಯುವಕ ಇದಕ್ಕೆ ಕಾರಣ ಎಂದು ನಿಜ ಹೇಳಿದಳು.
ಕೂಡಲೇ ಯುವತಿಯ ತಂದೆ ತಾಯಿ, ಮಾಸ್ಟರ್ ಮನೆಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಹೇಳಿ, ಅವನ ಕ್ಷಮೆ ಕೇಳಿ ಮಗುವನ್ನು ವಾಪಸ್ಸು ಕೊಡಬೇಕೆಂದು ಬೇಡಿಕೊಂಡರು.
ಮಾಸ್ಟರ್ “ಹೌದಾ” ಎಂದು ಉತ್ತರಿಸಿ, ಮಗುವನ್ನು ಅವರಿಗೆ ಒಪ್ಪಿಸಿದ.
Source: Ôshò—
Everyday Ôshò #87
[ via Bodhisattva Shree Amithaba
Subhuti ]