ಕಂಡಾಗ ಅರಿಯದ್ದು ಕೇಳಿದರೆ ತಿಳಿದೀತೆ? : ಗುರು ವಚನ #6

ನಾರಾಯಣ ಗುರುಗಳ ರೈಲು ಪ್ರಯಾಣವೊಂದರಲ್ಲಿ ಸಂಭವಿಸಿದ ಘಟನೆಯಿದು. ಎಂ.ಕೆ. ಮಧು ಸಂಗ್ರಹಿಸಿದ ‘ಗುರುದೇವ ಚರಿತ್ರಂ’ನಲ್ಲಿ ಇದು ದಾಖಲಾಗಿದೆ. ನಿರ್ದಿಷ್ಟ ದಿನಾಂಕ ಇತ್ಯಾದಿ ವಿವರಗಳಿಲ್ಲ. ಈ ಘಟನೆ ಜಾತಿಯ ಕುರಿತ ಅವರ ನಿಲುವಿಗೆ ಬಹುದೊಡ್ಡ ರೂಪಕ… | ಎನ್.ಎ.ಎಂ.ಇಸ್ಮಾಯಿಲ್

ಗುರುಗಳಿದ್ದ ರೈಲಿನ ಬೋಗಿಯಲ್ಲೇ ಒಂದು ರಾಜ ಕುಟುಂಬವೂ ಅವರ ಜೊತೆಗೆ ಬಂದಿದ್ದ ನಂಬೂದಿರಿಯೂ ಪ್ರಯಾಣಿಸುತ್ತಿದ್ದರು. ಗುರುಗಳು ಆಡುತ್ತಿದ್ದ ಮಾತು, ಚರ್ಚಿಸುತ್ತಿದ್ದ ವಿಚಾರಗಳ ಗಹನತೆ ಅವರ ಗಮನ ಸೆಳೆಯಿತು. ರಾಜ ಕುಟುಂಬದ ಸದಸ್ಯರು ಮತ್ತು ನಂಬೂದಿರಿಯಲ್ಲಿ ಗುರುಗಳ ಕುರಿತ ಗೌರವ ಭಾವನೆಯೊಂದು ಮೊಳೆಯಿತು. ಇವರಾರೋ ಬಹುದೊಡ್ಡ ಜ್ಞಾನಿಯಿರಬೇಕೆಂದು ಭಾವಿಸಿ ಆ ರಾಜ ಹತ್ತಿರ ಬಂದು ಗುರುಗಳನ್ನು ಕೇಳಿದ.

ರಾಜ: ತಮ್ಮ ಹೆಸರು?
ಗುರು: ನಾರಾಯಣ
ರಾಜ: ತಾವು ಜಾತಿಯಲ್ಲಿ ಯಾರು…?
ಗುರು: ಕಂಡರೆ ತಿಳಿಯುವುದಿಲ್ಲವೇ?
ರಾಜ: ಇಲ್ಲ… ತಿಳಿಯುತ್ತಿಲ್ಲ.
ಗುರು: ಕಂಡಾಗ ಅರಿವಾಗದ್ದು ಕೇಳಿದರೆ ತಿಳಿದೀತೆ…?
ಈ ಮಾತುಕತೆ ಹಾಗೆ ಕೊನೆಗೊಂಡಿತು.

ಜಾತಿಯ ಬಗ್ಗೆ ಮತ್ತೊಂದು ಸಂದರ್ಭದಲ್ಲಿ ಗುರುಗಳು ಹೇಳಿದ ಮಾತು ಮೇಲಿನ ಸಂಭಾಷಣೆಯ ಅರ್ಥವನ್ನು ವಿವರಿಸುತ್ತದೆ. “ಒಂದು ನಾಯಿ ಇನ್ನೊಂದು ನಾಯಿಯನ್ನು ಕಂಡರೆ ತಕ್ಷಣ ಅದಕ್ಕೆ ಎದುರಿರುವ ಪ್ರಾಣಿ ತನ್ನದೇ ಜಾತಿಯದ್ದು ಎಂದರಿವಾಗುತ್ತದೆ. ಈ ಸಾಮರ್ಥ್ಯ ಎಲ್ಲಾ ಪ್ರಾಣಿಗಳಿಗೂ ಇದೆ. ಅದಕ್ಕನುಸಾರವಾಗಿಯೇ ಅವು ಬದುಕುತ್ತವೆ. ಮನುಷ್ಯನಿಗೆ ಮಾತ್ರ ತನ್ನ ಜಾತಿಯ ಬಗ್ಗೆ ಸಂಶಯ. ಈ ವಿಷಯದಲ್ಲಿ ಮೃಗಗಳಿಗಿರುವಷ್ಟು ಬುದ್ಧಿಯೂ ಅವನಿಗಿಲ್ಲ. ಎದುರಿಗಿರುವಾತ ಮನುಷ್ಯನಾಗಿದ್ದರೂ ಅವನ ಜಾತಿ ಯಾವುದೆಂದು ಕೇಳುವ ಮೂರ್ಖತನವಿರುವುದು ಮನುಷ್ಯನಿಗೆ ಮಾತ್ರ”

Leave a Reply