ಈಳವ ಶಿವನಿಗೆ ಪರಯ ಕಲಾವಿದನ ನಾದಸ್ವರ ಸೇವೆ : ಗುರು ವಚನ #9

ನಾರಾಯಣ ಗುರುಗಳ ತಾತ್ವಿಕತೆಯ ತಳಹದಿಯೇ ಸಮಾನತೆ. ಲೌಕಿಕದಿಂದ ತೊಡಗಿ ಆಧ್ಯಾತ್ಮಿಕತೆಯ ತನಕದ ಎಲ್ಲ ಸಂಗತಿಗಳಲ್ಲೂ ಮನುಷ್ಯರಲ್ಲಿ ಮೇಲುಕೀಳಿಲ್ಲವೆಂಬುದನ್ನು ಅವರು ನಿರಂತರವಾಗಿ ತೋರಿಸಿಕೊಡುತ್ತಲೇ ಹೋದರು. 1888ರಲ್ಲಿ ಅರುವಿಪ್ಪುರಂನಲ್ಲಿ ‘ಈಳವ ಶಿವ’ನನ್ನು ಪ್ರತಿಷ್ಠಾಪಿಸಿದ ಪ್ರಕರಣ ಪ್ರಸಿದ್ಧ. ಇದೇ ಕಾಲಘಟ್ಟದಲ್ಲಿ ಅವರು ದಲಿತರ ದೇಗುಲ ಪ್ರವೇಶವನ್ನು ಸಾಧಿಸಿದ್ದರೆಂಬ ವಿಚಾರ ಅಷ್ಟಾಗಿ ಪ್ರಚಲಿತವಲ್ಲ. ಸ್ವಾಮಿ ಧರ್ಮಾನಂದರು ಬರೆದಿರುವ ‘ಶ್ರೀನಾರಾಯಣ ಪರಮಹಂಸನ್’ ಎಂಬ ಪುಸ್ತಕದಲ್ಲಿ ಈ ಘಟನೆಯ ಉಲ್ಲೇಖವಿದೆ. ಅದನ್ನು ಅನುವಾದಿಸಲು ಪ್ರಯತ್ನಿಸಿದ್ದೇನೆ… । ಎನ್.ಎ.ಎಂ.ಇಸ್ಮಾಯಿಲ್

ನೈಯ್ಯಾಟಿಂಕರ ತಾಲೂಕಿನ ಚೆಂಕಲ್ಲೂರು ಗ್ರಾಮ ವ್ಯಾಪ್ತಿಯ ಕೈನಿಕ್ಕರದ ಚಾಯನ್ ಎಂಬ ಹೆಸರಿನ ಪರಯ ಜನಾಂಗಕ್ಕೆ ಸೇರಿದಾತ ನಾದಸ್ವರವನ್ನು ನುಡಿಸಲು ಕಲಿತ. ವಾದ್ಯವನ್ನು ನಾರಾಯಣ ಗುರುಗಳ ಹಸ್ತದಿಂದ ಪಡೆಯಬೇಕೆಂಬುದು ಅವನ ವ್ರತವಾಗಿತ್ತು. ಅದಕ್ಕೇನು ಮಾಡಬೇಕು ಎಂದು ಮಾತ್ರ ಆತನಿಗೂ ಗೊತ್ತಿರಲಿಲ್ಲ. ಇದು ಸಂಭವಿಸಿದ್ದು ಕ್ರಿಸ್ತ ಶಕ 1900ಕ್ಕೂ ಮುನ್ನ. ಅರುವಿಪ್ಪುರಂ ಪ್ರತಿಷ್ಠಾಪನೆಯ ಕಾಲಘಟ್ಟದಲ್ಲಿ ಎಂದು ಹೇಳಬಹುದು.

ಅದು ಅರುವಿಪ್ಪುರಂ ದೇಗುಲದ ಉತ್ಸವವೊಂದರ ದಿನ. ಚಾಯನ್ ಮತ್ತು ಆತನ ಸಂಗಡಿಗರು ಅಲ್ಲಿಗೆ ಬಂದು ದೇಗುಲದಿಂದ ಸ್ವಲ್ಪ ದೂರವೇ ನಿಂತಿದ್ದರು. ಇದೇ ಹೊತ್ತಿಗೆ ಕೊಚ್ಚಪ್ಪಿಪ್ಪಿಳ್ಳ ವೈದ್ಯನ್ ಒಂದು ಬಾಳೆಗೊನೆಯೊಂದಿಗೆ ಬಂದು ಗುರುಗಳಿಗರ್ಪಿಸಿದರು. ಚಾಯನ್ ಮತ್ತು ಸಂಗಡಿಗರತ್ತ ಬೆರಳು ಮಾಡಿದ ಗುರುಗಳು ಅವರಿಗೆ ಹಣ್ಣುಗಳನ್ನು ಕೊಡಿ ಎಂದರು. ಅದರಂತೆ ಬಾಳೆಗೊನೆಯನ್ನೆತ್ತಿಕೊಂಡು ಚಾಯನ್ ನಿಂತಿದ್ದ ಕಡೆಗೆ ಹೊಗುತ್ತಿದ್ದ ವೈದ್ಯನ್‌ರನ್ನು ತಡೆದು ಗುರುಗಳು ಹೇಳಿದರು:  ‘ಅವರಿದ್ದಲ್ಲಿಗೆ ಹೋಗಿ ಕೊಡಬೇಡಿ. ಅವರು ಇಲ್ಲಿಯೇ ಬಂದು ಹಣ್ಣುಗಳನ್ನು ಪಡೆಯಲಿ’

ಕೊಚ್ಚಪ್ಪಿಪ್ಪಿಳ್ಳ ವೈದ್ಯನ್ ಬಾಳೆಗೊನೆಯನ್ನು ಗುರುಗಳ ಬಳಿಯೇ ಇಟ್ಟರು. ಚಾಯನ್ ಮತ್ತು ಸಂಗಡಿಗರನ್ನು ಹತ್ತಿರ ಕರೆದು ಗುರುಗಳೇ ಅವರಿಗೆ ಬಾಳೆ ಹಣ್ಣುಗಳನ್ನು ನೀಡಿದರು. ಇದೇ ವೇಳೆ ಚಾಯನ್ ವಿನಂತಿಸಿಕೊಂಡಂತೆ ಆತನ ವಾದ್ಯವನ್ನು ಪಡೆದು ಆಶೀರ್ವದಿಸಿ  ನೀಡಿದರು. ಹಾಗೆ ಚಾಯನ್ ಮಾಡಿದ ಸಂಕಲ್ಪವೂ ಪೂರ್ಣಗೊಂಡಿತು.

ತನ್ನ ವಾದ್ಯವನ್ನು ಗುರುಗಳು ಆಶೀರ್ವದಿಸಿ ನೀಡಿದ್ದರಿಂದ  ಸಂತೋಷಗೊಂಡ ಆ ಕಲಾವಿದ ದೇಗುಲದ ಹೊರಗೆ ನಿಂತು ನಾದಸ್ವರವನ್ನು ನುಡಿಸಲಾರಂಭಿಸಿದ. ಇದನ್ನು ಆಲಿಸಿದ ಗುರುಗಳು ತಕ್ಷಣ ಹೊರಬಂದು “ಹೊರಗೆ ನಿಂತು ನುಡಿಸುತ್ತಿರುವುದೇಕೆ? ಒಳಗೆ ಬಂದು ನುಡಿಸಬಾರದೇ?” ಎಂದರು. ಹಾಗೆಯೇ ದೇಗುಲದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ  “ಇದಕ್ಕೆ ಯಾರ ವಿರೋಧವೂ ಇಲ್ಲವಷ್ಟೇ?” ಎಂದು ಪ್ರಶ್ನಿಸಿದರು.

ಅಂದು ವಿಶೇಷ ದಿನವಾದ್ದರಿಂದ ದೊಡ್ಡ ಸಂಖ್ಯೆಯ ಜನರಿದ್ದರು. ಸಂಪ್ರದಾಯವಾದಿಗಳಾಗಿದ್ದ ಹಲವು ಆಢ್ಯರೂ ಅಲ್ಲಿದ್ದರು. ಆದರೆ ಅವರಾರೂ ಗುರುಗಳ ಮಾತಿಗೆ ಎದುರು ಹೇಳುವ ಧೈರ್ಯ ತೋರಲಿಲ್ಲ. ಚಾಯನ್ ಮತ್ತು ಸಂಗಡಿಗಳು ದೇಗುಲದೊಳಗೇ ನಿಂತು ನಾದಸ್ವರ ನುಡಿಸಿ ಸಂಗೀತ ಸೇವೆಯನ್ನರ್ಪಿಸಿದರು. ಹೀಗೆ ಗುರುಗಳು ಜನರನ್ನು ಎದುರು ಹಾಕಿಕೊಳ್ಳದೆಯೇ ದಲಿತರ ದೇಗುಲ ಪ್ರವೇಶವನ್ನು ಸಾಧಿಸಿ ತೋರಿಸಿಕೊಟ್ಟರು…

Leave a Reply