ಸ್ವಗತದ ಮಹತ್ವ … ಎರಡು ಕತೆಗಳು

ನಮ್ಮೊಡನೆ ನಾವೇ ಸಂಭಾಷಿಸುವುದರ ಮಹತ್ವ ಸಾರುವ ಈ ಎರಡು ಕಥೆಗಳನ್ನು ಹೆಕ್ಕಿ ಅನುವಾದಿಸಿದವರು – ಚಿದಂಬರ ನರೇಂದ್ರ

ಓಶೋ ಹೇಳಿದ ಈ ಪುಟ್ಟ ಝೆನ್ ಕಥೆ ಅಸಂಗತ ಅನಿಸಿದರೂ ತುಂಬ ಅರ್ಥವತ್ತಾದದ್ದು.

ಒಬ್ಬ ಝೆನ್ ಮಾಸ್ಟರ್ ಮೇಲಿಂದ ಮೇಲೆ ತನ್ನನ್ನು ತಾನು ಸಂಬೋಧಿಸಿತೊಳ್ಳುತ್ತಿದ್ದ. ವಾಸ್ತವದಲ್ಲಿ ಇದು ನಿಜವಾದ ಧ್ಯಾನ. ಮಾಸ್ಟರ್ ತನ್ನನ್ನು ತಾನು ಹೆಸರು ಹಿಡಿದು ಮಾತನಾಡಿಸುತ್ತಿದ್ದ,

“ಮಾಸ್ಟರ್ ನೀನು ಇದ್ದೀಯಲ್ವಾ?”

ತನ್ನ ಪ್ರಶ್ನೆಗೆ ಮಾಸ್ಟರ್ ತಾನೇ ಉತ್ತರಿಸುತ್ತಿದ್ದ,

“ಹೌದು ಮಾಸ್ಟರ್ ನಾನು ಇಲ್ಲಿಯೇ ಇದ್ದೀನಿ”.

ಇದು ತನ್ನನ್ನು ತಾನು ಜಾಗ್ರತ ಸ್ಥಿತಿಯಲ್ಲಿಟ್ಟುಕೊಳ್ಳುವ ಪ್ರಯತ್ನದ ಪರಮಾವಧಿ. ನೀವೂ ಈ ಪ್ರಯೋಗ ಮಾಡಬಹುದು. ಇದು ತುಂಬಾ ಪ್ರಯೋಜನಕಾರಿ ವಿಧಾನ.

ಮಾರ್ಕೆಟಿನಲ್ಲಿ ಓಡಾಡುವಾಗ ಥಟ್ಟನೇ ನಿಮ್ಮನ್ನು ನೀವು ಹೆಸರು ಹಿಡಿದು ಸಂಬೋಧಿಸಿ ಪ್ರಶ್ನೆ ಮಾಡಿಕೊಳ್ಳಬಹುದು,

“ಪೀಟರ್ ನೀನು ಇದ್ದೀಯಲ್ವಾ?”

ಓಶೋ ಹೇಳುತ್ತಾರೆ; “ಈ ಪ್ರಶ್ನೆ ನಿಮ್ಮನ್ನು ಫೋಕಸ್ ಗೆ ಕರೆದುಕೊಂಡು ಬರುತ್ತದೆ” ಎಂದು. ಓಶೋ ಹೇಳುವಂತೆ, ನಮ್ಮ ಆಲೋಚನಾ ಸರಣಿ ಕಟ್ ಆಗಿ ನಾವು ಜಾಗೃತ ಧ್ಯಾನಸ್ಥ ಸ್ಥಿತಿಯನ್ನ ತಲುಪುವೆವು. ನಮ್ಮೊಂದಿಗಿನ ಈ ಪ್ರಶ್ನೋತ್ತರ ಬಹಳ ಒಳ್ಳೆಯ ತಂತ್ರ.

ಓಶೋ ಹೇಳುತ್ತಾರೆ,
ರಾತ್ರಿ ಎಲ್ಲ ದೀಪಗಳನ್ನು ಆರಿಸಿ ನಿದ್ದೆಗೆ ಜಾರುವಾಗ ಥಟ್ಟನೇ ಪ್ರಶ್ನೆ ಮಾಡಿಕೊಳ್ಳಿ, “ Are you there?”. ಸುತ್ತಲಿನ ಕತ್ತಲೆಯಲ್ಲಿ ಕೂಡಲೇ ನೀವು ಎಚ್ಚರವಾಗುವಿರಿ, ನೀವು ಸ್ವತಃ ಜ್ವಾಲೆಯಾಗಿ ಹೊತ್ತಿಕೊಂಡು ಉತ್ತರಿಸುವಿರಿ, “Yes I am here”.

ಕತೆಯಲ್ಲಿ ಮಾಸ್ಟರ್ ತನಗೆ ತಾನು ಹೇಳಿಕೊಳ್ಳುತ್ತಿದ್ದ,

“ ಮಾಸ್ಟರ್, ತಾಳ್ಮೆ ಇರಲಿ, ವಿಶ್ವಾಸವಿರಲಿ, ಪ್ರಾಮಾಣಿಕತೆ ಇರಲಿ, ನೈಜತೆ ಇರಲಿ, ಆಟ ಆಡಲು ಹೋಗಬೇಡ, ಸಮಚಿತ್ತ ಇರಲಿ”.

ಮಾಸ್ಟರ್ ತನಗೆ ತಾನೇ ಉತ್ತರಿಸುತ್ತಿದ್ದ ಕೂಡ,

“ಯಸ್ ಮಾಸ್ಟರ್ ಸಾಧ್ಯ ಇರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತೇನೆ”.

ತನ್ನನ್ನು ತಾನು ಸದಾ ಎಚ್ಚರದ ಸ್ಥಿತಿಯಲ್ಲಿ ಇಟ್ಟುಕೊಳ್ಳುವ ಇದಕ್ಕಿಂತಲೂ ಉತ್ತಮ ಉಪಾಯ ನನಗಂತೂ ಬೇರೆ ಗೊತ್ತಿಲ್ಲ – ಅನ್ನುತ್ತಾರೆ ಓಶೋ.

ಒಮ್ಮೆ ನಸ್ರುದ್ದೀನ್ ಒಬ್ಬನೇ ತನಗೆ ತಾನೇ ಏನೋ ಮಾತನಾಡಿಕೊಳ್ಳುತ್ತಿದ್ದ. ಬಹಳ ದಿನಗಳಿಂದ ನಸ್ರುದ್ದೀನ್ ನ ಈ ವರ್ತನೆ ಗಮನಿಸುತ್ತಿದ್ದ ಗೆಳೆಯನೊಬ್ಬ ಈ ಬಗ್ಗೆ ಅವನನ್ನು ಪ್ರಶ್ನಿಸಿದ.

“ನಸ್ರುದ್ದೀನ್, ಯಾಕೆ ನೀನು ಒಬ್ಬನೇ ಮಾತನಾಡಿಕೊಳ್ಳುತ್ತೀ ? ಏನು ಸಮಸ್ಯೆ ?”

“ ಎರಡು ಕಾರಣಗಳು” ನಸ್ರುದ್ದೀನ್ ಉತ್ತರಿಸಿದ

“ ಮೊದಲನೆಯದು ನನಗೆ ಜಾಣ ಮನುಷ್ಯನೊಡನೆ ಮಾತನಾಡುವ ಆಸೆ ಮತ್ತು ಎರಡನೇಯದು ನನಗೆ ಜಾಣ ಮನುಷ್ಯನ ಮಾತುಗಳನ್ನ ಕೇಳುವ ಬಯಕೆ ”


(Osho story taken from: A Bird on the wing / Sober up)

Leave a Reply