“ನಿಮ್ಮ ಸಹಕಾರ ಇರುವುದರಿಂದಲೇ ನಿಮ್ಮ ಸುತ್ತ ನರಕ ಇದೆ” ಅನ್ನುತ್ತಾರೆ ಓಶೋ… । ಚಿದಂಬರ ನರೇಂದ್ರ
ಹಾಫೀಜ್ ನ ದೊಂದು ಪದ್ಯ ಇದೆ…….
ಒಂದು ಸಣ್ಣ ಮನೆಯಲ್ಲಿ
ದುಃಖ ಮತ್ತು ಗೊಂದಲಗಳೊಡನೆ
ವಾಸವಾಗಿದ್ದೆ.
ಆಮೇಲೊಬ್ಬ ಗೆಳೆಯ ಸಿಕ್ಕ
ರಾತ್ರಿಯಿಡೀ ಹಾಡು, ಕುಣಿತ
ಮತ್ತು ಕುಡಿತ.
ದುಃಖ ಮತ್ತು ಗೊಂದಲ
ಸಿಟ್ಟಿಗೇಳತೊಡಗಿದರು
ಆವಾಜ್ ಹಾಕತೊಡಗಿದರು.
“ಈ ಮೋಜು ಮುಂದುವರೆಸಿದರೆ
ಬಿಟ್ಟು ಹೋಗುತ್ತೇವೆ ನೋಡು ಮನೆ”
ಅಹಂ, ದುಗುಡವನ್ನ, ದುಸ್ಥಿತಿಯನ್ನ ನಿಲ್ಲಿಸುವುದು ಹೇಗೆ ಎಂದು ಜನ ಪ್ರಶ್ನೆ ಕೇಳಿದಾಗಲೆಲ್ಲ ಓಶೋ ರಜನೀಶ್ ಹೀಗೆ ಹೇಳುತ್ತಿದ್ದರು……
ನಮ್ಮೊಳಗೆ ನಿರಂತರವಾಗಿ ಪ್ರಕಟವಾಗುತ್ತಿರುವ ಅಹಂ ನ ನಿಲ್ಲಿಸೋದು ಹೇಗೆ ? ಎನ್ನುವ ಪ್ರಶ್ನೆಯನ್ನ ನೀವು ಕೇಳಿದಾಗಲೆಲ್ಲ, ನನಗೆ , ಸೈಕಲ್ ನ ಪೆಡಲ್ ತುಳಿಯುತ್ತಲೇ “ ಈ ಸೈಕಲ್ ನ ನಿಲ್ಲಿಸೋದು ಹೇಗೆ” ಎಂದು ಕಿರುಚಿ ಕೇಳುತ್ತಿರುವ ಮನುಷ್ಯ ಕಣ್ಣ ಮುಂದೆ ಬರುತ್ತಾನೆ.
ಸೈಕಲ್ ನ ನಿಲ್ಲಿಸಬೇಕೆಂದರೆ ಮೊದಲು ನೀವು ಪೆಡಲ್ ತುಳಿಯೋದನ್ನ ನಿಲ್ಲಿಸಬೇಕು. ನೀವು ಪೆಡಲ್ ತುಳಿಯೋದು ನಿಲ್ಲಿಸುವವರೆಗೆ ಸೈಕಲ್ ನಿಲ್ಲುವುದಿಲ್ಲ. ನಿಮ್ಮ ಸಹಾಯವಿಲ್ಲದೇ ತನ್ನಿಂದ ತಾನೇ ಓಡುವ ಯಂತ್ರವಲ್ಲ ಸೈಕಲ್.
ದುಸ್ಥಿತಿ ಇದೆ, ಏಕೆಂದರೆ ಅದು ಇರಲು ನೀವು ಎಲ್ಲ ಸಹಾಯ ಮಾಡುತ್ತಿದ್ದೀರಿ.
ನಿಮ್ಮನ್ನ ಸಂಕಟ ಸತಾಯಿಸುತ್ತಿದೆ, ಏಕೆಂದರೆ ಅದರ ಹಿಂದಿರುವ ಕಾರಣ ನೀವು, ನೀವು ಅದನ್ನು ಪೋಷಣೆ ಮಾಡುತ್ತಿದ್ದೀರಿ.
ನಿಮ್ಮ ಸಹಕಾರ ಇರುವುದರಿಂದಲೇ ನಿಮ್ಮ ಸುತ್ತ ನರಕ ಇದೆ.
ಒಮ್ಮೆ ಈ ಪ್ರಕ್ರಿಯೆ ಪೂರ್ಣವಾಗಿ ನಿಮಗೆ ಮನದಟ್ಟಾಯಿತೆಂದರೆ ಅಹಂ, ತಾನೇ ತಾನಾಗಿ ಕರಗಿ ಹೋಗುತ್ತದೆ. ಇನ್ನು ಮುಂದೆ ನೀವು ಈ ಇಡೀ ಮಿಸರೇಬಲ್ ಆಟದ ಭಾಗವಲ್ಲ. ದೂರ ನಿಂತು ಇದನ್ನೆಲ್ಲ ಗಮನಿಸುವುದು ನಿಮಗೆ ಸಾಧ್ಯವಾಗುತ್ತದೆ. ಈ ಧಿಡೀರ್ ಸ್ಫೋಟ ನಿಮ್ಮೊಳಗೆ ಆದಾಗ, ನಿಮ್ಮೊಳಗೆ ಪ್ರಕಟವಾಗಲು ಯಾವ ಅಹಂ ಇಲ್ಲ, ಓಡಿಸಲು ಯಾವ ಸೈಕಲ್ ಇಲ್ಲ, ತುಳಿಯಲು ಯಾವ ಪೆಡಲ್ ಕೂಡ ಇಲ್ಲ. ಇದು ನೀವು ಸೇತವೆಯನ್ನ ದಾಟಿದ ಕ್ಷಣ.
ಒಮ್ಮೆ ನಸ್ರುದ್ದೀನ್ ತನ್ನ ಶ್ರೀಮಂತ ಗೆಳೆಯನ ಕಾಫೀ ಎಸ್ಟೇಟ್ ನೋಡಲು ಹೋಗಿದ್ದ. ಗೆಳೆಯ ಸೊಕ್ಕಿನಿಂದ ತನ್ನ ಶ್ರೀಮಂತಿಕೆಯ ಬಗ್ಗೆ ಮಾತನಾಡಿದ.
“ ನಾನು ಬೆಳಿಗ್ಗೆ ನನ್ನ ಕಾರಿನಲ್ಲಿ ಹೊರಟರೆ ಸಂಜೆಯಾದರೂ ನನ್ನ ಎಸ್ಟೇಟ್ ನ ಅರ್ಧ ಕೂಡ ಕವರ್ ಮಾಡಲು ಆಗುವುದಿಲ್ಲ. “
“ ನನ್ನ ಹತ್ತಿರ ಕೂಡ ಅಂಥದೊಂದು ಡಬ್ಬಾ ಕಾರ್ ಇತ್ತು ಮಾರಿಬಿಟ್ಟೆ. “
ನಸ್ರುದ್ದೀನ್ ಗಂಭೀರವಾಗಿ ಉತ್ತರಿಸಿದ.
source: Yoga: The Alpha and the Omega, Volume 6 by Osho

