ಒಬ್ಬರು ದೂಷಿಸಿದ ಮಾತ್ರಕ್ಕೆ ಅಥವಾ ಹೊಗಳಿದ ಮಾತ್ರಕ್ಕೆ ನೀವು ಕೆಟ್ಟ ಅಥವಾ ಗ್ರೇಟ್ ವ್ಯಕ್ತಿ ಆಗುವುದಿಲ್ಲ. ಇನ್ನೊಬ್ಬರು ಹೇಳಿದ ಮಾತ್ರಕ್ಕೆ ನಿಮ್ಮೊಳಗಿನ ದೋಷಗಳಿಗೆ ಅಥವಾ ಉತ್ತಮ ಗುಣಗಳಿಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ…~ Garchen Triptrul Rinpoche । ಕನ್ನಡಕ್ಕೆ: ಚಿದಂಬರ ನರೇಂದ್ರ
ಅಸೂಯೆ ಮತ್ತು ಹೆಮ್ಮೆ ತುಂಬಾ ಟ್ರಿಕಿ (tricky) ಸಂಗತಿಗಳು ಮತ್ತು ಇವನ್ನು ಸ್ಪಷ್ಟವಾಗಿ ಗುರುತಿಸುವುದು ಕಷ್ಟಕರ. ಕೆಲವೊಮ್ಮೆ ಇವು ಸಹಜ, ಸ್ವಾಭಾವಿಕ ಅನಿಸಿದರೆ ಒಮ್ಮೊಮ್ಮೆ ಸೂಕ್ಷ್ಮ ಕಸಿವಿಸಿಯ ಭಾವವನ್ನು ಹುಟ್ಟುಹಾಕುತ್ತವೆ. ಉದಾಹರಣೆಗೆ ಯಾರಾದರೂ ನಿಮ್ಮನ್ನ ಗ್ರೇಟ್ ಅಂದಾಗ ನಿಮಗೆ ಖುಶಿಯಾಗುತ್ತದೆ ಆದರೆ, ಅದೇ ವ್ಯಕ್ತಿ ಮುಂದುವರೆದು ಇನ್ನೊಬ್ಬರು ನಿಮಗಿಂತ ಉತ್ತಮ ಎಂದಾಗ ಅದು ಕಸಿವಿಸಿಗೆ ಕಾರಣವಾಗುತ್ತದೆ. ಜನ ನಮ್ಮನ್ನ ಹೊಗಳುವುದು ನಮಗೆ ಇಷ್ಟವಾದರೆ ಇನ್ನೊಬ್ಬರನ್ನು ಹೊಗಳುವುದು ಇಷ್ಟವಾಗುವುದಿಲ್ಲ.
ಅಸೂಯೆ ಮತ್ತು ಹೆಮ್ಮೆಯ ಇಂಥ ಸೂಕ್ಷ್ಮ ಭಾವಗಳು ನಮ್ಮೊಳಗೆ ಇರುವುದನ್ನು ನಾವು ಗುರುತಿಸದೇ ಹೋದರೆ ಮುಂದುವರೆದು ಇವು ಭಯಂಕರ ಭಾವನೆಗಳಾಗಿ ಬೆಳೆದು ನಮ್ಮ ಖುಷಿಯ ಜೊತೆ ಹಾಗು ಇನ್ನೊಬ್ಬರ ಕುರಿತಾದ ನಮ್ಮ ಹಗೆತನದ ಜೊತೆ ಗಂಟು ಹಾಕಿಕೊಳ್ಳುತ್ತವೆ. ಈ ಎಲ್ಲದರ ಮೂಲ ಇರುವುದು ನಮ್ಮನ್ನ (self) ಅರ್ಥಮಾಡಿಕೊಳ್ಳುವಲ್ಲಿ. ಏಕೆಂದರೆ ನಮ್ಮ ಸೆಲ್ಫ್ ನ ಮೇಲೆ ನಮಗೆ ಅಪಾರ ನಂಬಿಕೆ. ಈ ಸೆಲ್ಫ್ ಗೆ ಬೆದರಿಕೆ ಹಾಕುವ ಪ್ರತಿಯೊಂದರ ಬಗ್ಗೆಯೂ ನಾವು ಎಚ್ಚರವಾಗಿರುತ್ತೇವೆ. ಬೇರೆಯವರು ನಮ್ಮನ್ನ ಟೀಕೆ ಮಾಡುವುದು ಈ ಕಾರಣದಿಂದಲೇ ನಮಗೆ ಇಷ್ಟವಾಗುವುದಿಲ್ಲ, ನಮ್ಮ ಸೆಲ್ಫ್ ಗೆ ಯಾರೋ ಬೆದರಿಕೆ ಒಡ್ಡುತ್ತಿದ್ದಾರೆ ಎಂದರೆ ನಾವು ಸಿಟ್ಟಿಗೇಳುತ್ತೇವೆ.
ಇನ್ನೊಬ್ಬರು ನಿಮ್ಮನ್ನ ದೂಷಿಸಿದಾಗ ಅವರು ನಿಮ್ಮೊಳಗೆ ಇಲ್ಲದ ಯಾವುದೋ ಕೊರತೆಯನ್ನ ನಿಮ್ಮೊಳಗೆ ತುಂಬುತ್ತಿಲ್ಲ. ಹಾಗೆಯೇ ಯಾರಾದರೂ ನಿಮ್ಮನ್ನ ಹೊಗಳಿದಾಗ ನಿಮ್ಮಲ್ಲಿ ಇಲ್ಲದಿರುವ ಯಾವುದೋ ಗ್ರೇಟ್ ನೆಸ್ ನ ಅವರು ನಿಮ್ಮೊಳಗೆ ಸೇರಿಸುತ್ತಿಲ್ಲ. ಅವರು ದೂಷಿಸಿದ ಮಾತ್ರಕ್ಕೆ ಅಥವಾ ಹೊಗಳಿದ ಮಾತ್ರಕ್ಕೆ ನೀವು ಕೆಟ್ಟ ಅಥವಾ ಗ್ರೇಟ್ ವ್ಯಕ್ತಿ ಆಗುವುದಿಲ್ಲ. ಇನ್ನೊಬ್ಬರು ಹೇಳಿದ ಮಾತ್ರಕ್ಕೆ ನಿಮ್ಮೊಳಗಿನ ದೋಷಗಳಿಗೆ ಅಥವಾ ಉತ್ತಮ ಗುಣಗಳಿಗೆ ಯಾವ ವ್ಯತ್ಯಾಸವೂ ಆಗುವುದಿಲ್ಲ.
ನಿಮ್ಮೊಳಗೆ ಆ ದೋಷ ಅಥವಾ ಒಳ್ಳೆಯ ಕ್ವಾಲಿಟಿ ಇರುವುದು ನಿಮಗೆ ಮಾತ್ರ ಗೊತ್ತು. ಹಾಗಾಗಿ ನಿಮ್ಮೊಳಗಿರದ ದೋಷಗಳಿಗಾಗಿ ಯಾರಾದರೂ ನಿಮ್ಮ ಮೇಲೆ ಆರೋಪ ಮಾಡಿದಾಗ ನೀವು ಸಿಟ್ಟಿಗೇಳುವ ಅವಶ್ಯಕತೆ ಇಲ್ಲ ಏಕೆಂದರೆ, ಆ ಆರೋಪ ನಿಮ್ಮೊಳಗೆ ಆ ದೋಷವನ್ನು ಆ್ಯಡ್ ಮಾಡುತ್ತಿಲ್ಲ. ಅಕಸ್ಮಾತ್ ಎದುರುಗಿರುವ ವ್ಯಕ್ತಿ ನಿಮ್ಮೊಳಗೆ ಇರುವ ದೋಷದತ್ತ ಬೆಟ್ಟು ಮಾಡಿ ತೋರಿಸಿ ಟೀಕೆ ಮಾಡುತ್ತಿದ್ದಾನೆ ಎಂದರೆ ಅವನನ್ನು ನಿಮ್ಮಲ್ಲಿ ಸುಧಾರಣೆ ಬಯಸುತ್ತಿರುವ ಗುರು ಎಂದು ತಿಳಿದುಕೊಳ್ಳಬೇಕು.
ಯಾವತ್ತೂ ನಿಮ್ಮ ಒಳ್ಳೆಯ ಕ್ವಾಲಿಟಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಮತ್ತು ಇನ್ನೊಬ್ಬರ ದೋಷಗಳ ಬಗ್ಗೆ ಕೂಡ. ಸದಾ ನಿಮ್ಮ ದೋಷಗಳನ್ನು ಗಮನಿಸುತ್ತಿರಿ ಮತ್ತು ಇನ್ನೊಬ್ಬರ ಒಳ್ಳೆಯ ಕ್ವಾಲಿಟಿಗಳನ್ನೂ.

