ಪ್ರೀತಿಯ ತಿಳುವಳಿಕೆ… । ಓಶೋ

ನಿಮ್ಮ ನಡುವೆ ಪ್ರೀತಿ ಇಲ್ಲದಿರುವಾಗಲೂ ನೀವು ಯಾವ್ಯಾವುದೋ ಕಾರಣಕ್ಕೆ ಪರಸ್ಪರ ಅಂಟಿಕೊಂಡೇ ಇರಲು ಬಯಸುವಿರಾದರೆ, ನಿಮ್ಮ ನಡುವೆ ಹಿಂದೆ ಘಟಿಸಿದ್ದ ಸುಂದರ ಕ್ಷಣಗಳೂ ಕೊನೆಗೆ ಮರೆತುಹೋಗುತ್ತವೆ. ಪ್ರೀತಿ ಇಲ್ಲದಾದಾಗ ಉಳಿದುಕೊಳ್ಳುವುದು ಸಂಕಟ ಮಾತ್ರ, ಕೇವಲ ಸಂಕಟ, ಸಂಕಟ ಮಾತ್ರ... । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ನಿಮ್ಮ ಪ್ರೇಮಕ್ಕೆ
ಬಯಕೆಗಳು ಬೇಕೇ ಬೇಕು ಎನ್ನುವುದಾದರೆ
ಇದೋ ಇಲ್ಲಿವೆ ನೋಡಿ ಆ ಕೆಲ ಬಯಕೆಗಳು ;

ಕರಗುವುದು ಮತ್ತು
ರಾತ್ರಿಗಾಗಿ ಮೈದುಂಬಿ ಜುಳು ಜುಳು ಎನ್ನುವ
ಹರಿಯುವ ತೊರೆಯಾಗುವುದು.

ಕಳೆತು ಹಣ್ಣಾಗುವ ಯಾತನೆಯ
ಧರಿಸಿ ನೋಡುವುದು.

ಪ್ರೇಮದ ಬಗೆಗಿನ
ನಿಮ್ಮ ತಿಳುವಳಿಕೆಯ ಚೂರಿಗೆ
ನೀವೇ ಘಾಸಿಯಾಗುವುದು.

ಖುಶಿಯಿಂದ ಉನ್ಮತ್ತರಾಗಿ,
ಮನಸಾರೆ
ರಕ್ತದ ಧಾರೆಯಾಗುವುದು.

ಬೆಳಕು ಹರಿದಾಗ
ರೆಕ್ಕೆಯ ಹಕ್ಕಿಯಂತೆ ಎದ್ದು
ಇನ್ನೊಂದು ಪ್ರೇಮಮಯ ದಿನದ ಕರುಣೆಗಾಗಿ
ತಲೆಬಾಗುವುದು.

ಸೂರ್ಯ ನೆತ್ತಿಯ ಮೇಲೆ ಬರುವಾಗ
ಕಾಲುಚಾಚಿ,
ಪ್ರೇಮದ ಉತ್ತುಂಗವನ್ನು ಧ್ಯಾನಿಸುವುದು.

ತುಂಬಿದ ಎದೆಯೊಂದಿಗೆ
ಸಂಜೆ
ಮನೆಗೆ ಮರಳುವುದು.

ಮತ್ತು

ರಾತ್ರಿ ನಿದ್ದೆಯಲ್ಲಿ ,
ಪ್ರೇಮಿಗಾಗಿ
ಎದೆತುಂಬ ಪ್ರಾರ್ಥನೆ ಹಾಗು
ತುಟಿ ಮೇಲೆ ಕೊಂಡಾಡುವ ಹಾಡನ್ನು
ಸಾಧ್ಯಮಾಡುವುದು.

~ ಖಲೀಲ್ ಜಿಬ್ರಾನ್


ನಾನು ನಿಮ್ಮನ್ನು ಸಮಾಧಾನ ಮಾಡುವುದಿಲ್ಲ. ನಿಮ್ಮ ನಡುವಿನ ಸಂಗತಿಗಳು ಕಹಿ ಅನಿಸತೊಡಗಿದೊಡನೆ ಬೇರೆ ಬೇರೆಯಾಗಿ. ಶಾಂತ ಚಿತ್ತದಿಂದ ಬೇರೆ ಬೇರೆಯಾಗಿ, ಪರಸ್ಪರರೊಂದಿಗಿನ ಗೌರವವನ್ನು ಉಳಿಸಿಕೊಳ್ಳುತ್ತ ಬೇರೆಯಾಗಿ. ನಿಮ್ಮ ನಡುವೆ ವೈರತ್ವ ಇರದಂತೆ ಬೇರೆಯಾಗಿ. ನೀವು ಗೆಳೆಯರಾಗಿ ಇರುವುದು ಸಾಧ್ಯವಾಗದಿರಬಹುದು (ಗೆಳೆತನ ಉಳಿದುಕೊಂಡರೆ ಇನ್ನೂ ಒಳ್ಳೆಯದು) ಆದರೆ ದ್ವೇಷ ಮಾತ್ರ ನಿಮ್ಮ ನಡುವೆ ಸುಳಿಯದಿರಲಿ. ಒಮ್ಮೆ ನಿಮ್ಮ ಪ್ರೀತಿಗೆ ಪಾತ್ರನಾಗಿದ್ದ ವ್ಯಕ್ತಿ ದ್ವೇಷಕ್ಕೆ ಅರ್ಹನಾಗಿರಲಾರ ಎನ್ನುವ ಕನಿಷ್ಟ ಸಂಶಯ ನಿಮಗಿರಲಿ.

ನಿಮ್ಮ ನಡುವೆ ಪ್ರೀತಿ ಇಲ್ಲದಿರುವಾಗಲೂ ನೀವು ಯಾವ್ಯಾವುದೋ ಕಾರಣಕ್ಕೆ ಪರಸ್ಪರ ಅಂಟಿಕೊಂಡೇ ಇರಲು ಬಯಸುವಿರಾದರೆ, ನಿಮ್ಮ ನಡುವೆ ಹಿಂದೆ ಘಟಿಸಿದ್ದ ಸುಂದರ ಕ್ಷಣಗಳೂ ಕೊನೆಗೆ ಮರೆತುಹೋಗುತ್ತವೆ. ಪ್ರೀತಿ ಇಲ್ಲದಾದಾಗ ಉಳಿದುಕೊಳ್ಳುವುದು ಸಂಕಟ ಮಾತ್ರ, ಕೇವಲ ಸಂಕಟ, ಸಂಕಟ ಮಾತ್ರ. ಆಗ ನಿಮ್ಮ ನಡುವೆ ಒಮ್ಮೆ ಇದ್ದ ಪ್ರೀತಿ ದ್ವೇಷಕ್ಕೆ ತಿರುಗುತ್ತದೆ, ನಂತರ ಎಲ್ಲವೂ ವಿಷಮಯವಾಗುತ್ತದೆ. ಆಗ ನೀವು ಘನತೆಯನ್ನು ಉಳಿಸಿಕೊಳ್ಳುತ್ತ ಬೇರೆ ಬೇರೆಯಾಗುವುದೂ ಸಾಧ್ಯವಿಲ್ಲ. ಮತ್ತು ಹೀಗೆ ಬೇರೆಯಾದಾಗ ಕೊನೆಪಕ್ಷ ಮನಸ್ಸಿನಲ್ಲಿಯಾದರೂ ಗೆಳೆತನ ಉಳಿಸಿಕೊಳ್ಳುವುದು. ಸಾಧ್ಯವಾಗುವುದಿಲ್ಲ.

ಮುಂದೆ ಯಾವತ್ತೂ ಇಂಥ ಜಾಲದಲ್ಲಿ ಬೀಳಬೇಡಿ. ಗೆಳೆತನ ಬಹಳ ಮುಖ್ಯವಾದದ್ದು, ಗೆಳೆತನದಾಚೆಯ ಸಂಬಂಧಗಳ ಗೊಡವೆಗೆ ಹೋಗಬೇಡಿ. ಪರಸ್ಪರ ಅಂಟಿಕೊಳ್ಳಬೇಡಿ, ಇಬ್ಹರೂ ಸ್ವತಂತ್ರರಾಗಿರಿ. ಆಗ ಗೆಳೆತನವೂ ಶುದ್ಧ, ಪ್ರೇಮವೂ ಸುಂದರ.

ನನ್ನ ಪ್ರಕಾರ ಅತ್ಯಂತ ವಿವೇಕದ ಮಾರ್ಗ ಎಂದರೆ, ನೀವು ಪ್ರೀತಿಸಿದ ವ್ಯಕ್ತಿಯೊಡನೆ ಇರಬೇಡಿ, ಬೇರೆ ಬೇರೆಯಾಗಿ ಬದುಕಿ. ಈಗ ನೀವು ಇಬ್ಬರೂ ಏಕಾಂಗಿಯಾಗಿರಲು ಸ್ವತಂತ್ರರು. ನಿಮ್ಮ ನಡುವೆ ಯಾವ ವಾಗ್ದಾನಗಳಿಗೆ, ಒಪ್ಪಂದಗಳಿಗೆ ಜಾಗ ಇರದಿರಲಿ. ಎಂದೂ ಅವರು ನಿಮ್ಮನ್ನು ಮಾತ್ರ ಪ್ರೀತಿಸಬೇಕು ಎನ್ನುವ ಅಪೇಕ್ಷೆ ಬೇಡ. ಅವರು ಸಂತೋಷವಾಗಿರುತ್ತಾರಾದರೆ ಅವರ ಸ್ವಂತದ ನಿರ್ಧಾರಗಳಿಗೆ ನಿಮ್ಮ ಬೆಂಬಲ ಇರಲಿ, ನಿಮ್ಮ ಅಸೂಯೆಯಿಂದ ಅವರನ್ನು ಕಟ್ಟಿಹಾಕಬೇಡಿ. ಇಂಥ ನಿಲುವು ನಿಮ್ಮ ಗೆಳೆತನವನ್ನು ಇನ್ನಷ್ಟು ಆರೋಗ್ಯಪೂರ್ಣವಾಗಿಸುತ್ತದೆ.

ನಿಮ್ಮ ಏಕಾಂತವನ್ನು ಸಂಭ್ರಮಿಸಿ. ಹಾಗೆಂದ ಮಾತ್ರಕ್ಕೆ ಗೆಳೆಯರಿಂದ ದೂರವಾಗಬೇಕೆಂದಲ್ಲ, ಹೊಸದಾಗಿ ಗೆಳೆತನದಲ್ಲಿ ಕೂಡಬಾರದೆಂದಲ್ಲ, ನಿಮ್ಮ ಗೆಳೆಯರಿಗೆ ನಿಮ್ಮ ಏಕಾಂತದ ಬಗ್ಗೆ ಗೌರವ ಇರಲಿ ಅಷ್ಟೇ.

ಈ ತಿಳುವಳಿಕೆ ಇಲ್ಲದೆ ಹಿಂದಿನ ಜಗತ್ತು ಬಹಳಷ್ಟು ಸಂಕಟ ಅನುಭವಿಸಿದೆ. ನೀವು ಒಬ್ಬರನ್ನು ಪ್ರೀತಿಸುತ್ತಿದ್ದೀರಿ ಎಂದರೆ ಅವರೊಂದಿಗೆ ಇರುವುದು, ಸಂಬಂಧದಲ್ಲಿ ಬಂಧಿಯಾಗುವುದು ಅನಿವಾರ್ಯ ಮಾಡಿಬಿಟ್ಟಿದ್ದರು ನಮ್ಮ ಹಿಂದಿನವರು. ಪ್ರೀತಿ ಕಬ್ಬಿಣ ಏನೂ ಅಲ್ಲವಲ್ಲ? ನಾಳೆ ನಿಮಗೆ ಇನ್ನೊಬ್ಬರ ಮೇಲೆ ಪ್ರೀತಿಯಾದರೆ ಏನು ಮಾಡುತ್ತೀರಿ? ಹಿಂದಿನವರು ತಮ್ಮ ಭಾವನೆಗಳನ್ನು ಹತ್ತಿಕ್ಕಿಕೊಂಡು ಬದುಕುತ್ತಿದ್ದರು. ಇಂಥ ಭಾವನೆಗಳ ಹತ್ತಿಕ್ಕುವಿಕೆ, ನೀವು ಈಗ ಬದುಕುತ್ತಿರುವ ವ್ಯಕ್ತಿಯೊಡನೆಯ ಪ್ರೀತಿಯನ್ನು ಅಸಹನೆಯಾಗಿ ಪರಿವರ್ತಿಸುತ್ತದೆ. ಆಗ ನೀವು ಇಬ್ಬರೂ ದುಃಖಿಗಳಾಗುತ್ತೀರಿ.


—OSHO
The New Dawn
Ch #30: The path goes round and round
am in Chuang Tzu Auditorium
[via Bodhisattva Shree Amithaba Subhuti ]

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.