ಮೈಂಡ್ ಯಾವ ನಿರ್ಣಯಕ್ಕೂ ಬರುವುದಿಲ್ಲ. ಏಕೆಂದರೆ ಒಮ್ಮೆ ನಿರ್ಣಯ ಮಾಡಿಬಿಟ್ಟರೆ ಆಮೇಲೆ ಆ ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅದು ಯಾವ ನಿರ್ಣಯಕ್ಕೂ ಬರುವುದಿಲ್ಲ, ಸುಮ್ಮನೇ ವಾದ ಮಾಡುತ್ತ ಕುಳಿತುಕೊಳ್ಳುತ್ತದೆ, ಯಾವುದರ ಪರವಾಗಿಯೂ ತೀರ್ಪು ಕೊಡುವುದಿಲ್ಲ, ಸುಮ್ಮನೇ ತನ್ನನ್ನು ತಾನು ಮಧ್ಯದಲ್ಲಿ ಇಟ್ಟುಕೊಂಡು ಸಮಯ ವ್ಯರ್ಥ ಮಾಡುತ್ತದೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಮುಲ್ಲಾ ನಸ್ರುದ್ದೀನ್ ತನ್ನ ಮಗ – ಸೆೊಸೆಯ ಮನೆಗೆ ಬಂದ. ಮೂರು ದಿವಸಕ್ಕೆಂದು ಬಂದವನು ಒಂದು ವಾರ ಮಗನ ಮನೆಯಲ್ಲಿ ಉಳಿದುಕೊಂಡುಬಿಟ್ಟ. ದಿನ ಹೋಗಿ ವಾರವಾಯ್ತು, ವಾರ ತಿಂಗಳಾಯ್ತು, ನಸ್ರುದ್ದೀನ್ ವಾಪಸ್ ತನ್ನ ಮನೆಗೆ ಹೋಗುವ ಲಕ್ಷಣಗಳೇ ಕಾಣಿಸಲಿಲ್ಲ. ಹರೆಯದ ಗಂಡ ಹೆಂಡತಿಗೆ ಈ ಮುದುಕನನ್ನು ಮನೆಯಿಂದ ಹೇಗೆ ಹೊರಹಾಕುವುದು ಎಂಬ ಚಿಂತೆ ಶುರುವಾಯ್ತು. ಇಬ್ಬರೂ ಬಹಳ ಯೋಚನೆ ಮಾಡಿ ಕೊನೆಗೆ ಒಂದು ಪ್ಲಾನ್ ಫೈನಲೈಸ್ ಮಾಡಿದರು.
ಮಗ ತನ್ನ ಹೆಂಡತಿಗೆ ಹೇಳಿದ, “ನೀನು ಇವತ್ತು ಸೂಪ್ ಮಾಡು, ಸೂಪ್ ನಲ್ಲಿ ಉಪ್ಪು ಹೆಚ್ಚಾಯಿತೆಂದೂ, ಒಂದು ಚಮಚ ಸೂಪ್ ಕೂಡ ಕುಡಿಯುವುದು ಅಸಾಧ್ಯ ಎಂದೂ ನಾನು ಜಗಳ ತೆಗೆಯುತ್ತೇನೆ. ಸೂಪ್ ನಲ್ಲಿ ಉಪ್ಪು ಸರಿಯಾಗಿದೆ ಎಂದು ನೀನು ವಾದ ಮಾಡು. ಇಬ್ಬರೂ ವಾದ ಮಾಡುತ್ತ ಶರಂಪರ ಜಗಳ ಶುರುಮಾಡೋಣ. ಆಗ ನಾನು ನನ್ನ ಅಪ್ಪನ್ನ ಸೂಪ್ ಟೇಸ್ಟ್ ಮಾಡಿ ತೀರ್ಪು ಕೊಡುವಂತೆ ಕೇಳ್ತೀನಿ. ಅಕಸ್ಮಾತ್ ಅವನು ನನ್ನ ಪರವಾಗಿ ತೀರ್ಪು ಕೊಟ್ಟರೆ, ನೀನು ಸಿಟ್ಟಿಗೆದ್ದು ಅವನನ್ನು ಮನೆ ಬಿಟ್ಟು ಹೋಗಲು ಹೇಳು. ಒಂದು ವೇಳೆ ಅವನು ನಿನ್ನ ಪರವಾಗಿ ತೀರ್ಪುಕೊಟ್ಟರೆ, ನಾನು ಸಿಟ್ಟಿಗೆದ್ದು ಅವನಿಗೆ ಮನೆ ಬಿಟ್ಟು ಹೋಗುವಂತೆ ಹೇಳ್ತೀನಿ”.
ಪ್ಲಾನ್ ಪ್ರಕಾರ ಸೊಸೆ ಸೂಪ್ ತಯಾರು ಮಾಡಿದಳು ಹಾಗು ಮಗ ಸೊಸೆ ಜೋರಾಗಿ ಜಗಳ ಶುರು ಮಾಡಿದರು. ಜಗಳ ತಾರಕಕ್ಕೇರಿ ಇಬ್ಬರೂ ಒಬ್ಬರಿಗೊಬ್ಬರು ಹೊಡೆಯುವ ಹಂತಕ್ಕೆ ಹೋದರು. ಮುಲ್ಲಾ ನಸ್ರುದ್ದೀನ್ ಮಗ ಸೊಸೆಯ ಜಗಳ ನೋಡುತ್ತ ಸುಮ್ಮನೇ ಒಂದು ಮೂಲೆಯಲ್ಲಿ ಕುಳಿತಿದ್ದ. ಮಗ, ಅಪ್ಪನ ಕಡೆ ತಿರುಗಿ ಕೇಳಿದ, “ಅಪ್ಪಾ ನೀನು ಈ ಸೂಪ್ ಕುಡಿದು ಹೇಳು, ಇದರಲ್ಲಿ ಉಪ್ಪು ಹೆಚ್ಚಾಗಿದೆಯ, ಇಲ್ವಾ ಅಂತ”.
ನಸ್ರುದ್ದೀನ್ ಒಂದು ಚಮಚ ಸೂಪ್ ಬಾಯಿಯಲ್ಲಿ ಹಾಕಿಕೊಂಡು ಧ್ಯಾನಸ್ಥನಾಗಿ ಅದರ ರುಚಿಯನ್ನು ಅನುಭವಿಸಿ ಮಾತನಾಡಿದ,
“ಸೂಪ್ ನನಗೆ ಸರಿ ಹೋಗುತ್ತದೆ ”
ನಸ್ರುದ್ದೀನ್ ಯಾರೊಬ್ಬರ ಪರವಾಗಿಯೂ ತೀರ್ಪು ಕೊಡಲಿಲ್ಲ, ಹಾಗಾಗಿ ಮಗ ಸೊಸೆ ಮಾಡಿದ ಪ್ಲಾನ್ ಪೂರ್ತಿ ವ್ಯರ್ಥವಾಗಿಬಿಟ್ಟಿತು.
ನಿಮ್ಮ ಮೈಂಡ್ ಕೂಡ ಇದೇ ರೀತಿ ಕೆಲಸ ಮಾಡುತ್ತದೆ. ಅದು ಯಾವ ನಿರ್ಣಯಕ್ಕೂ ಬರುವುದಿಲ್ಲ. ಏಕೆಂದರೆ ಒಮ್ಮೆ ನಿರ್ಣಯ ಮಾಡಿಬಿಟ್ಟರೆ ಆಮೇಲೆ ಆ ಪ್ರಕಾರ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಅದು ಯಾವ ನಿರ್ಣಯಕ್ಕೂ ಬರುವುದಿಲ್ಲ, ಸುಮ್ಮನೇ ವಾದ ಮಾಡುತ್ತ ಕುಳಿತುಕೊಳ್ಳುತ್ತದೆ, ಯಾವುದರ ಪರವಾಗಿಯೂ ತೀರ್ಪು ಕೊಡುವುದಿಲ್ಲ, ಸುಮ್ಮನೇ ತನ್ನನ್ನು ತಾನು ಮಧ್ಯದಲ್ಲಿ ಇಟ್ಟುಕೊಂಡು ಸಮಯ ವ್ಯರ್ಥ ಮಾಡುತ್ತದೆ. ತಾನೇ ವಾದ ಮಂಡಿಸುತ್ತದೆ ಮತ್ತು ಅದಕ್ಕೆ ಪ್ರತಿಯಾಗಿ ತಾನೇ ಇನ್ನೊಂದು ವಾದ ಹುಟ್ಟುಹಾಕುತ್ತದೆ, ಯಾವ ತೀರ್ಮಾನಕ್ಕೂ ಬರುವುದಿಲ್ಲ, ತೀರ್ಪನ್ನ ಮುಂದೆ ಹಾಕುತ್ತಲೇ ಇರುತ್ತದೆ. ಇಂಥ ವಾದ ವಿವಾದಕ್ಕೆ ಕೊನೆಯೆಂಬುದೇ ಇಲ್ಲ. ತೀರ್ಪು, ಅದು ಯಾವುದಾದರೂ ಇರಬಹುದು ಅದು ಕ್ರಿಯೆಯನ್ನ ಅಪೇಕ್ಷಿಸುತ್ತದೆ, ಈ ಕ್ರಿಯೆಯಿಂದ ಒಂದು ಬದಲಾವಣೆ ಸಾಧ್ಯವಾಗುತ್ತದೆ. ಆದರೆ ಮೈಂಡ್ ಗೆ ಕ್ರಿಯೆಯಲ್ಲಿ ಆಸಕ್ತಿ ಇಲ್ಲ ಹಾಗಾಗಿ ಅದು ವಾದ ಪ್ರತಿವಾದಗಳನ್ನು ಸೃಷ್ಟಿಸುತ್ತ ನಿಮ್ಮನ್ನ ನಿಷ್ಕ್ರೀಯರನ್ನಾಗಿಸುತ್ತದೆ.
ನಿಮಗೆ ನಿಜವಾಗಿಯೂ ಮೂಲಭೂತ ಬದಲಾವಣೆಯಲ್ಲಿ ಆಸಕ್ತಿ ಇದ್ದರೆ, ವಾದಗಳಲ್ಲಿ ಮುಳುಗಿ ಹೋಗಬೇಡಿ, ಒಂದು ತೀರ್ಮಾನಕ್ಕೆ ಬನ್ನಿ, ಆ ತೀರ್ಮಾನದ ಪ್ರಕಾರ ಕ್ರಿಯೆಗೆ ಇಳಿಯಿರಿ. ಫಿಲಾಸೊಫಿಕಲೀ ಮಾತನಾಡುತ್ತ ತೀರ್ಪನ್ನ ಮುಂದೆ ಹಾಕುತ್ತ ಕುಳಿತು ಬಿಡಬೇಡಿ, ಇದು ತುಂಬ ಅಪಾಯಕಾರಿ. ಯಾರಿಗೆ ಸುಮ್ಮನೇ ಸಮಯ ಕಳೆಯುವುದು ಇಷ್ಟವೋ ಅವರಿಗೆ ಇದು ಒಳ್ಳೆಯ ಆಟ ಆದರೆ, ನಿಜವಾಗಿ ಬದಲಾವಣೆ ಬಯಸುವ ಸಾಧಕರಿಗೆ ಇಂಥ ಮೈಂಡ್ ಗೇಮ್ ತುಂಬ ಅಪಾಯಕಾರಿ. ನಿಮಗೆ ತೊಂದರೆ ಇಲ್ಲವಾದರೆ, ನೀವು ಮ್ಯಾನೇಜ್ ಮಾಡಬಹುದಾದರೆ, ಅಫೊರ್ಡ್ ಮಾಡಬಹುದಾದರೆ ಫಿಲೊಸೊಫಿ ಬಹಳ ಒಳ್ಳೆಯ ಮಜವಾದ ಆಟ. ಆದರೆ ನನ್ನ ಪ್ರಕಾರ ಯಾರಿಗೂ ಇಂಥ ಆಟವನ್ನ ಅಫೊರ್ಡ್ ಮಾಡುವುದು ಸಾಧ್ಯವಿಲ್ಲ ಏಕೆಂದರೆ ಇದು ಶುದ್ಧ ನಿರರ್ಥಕ.

