ಆಲ್ಬರ್ಟ್ ಕಾಮೂ ತನ್ನ ಕಾದಂಬರಿ The Stranger ನಲ್ಲಿ ಹೇಳುವ “the moment of awareness“ ಅಂದರೆ… । ಚಿದಂಬರ ನರೇಂದ್ರ
ಕರಗೇನಿ ಸಾಗರದಾಗ
ಉಪ್ಪಿನ್ಹಾಂಗ,
ಇಲ್ಲ ಸಂಶಯಾ, ಇಲ್ಲ ನಿಂದನಾ
ನಕ್ಷತ್ರ ಹುಟ್ಟೇದ ಎದಿಯೊಳಗ
ಅಹಾ ಸ್ಪೋಟಾ ! ಎಂಥಾ ಸೂತ್ರಾ !
ಒಂದಾಗೇದ ಬೆಳಕು
ಏಳು ಅಕಾಶದಾಳ ದಾಳದೊಳಗ.
- ರೂಮಿ.
ಆಲ್ಬರ್ಟ್ ಕಾಮೂ ತನ್ನ ಕಾದಂಬರಿ The Stranger ನಲ್ಲಿ ಒಂದು ಪದ ಬಳಕೆ ಮಾಡುತ್ತಾನೆ, “the moment of awareness“. ತಾನು ಮಾಡಿದ ತಪ್ಪಿಗಾಗಿ ತನಗೆ ಇನ್ನು ಮೂರುದಿನಗಳ ನಂತರ ಮರಣದಂಡನೆಯ ಶಿಕ್ಷೆಯನ್ನು ಕೊಡಲಾಗುವುದು ಎಂದು ಕಥಾನಾಯಕ Meursault ಗೆ ಗೊತ್ತಾದಾಗ, ಅವನೊಳಗೆ ಭಯ ಮತ್ತು ಆತಂಕಗಳು ಹುಟ್ಟಿಕೊಳ್ಳುತ್ತವೆ. ತೀವ್ರ ದುಗುಡದಲ್ಲಿ ಆತ ಜೈಲಿನ ತನ್ನ ಹಾಸಿಗೆ ಮೇಲೆ ಸೀಲಿಂಗ್ ದಿಟ್ಟಿಸುತ್ತ ಮಲಗಿಕೊಂಡಿರುವಾಗ ಮೊದಲ ಬಾರಿ ಅವನಿಗೆ ದಟ್ಟ ನೀಲಿ ಆಕಾಶದ ದರ್ಶನವಾಗುತ್ತದೆ.
ಆಕಾಶ ಎಷ್ಟು ನೀಲಿಯಾಗಿತ್ತೆಂದರೆ ಮೊದಲ ಬಾರಿ ಅವನಿಗೆ ಆಕಾಶದ ಜೊತೆ ಇಷ್ಟು ಆಳವಾದ ಸಂಪರ್ಕ ಸಾಧ್ಯವಾಗಿದೆ. ಅವನು ಈಗಾಗಲೇ ಎಷ್ಟೋ ದಶಕಗಳನ್ನು ಆಕಾಶದ ನಿಜವಾದ ಸಂಪರ್ಕ ಇಲ್ಲದೇ ಕಳೆದುಬಿಟ್ಟಿದ್ದಾನೆ. ಅವನು ಆಕಾಶವನ್ನು ಸಾಕಷ್ಟು ಬಾರಿ ನೋಡಿದ್ದಾನಾದರೂ, ಇಷ್ಟು ದಿನಗಳಲ್ಲಿ ಅವನಿಗೆ ಎಂದೂ ಆಕಾಶದ ನೀಲಿಯನ್ನು ಇಷ್ಟು ಆಳವಾಗಿ ಗಮನಿಸುವುದು ಸಾಧ್ಯವಾಗಿರಲೇ ಇಲ್ಲ. ಇನ್ನು ಸಾವಿಗೆ ಬಾಕಿ ಉಳಿದಿರುವುದು ಕೇವಲ ಮೂರು ದಿನ. ಆಕಾಶದ ದಟ್ಟ ನೀಲಿಯನ್ನು ಕಾಣುತ್ತಿರುವಾಗಲೇ ಅವನೊಳಗೆ The moment of awareness ಹುಟ್ಟಿಕೊಂಡಿದೆ.
ಬಾಕಿ ಉಳಿದಿರುವ ಮೂರು ದಿನಗಳ ಪ್ರತಿ ನಿಮಿಷವನ್ನೂ Meursault ಪೂರ್ತಿಯಾಗಿ, ಆಳವಾಗಿ ಬದುಕಲು ನಿಶ್ಚಯಿಸುತ್ತಾನೆ. ಇಲ್ಲೊಬ್ಬ ಮರಣ ದಂಡನೆಗೆ ಗುರಿಯಾಗಿರುವ ವ್ಯಕ್ತಿ ಆಳ ಧ್ಯಾನದಲ್ಲಿ ಒಂದಾಗಿಬಿಟ್ಟಿದ್ದಾನೆ. ಅವನು ತನ್ನ ಜೈಲು ಕೋಣೆಯಲ್ಲಿ ಉಳಿದಿರುವ ಮೂರುದಿನಗಳನ್ನ ನೀಲಿ ಆಕಾಶದ ಜೊತೆ
ಜೀವಿಸುತ್ತಿದ್ದಾನೆ. ಇದು ಅವನ ಸ್ವಾತಂತ್ರ್ಯ.
ಕೊನೆಯ ದಿನ ಮಧ್ಯಾಹ್ನ ಕ್ಯಾಥೋಲಿಕ್ ಪುರೋಹಿತ, Meursault ನ ಕೊನೆಯ ವಿಧಿಗಳನ್ನು ಪೊರೈಸಲು ಅಲ್ಲಿಗೆ ಬರುತ್ತಾನೆ. ಆದರೆ Meursault ಪುರೋಹಿತನಿಗೆ ತನ್ನ ಜೈಲು ಕೋಣೆಯೊಳಗೆ ಪ್ರವೇಶ ನಿರಾಕರಿಸುತ್ತಾನೆ. ಪ್ರೀಸ್ಟ್ ಜೊತೆ ಮಾತನಾಡುತ್ತ ಬಾಕಿ ಉಳಿದಿರುವ ಕೆಲವೇ ಕೆಲವು ಗಂಟೆಗಳನ್ನು ವ್ಯರ್ಥ ಮಾಡಲು Meursault ಗೆ ಯಾವ ಇಚ್ಛೆಯೂ ಇಲ್ಲ.
Meursault ಹೇಳುತ್ತಾನೆ, “ಈ ಪುರೋಹಿತ ಜೀವಂತ ಶವದಂತೆ ಬದುಕುತ್ತಿರುವವನು, ಅವನು ನನ್ನ ಹಾಗೆ ಬದುಕುತ್ತಿಲ್ಲ, ಈಗ ನಾನು ಪೂರ್ಣ ಜೀವಂತಿಕೆಯನ್ನ ಬದುಕುತ್ತಿದ್ದೇನೆ.”
ಒಮ್ಮೆ ಒಬ್ಬ ಪ್ರಯಾಣಿಕ ಬೆಟ್ಟ ಗುಡ್ಡಗಳ ಮೂಲಕ ಹಾಯ್ದು ಹೋಗುವಾಗ, ವೃದ್ಧ ಸನ್ಯಾಸಿಯೊಬ್ಬ ಬಾದಾಮಿ ಗಿಡದ ಸಸಿ ನೆಡುತ್ತಿರುವುದನ್ನು ಗಮನಿಸಿದ. ಬಾದಾಮಿ ಸಸಿ ಬೆಳೆದು ಫಲ ನೀಡಲು ಸಾಕಷ್ಟು ವರ್ಷಗಳಾಗುತ್ತದೆ ಎನ್ನುವುದನ್ನು ಬಲ್ಲ ಪ್ರಯಾಣಿಕ, ವೃದ್ಧನನ್ನು ಪ್ರಶ್ನಿಸಿದ.
ಇಷ್ಟು ನಿಧಾನವಾಗಿ ಬೆಳೆಯುವ ಮರವನ್ನು ಯಾಕೆ ಬೆಳೆಸುತ್ತಿದ್ದೀಯಾ? ನಿನ್ನ ಆಯಸ್ಸು ಇನ್ನು ಎರಡು ಮೂರು ವರ್ಷವೂ ಇದ್ದ ಹಾಗಿಲ್ಲ.
ವೃದ್ಧ ಸನ್ಯಾಸಿ ಉತ್ತರಿಸಿದ.
ಬದುಕಲು ನನಗೆ ಎರಡು ಸಿದ್ಧಾಂತಗಳಿವೆ.
ಒಂದು, ನನ್ನ ಬದುಕು ಶಾಶ್ವತ. ಮತ್ತು ಎರಡನೇಯದು, ಇವತ್ತು ನನ್ನ ಬದುಕಿನ ಕೊನೆಯ ದಿನ.
Source: The Moment Of Awareness ~ Thich Nhat Hanh

