ಕಡಲಿನ ನಟ್ಟನಡುವೆ ಬಾಯಾರಿ ನಿಂತವರು ನಾವು : ಅಧ್ಯಾತ್ಮ ಡೈರಿ

ಲೌಕಿಕ ಕಡಲಿನಂತೆ. ಅಗಾಧ ಅಚ್ಚರಿಗಳ, ಆಕರ್ಷಣೆಗಳ, ಆಳ – ಅಗಲಗಳ ಆಯುಷ್ಮಾನ. ಈ ಅಗಾಧಕ್ಕೆ ಬಲೆ ಬೀಸಿ ಬೀಸಿ ಏನೆಲ್ಲ ಮೊಗೆದು ಚಪ್ಪರಿಸಿದರೂ ಕೊನೆಗೆ ಉಳಿಯುವುದು ಉಪ್ಪಷ್ಟೇ. ಗೊತ್ತೇ ಇದೆ, ಉಪ್ಪು ತಿಂದಷ್ಟೂ ಬಾಯಾರಿಕೆ. ಲೌಕಿಕದಲ್ಲಿ ಪಡೆದಷ್ಟೂ ದಾಹ ಹೆಚ್ಚುವುದು ಈ ಕಾರಣಕ್ಕೇ… । ಚೇತನಾ ತೀರ್ಥಹಳ್ಳಿ

ಆಪಾಂ ಮಧ್ಯೇ ತಸ್ಥಿವಾಂಸಂ ತೃಷ್ಣಾವಿದಜ್ಜರಿತಾರಂ ।
ಮೃಳಾ ಸುಕ್ಷತ್ರ ಮೃಳಯ ॥ ಋಗ್ವೇದ 7.89.4॥

ಕಡಲಿಲಿನ ನಟ್ಟನಡು ನಿಂತಿದ್ದರೂ ಬಾಯಾರಿ ಬಸವಳಿದಿರುವೆ; ಕ್ಷಮಿಸು, ಕೃಪೆದೋರು ವರುಣಾ…

ಪ್ರತಿದಿನದ ಅನುಭವ ಇದು. ನಮ್ಮ ಸುತ್ತಮುತ್ತಲೂ ಬದುಕು ಇದೆ, ಸ್ವತಃ ನಾವೇ ಬದುಕುತ್ತಿದ್ದೇವೆ, ಆದರೂ ಯೋಚಿಸುತ್ತೇವೆ, ಬದುಕು ಎಲ್ಲಿದೆ? ಹಂಬಲಿಸ್ತಾ ಇರ್ತೇವೆ – ನಾನೂ ಬದುಕ್ಬೇಕು!

ಇದು ಯಾವ ಬಗೆಯ ದಾಹ? ಸುತ್ತಲಿಂದ ಒಂದು ಬೊಗಸೆ ಮೊಗೆದರೆ ನಾವೂ ತುಂಬಿಕೊಳ್ತೀವಿ ಅಲ್ವಾ?

ಅದು ಅಷ್ಟು ಸುಲಭವಾಗಿದ್ರೆ ಈ ದಿನ ಪ್ರತಿಯೊಬ್ಬರೂ ‘ಬದುಕಿರುತ್ತಿದ್ದರು’, ಕೇವಲ ಉಸಿರಾಟದ ಆಚೆಗೂ.

ಉಸಿರಾಟ, ಸಮುದ್ರದ ಉಪ್ಪು ನೀರಿನಂತೆ. ಅದು ನಮ್ಮ ಬದುಕಿನ ದಾಹ ತಣಿಸಲಾರದು. ಬದುಕ್ಬೇಕು ಅಂದರೆ, ಉಸಿರಾಟದ ಆಚೆಗೆ ಕೈಚಾಚ್ಬೇಕು. ಶುದ್ಧವಾದ ಸಿಹಿ ನೀರ ಹನಿ ನಮ್ಮ ನಾಲಗೆ ಸೋಕ್ಬೇಕು, ಅರಿವು ಆತ್ಮದೊಳಗೆ ಇಳೀಬೇಕು.

ಲೌಕಿಕ ಕಡಲಿನಂತೆ. ಅಗಾಧ ಅಚ್ಚರಿಗಳ, ಆಕರ್ಷಣೆಗಳ, ಆಳ – ಅಗಲಗಳ ಆಯುಷ್ಮಾನ. ಈ ಅಗಾಧಕ್ಕೆ ಬಲೆ ಬೀಸಿ ಬೀಸಿ ಏನೆಲ್ಲ ಮೊಗೆದು ಚಪ್ಪರಿಸಿದ್ರೂ ಕೊನೆಗೆ ಉಳಿಯೋದು ಉಪ್ಪಷ್ಟೇ.
ಗೊತ್ತೇ ಇದೆ, ಉಪ್ಪು ತಿಂದಷ್ಟೂ ಬಾಯಾರಿಕೆ.
ಲೌಕಿಕದಲ್ಲಿ ಪಡೆದಷ್ಟೂ ದಾಹ ಹೆಚ್ಚುವುದು ಈ ಕಾರಣಕ್ಕೇ.

ಈ ದಾಹ ತೀರಬೇಕು ಅಂದ್ರೆ, ಸುತ್ತಲಿನ ಉಪ್ಪುನೀರಿಗೆ ಬಾಯಿ ಹಾಕದೆ ಆಗಸದತ್ತ ಮುಖ ಮಾಡ್ಬೇಕು. ಚಾತಕದ ಹಾಗೆ ತಿಳಿವಿನ ತಿಳಿ ನೀರಿಗೆ ಪರಿತಪಿಸಬೇಕು.
ನಿರಂತರ ತಪನೆಯಿಂದ – ತಾಪದಿಂದ ಕುದಿಯುವ ನಾವು ಒಂದು ಹಂತದಲ್ಲಿ ನೀರಾವಿಯಾಗಿಬಿಡ್ತೀವಿ. ಸ್ವತಃ ನಾವೇ ನೀರ ಹನಿಯಾಗಿಬಿಡ್ತೀವಿ. ನಮ್ಮ ದಾಹಕ್ಕೆ ನಾವೇ ಮದ್ದಾಗಿಬಿಡ್ತೀವಿ.

ಕಡಲ ನೀರಿನ ಮೋಹದಿಂದ ಬಿಡಿಸ್ಕೊಂಡ್ರೆ, ಪರಿತಾಪವನ್ನ ಕುದಿಯುವ ಬಿಂದುವಿನೆತ್ತರಕ್ಕೆ ಕೊಂಡೊಯ್ದರೆ, ದಾಹಕ್ಕೆ ಪರಿಹಾರವೂ ಸಿಕ್ಕುಬಿಡುತ್ತೆ.

ಮೊದಲಲ್ಲಿ ಬರ್ದಿರೋ ಋಗ್ವೇದದ ಋಕ್ಕು, ಒಂದೇ ಸಾಲಿನ ಈ ಋಕ್ಕು ಎಷ್ಟು ಸೊಗಸಾಗಿದೆ!

ಇದನ್ನು ಬ್ರಹ್ಮರ್ಷಿ ವಸಿಷ್ಠ ಬರೆದಿದ್ದೆಂದು ಹೇಳಲಾಗಿದೆ. ಈತ ಸಮುದ್ರದಲ್ಲಿ ಪ್ರಯಾಣಿಸುವಾಗ ಬಾಯಾರಿ ಸುತ್ತಮುತ್ತಲಿನ ಜಲರಾಶಿ ಎಷ್ಟು ವ್ಯರ್ಥವೆಂದು ಮನಗಂಡು ಶುದ್ಧ ನೀರಿಗಾಗಿ ವರುಣನಲ್ಲಿ ಮೊರೆಯಿಡುವುದು ಮೇಲ್ನೋಟದ ಅರ್ಥ.
ವಾಸ್ತವದಲ್ಲಿ ವಸಿಷ್ಠ, ಜೀವನವನ್ನು ಸಮುದ್ರ ಯಾನವೆಂದೂ ಐಹಿಕಭೋಗಗಳ ಭವಸಾಗರವನ್ನು ಸಮುದ್ರದ ನೀರೆಂದೂ ಕರೆದಿದ್ದಾನೆ ಮತ್ತು ಜ್ಞಾನೋದಯ ಮಾಡಿಸೆಂದು ವರುಣನಲ್ಲಿ (ವೇದಾಂತಿಗಳ ಪ್ರಮುಖ ದೇವತೆಗಳಲ್ಲಿ ಒಬ್ಬ) ಮೊರೆ ಇಟ್ಟಿದ್ದಾನೆ.

ಇದೇ ಅರ್ಥ ಕೊಡುವ ಇಂಗ್ಲಿಶ್ ಪದ್ಯವೊಂದರ ಸಾಲು ಬಹುತೇಕರು ಕೇಳಿರುತ್ತೀರಿ.
“Water, water, every where, Nor any drop to drink. The very deep did rot: O Christ! That ever this should be!”
19ನೇ ಶತಮಾನದ ಆಂಗ್ಲ ಕವಿ S.T. Coleridge ಬರೆದ The Rime of the Ancient Mariner ಪದ್ಯದ ಸಾಲುಗಳಿವು. ಪ್ರಾಚೀನ ಕಾಲದ ನಾವಿಕನೊಬ್ಬನ ಸ್ವಗತಗೀತೆ ಈ ಪದ್ಯ.

ಸುತ್ತಲೂ ಸಂಪನ್ಮೂಲವಿದ್ದರೂ ಅದು ನಮ್ಮ ಪ್ರಯೋಜನಕ್ಕೆ ಬರದ ಹತಾಶೆ ಎಲ್ಲ ದೇಶ – ಕಾಲದವರನ್ನೂ ಕಾಡುತ್ತಲೇ ಇರುವ ಸತ್ಯ. 90ರ ದಶಕದ ಖಳನಾಯಕ್ ಸಿನೆಮಾದಲ್ಲಿ “ಸಾರಾ ಸಮಂದರ್ ಮೇರಾ ಪಾಸ್ ಹೈ, ಎಕ್ ಬೂಂದ್ ಪಾನಿ ಮೇರಾ ಪ್ಯಾಸ್ ಹೈ” ಅಂತ ಹಾಡ್ತಾನೆ ಸಂಜಯ್ ದತ್. ಅಧ್ಯಾತ್ಮದಿಂದ ಹಿಡಿದು ಶುದ್ಧ ಐಹಿಕ ಮನರಂಜನೆಯವರೆಗೂ ಪ್ರತಿಯೊಂದು ಮಗ್ಗುಲ ಹುಡುಕಾಟವಿದು, ‘ತಿಳಿನೀರಿನ ಹನಿ’.

ಈಗ ಸಮುದ್ರದ ನೀರು ಸೋಸಿ ಕುಡಿಯಲು ಯೋಗ್ಯವಾಗಿಸುವ ಟೆಕ್ನಾಲಜಿ ಬಂದಿದೆ. ಒಳ್ಳೆಯದೇ.
ಲೋಕದಲ್ಲಿ ಹುಟ್ಟಿದ ಮೇಲೆ ಲೌಕಿಕವನ್ನು ತೊರೆಯಲು ಎಲ್ಲರಿಗೂ ಸಾಧ್ಯವಾಗೋದಿಲ್ಲ, ಅಥವಾ ಎಲ್ಲರೂ ಹಾಗೆ ಲೌಕಿಕ ತೊರೆಯೋದು ಬೇಕಾಗಿಯೂ ಇಲ್ಲ. ಅದನ್ನೇ ಸೋಸಿ, ಹಾನಿಕಾರಕ ಚರಟ ಬಸಿದು ಬಿಸಾಡಿ ಯೋಗ್ಯವಾದ್ದನ್ನಷ್ಟೇ ಬಳಸುವ ಅವಕಾಶವಿದೆ ನಮಗೆ.

ಅಧ್ಯಾತ್ಮ ಜೀವಿಗಳಿಗೆ ಜ್ಞಾನ, ಲೌಕಿಕರಿಗೆ ವಿಜ್ಞಾನ… ಉಪ್ಪುಕಡಲ ನಡುವೆ ಹೊಯ್ದಾಡುವ ಜೀವಿಗಳಿಗೆ ಭರವಸೆ ನೀಡುವ ದೀಪಸ್ತಂಭಗಳಿವು. ಕಣ್ತೆರೆದು ಕಾಣಬೇಕಷ್ಟೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

2 Responses

  1. Hsb's avatar Hsb

    ಓದಿದ ನಂತರ… ಮತ್ತೆರಡು ಸಾರಿ ಓದಿ ಸುಮ್ಮನೆ ಕುಳಿತು ಬಿಟ್ಟೆ …. ನೀಲಿ ಚಿತ್ರದ ದೋಣಿಯಲ್ಲಿ ನಾನೇ ಪಯಣಿಸುತ್ತಿರುವನೆಂದು ಭಾವಿಸಿಕೊಂಡೆ… ಸುತ್ತಮುತ್ತ ನಿಂತ ಜೀವದ ನೆಲೆಯನ್ನು ನೋಡಿ ಧನ್ಯನಾದೆ …. ನೀರು ಕುಡಿಯುತ್ತಾ ನನ್ನೊಳಗೆ ನಾನು ತನ್ಮಯನಾಗಿ…. ದೇವರ ಕರುಣೆ ಸಿಕ್ಕ ನಾನೇ ಪುಣ್ಯವಂತ ಎಂದು ಅನಿಸಿತು… ಭಾವ ಮತ್ತು ಭಕ್ತಿಯ ಆಳ ಸಿಕ್ಕರೂ ತಿಳಿದರು ತಿಳಿಯದಿದ್ದರೂ ಹುಡುಕುವುದು ಬಾಳು… ಬರೆದ ನಿಮಗೆ ಅನಂತ ಧನ್ಯವಾದಗಳು … Thanks for wonderful lines… ಬಚ್ಚಿಟ್ಟಿಕೊಳ್ಳದೆ ಬಿಚ್ಚಿಟ್ಟುಕೊಳ್ಳುವ ನಿಮ್ಮ ಅರಿವಿನ ಆಧ್ಯಾತ್ಮದ ಸಾಲುಗಳಿಗೆ ಸಾಲಗಾರ ನಾನು… 🙏🏻🙏🏻🙏🏻🤵

    Like

Leave a Reply

This site uses Akismet to reduce spam. Learn how your comment data is processed.