ವೃದ್ಧ ಮೊರೆಯಿಟ್ಟಿದ್ದು ಸಾವಿನ ದೇವರಿಗೆ. ಸಾವಿನ ದೇವರು ಬಂದಹಾಗೆ, ಆತ ಸಹಾಯಕ್ಕೆ ಮೊರೆಯಿಟ್ಟಿದ್ದರೆ ಸಹಾಯ ಮಾಡುವ ದೇವರೂ ಬರುತ್ತಿದ್ದನೇ!? । ಸ್ವಾಮಿ ರಾಮತೀರ್ಥರು ಹೇಳಿದ ದೃಷ್ಟಾಂತ ಕತೆ; ಸಂಗ್ರಹಾನುವಾದ: ಪ್ರಣವ ಚೈತನ್ಯ
ಒಮ್ಮೆ ಒಬ್ಬ ವೃದ್ಧ ತನ್ನ ಬೆನ್ನಿನ ಮೇಲೆ ತುಂಬಾ ಭಾರವಾದ ಸಾಮಗ್ರಿಗಳನ್ನು ಇಟ್ಟುಕೊಂಡು ಮರಳುಗಾಡಿನಲ್ಲಿ ಹೋಗುತ್ತಿದ್ದ. ಮಧ್ಯಾಹ್ನದ ಬಿಸಿಲು ಮತ್ತು ತನ್ನ ಬೆನ್ನಿನ ಮೇಲಿದ್ದ ಭಾರದ ಹೇರಿನಿಂದ ಸುಸ್ತಾಗಿದ್ದ ಆ ವೃದ್ಧನ ಕಣ್ಣುಗಳಲ್ಲಿ ನೀರು ಇಳಿಯಿತು. ತನ್ನ ಬೆನ್ನಿನ ಮೇಲಿದ್ದ ಸಾಮಗ್ರಿಗಳನ್ನು ಕೆಳಗೆ ಎಸೆದ. ಮರಳಿನ ದಿಬ್ಬದ ಮೇಲೆ ಕುಳಿತುಕೊಂಡ ಆ ವೃದ್ಧ, “ಸಾವೇ, ನೀನೇಕೆ ನನ್ನನ್ನು ಇನ್ನೂ ಕರೆದುಕೊಂಡಿಲ್ಲ? ಓ ಸಾವಿನ ದೇವರೇ, ನನ್ನ ಕರೆದುಕೊಂಡು ಹೋಗು” ಎಂದು ಮೊರೆಯಿಟ್ಟ.
ತಕ್ಷಣ ಸಾವಿನ ದೇವರು ಆ ವೃದ್ಧನ ಮುಂದೆ ಪ್ರತ್ಯಕ್ಷನಾದ. ಸಾವಿನ ದೇವರ ಕ್ರೂರ ರೂಪವನ್ನು ನೋಡಿದ ವೃದ್ಧನಿಗೆ ಭಯವಾಯಿತು. “ಯಾರು ನೀನು? ನನ್ನ ಬಳಿಗೆ ಏಕೆ ಬಂದಿರುವೆ?” ಎಂದು ಆ ವೃದ್ಧ ಕೇಳಿದ. “ನಾನು ಸಾವಿನ ದೇವರು, ನೀನು ಆಸೆ ಪಟ್ಟಂತೆ ನಿನ್ನ ಕರೆದುಕೊಂಡು ಹೋಗಲು ಬಂದಿದ್ದೇನೆ. ಬಾ ನನ್ನ ಬಳಿ, ನಿನ್ನ ಮನುಷ್ಯ ಜನ್ಮಕ್ಕೆ ಮುಕ್ತಿ ನೀಡುವೆ” ಎಂದು ಸಾವಿನ ದೇವರು ಹೇಳಿದ. ಇದನ್ನು ಕೇಳಿ ವೃದ್ಧನ ಮೈ ನಡುಗಲು ಶುರುವಾಯಿತು. “ಅದೊಂದು ಆಡುಮಾತು ಅಷ್ಟೇ, ಏನಾದರು ಕಷ್ಟ ಬಂದಾಗ, ದೇವರೇ ನನ್ನನ್ನು ಏಕೆ ಇಟ್ಟಿದ್ದೀಯ? ಎನ್ನುವುದು ಒಂದು ಆಡುಮಾತು, ನೀನು ನನಗೆ ಸಹಾಯ ಮಾಡುವುದಾದರೆ ಈ ಸಾಮಗ್ರಿಗಳ ಭಾರ ನನಗೆ ನೋವು ಕೊಡದೆ ಇರುವ ಹಾಗೆ ಮಾಡು” ಎಂದು ವೃದ್ಧ ಭಯದಿಂದ ಕೇಳಿಕೊಂಡ. ಇದನ್ನು ಕೇಳಿದ ಸಾವಿನ ದೇವರು ನಗುತ್ತಾ “ನೀನು ಬಯಸಿದ್ದು ಸಾವಿಗೆ, ನಿನ್ನ ಆಸೆ ಈಡೇರಿಸುವುದು ನನ್ನ ಕರ್ತವ್ಯ. ನಿನಗೆ ನೋವು ಆಗಿದ್ದರೆ ದೇವರೇ, ನನ್ನ ನೋವನ್ನು ಮಾಯಮಾಡು ಎಂದು ಪ್ರಾರ್ಥಿಸಬೇಕಿತ್ತು. ಈಗ ನನ್ನ ಜೊತೆಗೆ ಬರುವುದಕ್ಕೆ ತಯಾರಿ ಮಾಡಿಕೊ” ಅಂದುಬಿಟ್ಟ.
ಸಾರಾಂಶ: ನಾವು ಪಡುವ ಆಸೆಗಳಿಗೆ ಪರಿಣಾಮವಿರುತ್ತದೆ. ಕಷ್ಟಗಳು ಮತ್ತು ದುಃಖ ಜೀವನದ ಒಂದು ಭಾಗ. ಅವುಗಳನ್ನು ಹೋಗಲಾಡಿಸು ಎಂದು ಕೇಳಿಕೊಂಡರೆ ಯಾವ ದೇವರೂ ಸಹಾಯಕ್ಕೆ ಬರಲಾರ.
(ಈ ಕತೆಯ ಮೂಲ ‘ಈಸೋಪನ ನೀತಿಕತೆಗಳು’ ಎಂದು ಉಲ್ಲೇಖಿಸಲಾಗಿದೆ)

