ಇನ್ನೂ ಹೆಚ್ಚಿನ ಸುಖ – ಸಂತೋಷ ಪಡೆಯುವ ಭ್ರಮೆಯಲ್ಲಿ ಅರಮನೆಯಿಂದ ತಪ್ಪಿಸಿಕೊಂಡ ಗಿಡುಗಕ್ಕೆ ಸಿಕ್ಕಿದ್ದೇನು…? । ರೂಮಿ ಹೇಳಿದ ಕತೆ; ಕನ್ನಡಕ್ಕೆ: ಪ್ರಣವ ಚೈತನ್ಯ
ಒಬ್ಬ ರಾಜನಿದ್ದ, ಅವನಿಗೆ ಗಿಡುಗ ಪಕ್ಷಿಗಳೆಂದರೆ ಪ್ರಾಣ. ಆ ರಾಜನು ತನ್ನ ಅರಮನೆಯ ಒಂದು ಭಾಗವನ್ನು ಗಿಡುಗಗಳ ಧಾಮವಾಗಿ ಪರಿವರ್ತಿಸಿದ್ದ. ಆ ಗಿಡುಗಗಳನ್ನು ಕಾಯಲು ಒಬ್ಬ ಸೇವಕನನ್ನು ನೇಮಕ ಮಾಡಿದ್ದ. ಪ್ರತಿದಿನದಂತೆ, ಒಂದು ದಿನ ರಾಜ ತನ್ನ ಕೆಲಸಗಳನೆಲ್ಲ ಮುಗಿಸಿ ಮಧ್ಯಾನ ಗಿಡುಗ ಧಾಮಕ್ಕೆ ಹೋದ, ಅಲ್ಲಿ ಅವನಿಗೆ ಅಚ್ಚರಿ ಕಾದಿತ್ತು. ರಾಜನ ಅತಿಪ್ರಿಯವಾದ ಗಿಡುಗವೊಂದು ತಪ್ಪಿಸಿಕೊಂಡು ಹಾರಿಹೋಗಿತ್ತು.
ರಾಜನ ಪ್ರಿಯವಾದ ಗಿಡುಗವನ್ನು ಅರಮನೆಯ ಮೂಲೆ-ಮೂಲೆಯಲ್ಲಿ ಹುಡುಕಿದರು ಅದು ಎಲ್ಲೂ ಸಿಕ್ಕಲಿಲ್ಲ. ಏಕೆಂದರೆ ಆ ಗಿಡುಗ ಅರಮನೆಯಿಂದ ತಪ್ಪಿಸಿಕೊಂಡು ಒಂದು ಅಜ್ಜಿ ಮನೆಯ ಗೋಡೆಮೇಲೆ ಕುಳಿತಿತ್ತು. ಈ ಚಮತ್ಕಾರಿ ಗಿಡುಗವನ್ನು ನೋಡಿದ ಅಜ್ಜಿ ಮನ್ಸಸೋತು ಆ ಗಿಡುಗವನ್ನು ಹಿಡಿದು ಅದರ ಕಾಲುಗಳನ್ನು ಕಟ್ಟಿ ತನ್ನ ಮನೆಯ ಒಳಗೆ ಇಟ್ಟುಕೊಂಡಳು. ಅದರ ದೊಡ್ಡ ರೆಕ್ಕೆಗಳನ್ನು ಸವರಿ ಆನಂದಪಟ್ಟಳು.
ಗಿಡುಗದ ರೆಕ್ಕೆಗಳು ಬಹಳ ಉದ್ದವಿದೆ ಎಂದು ಭಾವಿಸಿದ ಆ ಅಜ್ಜಿ, ಗಿಡುಗದ ರೆಕ್ಕೆಗಳನ್ನು ಅವಳಿಗೆ ಸರಿ ಎನ್ನಿಸಿದಷ್ಟು ಕತ್ತರಿಸಿದಳು. ಗಿಡುಗದ ಉಗುರುಗಳು ಬಹಳ ಉದ್ದವಿದೆ ಎಂದು ಅವಳಿಗೆ ಅನ್ನಿಸಿತು. ಗಿಡುಗದ ಉಗುರುಗಳನ್ನು ಕತ್ತರಿಸಿದಳು. ಆ ಗಿಡುಗವನ್ನು ಅಕ್ಕರೆಯಿಂದ ತನ್ನ ತೊಡೆಯಮೇಲೆ ಕೂರಿಸಿಕೊಂಡು ಅದನ್ನು ಸವರುತ್ತಾ “ಯಾವ ಜಾಗದಿಂದ ಓಡಿಬಂಡೆ ನೀನು? ಅದೆಷ್ಟು ಅಸಡ್ಡೆತನದಿಂದ ನೋಡಿಕೊಂಡಿದ್ದರು ನಿನ್ನ? ಉಗುರು – ರೆಕ್ಕೆ ಕತ್ತರಿಸದೆ ನಿನಗೆ ಹಿಂಸೆ ನೀಡಿದ್ದರೇ? ಅದಕ್ಕೆ ಓಡಿಬಂದೆಯೇ? ನೀನು ಇನ್ನೂ ಬೇಗನೆ ನನ್ನ ಬಳಿ ಬರಬೇಕಿತ್ತು.” ಎಂದಳು.
ರಾಜ ತನ್ನ ಸೈನ್ಯದ ಜೊತೆ ಪೂರ್ತಿ ರಾಜ್ಯವನ್ನು ಹುಡುಕಲು ಶುರು ಮಾಡಿದ, ತನ್ನ ರಾಜ್ಯದ ಗಡಿಯ ಕಡೇ ಗ್ರಾಮಕ್ಕೆ ಅವನು ಬಂದಾಗಲೇ ಅವನಿಗೆ ಆ ಅಜ್ಜಿಯ ಮನೆಯಲ್ಲಿ ತನ್ನ ನೆಚ್ಚಿನ ಗಿಡುಗ ಕಂಡದ್ದು. “ಆರಮನೆಯ ಆರೈಕೆಯನ್ನು ಬಿಟ್ಟು, ನಿನ್ನ ಅಷ್ಟೊಂದು ಪ್ರೀತಿಸಿದ ನನ್ನ ಬಿಟ್ಟು ಬಂದದಕ್ಕೆ ನಿನಗೆ ಇದು ಶಿಕ್ಷೆ” ಅನ್ನುತ್ತಾ ಗಿಡುಗದ ಬಳಿ ಹೋದ. ಗಾಯವಾದ ರೆಕ್ಕೆಗಳು, ಕಂದುಹೋದ ಅದರ ಮೈಬಣ್ಣವನ್ನು ನೋಡಿ ಬೇಸರದಿಂದ ಅದರ ಗಾಯಗೊಂಡ ರೆಕ್ಕೆಗಳನ್ನು ಸವರಿದ.
ಆ ಗಿಡುಗ ನಾಚಿಕೆ ಮುಖದಿಂದ ರಾಜನಕಡೆ ನೋಡಿತು, ಅದರ ಕಣ್ಣುಗಳಲ್ಲಿ ನೀರು ಸುರಿಯುತ್ತಿತ್ತು. ಆ ಗಿಡುಗಕ್ಕೆ ಮಾತನಾಡಲು ಬಂದಿದ್ದರೆ “ರಾಜ, ನನ್ನ ಕ್ಷಮಿಸು, ತಪ್ಪು ಮಾಡಿದೆ. ರಾಜ ವೈಭೋಗವನ್ನು ಬಿಟ್ಟು ಓಡಿಬಂದೆ. ಕಣ್ ಬಿಟ್ಟಾಗಿನಿಂದ ಬರೀ ರಾಜವೈಭೋಗವನ್ನೇ ನೋಡಿದ್ದ ನಾನು ಅದಕ್ಕಿಂತ ಇನ್ನು ಉತ್ತಮವಾದ ಜಾಗವನ್ನು ಹುಡುಕಬೇಕು ಎಂಬ ಮೂರ್ಖತನದಿಂದ ತಪ್ಪಿಸಿಕೊಂಡೆ. ದಯವಿಟ್ಟು ನನ್ನ ಮೇಲೆ ದಯೆ ತೋರಿಸಿ ನನ್ನ ಇಲ್ಲಿಂದ ಕರೆದುಕೊಂಡು ಹೋಗು” ಎಂದು ಹೇಳುವ ಹಾಗಿತ್ತು ಅದರ ಮುಖ.

