ವೈರುಧ್ಯವೇ ಬದುಕಿನ ಸೌಂದರ್ಯ : ಓಶೋ ವ್ಯಾಖ್ಯಾನ

ಕಹಿ ಇಲ್ಲದೇ ಹೋದರೆ ಸಿಹಿ ಹೇಗೆ ರುಚಿ ನೀಡುತ್ತದೆ? ಕಾಯಲೆ ಇಲ್ಲದೇ ಹೋದರೆ ಆರೋಗ್ಯ ಮುಖ್ಯ ಎನ್ನುವುದು ಹೇಗೆ ಗೊತ್ತಾಗುತ್ತದೆ? ದುಃಖವನ್ನು ಅನುಭವಿಸದೇ ಸುಖವನ್ನು ಇಷ್ಟಪಡುವುದು ಸಾಧ್ಯವೇ? ವಿರಹ ಇರದ ಪ್ರೀತಿ ಅದೆಂಥಹದು? ವೈರುಧ್ಯಗಳಿರುವ ಕಾರಣವಾಗಿಯೇ ಬದುಕು ಸುಂದರವಾಗಿರುವುದು… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಅಲೆಕ್ಸಾಂಡರ್ ದಿ ಗ್ರೇಟ್ ಕುರಿತಾದ ಒಂದು ಕಥೆ ಇದೆ.

ಅಲೆಕ್ಸಾಂಡರ್ ತನ್ನನ್ನು ಶಾಶ್ವತವಾಗಿಸುವ ಯಾವುದೋ ಒಂದು ಸಂಗತಿಯ ಹುಡುಕಾಟದಲ್ಲಿದ್ದ. ಹಾಗೆ ನೋಡಿದರೆ ಎಲ್ಲರೂ ಈ ಥರದ ಒಂದು ಸಂಗತಿಯ ಹುಡುಕಾಟದಲ್ಲಿ ಇದ್ದೇ ಇರುತ್ತಾರೆ. ಆದರೆ ಅಲೆಕ್ಸಾಂಡರ್ ಸಾಮಾನ್ಯನಲ್ಲ ಜಗತ್ತಿನಲ್ಲಿಯೇ ಅತ್ಯಂತ ಶಕ್ತಿಶಾಲಿ ವ್ಯಕ್ತಿ, ಅಂಥವನು ಹುಡುಕಾಟಕ್ಕಿಳಿದಿರುವನೆಂದರೆ ಅವನು ಅದನ್ನು ಹುಡುಕಿಯೇ ತೀರುತ್ತಾನೆ.

ಈ ಹುಡುಕಾಟದಲ್ಲಿ ಒಬ್ಬ ಜ್ಞಾನಿ ಮನುಷ್ಯ, ಅಲೆಕ್ಸಾಂಡರ್ ಗೆ ಒಂದು ಗುಹೆಯ ಬಗ್ಗೆ ಹೇಳಿದ. ಗುಹೆಯ ಒಳಗೆ ಹರಿಯುತ್ತಿರುವ ತೊರೆಯ ನೀರು ಕುಡಿದರೆ ನೀನು ಚಿರಂಜೀವಿಯಾಗುತ್ತೀಯ ಎಂದು ಆ ಜ್ಞಾನಿ ಮನುಷ್ಯ, ಅಲೆಕ್ಸಾಂಡರ್ ನನ್ನು ಒಪ್ಪಿಸಿದ. ಅಲೆಕ್ಸಾಂಡರ್ ಜಾಣನಾಗಿದ್ದರೆ ನೀನು ಆ ತೊರೆಯ ನೀರು ಕುಡಿದಿದ್ದೀಯ? ನಿನ್ನ ಅನುಭವ ಏನು ಎಂದು ಆ ಜ್ಞಾನಿಯನ್ನು ಪ್ರಶ್ನೆ ಮಾಡಬೇಕಿತ್ತು. ಆದರೆ ಬಹುತೇಕ ಎಲ್ಲ ಚಕ್ರವರ್ತಿಗಳು ಮೂರ್ಖರೇ ಆಗಿರುತ್ತಾರೆ. ಎಲ್ಲಿ ತಾನು ಸಾಯುವ ಮೊದಲು ಆ ಗುಹೆಯನ್ನು ತಲುಪುವೆನೋ ಇಲ್ಲವೋ ಎನ್ನುವ ಭಯದಲ್ಲಿ ಅಲೆಕ್ಸಾಂಡರ್ ಲಗುಬಗೆಯಿಂದ ಗುಹೆಯನ್ನು ಹುಡುಕಿಕೊಂಡು ಹೊರಟ.

ಬಹಳಷ್ಟು ಹುಡುಕಾಟದ ನಂತರ ಅಲೆಕ್ಸಾಂಡರ್ ಗುಹೆಯ ಬಾಗಿಲನ್ನು ತಲುಪಿದ, ಒಳಗೆ ಪ್ರವೇಶ ಮಾಡಿದ. ಅಲ್ಲಿ ಒಳಗೆ ಅತ್ಯಂತ ತಿಳಿಯಾದ ನೀರಿನ ತೊರೆಯೊಂದು ಹರಿಯುತ್ತಿರುವುದನ್ನು ಕಂಡು ಸಂತೋಷಭರಿತನಾದ. ಇನ್ನೇನು ಅಲೆಕ್ಸಾಂಡರ್ ತೊರೆಯಿಂದ ಒಂದು ಬೊಗಸೆ ನೀರು ತೆಗದುಕೊಂಡು ಕುಡಿಯಬೇಕೆನ್ನುವಷ್ಟರಲ್ಲಿ, ಅಲ್ಲಿಯೇ ಕುಳಿತಿದ್ದ ಕಾಗೆಯೊಂದು ಮಾತನಾಡಿತು, “ಸಾಮ್ರಾಟ, ಆ ನೀರು ಕುಡಿಯಬೇಡ!, ನಾನು ಈ ತೊರೆಯ ನೀರುಕುಡಿದು ಬಹಳ ಕಷ್ಟಪಡುತ್ತಿದ್ದೇನೆ”

“ಏನು ಹೇಳುತ್ತಿದ್ದೀಯ? ನೀನು ಈ ತೊರೆಯ ನೀರು ಕುಡಿದು ಕಷ್ಟಪಡುತ್ತಿದ್ದೀಯ? ಏನು ಅದು ನಿನ್ನ ಕಷ್ಟ?” ಅಲೆಕ್ಸಾಂಡರ್ ಕಾಗೆಯನ್ನು ಪ್ರಶ್ನೆ ಮಾಡಿದ.

ಕಾಗೆ ಉತ್ತರಿಸಿತು. “ಈ ತೊರೆಯ ನೀರು ಕುಡಿದೆನಾದ್ದರಿಂದ ನನಗೆ ಈಗ ಸಾವಿಲ್ಲ. ಈ ಬದುಕಿನಿಂದ ಸಾಧ್ಯವಾಗಬಹುದಾದ ಎಲ್ಲವನ್ನೂ ನಾನು ಅನುಭವಿಸಿಬಿಟ್ಟಿದ್ದೇನೆ. ನನಗೆ ಪ್ರೀತಿ ಗೊತ್ತು ಆದರೆ ನಾನು ಪ್ರೀತಿಯಿಂದ ಬೇಸತ್ತು ಬಿಟ್ಟಿದ್ದೇನೆ. ನನಗೆ ಯಶಸ್ಸು ಗೊತ್ತು. ನಾನು ಕಾಗೆಗಳ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗಿದ್ದೆ. ಆದರೆ ಈಗ ನನಗೆ ಬೇಸರವಾಗುತ್ತಿದೆ. ನನಗೆ ಗೊತ್ತಿದ್ದ ಎಲ್ಲರೂ ತೀರಿ ಹೋಗಿ ಈಗ ಚಿರ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ನನಗೆ ಮಾತ್ರ ವಿಶ್ರಾಂತಿ ಇಲ್ಲ. ನಾನು ಆತ್ಮಹತ್ಯೆ ಮಾಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡಿ ನೋಡಿದೆ ಆದರೆ ಯಾವುದರಲ್ಲೂ ಸಫಲನಾಗಲಿಲ್ಲ. ನಾನು ಈ ಶಾಪಗ್ರಸ್ತ ತೊರೆಯ ನೀರು ಕುಡಿದುಬಿಟ್ಟಿರುವೆನಾದ್ದರಿಂದ ನನಗೆ ಸಾವಿಲ್ಲ. ನನ್ನೊಳಗೆ ಅಸಮಾಧಾನ ತುಂಬಿ ತುಳುಕುತ್ತದೆ. ಆದ್ದರಿಂದ ಈ ನೀರು ಕುಡಿಯಬೇಕೋ ಬೇಡವೋ ಎನ್ನುವ ಕುರಿತು ನೀನು ಸಮಾಧಾನಚಿತ್ತದಿಂದ ಧ್ಯಾನ ಮಾಡಿ ಆಮೇಲೆ ಒಂದು ನಿರ್ಣಯಕ್ಕೆ ಬಾ.”

ಆಗ ಅಲೆಕ್ಸಾಂಡರ್ ಶಾಶ್ವತತೆಯ ಕುರಿತಾಗಿ ಆಳವಾಗಿ ಧ್ಯಾನ ಮಾಡಿ ಕೊನೆಗೆ ಬದುಕು ಮನುಷ್ಯನಿಗೆ ಎಷ್ಟು ಮುಖ್ಯವೋ ಸಾವು ಕೂಡ ಅಷ್ಟೇ ಮುಖ್ಯ ಎನ್ನುವುದನ್ನು ಮನಗಂಡು, ಆ ಗುಹೆಯ ನೀರು ಕುಡಿಯದೆಯೇ ಹೊರಬಂದನಂತೆ.

ಸಾವು ಇಲ್ಲದೇ ಹೋದರೆ ಈ ಬದುಕನ್ನು ಸಹಿಸುವುದು ಬಹಳ ಕಷ್ಟ. ಅದಕ್ಕೆ ವಿರುದ್ಧವಾದದ್ದೊಂದು ಇರದೇ ಹೋದರೆ ಪ್ರಿತಿಯು ಕೂಡ ಅಷ್ಟೇ ಅಸಹನೀಯ. ನಿಮ್ಮ ಪ್ರೀತಿ ಪಾತ್ರರಿಂದ ಬೇರ್ಪಡದೇ ಹೋದರೆ ಬದುಕು ಏಕತಾನತೆಯಿಂದ ಬೇಸರ ಮೂಡಿಸುತ್ತದೆ. ಕಹಿ ಇಲ್ಲದೇ ಹೋದರೆ ಸಿಹಿ ಹೇಗೆ ರುಚಿ ನೀಡುತ್ತದೆ? ಕಾಯಲೆ ಇಲ್ಲದೇ ಹೋದರೆ ಆರೋಗ್ಯ ಮುಖ್ಯ ಎನ್ನುವುದು ಹೇಗೆ ಗೊತ್ತಾಗುತ್ತದೆ? ದುಃಖವನ್ನು ಅನುಭವಿಸದೇ ಸುಖವನ್ನು ಇಷ್ಟಪಡುವುದು ಸಾಧ್ಯವೇ? ವಿರಹ ಇರದ ಪ್ರೀತಿ ಅದೆಂಥಹದು? ವೈರುಧ್ಯಗಳಿರುವ ಕಾರಣವಾಗಿಯೇ ಬದುಕು ಸುಂದರವಾಗಿರುವುದು.


ಒಂದು ದಿನ ನಸ್ರುುದ್ದೀನ್ ನ ಹೆಂಡತಿ ಚಿಂತಾಕ್ರಾಂತಳಾಗಿರುವುದನ್ನ ಗಮನಿಸಿದ ನೆರೆ ಮನೆಯ ಹೆಂಗಸು ವಿಚಾರಿಸಿದಳು,

“ಯಾಕೆ ಇಷ್ಟು ಬೇಸರದಲ್ಲಿದ್ದೀ ? ಏನು ವಿಷಯ ? “

“ ನಸ್ರುದ್ದೀನ್ ಜೊತೆ ಜಗಳ ಆಗಿದೆ, ಒಂದು ತಿಂಗಳು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿ ಅವ ಮನೆ ಬಿಟ್ಟು ಹೋಗಿದ್ದಾನೆ “

ನಸ್ರುದ್ದೀನ್ ನ ಹೆಂಡತಿ ತನ್ನ ದುಃಖದ ಕಾರಣ ವಿವರಿಸಿದಳು.

“ ಜಗಳ ಗಂಟ ಗಂಡನ ಕಾಟ ತಪ್ಪಿತು ಅಂತ ಖುಶಿಯಾಗಿರು “

ನೆರೆಮನೆಯ ಹೆಂಗಸು ಸಮಾಧಾನ ಮಾಡಿದಳು.

“ ನಸ್ರುದ್ದೀನ್ ಹೇಳಿದ ಒಂದು ತಿಂಗಳ ವಾಯಿದೆ ನಾಳೆ ಮುಗಿಯುತ್ತಿದೆ “

ನಸ್ರುದ್ದೀನ್ ನ ಹೆಂಡತಿ ತನ್ನ ಚಿಂತೆಯ ಕಾರಣ ಬಿಡಿಸಿ ಹೇಳಿದಳು .


Source: OSHO –( “Yoga : The Alpha and the Omega” )

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.