ಅನುಕಂಪ ಮತ್ತು ಉದಾಸೀನತೆ : ಓಶೋ ವ್ಯಾಖ್ಯಾನ

ಉದಾಸೀನತೆ ಅಮಾನವೀಯ. ನೆನಪಿರಲಿ, ನೀವು ಯಾರ ಕುರಿತಾದರೂ ಔದಾಸೀನ್ಯವನ್ನು ಹೊಂದಿರುವಿರಾದರೆ ನಿಮ್ಮ ಹೃದಯ ಕಲ್ಲಾಗಿದೆ ಎಂದರ್ಥ. ನೀವು ಆ ಮನುಷ್ಯನಿಗೆ ಯಾವ ಹಾನಿಯನ್ನೂ ಮಾಡುತ್ತಿಲ್ಲ ಆದರೆ, ಸ್ವತಃ ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುತ್ತಿದ್ದೀರಿ… । ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ಸಹಾನುಭೂತಿ, ಕಾರುಣ್ಯ (empathy) ದ ಅನುಭವ ಬಹಳ ಅಪರೂಪ. ನಿಮಗೆ ಅನುಕಂಪ (sympathy) ಗೊತ್ತು, ಉದಾಸೀನತೆ (apathy) ಗೊತ್ತು, ಆದರೆ ಕಾರುಣ್ಯದ ಬಗ್ಗೆ ಅಷ್ಟು ಗೊತ್ತಿಲ್ಲ.

ಅನುಕಂಪ ಮತ್ತು ಉದಾಸೀನತೆ ಪರಸ್ಪರ ವಿರುದ್ಧವಾದವು. ಕಾರುಣ್ಯ ಈ ಎರಡನ್ನೂ ಮೀರುವಂಥದು. ಇದನ್ನು ಅರ್ಥಮಾಡಿಸಲು ನಿಮಗೆ ರಾಮಕೃಷ್ಣರ ಬದುಕಿನಲ್ಲಿ ನಡೆದ ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.

ಒಮ್ಮೆ ರಾಮಕೃಷ್ಣರು ಕಲ್ಕತ್ತೆಯ ಇನ್ನೊಂದು ಭಾಗಕ್ಕೆ ಗಂಗಾ ನದಿಯ ಮೂಲಕ ದೋಣಿಯಲ್ಲಿ ಕುಳಿತು ಪ್ರಯಾಣ ಮಾಡುತ್ತಿದ್ದರು. ದೋಣಿ ನದಿಯ ಮಧ್ಯಕ್ಕೆ ಬರುತ್ತಿದ್ದಂತೆಯೇ ಅಚಾನಕ್ ಆಗಿ ರಾಮಕೃಷ್ಣರು, “ನನ್ನ ಹೊಡೆಯಬೇಡಿ” ಎಂದು ಕೂಗತೊಡಗಿದರು. ಅವರ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಹರಿಯತೊಡಗಿತ್ತು. ಅವರ ಸುತ್ತ ಕುಳಿತಿದ್ದ ಶಿಷ್ಯರಿಗೆ ರಾಮಕೃಷ್ಣರ ವರ್ತನೆ ಕಂಡು ಆಶ್ಚರ್ಯ ಅಷ್ಟೇ ಅಲ್ಲ ಹೆದರಿಕೆ ಶುರುವಾಯಿತು. ರಾಮಕೃಷ್ಣರು ಅತೀವ ಹಿಂಸೆ ಪಡುತ್ತಿದ್ದರು. ಅವರ ದೇಹದ ಮೇಲೆ ಹೊಡೆತದ ಗಾಯಗಳು ಕಾಣಿಸತೊಡಗಿದ್ದವು. ಆದರೆ ಅಲ್ಲಿ ನೋಡಿದರೆ ಅವರ ಹೊರತಾಗಿ ಬೇರೆ ಯಾರೂ ಇರಲಿಲ್ಲ.

ದೋಣಿ ದಂಡೆಯನ್ನು ತಲುಪಿದಾಗ ಅಲ್ಲಿ, ಒಬ್ಬ ಮೀನುಗಾರನ ಸುತ್ತ ಒಂದು ಗುಂಪು ಸುತ್ತುವರೆದಿತ್ತು. ಕೆಲವು ಜನ ಸೇರಿ ಮೀನುಗಾರನನ್ನು ನಿರ್ದಯವಾಗಿ ಹೊಡೆಯುತ್ತಿದ್ದರು. ಮೀನುಗಾರ “ಅಯ್ಯೋ ನನ್ನ ಹೊಡೆಯಬೇಡಿ” ಎಂದು ಬೇಡಿಕೊಳ್ಳುತ್ತಿದ್ದ. ಅವನ ಮೈಮೇಲೆಲ್ಲ ಗಾಯಗಳಾಗಿತ್ತು. ಆಶ್ಚರ್ಯವೆಂದರೆ ಅವನ ಮೈಮೇಲೆ ಎಲ್ಲೆಲ್ಲಿ ಯಾವ ಥರದ ಗಾಯಗಳಾಗಿದ್ದವೋ ಅದೇ ಥರ ರಾಮಕೃಷ್ಣರ ಮೈಮೇಲೆ ಗಾಯಗಳಾಗಿದ್ದವು.

ಇದು ಬಹಳ ಅಪರೂಪದ ವಿದ್ಯಮಾನ. “ಏನು ಇದು?” ಎಂದು ಶಿಷ್ಯರು, ಗುರುಗಳನ್ನು ಕೇಳಿದರು. ಇದು ಕಾರುಣ್ಯ ಎಂದು ರಾಮಕೃಷ್ಣರು ಉತ್ತರಿಸಿದರು. ಇಂಥ ಸ್ಥಿತಿಯಲ್ಲಿ ನೀವು ಇನ್ನೊಬ್ಬರೊಡನೆ ಎಷ್ಟು ಒಂದಾಗುತ್ತೀರಿ ಎಂದರೆ ನಿಮ್ಮ ನಡುವಿನ ಪ್ರತ್ಯೇಕತೆಗಳ ಗಡಿ ಮಾಯವಾಗುತ್ತದೆ. ಇನ್ನೊಬ್ಬರ ಖುಶಿ ನಿಮ್ಮದಾಗುತ್ತದೆ, ಇನ್ನೊಬ್ಬರ ದುಃಖ ನಿಮ್ಮ ದುಃಖವಾಗುತ್ತದೆ. ಇನ್ನೊಬ್ಬರ ಹಸಿವೆ ಬಾಯಾರಿಕೆಗಳು ನಿಮ್ಮ ಹಸಿವೆ ಬಾಯಾರಿಕೆಗಳಾಗುತ್ತವೆ. ಆ ಇನ್ನೊಬ್ಬರು ಈಗ ಬೇರೆಯಾಗಿ ಉಳಿದಿಲ್ಲ. ನಿಮ್ಮಿಬ್ಬರ ನಡುವೆ ಒಂದು ರಹಸ್ಯಮಯ ದಾರಿ ತೆರೆದುಕೊಂಡಿದೆ. ಈ ಬಾಂಧ್ಯವ್ಯ ಬಹಳ ಆಳವಾಗಿ ಬೆಸೆದುಕೊಂಡಿರುವಂಥದು.

ಉದಾಸೀನತೆ ನಿಮ್ಮ ಪ್ರತಿದಿನದ ಅನುಭವ. ನೀವು ಇನ್ನೊಬ್ಬರನ್ನು, ಅವರು ಅಲ್ಲಿ ಇಲ್ಲವೇ ಇಲ್ಲವೆನೋ ಎಂಬಂತೆ ದಾಟಿ ಹೋಗುತ್ತೀರಿ. ಮನೆಕೆಲಸದ ವ್ಯಕ್ತಿ ನಿಮ್ಮ ಕೋಣೆಯೊಳಗೆ ಬಂದಾಗ, ನೀವು ಅವನನ್ನು ನೋಡಿ ಮುಗುಳ್ನಗುವುದು ಇರಲಿ, ಅವನನ್ನು ನೀವು ತಲೆ ಎತ್ತಿ ನೋಡುವುದಿಲ್ಲ ಕೂಡ. ಇನ್ನೊಬ್ಬರ ಹಾಜರಾತಿ ನಿಮ್ಮೊಳಗೆ ಯಾವ ಬದಲಾವಣೆಯನ್ನೂ ಮೂಡಿಸುವುದಿಲ್ಲ. ಮೊದಲು ಹೇಗಿದ್ದಿರೋ ಈಗಲೂ ಹಾಗೇ ಇದ್ದೀರಿ. ಇದು ನಿಮ್ಮ ಪ್ರತಿದಿನದ ಅನುಭವ.

ಅನುಕಂಪದ ಅನುಭವ ನಿಮಗೆ ಆಗಾಗ ಆಗುತ್ತದೆ. ನಿಮ್ಮ ಗೆಳೆಯ ದಿವಾಳಿಯಾದಾಗ, ನಿಮ್ಮ ನೆರೆಹೊರೆಯಲ್ಲಿ ಯಾರದೋ ಮನೆಗೆ ಬೆಂಕಿ ಬಿದ್ದಾಗ, ನಿಮಗೆ ಅವರ ಬಗ್ಗೆ ಕನಿಕರ ಉಂಟಾಗುತ್ತದೆ. ಅವರ ಭವ್ಯ ಮನೆಯ ಬಗ್ಗೆ ಅಸೂಯೆಪಡುತ್ತಿದ್ದ ಜನರೇ ಈಗ ಆ ಮನೆಗೆ ಬೆಂಕಿ ಬಿದ್ದಾಗ ಕನಿಕರ ಪಡುತ್ತಿದ್ದಾರೆ, ಇದು ಹೇಗೆ ಸಾಧ್ಯ? ಇದು ಸಾಧ್ಯ, ಏಕೆಂದರೆ ಈ ಅನುಕಂಪ ಕೇವಲ ಒಂದು ಮುಖವಾಡ ಅಷ್ಟೇ. ಒಳಗೊಳಗೆ ಆ ಮನೆಗೆ ಬೆಂಕಿ ಬಿದ್ದಿರುವುದು ಅವರಿಗೆ ಖುಶಿ ತಂದಿದೆ. ಅವರು ಈ ಒಂದು ಸಮಯಕ್ಕಾಗಿಯೇ ಎಷ್ಟೋದಿನದಿಂದ ಕಾಯುತ್ತಿದ್ದರು. ಆ ಭವ್ಯ ಮನೆ ಅವರ ಮನಸ್ಸನ್ನು ಸದಾ ಚುಚ್ಚುತ್ತಿತ್ತು. ಈಗ ಅವರಿಗೆ ಸಮಾಧಾನವಾಗಿದೆ, ಹಾಗೆಂದೇ ಅವರಲ್ಲಿ ಆ ಮನೆಯವರ ಬಗ್ಗೆ ಅನುಕಂಪ ಉಂಟಾಗಿದೆ.

ಯಾರ ಕುರಿತಾದರೂ ನಿಮಗೆ ಅನುಕಂಪ ಹುಟ್ಟಿರುವಾಗ ನಿಮ್ಮ ಒಳಗನ್ನೊಮ್ಮೆ ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿರಿ. ಖಂಡಿತ ಆ ಅನುಕಂಪ ನಿಮ್ಮ ಗೆಳೆತನ, ನಿಮ್ಮ ಒಳ್ಳೆಯತನ, ನಿಮ್ಮ ಅಂತಃಕರಣದ ಕಾರಣವಾಗಿ ಮೂಡಿ ಬಂದಿರುವುದಿಲ್ಲ.ಬದಲಾಗಿ ಈ ಎಲ್ಲಕ್ಕೂ ವಿರುದ್ಧವಾಗಿ ಎಂಬಂತೆ ಅದು ನಿಮ್ಮ ದ್ವೇಷ, ಅಸೂಯೆ ಮತ್ತು ಹಿಂಸೆಯ ಕಾರಣವಾಗಿ ರೂಪಗೊಂಡಿರುತ್ತದೆ. ಆ ಮನುಷ್ಯ ಈಗ ಫಿನಿಶ್ ಆಗಿದ್ದಾನೆ, ನಿಮ್ಮ ದ್ವೇಷಾಸೂಯೆಗಳನ್ನು ವ್ಯಕ್ತ ಮಾಡಲು ಇದು ತಕ್ಕ ಸಮಯ ಅಲ್ಲ. ಈಗ ನೀವು ಆ ವ್ಯಕ್ತಿಯ ಬಗ್ಗೆ ಅನುಕಂಪದ ಭಾವವನ್ನು ಅನುಭವಿಸುತ್ತಾ ಸುಖವಾಗಿ ನಿದ್ರೆ ಮಾಡಬಹುದು.

ಸಿಂಪತಿ ಎನ್ನುವುದು ಒಂದು ಅತ್ಯುತ್ತಮ ಕ್ವಾಲಿಟಿ ಅಲ್ಲ, ಅದು ಒಂದು ವಂಚನೆ.

ಉದಾಸೀನತೆ ಅಮಾನವೀಯ. ನೆನಪಿರಲಿ, ನೀವು ಯಾರ ಕುರಿತಾದರೂ ಔದಾಸೀನ್ಯವನ್ನು ಹೊಂದಿರುವಿರಾದರೆ ನಿಮ್ಮ ಹೃದಯ ಕಲ್ಲಾಗಿದೆ ಎಂದರ್ಥ. ನೀವು ಆ ಮನುಷ್ಯನಿಗೆ ಯಾವ ಹಾನಿಯನ್ನೂ ಮಾಡುತ್ತಿಲ್ಲ ಆದರೆ, ಸ್ವತಃ ನಿಮ್ಮನ್ನು ನೀವೇ ನಾಶ ಮಾಡಿಕೊಳ್ಳುತ್ತಿದ್ದೀರಿ.

ನೀವು ಹೆಚ್ಚು ಹೆಚ್ಚು ಉದಾಸೀನತೆಯನ್ನು ಮೈಗೂಡಿಸಿಕೊಳ್ಳುತ್ತಿದ್ದೀರಿ ಎಂದರೆ ನಿಮ್ಮ ಹೃದಯ ತನ್ನ ನೈಜ ಗುಣ ಸ್ವಭಾವಗಳನ್ನು ಕಳೆದುಕೊಳ್ಳುತ್ತ ಹೋಗುತ್ತಿದೆ. ಹೀಗೇ ಮುಂದುವರೆದರೆ ನಿಮ್ಮ ಹೃದಯ ನೀವು ಜೀವಂತವಾಗಿರುವುದಕ್ಕೆ ಬೇಕಾದ ಪಂಪ್ ಆಗಿ ಉಳಿಯಬಹುದೇ ಹೊರತು ಭಾವನೆಗಳ ಸೇತುವೆಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಮನುಷ್ಯ ಸಮಾಜದೊಳಗಿಂದ ಕಾರುಣ್ಯ, ಬಹುತೇಕ ಮಾಯವಾಗಿ ಹೋಗಿಬಿಟ್ಟಿದೆ. ಖಂಡಿತವಾಗಿಯೂ ಕಾರುಣ್ಯವೊಂದೇ ಇನ್ನೊಂದು ಜೀವನ ಪ್ರವಾಹದೊಡನೆ, ಅದು ಮನುಷ್ಯ ಆಗಿರಬಹುದು, ಪ್ರಾಣಿ ಪಕ್ಷಿಯಾಗಿರಬಹುದು, ಗಿಡ ಮರಗಳಾಗಿರಬಹುದು, ನಿಮ್ಮನ್ನು ಸೇರಿಸುವ ತಂತು. ಕಾರುಣ್ಯವೊಂದೇ ಅಪ್ಪಟ ಧಾರ್ಮಿಕತೆ. ಆದರೆ ಯಾವ ಧರ್ಮವೂ ಕಾರುಣ್ಯವನ್ನು ಬೋಧಿಸುವುದಿಲ್ಲ. ಎಲ್ಲ ಧರ್ಮಗಳೂ ಅನುಕಂಪದ ಮೇಲೆಯೇ ಒತ್ತು ನೀಡುತ್ತವೆ. ಆದರೆ ಅನುಕಂಪ ನಿಜದ ಸಂಗತಿ ಅಲ್ಲ, ಅದು ಒಂದು ಮುಖವಾಡ ಅಷ್ಟೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.