ಸಾವು ಎಲ್ಲ ವ್ಯಾಖ್ಯಾನಗಳನ್ನೂ ಕುಟ್ಟಿ ಪುಡಿ ಪುಡಿ ಮಾಡುತ್ತದೆ. ಸಾವು ನಿಮ್ಮನ್ನು ವ್ಯಾಖ್ಯಾನಕ್ಕೆ ಅತೀತರನ್ನಾಗಿಸುತ್ತದೆ. Life undefined is what God is. ಆದರೆ ಸಾವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಬದುಕನ್ನೂ ಅರ್ಥಮಾಡಿಕೊಳ್ಳಬೇಕು… ~ ಓಶೋ ರಜನೀಶ್ । ಚಿದಂಬರ ನರೇಂದ್ರ
ನೀನು
ದಾರಿಯ ಮೇಲೆ
ಕಾಲಿಡುತ್ತ ಹೋದಂತೆ
ದಾರಿ ತೆರೆದುಕೊಳ್ಳುತ್ತ ಹೋಗುತ್ತದೆ.
ನೀನು
ನಾಶವಾಗುತ್ತ ಹೋದಂತೆ
ಬದುಕು ಹುಟ್ಟುತ್ತ ಹೋಗುತ್ತದೆ.
ನೀನು
ಕಿರಿದಾಗುತ್ತ ಹೋದಂತೆ
ಜಗತ್ತಿಗೆ ನಿನ್ನ ತುಂಬಿಕೊಳ್ಳುವುದು
ಅಸಾಧ್ಯವಾಗುತ್ತ ಹೋಗುತ್ತದೆ.
ಆಗ ಜನ
ನಿನ್ನ ಇರುವನ್ನು ನೋಡುತ್ತಾರೆ
ಆದರೆ ಅಲ್ಲಿ
‘ನೀನು’ ಇರುವುದಿಲ್ಲ.
- ರೂಮಿ
ದೇಹ ನಮಗೆ ಗಡಿಗಳನ್ನು ಪ್ರದಾನ ಮಾಡಿದರೆ, ಸಾವು ನಮ್ಮಿಂದ ಎಲ್ಲ ಗಡಿಗಳನ್ನೂ ಕಿತ್ತುಕೊಳ್ಳುತ್ತದೆ. ದೇಹ ಒಂದು ನಿರ್ದಿಷ್ಟ ವ್ಯಾಖ್ಯಾನವನ್ನು ಮಾತ್ರ ಸಾಧ್ಯ ಮಾಡುತ್ತದೆ, ನೀನು ಗಂಡು, ನೀನು ಹೆಣ್ಣು, ನೀನು ಸುಂದರ, ನೀನು ಕುರೂಪಿ, ಜಾಣ – ದಡ್ಡ ಇತ್ಯಾದಿಯಾಗಿ. ದೇಹ ನಿಮ್ಮನ್ನು ಒಂದು ನಿರ್ದಿಷ್ಟ ವ್ಯಾಖ್ಯಾನದಡಿಯಲ್ಲಿ ಕಟ್ಟಿಹಾಕುತ್ತದೆ.
ಸಾವು ಎಲ್ಲ ವ್ಯಾಖ್ಯಾನಗಳನ್ನೂ ಕುಟ್ಟಿ ಪುಡಿ ಪುಡಿ ಮಾಡುತ್ತದೆ. ಸಾವು ನಿಮ್ಮನ್ನು ವ್ಯಾಖ್ಯಾನಕ್ಕೆ ಅತೀತರನ್ನಾಗಿಸುತ್ತದೆ. Life undefined is what God is. ಆದರೆ ಸಾವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಬದುಕನ್ನೂ ಅರ್ಥಮಾಡಿಕೊಳ್ಳಬೇಕು. ಹಾಗಾಗಿ ನನ್ನ ಸಲಹೆಯನ್ನು ನೀವು ಒಪ್ಪಿಕೊಳ್ಳುವಿರಾದರೆ : ಮುಂದಿನ ಬಾರಿ ಯಾವುದಾದರೂ ಸುಂದರ ಕ್ಷಣ ಎದುರಾದಾಗ,“ಬದುಕಲು, ಕುಣಿಯಲು, ಜೀವಂತವಾಗಿರಲು ಎಂಥ ಸುಂದರ ಕ್ಷಣ ಇದು ! “ ಎಂದು ಬದುಕಿನ ರೀತಿಯಲ್ಲಿ ಯೋಚನೆ ಮಾಡಿ.
ಮುಂದೆ ಎಂದಾದರೂ ನಿಮಗೆ ಸಾವು ಎದುರಾದಾಗ, ನೀವು ಸಾವನ್ನೂ ಹೀಗೆಯೇ ಸ್ವಾಗತಿಸುವಿರಿ, “ಸಾವನ್ನು ಧರಿಸಲು ಎಂಥ ಸುಂದರ ಕ್ಷಣ ಇದು! “ ಎಂದು. ಎಲ್ಲ ಕ್ಷಣಗಳೂ ಸುಂದರವೇ, ನೀವು ಅವನ್ನು ಅನುಭವಿಸಲು ತೆರೆದುಕೊಂಡವರಾಗಿರಬೇಕು, ಅದಕ್ಕೆ ಶರಣಾಗಲು ಸಿದ್ಧರಾಗಿರಬೇಕು ಮಾತ್ರ.
ನಮಗೆ ಎದುರಾಗುವ ಎಲ್ಲ ಕ್ಷಣಗಳೂ, ಅನುಗ್ರಹ ಗಳೇ. ಅವನ್ನು ಹಾಗೆ ಸ್ವಾಗತಿಸಲು ನಾವು ಸಿದ್ಧರಾಗಿರಬೇಕು ಅಷ್ಟೇ. ಈ ಎಲ್ಲ ಕ್ಷಣಗಳನ್ನು ಕೃತಜ್ಞತೆಯಿಂದ ಸ್ವೀಕರಿಸುವುದು ನಮಗೆ ಸಾಧ್ಯವಾಗುವುದಾದರೆ, then nothing goes wrong.
ಸೂಫೀ ಅನುಭಾವಿ ಝೂಸಿಯಾ ಸಾವಿನ ಹಾಸಿಗೆಯಲ್ಲಿದ್ದ. ಒಂದು ಮುಂಜಾನೆ ಆತ ಭಗವಂತನನ್ನು ಪ್ರಾರ್ಥಿಸತೊಡಗಿದ. ಅವನ ಕಣ್ಣುಗಳಲ್ಲಿ ಕಣ್ಣೀರು ಧಾರಾಕಾರವಾಗಿ ಹರಿಯುತ್ತಿತ್ತು. ಆತ ಕಂಪಿಸುತ್ತಿದ್ದ.
ಈ ದೃಶ್ಯವನ್ನು ನೋಡಿದ ಶಿಷ್ಯನೊಬ್ಬ ಪ್ರಶ್ನೆ ಮಾಡಿದ.
“ ಯಾಕೆ? ಏನಾಯ್ತು ? ಯಾಕಿಷ್ಟು ತೀವ್ರವಾಗಿ ಕಂಪಿಸುತ್ತಿದ್ದೀರಿ? “
ಝೂಸಿಯಾ ಉತ್ತರಿಸಿದ.
“ ನನ್ನ ಈ ಪರಿಸ್ಥಿತಿಗೆ ಕಾರಣವಿದೆ, ನಾನು ಸಾವಿಗೆ ಹತ್ತಿರವಾಗಿದ್ದೇನೆ. ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ನಾನು ಸಾಯಬಹುದು. ನಾನು ಸತ್ತು, ಭಗವಂತನ ಮುಂದೆ ಹೋಗಿ ನಿಂತಾಗ ಅವ, “ ಯಾಕೆ ಝೂಸಿಯಾ, ನೀನು ಮೋಸೆಸ್ ಹಾಗೆ ಬದುಕಲಿಲ್ಲ ? “ ಅಂತ ಪ್ರಶ್ನೆ ಕೇಳಿದರೆ, ನನ್ನ ಹತ್ತಿರ ಉತ್ತರವಿದೆ.
“ ಭಗವಂತಾ, ನೀನು ನನಗೆ ಮೋಸೆಸ್ ನ ಗುಣ ವಿಶೇಷಣಗಳನ್ನು ದಯಪಾಲಿಸಲಿಲ್ಲ” ಎಂದು ಉತ್ತರಿಸುತ್ತೇನೆ.
ಅಕಸ್ಮಾತ್ ಭಗವಂತ “ ಯಾಕೆ ನೀನು ಅಕೀಬಾನ ಥರ ಬಾಳಲಿಲ್ಲ ? “ ಎಂದರೆ ಅದಕ್ಕೂ ನನ್ನ ಹತ್ತಿರ ಉತ್ತರವಿದೆ. ಭಗವಂತ ನನಗೆ ಅಕೀಬಾನ ಸ್ವಭಾವಗಳನ್ನೂ ದಯಪಾಲಿಸಿಲ್ಲ.
ಆದರೆ ಅವನೇನಾದರೂ ನನಗೆ “ ಝೂಸಿಯಾ, ಯಾಕೆ ನೀನು ಝೂಸಿಯಾನ ಹಾಗೆ ಬದುಕಲಿಲ್ಲ” ಎಂದು ಕೇಳಿದರೆ, ಏನು ಉತ್ತರ ಕೊಡಲಿ? ಅದಕ್ಕೇ ನನ್ನ ಕಣ್ಣಲ್ಲಿ ನೀರು, ಅದಕ್ಕೇ ನಾನು ನಡಗುತ್ತಿದ್ದೇನೆ. ನನ್ನ ಜೀವನವಿಡೀ ನಾನು ಮೋಸೆಸ್ ಥರ, ಅಕೀಬಾ ಥರ ಬದುಕಲು ಪ್ರಯತ್ನ ಮಾಡಿದೆ. ಆದರೆ ಭಗವಂತ ನನ್ನನ್ನು ಝೂಸಿಯಾ ಥರ ಬಾಳಲು ಹುಟ್ಟಿಸಿದ್ದಾನೆ, ಝೂಸಿಯಾನ ಎಲ್ಲ ಗುಣ ವಿಶೇಷಣಗಳನ್ನೂ ದಯಪಾಲಿಸಿ ಆಶೀರ್ವದಿಸಿದ್ದಾನೆ ಎನ್ನುವುದು ಮರೆತೇ ಹೋಗಿತ್ತು. ಹೇಗೆ ಅವನ ಮುಂದೆ ಹೋಗಿ ನಿಲ್ಲಲಿ? ಹೇಗೆ ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಲಿ? ಭಯವಾಗುತ್ತಿದೆ ನನಗೆ.”
Source: Osho – A sudden clash of thunder

