ತಪ್ಪು ಮಾಡಿದವರು ನಾಚಿಕೆಗೆ ಒಳಗಾಗದಂತೆ, ಅವರ ಘನತೆಗೆ ಕುಂದು ಉಂಟಾಗದಂತೆ ತಿದ್ದುವುದು ಬಹಳ ದೊಡ್ಡ ಜವಾಬ್ದಾರಿ… । ಚಿದಂಬರ ನರೇಂದ್ರ
ಪ್ರೇಮ ಪಾಠಗಳ
ಆರಂಭದ ದಿನಗಳಲ್ಲಿ ನಾನಿದ್ದಾಗ,
ನನ್ನ ಗುರುಗಳು ವಾಸವಾಗಿದ್ದುದು
ಒಂದೇ ಒಂದು ಮಹಡಿಯ ಮನೆಯಲ್ಲಿ,
ಅದು ನನ್ನ ಅದೃಷ್ಟ.
ಗುರುಗಳು,
ಸೃಷ್ಟಿಯ ಸೌಂದರ್ಯವನ್ನೂ,
ಭಗವಂತನ ಅಪರಿಮಿತ, ಅದ್ಭುತ
ಸಾಧ್ಯತೆಗಳನ್ನು
ಬಣ್ಣಿಸತೊಡಗುತ್ತಿದ್ದಂತೆಯೇ
ಕುಣಿಯಲು ಶುರು ಮಾಡುತ್ತಿದ್ದೆ ನಾನು
ಹುಚ್ಚೆದ್ದು, ಜೋರಾಗಿ ಹಾಡುತ್ತ .
ಈ ಆನಂದ, ಸಹಿಸಲಸಾಧ್ಯವಾಗಿ
ಕಿಟಕಿ ಹಾರಿಕೊಳ್ಳುತ್ತಿದ್ದೆ ಕೆಲವೊಮ್ಮೆ
ಅದೂ ತಲೆ ಕೆಳಗಾಗಿ.
ಬಹುಶಃ
ನನ್ನಂಥ ಹುಂಬರ ಸಲುವಾಗಿಯೇ
ಗುರುಗಳು ವಾಸವಾಗಿದ್ದರು
ಒಂದೇ ಮಹಡಿಯ ಮನೆಯಲ್ಲಿ.
ಅವರ ಈ
ಮಮತೆಯ ಕಾರಣಕ್ಕಾಗಿಯೇ
ಮೂಗು ಮುರಿದುಕೊಂಡಿದ್ದೇನೆ ನಾನು
ಕೇವಲ ಹದಿನೇಳು ಬಾರಿ.
~ ಹಾಫಿಜ್
ಒಂದು ದಿನ ಒಬ್ಬ ವೃದ್ಧನನ್ನು ಭೇಟಿ ಮಾಡಿದ ಯುವಕ ಪ್ರಶ್ನೆ ಮಾಡಿದ, “ನನ್ನ ನೆನಪಿದೆಯಾ ನಿಮಗೆ?”
“ಇಲ್ಲ ನೆನಪಾಗುತ್ತಿಲ್ಲ” ವೃದ್ಧ ಹೇಳಿದಾಗ, “ನಾನು ನಿಮ್ಮ ವಿದ್ಯಾರ್ಥಿಯಾಗಿದ್ದೆ” ಯುವಕ ನೆನಪಿಸಿದ. “ಓಹ್ ಹೌದ! ಏನು ಮಾಡುತ್ತಿದ್ದೀಯ ಈಗ ಬದುಕಿನಲ್ಲಿ?” ವೃದ್ಧ ಟೀಚರ್ ಅಕ್ಕರೆಯಿಂದ ಕೇಳಿದಾಗ, “ಈಗ ನಾನೂ ಟೀಚರ್” ಎಂದು ಯುವಕ ತನ್ನ ಪರಿಚಯ ಹೇಳಿಕೊಂಡ. “ಗುಡ್ ನನ್ನ ಹಾಗೆ ಟೀಚರ್ “ ವೃದ್ಧನ ಮುಖದಲ್ಲಿ ಸಂತಸವಿತ್ತು. “ನಾನು ಟೀಚರ್ ಆಗಿದ್ದೇ ನಿಮ್ಮ ಕಾರಣವಾಗಿ. ನೀವು ಸ್ಪೂರ್ತಿ ಆಗದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ”, ಯುವಕ ಹೆಮ್ಮೆಯಿಂದ ಹೇಳಿಕೊಂಡ.
ವೃದ್ಧನಿಗೆ ಯುವಕನ ಬಗ್ಗೆ ಕುತೂಹಲ ಹುಟ್ಟಿಕೊಂಡಿತು. “ಯಾವ ಘಟನೆ, ಟೀಚರ್ ಆಗುವಂತೆ ನಿನ್ನ ಪ್ರೇರೇಪಿಸಿತು? ವೃದ್ಧ ಪ್ರಶ್ನೆ ಮಾಡಿದಾಗ, ಯುವಕ ಆ ಘಟನೆಯ ಬಗ್ಗೆ ಹೇಳತೊಡಗಿದ.
ಒಂದು ದಿನ ಕ್ಲಾಸ್ ಗೆ ನನ್ನ ಗೆಳೆಯ ಹೊಸ ವಾಚ್ ಕಟ್ಟಿಕೊಂಡು ಬಂದಿದ್ದ. ಆ ವಾಚ್ ನನಗೆ ಬಹಳ ಇಷ್ಟವಾಗಿ ಹೋಯಿತು. ಗೆಳೆಯನ ಕಣ್ಣು ತಪ್ಪಿಸಿ ನಾನು ಆ ವಾಚ್ ಕದ್ದು ಬಿಟ್ಟೆ. ವಾಚ್ ತನ್ನ ಬ್ಯಾಗ್ ಲ್ಲಿ ಕಾಣಿಸದೇ ಹೋದಾಗ ಗೆಳೆಯ ತಕ್ಷಣವೇ ಟೀಚರ್ ಗೆ ದೂರು ಕೊಟ್ಟ. ಆ ಟೀಚರ್ ನೀವಾಗಿದ್ದಿರಿ.
ನೀವು ಕ್ಲಾಸ್ ನ ವಿದ್ಯಾರ್ಥಿಗಳನ್ನೆಲ್ಲ ಒಟ್ಟು ಮಾಡಿ ಕೇಳಿದಿರಿ, “ಈ ಹುಡುಗನ ವಾಚ್ ಕಳುವಾಗಿದೆ, ಯಾರಾದರೂ ತೆಗೆದುಕೊಂಡಿದ್ದರೆ ವಾಪಸ್ ಮಾಡಿ”. ಆದರೆ ವಾಚ್ ನನಗೆ ಬಹಳ ಇಷ್ಟವಾಗಿ ಹೋಗಿತ್ತು, ನನಗೆ ವಾಚ್ ವಾಪಸ್ ಮಾಡುವ ಮನಸ್ಸಿರಲಿಲ್ಲ. ನಾನು ಸುಮ್ಮನೇ ಕುಳಿತೆ.
“ಆಗ ನೀವು ಕ್ಲಾಸ್ ನ ಬಾಗಿಲು ಮುಚ್ಚಿ, ಎಲ್ಲ ವಿದ್ಯಾರ್ಥಿಗಳಿಗೂ ವೃತ್ತಾಕಾರದಲ್ಲಿ ಕಣ್ಣು ಮುಚ್ಚಿಕೊಂಡು ನಿಲ್ಲುವಂತೆ ಹೇಳಿದಿರಿ. ಆಮೇಲೆ ನೀವು ಪ್ರತೀ ವಿದ್ಯಾರ್ಥಿಯ ಜೇಬು ಚೆಕ್ ಮಾಡುತ್ತ ಹೋದಿರಿ. ನೀವು ನನ್ನ ಜೇಬು ಚೆಕ್ ಮಾಡಿದಾಗ ಅಲ್ಲಿ ನಿಮಗೆ ವಾಚ್ ಸಿಕ್ಕಿತು. ನೀವು ಆ ವಾಚ್ ತೆಗೆದು ನಿಮ್ಮ ಬಳಿ ಇಟ್ಟುಕೊಂಡು, ಮುಂದೆ ಎಲ್ಲ ವಿದ್ಯಾರ್ಥಿಗಳ ಜೇಬನ್ನೂ ಚೆಕ್ ಮಾಡುತ್ತ ಹೋಗಿ, ಕೊನೆಗೆ ಘೋಷಣೆ ಮಾಡಿದಿರಿ, “ನನಗೆ ವಾಚ್ ಸಿಕ್ಕಿತು, ಈಗ ಎಲ್ಲ ಕಣ್ಣು ಓಪನ್ ಮಾಡಿ”.
ಯಾರು ವಾಚ್ ಕದ್ದಿದ್ದು ಎನ್ನುವುದನ್ನ ನೀವು ಕ್ಲಾಸ್ ಗೆ ಹೇಳಲಿಲ್ಲ ಮತ್ತು ಯಾವತ್ತೂ ನೀವು ಈ ಕುರಿತು ನನ್ನ ಜೊತೆ ಮಾತನಾಡಲಿಲ್ಲ. ಅವತ್ತು ನೀವು ನನ್ನ ಘನತೆಯನ್ನು ಕಾಪಾಡಿದಿರಿ. ಅಷ್ಟು ವಿದ್ಯಾರ್ಥಿಗಳ ಎದುರು ನನ್ನ ಮಾನ ಉಳಿಸಿದಿರಿ. ಆ ದಿನ ನನ್ನ ಬದುಕಿನ ಅತ್ಯಂತ ಅವಮಾನಕರ ದಿನವಾಗಿತ್ತು. ನಾನು ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದೆ ಆದರೆ ನೀವು ನನ್ನ ಕ್ಷಮಿಸಿ, ನನ್ನ ಡಿಗ್ನಿಟಿಯನ್ನ ಕಾಪಾಡುತ್ತ ನಾನು ಇತರ ವಿದ್ಯಾರ್ಥಿಗಳ ಎದುರು ತಲೆ ತಗ್ಗಿಸದಂತೆ ನೋಡಿಕೊಂಡಿರಿ.
ನೀವು ನನ್ನ ಒಬ್ಬನೇ ಕರೆದು ಕೂಡ ಬೈಯ್ಯಲಿಲ್ಲ, ನನಗೆ ನೈತಿಕತೆಯ ಪಾಠ ಮಾಡಲಿಲ್ಲ, ಸ್ವತಃ ನಿಮ್ಮ ಎದುರೂ ನನಗೆ ನಾಚಿಕೆಯಾಗದಂತೆ ನೋಡಿಕೊಂಡಿರಿ. ಅವತ್ತೇ ನಾನು ಮುಂದೆ ಯಾವತ್ತೂ ಕಳ್ಳತನ ಮಾಡಬಾರದು ಎಂದು ನಿರ್ಧರಿಸಿದ್ದು. ಮುಂದೆ ಭೇಟಿಯಾದಾಗಲೆಲ್ಲ ನೀವು ಏನೂ ಆಗೇ ಇಲ್ಲ ಎನ್ನುವಂತೆ ನನ್ನ ಜೊತೆ ನಡೆದುಕೊಂಡಿರಿ. ನನ್ನ ಜೊತೆ ನಗುನಗುತ್ತ ನಡೆದಿಕೊಂಡಿರಿ. ನನ್ನೊಳಗೆ ಯಾವ ಅಪರಾಧಿ ಭಾವನೆ ಹುಟ್ಟಿಕೊಳ್ಳದಂತೆ ನೋಡಿಕೊಂಡಿರಿ. ಏನೂ ಹೇಳದೆ ಕೂಡ ನೀವು ನಿಮ್ಮ ಮೆಸೇಜ್ ನನಗೆ ಮುಟ್ಟುವಂತೆ ನೋಡಿಕೊಂಡಿರಿ. ನೀವು ನನಗೆ ಏನು ಹೇಳಬೇಕೆಂದಿದ್ದಿರೋ ಅದನ್ನು ನಾನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಿದ್ದೆ. ನಿಜವಾದ ಟೀಚರ್ ಹೇಗೆ ಇರಬೇಕು ಎನ್ನುವುದು ಅವತ್ತು ನನಗೆ ಗೊತ್ತಾಯಿತು. ಥ್ಯಾಂಕ್ಯೂ ಸರ್, ನಾನು ಅವತ್ತು ನಿರ್ಧಾರ ಮಾಡಿದ್ದು, ನಿಮ್ಮ ಥರ ಟೀಚರ್ ಆಗಬೇಕೂಂತ.
“ ನಿಮಗೆ ಈ ಘಟನೆ ನೆನಪಿಗೆಯಾ ಸರ್?” ಯುವಕ ಪ್ರಶ್ನೆ ಮಾಡಿದ.
“ಹೌದು, ಕಳುವಾದ ವಾಚ್ ಎಲ್ಲ ವಿದ್ಯಾರ್ಥಿಗಳ ಜೇಬಿನಲ್ಲಿ ಹುಡುಕಿದ ಘಟನೆ ನನಗೆ ನೆನಪಿದೆ ಆದರೆ, ನನಗೆ ನಿನ್ನ ನೆಪಾಗುತ್ತಿಲ್ಲ. ಏಕೆಂದರೆ ಅವತ್ತು ವಾಚ್ ಹುಡುಕುವಾಗ ನಾನು ಕೂಡ ಕಣ್ಣು ಮುಚ್ಚಿಕೊಂಡಿದ್ದೆ”.
ವೃದ್ಧ ಟೀಚರ್ ಆ ಘಟನೆ ನೆಪಿಸಿಕೊಂಡಾಗ ಯುವಕನ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು. ಅವನಿಗೆ ಅಂದು ಮತ್ತೊಂದು ಪಾಠ ಗಟ್ಟಿಯಾಯ್ತು.
ಕಲಿಸುವುದು ಎಂದರೆ ಇದು. ಮನುಷ್ಯರ ಘನತೆಗೆ ಕುಂದುಂಟಾಗದಂತೆ ಕಲಿಸುವುದು ಸಾಧ್ಯವಿಲ್ಲವೆಂದರೆ ನಿಮಗೆ ಕಲಿಸುವುದು ಗೊತ್ತಿಲ್ಲವೆಂದೇ ಅರ್ಥ.
(ಮೂಲ: ಇಂಗ್ಲಿಶ್, ಆಕರ: ಇಂಟರ್ನೆಟ್)

