ಸಂಬಂಧದ ಉದ್ದೇಶ : ಜಿಡ್ಡು ಚಿಂತನೆ

ನಾವು ಬಹುತೇಕರು ಸಂಬಂಧದಲ್ಲಿಯ ತ್ರಾಸದಾಯಕ ಒತ್ತಡಗಳನ್ನು ದೂರ ಇರಿಸಲು ಅಥವಾ ನಿರ್ಲಕ್ಷಿಸಲು ಇಚ್ಛಿಸುತ್ತೇವೆ ಮತ್ತು ಆರಾಮದಾಯಕ ಅವಲಂಬನೆಯನ್ನ ಹಾಗು ಯಾವ ಚಾಲೇಂಜ್ ಇಲ್ಲದ ಸುರಕ್ಷತೆಯನ್ನ ಬಯಸುತ್ತೇವೆ. ಆಗ ಕುಟುಂಬ ಮತ್ತು ಇನ್ನಿತರ ಸಂಬಂಧಗಳು ಅಡಗುತಾಣಗಳಾಗಿ ಪರಿವರ್ತಿತವಾಗುತ್ತವೆ, ವಿವೇಚನೆ ಇಲ್ಲದವರ ಅಡಗುತಾಣಗಳು… ~ ಜಿಡ್ಡು ಕೃಷ್ಣಮೂರ್ತಿಕನ್ನಡಕ್ಕೆ: ಚಿದಂಬರ ನರೇಂದ್ರ

ಸಂಬಂಧಗಳಲ್ಲಿ ನೋವು ಬಹಳ ಸಹಜ ಎನ್ನುವುದನ್ನ ನಮ್ಮ ಸುತ್ತಲೂ ದಿನನಿತ್ಯ ನಡೆಯುತ್ತಿರುವ ಉದಾಹರಣೆಗಳು ಸಾಬೀತು ಮಾಡುತ್ತವೆ. ಅಕಸ್ಮಾತ್ ಸಂಬಂಧದಲ್ಲಿ ಯಾವುದೇ ರೀತಿಯ ತ್ರಾಸದಾಯಕ ಒತ್ತಡಗಳು ಇಲ್ಲವಾಗಿರುವ ಪಕ್ಷದಲ್ಲಿ, ಆ ಸಂಬಂಧ ನಿಜವಾದ ಸಂಬಂಧ ಹೌದೋ ಅಲ್ಲವೋ ಎನ್ನುವ ಅನುಮಾನಕ್ಕೆ ಆಸ್ಪದ ನೀಡುತ್ತದೆ, ಅದು ಒಂದು ಬಗೆಯ ಆರಾಮದಾಯಕ ನಿದ್ರಾ ಸ್ಥಿತಿಯ ಅನುಭವವನ್ನ ಸಾಧ್ಯ ಮಾಡುತ್ತದೆ. ಬಹುತೇಕರು ಇಂತಹ ಸ್ಥಿತಿಯನ್ನೇ ಎದುರು ನೋಡುತ್ತಿರುತ್ತಾರೆ. ಬಿಕ್ಕಟ್ಟು ಇರುವುದು, ಇಂಥ ಆರಾಮದಾಯಕ ಸ್ಥಿತಿಯ ಬಯಕೆ ಮತ್ತು ಕಠಿಣ ವಾಸ್ತವದ ನಡುವೆ, ಭ್ರಮೆ ಮತ್ತು ನೈಜತೆಯ ನಡುವೆ. ಈ ಭ್ರಮೆಯನ್ನು ನೀವು ಗುರುತಿಸುವಿರಾದರೆ, ಅದನ್ನು ಬದಿಗೆ ಸರಿಸಿ, ಸಂಬಂಧವನ್ನು ಅರ್ಥಮಾಡಿಕೊಳ್ಳುವತ್ತ ನಿಮ್ಮ ಗಮನವನ್ನು ಹರಿಸಬಹುದು. ಆದರೆ ನೀವು ಸಂಬಂಧದಲ್ಲಿ ಸುರಕ್ಷತೆಯನ್ನ ಬಯಸುತ್ತಿರುವಿರಾದರೆ, ಅದು ಕಂಫರ್ಟ್ ಮತ್ತು ಭ್ರಮೆಗಳಲ್ಲಿ ಹೂಡಿಕೆ ಮಾಡಿದಂತೆ. ತನ್ನ ಅಸುರಕ್ಷತೆಯ ಕಾರಣವಾಗಿಯೇ ಸಂಬಂಧ ತನ್ನ ಹಿರಿಮೆಯನ್ನ ಉಳಿಸಿಕೊಂಡಿರುವುದು. ವಿಷಯ ಹೀಗಿರುವಾಗ ಸಂಬಂಧದಲ್ಲಿ ನೀವು ಸುರಕ್ಷತೆಯನ್ನು ಹುಡುಕುವಿರಾದರೆ, ಸಂಬಂಧದ ಮೂಲ ಉದ್ದೇಶಕ್ಕೆ ಅಡ್ಡಗಾಲು ಹಾಕಿದಂತೆ, ಇದು ತನ್ನದೇ ಆದ ಕಾರ್ಯಕಾರಣಗಳನ್ನ ಮತ್ತು ದುರಾದೃಷ್ಟವನ್ನ ದಯಪಾಲಿಸುತ್ತದೆ.

ಖಂಡಿತವಾಗಿ, ಸಂಬಂಧದ ಮೂಲ ಉದ್ದೇಶವೇ ಒಬ್ಬರ ಇಡಿಯಾದ ವ್ಯಕ್ತಿತ್ವವನ್ನು ಅನಾವರಣಗೊಳಿಸುವುದು. ಸಂಬಂಧ ಎನ್ನುವುದೇ ತನ್ನ ಕುರಿತಾದ ತಿಳುವಳಿಕೆಯನ್ನ ತಾನೇ ಅನಾವರಣ ಮಾಡಿಕೊಳ್ಳಲು ಅವಕಾಶಗಳನ್ನು ಒದಗಿಸಿಕೊಡುವಂಥ ಪ್ರಕ್ರಿಯೆ. ಈ ಸ್ವ – ಅನಾವರಣದ ಪ್ರಕ್ರಿಯೆ ಯಾತನಾಮಯವಾದದ್ದು, ಮತ್ತು ಸದಾ ಹೊಂದಾಣಿಕೆಯನ್ನು ನಿರೀಕ್ಷಿಸುವಂಥದ್ದು, ಆಲೋಚನೆಗಳನ್ನ – ಭಾವನೆಗಳನ್ನ ಒಗ್ಗಿಸಿಕೊಳ್ಳಲು ಪ್ರಯತ್ನಿಸುವಂಥದು. ಇದು ಒಂದು ಯಾತನಾಮಯ ಸಂಘರ್ಷ ಮತ್ತು ಆನಂದಮಯ ಪ್ರಶಾಂತತೆ ಎರಡನ್ನೂ ಸಾಧ್ಯಮಾಡುವಂಥದು.

ಆದರೆ ನಾವು ಬಹುತೇಕರು ಸಂಬಂಧದಲ್ಲಿಯ ತ್ರಾಸದಾಯಕ ಒತ್ತಡಗಳನ್ನು ದೂರ ಇರಿಸಲು ಅಥವಾ ನಿರ್ಲಕ್ಷಿಸಲು ಇಚ್ಛಿಸುತ್ತೇವೆ ಮತ್ತು ಆರಾಮದಾಯಕ ಅವಲಂಬನೆಯನ್ನ ಹಾಗು ಯಾವ ಚಾಲೇಂಜ್ ಇಲ್ಲದ ಸುರಕ್ಷತೆಯನ್ನ ಬಯಸುತ್ತೇವೆ. ಆಗ ಕುಟುಂಬ ಮತ್ತು ಇನ್ನಿತರ ಸಂಬಂಧಗಳು ಅಡಗುತಾಣಗಳಾಗಿ ಪರಿವರ್ತಿತವಾಗುತ್ತವೆ, ವಿವೇಚನೆ ಇಲ್ಲದವರ ಅಡಗುತಾಣಗಳು.

ಯಾವಾಗ ನಮ್ಮ ಅಸುರಕ್ಷತಾ ಭಾವ, ಅವಲಂಬನೆಗೆ ಹಾತೊರೆಯುತ್ತದೆಯೋ ( ಇದು ಹೀಗೆ ಆಗಲೇಬೇಕು), ಆಗ ನಾವು ಆ ಸಂಬಂಧವನ್ನು ದೂರ ಮಾಡಿ ನಿಶ್ಚಿತವಾದ ಸುರಕ್ಷತೆಯ ಭರವಸೆಯನ್ನು ಕೊಡುವ ಇನ್ನೊಂದು ಹೊಸ ಸಂಬಂಧಕ್ಕೆ ಮುಂದಾಗುತ್ತೇವೆ. ಆದರೆ ಸಂಬಂಧದಲ್ಲಿ ಸುರಕ್ಷತೆ ಎನ್ನುವುದು ಇಲ್ಲವೇ ಇಲ್ಲ ಹಾಗು ಅವಲಂಬನೆ ಎನ್ನುವುದು ಭಯವನ್ನು ಹುಟ್ಟಿಸುತ್ತಲೇ ಹೋಗುತ್ತದೆ. ಸುರಕ್ಷತೆ ಮತ್ತು ಭಯದ ಪ್ರಕ್ರಿಯೆಯನ್ನ ಅರ್ಥಮಾಡಿಕೊಳ್ಳದೇ ಹೋದಾಗ, ಸಂಬಂಧ ಎನ್ನುವುದು ಬಂಧನವಾಗುತ್ತದೆ, ಅಡ್ಡಗೋಡೆಯಾಗುತ್ತದೆ, ವಿವೇಚನಾರಹಿತ ಪ್ರಯಾಣವಾಗುತ್ತದೆ. ಆಗ ಎಲ್ಲ ಇರುವಿಕೆಗಳೂ ಸಂಘರ್ಷಮಯವಾಗುತ್ತವೆ, ಯಾತನಾಮಯವಾಗುತ್ತವೆ ಮತ್ತು ಸರಿಯಾದ ಆಲೋಚನಾ ವಿಧಾನದ ಹೊರತಾಗಿ ಇದಕ್ಕೆ ಬೇರೆ ಯಾವ ಪರಿಹಾರವೂ ಸಿಗುವುದಿಲ್ಲ. ಸರಿಯಾದ ಆಲೋಚನಾ ಕ್ರಮ ನಮ್ಮ ಕುರಿತಾದ ನಮ್ಮ ತಿಳುವಳಿಕೆಯಿಂದ ಮಾತ್ರ ಪ್ರಾಪ್ತವಾಗುವಂಥದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.