ಕದಿಯಲಾಗದ, ಕಸಿಯಲಾಗದ, ಪಾಲು ಮಾಡಲಾಗದ, ಬಳಸಿದಷ್ಟೂ ಹೆಚ್ಚು ಸಂಪತ್ತು… ಯಾವುದದು!? ಈ ಸುಭಾಷಿತ ನೋಡಿ…
ನ ಚೋರಹಾರ್ಯಂ ನ ಚ ರಾಜಹಾರ್ಯಂ ನ ಭ್ರಾತೃಭಾಜ್ಯಂ ನ ಚ ಭಾರಕಾರೀ|
ವ್ಯಯೇ ಕೃತೇ ವರ್ಧತೇವ ನಿತ್ಯಂ ವಿದ್ಯಾಧನಂ ಸರ್ವಧನಪ್ರಧಾನಂ ||
ನ ಚೋರಹಾರ್ಯಂ : ಇದನ್ನು ಕಳ್ಳರು ಕದಿಯಲು ಸಾಧ್ಯವಿಲ್ಲ.
ನ ಚ ರಾಜಹಾರ್ಯಂ : ಇದನ್ನು ರಾಜರಿಂದಲೂ ಅಪಹರಿಸಲು ಸಾಧ್ಯವಿಲ್ಲ.
ನ ಭ್ರಾತೃಭಾಜ್ಯಂ : ಇದನ್ನು ಸೋದರರ ನಡುವೆ ವಿಭಜಿಸಲು (ಸೋದರರಿಗೆ ಪಾಲು ಮಾಡಿ ಹಂಚಲು) ಸಾಧ್ಯವಿಲ್ಲ.
ನ ಚ ಭಾರಕಾರೀ : ಇದು (ನಿಮ್ಮ) ಹೆಗಲಿಗೆ ಹೊರೆಯಾಗುವುದಿಲ್ಲ.
ವ್ಯಯೇ ಕೃತೇ ವರ್ಧತೇವ ನಿತ್ಯಂ : ಪ್ರತಿ ದಿನ ಇದನ್ನು ಬಳಸಿದಷ್ಟೂ ಇದು ಹೆಚ್ಚುತ್ತ ಹೋಗುವುದು.
ವಿದ್ಯಾಧನಂ ಸರ್ವಧನಪ್ರಧಾನಂ : ವಿದ್ಯೆ ಎಂಬ ಸಂಪತ್ತು ಸಂಪತ್ತುಗಳಲ್ಲೇ ಅತ್ಯಂತ ಪ್ರಮುಖವಾದದ್ದು.
ವಿದ್ಯೆ ಒಂದು ಅಮೂಲ್ಯವಾದ ಸಂಪತ್ತು. ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇದನ್ನು ನಮ್ಮಿಂದ ಕಳ್ಳರು ಕದಿಯಲು ಸಾಧ್ಯವಿಲ್ಲ, ರಾಜರು ಕಸಿಯಲೂ ಸಾಧ್ಯವಿಲ್ಲ. ಅಂದರೆ, ರಾಜರು ನಮ್ಮ ವಿದ್ಯೆಯ ಮೇಲೆ ತಮ್ಮ ಹಕ್ಕು ಸ್ಥಾಪಿಸಲು ಸಾಧ್ಯವಿಲ್ಲ. ಇದನ್ನು ಸೋದರರ ನಡುವೆ ಹಂಚಲು ಸಾಧ್ಯವಿಲ್ಲ. ಅವರವರು ಗಳಿಸಿದ ವಿದ್ಯೆ ಅವರವರ ಪಾಲಿಗಷ್ಟೇ. ವಿದ್ಯೆ ಯಾವತ್ತೂ ಕಲಿತವರಿಗೆ ಭಾರವಲ್ಲ, ಹೊರೆಯೂ ಅಲ್ಲ. (ಬದಲಿಗೆ, ವಿದ್ಯೆಯೇ ವಿದ್ಯಾವಂತರ ಭಾರ ಹೊತ್ತು ನಡೆಸುವುದು!) ಈ ವಿದ್ಯೆಯನ್ನು ಬಳಸಿದಷ್ಟೂ, ಸತ್ಕಾರ್ಯಗಳಿಗೆ ವಿನಿಯೋಗಿಸಿದಷ್ಟೂ ಹೆಚ್ಚುತ್ತ ಹೋಗುವುದು, ತೀಕ್ಷ್ಣವಾಗುತ್ತ ಹೋಗುವುದು. ಇಂಥಾ ವಿದ್ಯೆ ಯಾವುದೇ ವ್ಯಕ್ತಿ ಹೊಂದಿರಬಹುದಾದ ಸಂಪತ್ತುಗಳಲ್ಲೇ ಅತ್ಯಂತ ಶ್ರೇಷ್ಠವಾದದ್ದು, ಪ್ರಮುಖವಾದದ್ದು.

