ಆಯತುಲ್ಲಾಹ್ ರೂಹಲ್ಲಾಹ್ ಮುಸಾವಿ ಖೊಮೇನಿ | ಕನ್ನಡಕ್ಕೆ: ಸುನೈಫ್
ನಿನ್ನ ಮುಖ ಕಂಡರೆ ಛಿದ್ರಗೊಳ್ಳದ ಹೃದಯ ಹೃದಯವೇ ಅಲ್ಲ;
ನಿನ್ನ ಮಚ್ಚೆಯಿಂದ ವಿಚಲಿತನಾಗದವನು ವಿವೇಕಿಯಂತೂ ಅಲ್ಲ.
ಹೃದಯ ಕಳಕೊಂಡ ಪ್ರೇಮಿಯ ಅಮಲಿಗೆ ನಿನ್ನ ಸುರಾಹಿ ಕಾರಣ;
ನನ್ನ ಬದುಕಿನ ಪರಿಣಾಮ ನಿನ್ನ ಗುಂಗಲ್ಲದೆ ಬೇರೇನಲ್ಲ.
ನಿನ್ನ ಮೊಗದ ಪ್ರೇಮ ಮರುಭೂಮಿಯಾಗಿಸಿದೆ ನನ್ನನ್ನು;
ಇನ್ನೇನು ಮಾಡಲಿ? ಈ ಮರುಭೂಮಿಗೆ ಕೊನೆಯಿಲ್ಲ.
ನಿನ್ನ ಮತ್ತು ಅವನ ನಡುವೆ, ನಿಂತಿರುವುದು ನೀನು ಮಾತ್ರ
ನೀನೂ ಹೃದಯ ಕಳಕೊಂಡ ಪ್ರೇಮಿಯಾಗಿದ್ದರೆ, ತೊರೆದು ಬಿಡು ನಿನ್ನನ್ನು.
ಪ್ರೇಮದ ಹಾದಿಯಲ್ಲಿ ನಡೆಯಲು ತಯಾರಾಗಿದ್ದರೆ
ತೊರೆ ನಿನ್ನ ನಿಲುವಂಗಿಯನ್ನು, ಎತ್ತಿ ಬಿಸಾಕು ನಮಾಜಿನ ಚಾಪೆಯನ್ನು.
ಯಾಕೆಂದರೆ, ನಿನ್ನ ಪ್ರೇಮಕ್ಕಲ್ಲದೆ, ನಿನಗೆ ಈ ನಿಲ್ದಾಣದಲ್ಲಿ ಜಾಗವಿಲ್ಲ.
ನೀನು ಹೃದಯವಂತನೇ ಆಗಿದ್ದರೆ, ತೊರೆ ಶಿಸ್ತು ಮತ್ತು ಸೂಫಿತನವನ್ನು.
ಈ ಗುಂಪನ್ನು ಸೇರುವುದು ಬಿಟ್ಟು, ನಿನಗಿಲ್ಲಿ ಬೇರೆ ದಾರಿಯಿಲ್ಲ.
ಅವಳ ಮುಂಗುರುಳ ಸುರುಳಿಯಲ್ಲಿ ಆಡುತ್ತೇನೆ
ಈ ಹುಚ್ಚು ಆಟಕ್ಕೆ ಸೋಲು-ಗೆಲುವೆಂಬುದೇ ಇಲ್ಲ.
ಹಿಡಿ ನನ್ನ ಕೈಯನ್ನು ಮತ್ತು ಬಿಡುಗಡೆಗೊಳಿಸು ಈ ಸೋಗಿನ ನಿಲುವಂಗಿಯಿಂದ
ಇದರೊಳಗೆ ಅಜ್ಞಾನಕ್ಕಲ್ಲದೆ ಬೇರೆ ಜಾಗವಿಲ್ಲ.
ಖಾನ್‌ಖಾಹದಲ್ಲಿ ಕಲಿಕೆಗೂ ಮಾಂತ್ರಿಕತೆಗೂ ಜಾಗವಿಲ್ಲ,
ಪ್ರೇಮಿಗಳ ನಲ್ದಾಣದಲ್ಲಿ ಕುತರ್ಕಕ್ಕೆ ಯಾವುದೇ ಜಾಗವಿಲ್ಲ.
ಖಾನ್‌ಖಾಹ : ಸೂಫಿಗಳು ನೆರೆತು ಆಧ್ಯಾತ್ಮಿಕ ಅಭ್ಯಾಸ / ಸಂವಾದ ನಡೆಸುವ ಕೋಣೆ.

