ದುಡಿಯುವುದು ದೊಡ್ಡದಲ್ಲ, ದುಡಿದ ಹಣ ಕೂಡಿಡುವುದು ದೊಡ್ಡದಲ್ಲ… ಹಿತಮಿತವಾಗಿ ಬಳಸಿ ಸಂತೃಪ್ತಿಯಿಂದ ಬಾಳುವುದು ದೊಡ್ಡದು…
ಅತಿಲೋಭಾತ್ಕುಬೇರೋಽಪಿ ದರಿದ್ರೋ ನಿಶ್ಚಿತಂ ಭವೇತ್ |
ಮಿತವ್ಯಯಾತ್ ದರಿದ್ರೋಽಪಿ ನಿಶ್ಚಿತಂ ಧನವಾನ್ ಭವೇತ್ ||
ಅತಿ ಲೋಭಾತ್ + ಕುಬೇರಃ + ಅಪಿ = ಅತಿಯಾದ ಲೋಭದಿಂದ ಕುಬೇರನೂ
ದರಿದ್ರಃ ನಿಶ್ಚಿತಂ ಭವೇತ್ (ನಿಶ್ಚಿತಂ ದರಿದ್ರಃ ಭವೇತ್) = ಖಂಡಿತವಾಗಿ ದರಿದ್ರನಾಗುವನು.
ಮಿತವ್ಯಯಾತ್ ದರಿದ್ರಃ + ಅಪಿ = ಹಿತ ಮಿತವಾಗಿ ಖರ್ಚು ಮಾಡಿದರೆ
ನಿಶ್ಚಿತಂ ಧನವಾನ್ ಭವೇತ್ = ಖಂಡಿತವಾಗಿ ಶ್ರೀಮಂತನಾಗುವನು.
ಅತಿಯಾದ ಲೋಭದಿಂದ ಎಂಥಾ ಕುಬೇರನೂ, ಅಂದರೆ ಶ್ರೀಮಂತನೂ ಬಡವನಾಗುವನು. ಹೇಗೆ? ಹೇಗೆಂದರೆ, ಹಣ ಕೂಡಿಡುವ ಲೋಭದಿಂದ ಶ್ರೀಮಂತನು ಜಿಪುಣನಾಗುವನು ಮತ್ತು ತನ್ನ ದುಡಿಮೆಯ ಹಣವನ್ನು ಯಾವುದಕ್ಕೂ ವ್ಯಯಿಸದೆ, ಸೌಕರ್ಯಗಳಿರಲಿ, ಅಗತ್ಯಗಳಿಗೂ ಖರ್ಚು ಮಾಡದೆ ಬಡವನಂತೆ ಬಾಳುವನು! ಇಂಥಾ ಬಾಳು ದರಿದ್ರವಲ್ಲದೆ ಮತ್ತೇನು?
ಆದರೆ, ಒಬ್ಬ ಬಡವ ತನ್ನ ದುಡಿಮೆಯ ಹಣವನ್ನು ಎಷ್ಟು ಬೇಕೋ ಅಷ್ಟು – ಹಿತಮಿತವಾಗಿ ಬಳಸಿದರೆ ಶ್ರೀಮಂತನಂತೆ ಬಾಳುವುದು ನಿಶ್ಚಿತ. ಅಷ್ಟೇ ಏಕೆ? ಅವನ ಸಂತೃಪ್ತ ಬಾಳು ಅವನ ಸಂಪತ್ತಿನ ಹೆಚ್ಚಳಕ್ಕೆ ಕಾರಣವಾಗಿ ಅವನನ್ನು ನಿಜಕ್ಕೂ ಶ್ರೀಮಂತನಾಗಿಸುವುದು.
ಆದ್ದರಿಂದ, ಲೋಭ ಬಿಟ್ಟು ಹಿತಮಿತವಾಗಿ ಖರ್ಚು ಮಾಡುವುದು ಜಾಣತನ.

